#VenkayyaSakayya ಅಭಿಯಾನ ಹುಟ್ಟಿದ್ದು ಹೇಗೆ?
ಬೆಂಗಳೂರು, ಮೇ 30 : #VenkayyaSakayya ಎಂದು ಟ್ವಿಟರ್‌ನಲ್ಲಿ ನಡೆದ ಅಭಿಯಾನ ಹಿಟ್ ಆಗಿದೆ. ಕನ್ನಡಿಗರ ಆಕ್ರೋಶಕ್ಕೆ ಮಣಿದ ವೆಂಕಯ್ಯ ನಾಯ್ಡು ಅವರು ಈ ಬಾರಿ ಕರ್ನಾಟಕದಿಂದ ಸ್ಪರ್ಧಿಸುತ್ತಿಲ್ಲ. ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆ ಸದಸ್ಯರ ಆಯ್ಕೆಗೆ ನಡೆಯುವ ಚುನಾವಣೆಯಲ್ಲಿ ಕೇಂದ್ರ ವಾಣಿಜ್ಯೋದ್ಯಮ ಖಾತೆ ರಾಜ್ಯ ಸಚಿವೆ (ಸ್ವತಂತ್ರ) ನಿರ್ಮಲಾ ಸೀತಾರಾಮನ್ ಸ್ಪರ್ಧಿಸುತ್ತಿದ್ದಾರೆ.
ವೆಂಕಯ್ಯ ನಾಯ್ಡು ಅವರು 1998ರಲ್ಲಿ ಮೊದಲ ಬಾರಿಗೆ ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾದರು. ನಂತರ 2004 ಮತ್ತು 2010ರಲ್ಲಿ ಸತತವಾಗಿ ರಾಜ್ಯದಿಂದಲೇ ಆಯ್ಕೆಯಾಗಿದ್ದಾರೆ. 2016ರಲ್ಲಿಯೂ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿ ಹಬ್ಬಿತ್ತು. ಆದರೆ, ಕನ್ನಡಿಗರ ಒತ್ತಾಯಕ್ಕೆ ಮಣಿದ ಅವರು ಕರ್ನಾಟಕ ಬಿಟ್ಟು ರಾಜಸ್ಥಾನಕ್ಕೆ ಹೋಗಿದ್ದಾರೆ. [#VenkayyaSakayya ಎಂದ ರೊಚ್ಚಿಗೆದ್ದ ಕನ್ನಡಿಗರು]
ವೆಂಕಯ್ಯ ನಾಯ್ಡು ಅವರು ಕರ್ನಾಟಕದಿಂದ ರಾಜ್ಯಸಭೆಗೆ ಆಯ್ಕೆಯಾಗಬಾರದು ಎಂದು ಮೊದಲು ಧ್ವನಿ ಎತ್ತಿದ್ದು ಐಟಿ-ಬಿಟಿ ಕನ್ನಡ ಬಳಗ. 18 ವರ್ಷದಿಂದ ರಾಜ್ಯಸಭೆಗೆ ಆಯ್ಕೆಯಾದರೂ ಎರಡು ಪದ ಕನ್ನಡ ಕಲಿತಿಲ್ಲ ಮತ್ತು ಕರ್ನಾಟಕದ ಸಮಸ್ಯೆಗಳ ಬಗ್ಗೆ ವೆಂಕಯ್ಯ ಮಾತಾಡಿಲ್ಲ ಎಂದು ಮೊದಲು ಆಕ್ರೋಶ ವ್ಯಕ್ತವಾಯಿತು. ಈ ಆಕ್ರೋಶ ನಂತರ ಅಭಿಯಾನವಾಗಿ ರೂಪಗೊಂಡಿತು. [ರಾಜ್ಯಸಭೆಗೆ ಕರ್ನಾಟಕದಿಂದ ವೆಂಕಯ್ಯ ಬದಲಿಗೆ ನಿರ್ಮಲಾ]

ಅಭಿಯಾನದ ಹಿಂದಿರುವ ಶಕ್ತಿಗಳು : ವೆಂಕಯ್ಯ ಸಾಕಯ್ಯ ಎಂದು ಹೋರಾಟ ಆರಂಭಿಸಿದವರು ಐಟಿ-ಬಿಟಿ ಬಳಗದ ಶ್ರೀಕಾಂತ್, ಸುನಿಲ್ ಗೌಡ, ದೇವರಾಜ್ ಮುದಿಗೆರೆ, ಮಂಜುನಾಥ್, ಕೆ.ಎಂ.ಶಿವಕಿರಣ್ ಆಸ್ಕಿನಾಳ್, ಶರತ್ ಕನಸುಗಾರ, ಗಿರೀಶ್ ಕುಮಾರ್ ಮೊದಲಾದವರು. [ರಾಜ್ಯಸಭೆಗೆ ವೆಂಕಯ್ಯ ಸಾಕಯ್ಯ: ವೆಂಕಯ್ಯ ನಾಯ್ಡು ತಿರುಗೇಟು]
ಈ ಬಾರಿ ವೆಂಕಯ್ಯ ಅವರು ಆಯ್ಕೆ ಆಗುವ ಮೊದಲು ಪ್ರತಿರೋಧ ತೋರಿಸಬೇಕು ಎಂದು ತೀರ್ಮಾನಿಸಿದ ತಂಡ, ಅದಕ್ಕಾಗಿ ಟ್ವೀಟರ್ ಆಯ್ಕೆ ಮಾಡಿಕೊಂಡಿತು. ಮೇ 17ರಂದು ಯಾವ ಹ್ಯಾಶ್ ಟ್ಯಾಗ್ ಉಪಯೋಗಿಸುವುದು? ಎಂದು whatsApp ಅಲ್ಲಿ ಚರ್ಚೆ ನಡೆಯಿತು. ಕೊನೆಗೆ ಎಲ್ಲರೂ #VenkayyaSakayya ಎಂದು ನಿರ್ಧರಿಸಿದರು. ಮುಂದಿನ ದಿನಗಳಲ್ಲಿ #VenkayyaSakayya ಹ್ಯಾಶ್ ಟ್ಯಾಗ್ ಸೃಷ್ಟಿಸಿ, ಫೇಸ್‌ಬುಕ್ ಅಲ್ಲಿ ಪೋಸ್ಟ್ ಮಾಡಿ ಎಂದು ಎಲ್ಲಾ ಕನ್ನಡಿಗರಿಗೂ ವಿನಂತಿ ಮಾಡಲಾಯಿತು. ['ವೆಂಕಯ್ಯ ಆಯ್ಕೆಯಿಂದ ರಾಜ್ಯಕ್ಕೆ ಲಾಭವೇ ಹೆಚ್ಚು']
ಮೇ 18ರಂದು ಅಭಿಯಾನ : #VenkayyaSakayya ಹ್ಯಾಶ್ ಟ್ಯಾಗ್ ಬಳಸಿ ಟ್ವಿಟ್ ಮಾಡುವ ಅಭಿಯಾನ ಮೇ 18ರ ಬೆಳಗ್ಗೆ ಆರಂಭವಾಯಿತು. ಇಂದು ಈ ಟ್ಯಾಗ್‌ನಲ್ಲಿ ಲಕ್ಷಕ್ಕೂ ಅಧಿಕ ಟ್ವೀಟ್‌ಗಳಿವೆ. ಮೊದಲ ದಿನವೇ 15 ಸಾವಿರ ಟ್ವೀಟ್‌ಗಳು ಬಂದಿವೆ.
ಬನವಾಸಿ ಬಳಗದ ಗೆಳೆಯರು ಈ ಅಭಿಯಾನದಲ್ಲಿ ಮುಂಚೂಣಿಯಲ್ಲಿ ನಿಂತು ಅನೇಕ ಮಾಹಿತಿಗಳನ್ನು ಟ್ವಿಟ್ ಮಾಡಿದರು. ಟ್ರೋಲ್ ಹೈಕ್ಳು ತಂಡದವರು ಸೇರಿದಂತೆ ಅನೇಕ ಕನ್ನಡದ ತಂಡಗಳು, ವಿದೇಶದಲ್ಲಿ ನೆಲೆಸಿರುವ ಕನ್ನಡಿಗರು, ಕನ್ನಡ ಸಿನಿಮಾ ತಾರೆಯರ ಅಭಿಮಾನಿಗಳು ಟ್ವಿಟ್ ಮಾಡಿ ಅಭಿಯಾನಕ್ಕೆ ಬೆಂಬಲ ಕೊಟ್ಟರು.
ಕರ್ನಾಟಕದ ಎಲ್ಲಾ ದಿನಪತ್ರಿಕೆಗಳು ಹಾಗೂ ಟಿವಿಗಳಲ್ಲಿ ಈ ಅಭಿಯಾನದ ಬಗ್ಗೆ ಸುದ್ದಿಯಾಯಿತು. ಬಿಜೆಪಿ ಹೈಕಮಾಂಡಿಗೂ ಇದರ ಬಿಸಿ ಮುಟ್ಟಿತು, ಕನ್ನಡಿಗರಲ್ಲಿ ಸಲ್ಪ ಪ್ರಮಾಣದಲ್ಲಿ ಪ್ರಾದೇಶಿಕತೆಯನ್ನು ಬಡಿದೆಬ್ಬಿಸಿ ಕರ್ನಾಟಕದ ವಿಷಯಗಳ ಬಗ್ಗೆ ಚರ್ಚಿಸುವಂತೆ ಮಾಡಿತು.

ಐಟಿ ಬಳಗದ ಸದಸ್ಯರು ಶುರುಮಾಡಿದ ಈ ಅಭಿಯಾನ ಜನಾಂದೋಲನವಾಗಿ ಕನ್ನಡ ನಾಡಿಗೆ ಪಸರಿಸಿತು. 29ಮೇ ರಂದು ಟೌನ್ ಹಾಲ್ ಮುಂದೆ ನೂರಾರು ಜನರು ಕರ್ನಾಟಕದಿಂದ ಕನ್ನಡಿಗರನ್ನೇ ರಾಜ್ಯಸಭೆಗೆ ಆರಿಸಿ ಕಳುಹಿಸಿ ಎಂದು ಪ್ರತಿಭಟನೆ ಮಾಡಿದರು.
ಇದೇ ವಿಷಯವಾಗಿ ನಾರಾಯಣಗೌಡರ ಕರ್ನಾಟಕ ರಕ್ಷಣ ವೇದಿಕೆ ಹತ್ತಾರು ವರ್ಷಗಳಿಂದ ಈ ಕುರಿತು ಅನೇಕ ಹೋರಾಟಗಳನ್ನು ಮಾಡಿತ್ತು. ಐಟಿಬಿಟಿ ಕನ್ನಡಿಗರ ಟ್ವಿಟರ್ ಟ್ರೆಂಡ್, ಕರವೇ ಬೀದಿ ಹೋರಾಟ ಎಲ್ಲಾ ಪ್ರತಿಭಟನೆಗಳನ್ನು ಗಮನಿಸಿ, ಬಿಜೆಪಿ ಹೈಕಮಾಂಡ್ ವೆಂಕಯ್ಯ ಅವರ ಸಾಧನೆ ಪಟ್ಟಿ ಬಿಡುಗಡೆ ಮಾಡುವುದಾಗಿ ಹೇಳಿತ್ತು. ಈಗ ಅವರನ್ನು ರಾಜಸ್ಥಾನಕ್ಕೆ ಕಳುಹಿಸಲಾಗಿದೆ.
ಕನ್ನಡ ಕಲಿಯುವ ಭರವಸೆ : ಬಿಜೆಪಿ ರಾಜ್ಯಸಭೆ ಚುನಾವಣೆಗೆ ನಿರ್ಮಲಾ ಸೀತಾರಾಮನ್ ಅವರ ಹೆಸರನ್ನು ಅಂತಿಮಗೊಳಿಸಿದೆ. ಐಟಿ-ಬಿಟಿ ಕನ್ನಡಿಗರು ಇದನ್ನು ಪ್ರಬಲವಾಗಿ ವಿರೋಧ ಮಾಡುತ್ತಿದ್ದಾರೆ. ಈಗಾಗಲೇ ಟ್ವಿಟ್ಟರ್‌ನಲ್ಲಿ ಸಿ.ಟಿ.ರವಿ, ಪ್ರತಾಪ್ ಸಿಂಹ ಎಲ್ಲರನ್ನು ಏಳು ಕೋಟಿ ಕನ್ನಡಿಗರಲ್ಲಿ ನಿಮಗೇ ಒಬ್ಬ ಕನ್ನಡಿಗ ಸಿಗಲಿಲ್ಲವೆ? ಅಂತಾ ಪ್ರಶ್ನೆ ಮಾಡುತ್ತಿದ್ದಾರೆ.
@DSiddananja I have interacted with Smt @nsitharaman & found her supremely capable of achieving the extraordinary. She will learn Kannada
— C.T.Ravi (@CTRavi_BJP) May 29, 2016
ಆದರೆ, ನಿರ್ಮಲಾ ಸೀತಾರಾಮನ್ ಅವರು ಕನ್ನಡ ಕಲಿಯುತ್ತೇನೆ ಎಂದು ಟ್ವಿಟರ್ ಮೂಲಕ ಉತ್ತರ ನೀಡಿದ್ದಾರೆ.












Click it and Unblock the Notifications