ಸಮೀಕ್ಷೆ ವರದಿ; 69 ಶಾಲೆಗಳಲ್ಲಿ ಇನ್ನೂ ಶೌಚಾಲಯ, ನೀರು ಇಲ್ಲ
ಬೆಂಗಳೂರು, ಡಿಸೆಂಬರ್ 12: ರಾಜ್ಯದ ಸರಕಾರಿ ಶಾಲೆಗಳ ಪೈಕಿ ಇನ್ನೂ 69 ಶಾಲೆಗಳಲ್ಲಿ ಶೌಚಾಲಯ ಹಾಗೂ ನೀರಿನ ವ್ಯವಸ್ಥೆ ಇಲ್ಲ. ಈ ಅಂಶ ಸರ್ಕಾರದ ಶಿಕ್ಷಣ ಇಲಾಖೆ ಮತ್ತು ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಗಳು ಹೈಕೋರ್ಟ್ ನಿರ್ದೇಶನದ ಮೇರೆಗೆ ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗವಾಗಿದೆ.
ಹೌದು, ಶೌಚಾಲಯ ಮತ್ತು ಕುಡಿಯುವ ನೀರು ಲಭ್ಯತೆ ಕೊರತೆ ಎದುರಿಸುತ್ತಿದ್ದ ರಾಜ್ಯದ 551 ಶಾಲೆಗಳಲ್ಲಿ ಸಮೀಕ್ಷೆ ನಡೆಸಲಾಗಿದ್ದು, ಅವುಗಳಲ್ಲಿ 482 ಶಾಲೆಗಳ ಸ್ಥಿತಿ ತೃಪ್ತಿಕರವಾಗಿದೆ ಮತ್ತು 69 ಶಾಲೆಗಳ ಸ್ಥಿತಿ ತೃಪ್ತಿಕರವಾಗಿಲ್ಲ ಎಂಬುದು ಸಮೀಕ್ಷೆಯಿಂದ ಕಂಡು ಬಂದಿದೆ ಎಂದು ಶಾಲಾ ಶಿಕ್ಷಣ ಇಲಾಖೆಯೇ ಹೈಕೋರ್ಟ್‌ಗೆ ಸೋಮವಾರ ತಿಳಿಸಿದೆ.

ಶಾಲೆಯಿಂದ ಹೊರಗುಳಿದ ಮಕ್ಕಳ ಕುರಿತಂತೆ ಮಾಧ್ಯಮಗಳ ವರದಿ ಆಧರಿಸಿ ಹೈಕೋರ್ಟ್ ಸ್ವಯಂ ಪ್ರೇರಿತವಾಗಿ ದಾಖಲಿಸಿಕೊಂಡಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಮುಖ್ಯ ನ್ಯಾಯಮೂರ್ತಿ ಪಿ. ಬಿ. ವರಲೆ ಮತ್ತು ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು.
ವರದಿ ಸಲ್ಲಿಸಿದ ವಕೀಲರು: ಆಗ ಸರ್ಕಾರಿ ವಕೀಲರು, ನ್ಯಾಯಾಲಯದ ನಿರ್ದೇಶನದಂತೆ ಕರ್ನಾಟಕ ಕಾನೂನು ಸೇವಾ ಪ್ರಾಧಿಕಾರದ ಪ್ರತಿನಿಧಿಗಳ ಸಮಕ್ಷಮದಲ್ಲಿ ಶಾಲೆಗಳ ಸಮೀಕ್ಷೆ ನಡೆಸಲಾಗಿದ್ದು, ಅದರ ವರದಿಯನ್ನು ಶಿಕ್ಷಣ ಇಲಾಖೆ ಆಯುಕ್ತೆ ಬಿ. ಬಿ. ಕಾವೇರಿ ಅವರ ಪರವಾಗಿ ಸಲ್ಲಿಸುತ್ತಿದ್ದೇನೆ. ಎಲ್ಲೆಲ್ಲಿ ಅತೃಪ್ತಿ ವ್ಯಕ್ತಪಡಿಸಲಾಗಿದೆಯೋ ಅಂತಹ ಕಡೆ ಮೂಲಸೌಕರ್ಯ ವೃದ್ಧಿಗೆ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ ಎಂದರು.
ಅದಕ್ಕೆ ಪ್ರಕರಣದಲ್ಲಿನ್ಯಾಯಾಲಯಕ್ಕೆ ಸಹಕರಿಸಲು ಅಮಿಕಸ್ ಕ್ಯೂರಿಯಾಗಿ ನೇಮಕಗೊಂಡಿರುವ ಹಿರಿಯ ವಕೀಲರು ಈಗಷ್ಟೇ ವರದಿ ಕೈ ಸೇರಿದೆ. ಅದನ್ನು ಪರಿಶೀಲಿಸಿ ತಮ್ಮ ಅಭಿಪ್ರಾಯ ಮಂಡಿಸಲಾಗುವುದು ಎಂದು ಹೇಳಿದರು.
ಅಲ್ಲದೆ, ಕಳೆದ ವಿಚಾರಣೆ ವೇಳೆ ನ್ಯಾಯಾಲಯ ಬಿಬಿಎಂಪಿ ವ್ಯಾಪ್ತಿಯಲ್ಲೂ ಶಾಲೆಗಳಲ್ಲಿನ ಮೂಲಸೌಕರ್ಯದ ಬಗ್ಗೆ ಸಮೀಕ್ಷೆ ನಡೆಸಲು ಆದೇಶಿಸಲಾಗಿತ್ತು. ಆದರೆ ಈವರೆಗೆ ಪಾಲಿಕೆಯಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು.
ಆಗ ನ್ಯಾಯಪೀಠ, ಹಾಗಿದ್ದರೆ ಬಿಬಿಎಂಪಿ ಪ್ರತಿನಿಧಿಸುವ ವಕೀಲರಿಗೆ ವಿಷಯ ತಿಳಿಸಿ, ಸಮೀಕ್ಷೆ ನಡೆಸಿ ವರದಿ ಸಲ್ಲಿಸಲು ಹೇಳಿ. ಏಕೆಂದರೆ ಇತ್ತೀಚೆಗೆ ಮಾಧ್ಯಮವೊಂದರಲ್ಲಿ ಬಿಬಿಎಂಪಿ ವ್ಯಾಪ್ತಿಯಲ್ಲಿ ಶಾಲೆಗಳು ದುಸ್ಥಿತಿಯಲ್ಲಿವೆ ಎಂದು ಹೇಳಲಾಗಿತ್ತು. ಹಾಗಾಗಿ ವರದಿ ಸಲ್ಲಿಸಲು ಸೂಚನೆ ನೀಡಿ ಎಂದು ಹೇಳಿತು.
15 ಸಾವಿರಕ್ಕೂ ಅಧಿಕ ಮಕ್ಕಳು ಹೊರಗೆ: ಸಿವಿಕ್ ಸಂಘಟನೆಯ ಮುಖ್ಯಸ್ಥೆ ಕಾತ್ಯಾಯಿನಿ ಚಾಮರಾಜ್, ಶಿಕ್ಷಣ ಇಲಾಖೆ ಕೇವಲ ಎರಡು ಸಾವಿರ ಮಕ್ಕಳು ಶಾಲೆಯಿಂದ ಹೊರಗುಳಿದಿದ್ದಾರೆಂದು ಹೇಳುತ್ತಿದೆ. ಆದರೆ ವಾಸ್ತವದಲ್ಲಿ15 ಸಾವಿರಕ್ಕೂ ಅಧಿಕ ಮಕ್ಕಳು ಶಾಲೆಯಿಂದ ಹೊರಗಿದ್ದಾರೆ ಎಂದು ಆರೋಪಿಸಿದರು.
ಅಲ್ಲದೆ, ತಮ್ಮ ಸಂಘಟನೆಯ ಕಾರ್ಯಕರ್ತರು ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಆರ್‌ಟಿಇ ಕಾಯಿದೆ ಜಾರಿಯ ಬಗ್ಗೆ ಸಮೀಕ್ಷೆ ನಡೆಸಲಾಗಿದ್ದು, ಅದರ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುತ್ತಿದ್ದೇವೆ ಎಂದು ಹೇಳಿದರು. ನ್ಯಾಯಾಲಯ ಅವರಿಗೆ ನಿಮ್ಮ ವರದಿಯನ್ನು ಸಲ್ಲಿಸಿ, ಆ ಬಗ್ಗೆ ಸರ್ಕಾರ ಪರಿಶೀಲಿಸಿ ಉತ್ತರ ನೀಡಲಿದೆ ಎಂದು ಹೇಳಿ ವಿಚಾರಣೆಯನ್ನು ಮುಂದೂಡಿತು.












Click it and Unblock the Notifications