ಶಿವಣ್ಣ ಬೆಂಬಲಿಗರಿಂದ ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ
ಮಾಜಿ ಮುಖ್ಯಮಂತ್ರಿ ಬಂಗಾರಪ್ಪ ಮಕ್ಕಳ ನಡುವೆ ಮುಸುಕಿನ ಗುದ್ದಾಟ ಮುಂದುವರೆದಿದೆ. ಶಿವರಾಜ್ ಕುಮಾರ್ ಪತ್ನಿ ಗೀತಾ ಹಾಗೂ ಕುಮಾರ್ ಬಂಗಾರಪ್ಪನವರ ನಡುವೆ ಎಲ್ಲವೂ ಸರಿಯಾಗಿಲ್ಲ ಎಂಬುದು ಈಗ ಮುಚ್ಚಿಡುವ ಸಂಗತಿಯೇನು ಆಗಿ ಉಳಿದ್ದಿಲ್ಲ. ಇತ್ತೀಚಿಗೆ ಗೀತಾ ಶಿವರಾಜ್ ಕುಮಾರ್ ಲೋಕಸಭಾ ಚುನಾವಣೆಗಳನ್ನು ಸೋತ ಬೆನ್ನಲ್ಲೆ, ಕುಮಾರ್ ವ್ಯಂಗ್ಯ ಮಾಡಿದ್ದರಿಂದ ಇಂದು ಬೆಂಗಳೂರಿನ ಸದಾಶಿವನಗರ ನಿವಾಸಕ್ಕೆ ಶಿವಣ್ಣಾ ಅಭಿಮಾನಿಗಳು ಮುತ್ತಿಗೆ ಹಾಕಿದ್ದಾರೆ.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಭಾರೀ ಜಿದ್ದಿಜಿದ್ದಿನ ಪೈಪೋಟಿ ಏರ್ಪಟ್ಟಿತ್ತು. ಈ ಬಾರಿ ಕಣದಲ್ಲಿ ತ್ರಿಕೋನ ಸ್ಪರ್ಧೆ ಕಂಡು ಬಂದಿತ್ತು. ಬಿಜೆಪಿಯಿಂದ ಬಿವೈ ರಾಘವೇಂದ್ರ, ಕಾಂಗ್ರೆಸ್‌ನಿಂದ ಗೀತಾ ಶಿವರಾಜ್‌ಕುಮಾರ್, ಪಕ್ಷೇತರವಾಗಿ ಬಿಜೆಪಿಯ ಬಂಡಾಯ ಅಭ್ಯರ್ಥಿ ಈಶ್ವರಪ್ಪ ಕಣದಲ್ಲಿದ್ದರು. ಈ ಮೂವರ ನಡುವಿನ ಹೋರಾಟದಲ್ಲಿ ಗೆಲುವು ಮತ್ತೊಮ್ಮೆ ಬಿಜೆಪಿ ಅಭ್ಯರ್ಥಿ ಪಾಲಾಗಿದೆ. ಮತ್ತೊಮ್ಮೆ ಕಾಂಗ್ರೆಸ್ ಅಭ್ಯರ್ಥಿ ಗೀತಾಗೆ ನಿರಾಸೆ ಅನುಭವಿಸಬೇಕಾಯಿತು.

ಗೀತಾ ಸೋತ ಬೆನ್ನಲ್ಲೆ ಕುಮಾರ್ ಬಂಗಾರಪ್ಪ ಮಾಡಿದ್ದ ಪೋಸ್ಟ್ ವಿರುದ್ಧ ಇಂದು ಶಿವರಾಜ್‌ಕುಮಾರ್ ಅಭಿಮಾನಿಗಳು ಕುಮಾರ್ ಬಂಗಾರಪ್ಪ ಮನೆಗೆ ಮುತ್ತಿಗೆ ಹಾಕಿದರು. ಈ ವೇಳೆ ಕುಮಾರ್ ಅವರ ಸದಾಶಿವ ನಗರ ನಿವಾಸದ ಎದುರು ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು, ಶಿವರಾಜ್‌ಕುಮಾರ್ ಅಭಿಮಾನಿಗಳನ್ನು ಶಾಂತಮಾಡಲು ಮುಂದಾದರು. ಈ ವೇಳೆ ಪೊಲೀಸರು ಹಾಗೂ ಅಭಿಮಾನಿಗಳ ನಡುವೆ ಮಾತಿನ ಚಕಮಕಿ ನಡೆಯಿತು. ಅಲ್ಲದೆ ಕೆಲವು ಅಭಿಮಾನಿಗಳನ್ನು ಪೊಲೀಸರು ವಶಕ್ಕೆ ಪಡೆದರು.
ಶಿವರಾಜಕುಮಾರ್ ಅವರ ಬಗ್ಗೆ ಮಾತನಾಡಿದ್ದು ಬೇಸರ ತಂದಿದೆ. ಹೀಗಾಗಿ ಕುಮಾರ್ ಬಂಗಾರಪ್ಪ ಕ್ಷಮೆ ಕೇಳ ಬೇಕು ಎಂದು ಅಭಿಮಾನಿಗಳು ಒತ್ತಾಯಿಸಿದರು.
ಕುಮಾರ್ ಬಂಗಾರಪ್ಪ ಹೇಳಿದ್ದೇನು?
ಲೋಕಸಭಾ ಚುನಾವಣೆಗಳ ಫಲಿತಾಂಶಗಳು ಹೊರ ಬಿದ್ದಾಗ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಕುಮಾರ್ ಬಂಗಾರಪ್ಪ ಟೀಕೆ ಮಾಡಿದ್ದರು. ಕುಮಾರ್ ಬಂಗಾರಪ್ಪ ಬಿವೈ ರಾಘವೇಂದ್ರ ಗೆಲುವಿನ ಬಳಿಕ ಅಭಿನಂದನೆ ಸಲ್ಲಿಸಿ ಪೋಸ್ಟ್ ಮಾಡಿದ್ದರು. ನಟ ಶಿವರಾಜ್ ಕುಮಾರ್ ನಿರುದ್ಯೋಗಿಯಾಗಬೇಕಿಲ್ಲ. ಜಾತ್ರೆಗಳಲ್ಲಿ ಕುಣಿಯುವ ಕೆಲಸಕ್ಕೆ ಅರ್ಜಿ ಹಾಕಿಕೊಳ್ಳಬಹುದು ಎಂದು ಕುಮಾರ್ ಬಂಗಾರಪ್ಪ ಸಾಮಾಜಿಕ ತಾಣದಲ್ಲಿ ವ್ಯಂಗ್ಯ ಮಾಡಿದ್ದರು. ಈ ಹೇಳಿಕೆ ಶಿವಣ್ಣ ಅಭಿಮಾನಿಗಳಿಗೆ ಕೆರಳಿಸಿತ್ತು. ಹೀಗಾಗಿ ಇಂದು ಶಿವರಾಜ್ ಕುಮಾರ್ ಅಭಿಮಾನಿಗಳು ಕುಮಾರ್ ಬಂಗಾರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದರು.












Click it and Unblock the Notifications