ಮೋದಿ ಬಂದಾಗ ಸುಮಲತಾ ಬಿಜೆಪಿ ಸೇರಲ್ಲ: ನಿಗೂಢವಾಗುತ್ತಲೇ ಇದೆ ಮಂಡ್ಯ ಸಂಸದೆಯ ನಡೆ- ಇಲ್ಲಿದೆ ಇನ್‌ಸೈಡ್ ಸ್ಟೋರಿ
ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಚುನಾವಣೆ ಹೊಸ್ತಿಲಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆದರೆ, ಇದು ನಿಜವಲ್ಲವೆಂದು ಬಿಜೆಪಿಯ ಉನ್ನತ ನಾಯಕರೊಬ್ಬರು ಹೇಳಿದ್ದಾರೆ. ಈ ವರದಿ ಓದಿ
ಬೆಂಗಳೂರು, ಮಾರ್ಚ್ 03: ಕರ್ನಾಟಕದ ವಿಧಾನಸಭೆ ಚುನಾವಣೆಗೆ ಕೆಲ ತಿಂಗಳು ಬಾಕಿ ಇವೆ. ಇಂತಹ ಸಂದರ್ಭದಲ್ಲಿ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಚುನಾವಣೆ ಹೊಸ್ತಿಲಲ್ಲಿ ಭಾರತೀಯ ಜನತಾ ಪಕ್ಷವನ್ನು ಸೇರಲಿದ್ದಾರೆ ಎಂಬ ಮಾತುಗಳು ಕೇಳಿಬಂದಿವೆ. ಆ ಮೂಲಕ ರಾಜ್ಯ ರಾಜಕಾರಣಕ್ಕೆ ಸುಮಲತಾ ಎಂಟ್ರಿ ಕೊಡಲಿದ್ದಾರೆ ಎಂದು ಹೇಳಲಾಗುತ್ತಿದೆ.
ಮಾರ್ಚ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಆಗಮಿಸಲಿದ್ದಾರೆ. 10-ಲೇನ್‌ಗಳ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ವೇ ಉದ್ಘಾಟನೆ ಮಾಡಲಿದ್ದಾರೆ. ಆ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಬಿಜೆಪಿಗೆ ಸೇರಲಿದ್ದಾರೆ ಎಂಬ ಉಹಾಪೋಹಗಳು ಹರಿದಾಡುತ್ತಿವೆ.

ಆದರೆ, ಈ ಬಗ್ಗೆ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ದಿವಂಗತ ನಟ ಅಂಬರೀಶ್ ಸೋದರಳಿಯ ಎಂ ಎ ಮದನ್ ಕುಮಾರ್, 'ದೊಡ್ಡ ನಾಯಕರು ಮಂಡ್ಯಕ್ಕೆ ಭೇಟಿ ನೀಡಿದಾಗಲೆಲ್ಲಾ ಹರಡುವ ವದಂತಿ ಇದು' ಎಂದು ಹೇಳಿದ್ದಾರೆ.
'ಡಿಸೆಂಬರ್‌ನಲ್ಲಿ, ಕೇಂದ್ರ ಗೃಹ ಸಚಿವ ಅಮಿತ್ ಷಾ ಮಂಡ್ಯಾಕ್ಕೆ ಬಂದಾಗ, ಇಂತಹುದೇ ವದಂತಿಗಳು ಹರಿದಾಡಿದ್ದವು. ಈಗಲೂ ಸಹ ಇದೇ ತರಹದ ವದಂತಿಗಳು ಹರಿದಾಡುತ್ತಿವೆ. ಎಲ್ಲಾ ಪಕ್ಷಗಳಿಂದ ಸಮಾನ ಅಂತರವನ್ನು ಕಾಪಾಡಿಕೊಳ್ಳುವ ಮೂಲಕ ಸುಮಲತಾ ತಟಸ್ಥ ನೀತಿಯನ್ನು ಅನುಸರಿಸುತ್ತಾರೆ' ಎಂದು ಅವರು ತಿಳಿಸಿದ್ದಾರೆ.

ಬಿಜೆಪಿ ಮೂಲಗಳು ಪ್ರಕಾರ, ಸುಮಾಲತಾ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ. ಆದರೆ, ಸುಮಲತಾ ಅವರು ಯಾವಾಗ ಔಪಚಾರಿಕವಾಗಿ ಬಿಜೆಪಿ ಸೇರ್ಪಡೆಗೊಳ್ಳುತ್ತಾರೆ ಎಂಬುದರ ಕುರಿತು ಯಾವುದೇ ಸ್ಪಷ್ಟತೆ ಇಲ್ಲ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ ನೇತೃತ್ವದಲ್ಲಿ ವಿಜಯ ಸಂಕಲ್ಪ ನಡೆಯುತ್ತಿದೆ. ಇದು ಸ್ವಲ್ಪ ಸಮಯದ ನಂತರ ಮಂಡ್ಯವನ್ನು ಸಂಚರಿಸಲಿದೆ. ಆ ಸಮಯದಲ್ಲಿ ಸುಮಲತಾ ಬಿಜೆಪಿಗೆ ಸೇರ್ಪಡೆಗೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಆದರೆ, ಈ ಎಲ್ಲ ವದಂತಿಗಳಿಗೆ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಅವರು ತೆರೆ ಎಳೆದಿದ್ದಾರೆ. ಈ ಕುರಿತು ಮಾಹಿತಿ ನೀಡಿರುವ ಅವರು, ಮೋದಿ ಭೇಟಿ ಸಂದರ್ಭದಲ್ಲಿ ಮಂಡ್ಯ ಸಂಸದೆ ಸುಮಲತಾ ಬಿಜೆಪಿ ಸೇರ್ಪಡೆಗೊಳ್ಳಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಹಳೇ ಮೈಸೂರು ಭಾಗದಲ್ಲಿ ಬಿಜೆಪಿ ನೆಲೆಕಂಡುಕೊಳ್ಳಲು ಯತ್ನಿಸುತ್ತಿದೆ. ಸಂಸದೆ ಸುಮಲತಾ ಅವರನ್ನು ಬಿಜೆಪಿಗೆ ಸೇರಿಸಿಕೊಳ್ಳುವ ಮೂಲಕ ಮಂಡ್ಯ ಜಿಲ್ಲೆಯಲ್ಲಿ ಬಿಜೆಪಿಯನ್ನು ಮುನ್ನೆಲೆಗೆ ತರಬೇಕೆಂಬುದು ರಾಜ್ಯ ಬಿಜೆಪಿ ನಾಯಕರ ಒತ್ತಾಸೆಯಾಗಿದೆ. ಸುಮಲತಾ ಅವರೂ ಬಿಜೆಪಿಗೆ ಕುರಿತು ಒಳ್ಳೆಯ ಮಾತಗಳನ್ನು ಆಡುತ್ತಲೇ ಬಂದಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಭೇಷರತ್ತಾಗಿ ಬಿಜೆಪಿ ತಮಗೆ ಬೆಂಬಲ ನೀಡಿದ್ದನ್ನು ಸ್ಮರಿಸಿಕೊಂಡಿದ್ದಾರೆ. ಆದರೆ, ಬಿಜೆಪಿ ಸೇರ್ಪಡೆಗೊಳ್ಳುವ ಕುರಿತು ಈ ವರೆಗೆ ಯಾವುದೇ ಹೇಳಿಕೆಯನ್ನು ನೀಡಿಲ್ಲ.
ಈ ಹಿಂದೆ ನಟ ಅಂಬರೀಶ್ ಅವರು ಜೆಡಿಎಸ್ ಹಾಗೂ ಕಾಂಗ್ರೆಸ್‌ನಿಂದ ಸ್ಪರ್ಧಿಸಿ ಗೆದ್ದಿದ್ದರು. ಅವರು ಕೇಂದ್ರ ಹಾಗೂ ರಾಜ್ಯದಲ್ಲಿ ಸಚಿವರಾಗಿ ಸೇವೆ ಸಲ್ಲಿಸಿದ್ದರು. ಈಗ ಸುಮಲತಾ ಬಿಜೆಪಿ ಸೇರುವುದು ಅಂಬರೀಶ್ ಅಭಿಮಾನಿಗಳು ಹಾಗೂ ಸುಮಲತಾ ಬೆಂಬಲಿಗರಿಗೆ ಇಷ್ಟವಿಲ್ಲ ಎಂದು ಹೇಳಲಾಗುತ್ತಿದೆ. ಮಂಡ್ಯದ ರೈತ ಸಂಘವು ಸುಮಲತಾ ಬಿಜೆಪಿ ಸೇರ್ಪಡೆಯನ್ನು ಬಹಿರಂಗವಾಗಿಯೇ ವಿರೋಧಿಸಿದೆ. ಈ ಎಲ್ಲ ಅಡೆತಡೆಗಳನ್ನು ಎದುರಿಸಿ ಮಂಡ್ಯ ಸಂಸದೆ ಬಿಜೆಪಿ ಸೇರುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟಸಾಧ್ಯವೆಂದು ತಜ್ಞರು ಹೇಳಿದ್ದಾರೆ.











Click it and Unblock the Notifications