ಸೀತೆ ಏನೋ ಅಗ್ನಿಕುಂಡದಿಂದ ಹೊರಬಂದ್ಳು, ಆದ್ರೆ ರಾಜ್ಯ ಕಾಂಗ್ರೆಸ್ಸಿಗರು?
ಸೀತಾಮಾತೆ ಏನೋ ಅಗ್ನಿಕುಂಡದಿಂದ ಪತಿವ್ರತೆಯಾಗಿ ಹೊರಬಂದರು, ಆದರೆ ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಹಗರಣದಿಂದ ಸುದ್ದಿಯಾಗುತ್ತಿರುವ ರಾಜ್ಯ ಕಾಂಗ್ರೆಸ್ಸಿಗರು ಆರೋಪಗಳಿಂದ ಹೊರಬರಲು ಸಾಧ್ಯವೇ?
ಡೈರಿ, ಹೈಕಮಾಂಡಿಗೆ ಕಪ್ಪ ಪ್ರಕರಣದಿಂದ ಪುನರಾರಂಭವಾದ ಬಿಜೆಪಿ ಮತ್ತು ಕಾಂಗ್ರೆಸ್ಸಿಗರ ಮಾತಿನ ಸಮರ, ಬೆಂಗಳೂರಿನಲ್ಲಿ ಸಿದ್ದು ಸರಕಾರದ ಕನಸಿನ ಕೂಸು ಸ್ಟೀಲ್ ಬ್ರಿಡ್ಜಿಗೆ ಅಂತಿಮ ಮೊಳೆ ಹೊಡೆಯುವ ಮೂಲಕ ಇಬ್ಬರ ನಡುವಿನ ಹೊಲಸು ರಾಜಕೀಯ ಇನ್ನೊಂದು ಮಜಲಿಗೆ ಬಂದು ನಿಂತಿದೆ.
ಸಾರ್ವಜನಿಕರ ಮತ್ತು ಪರಿಸರವಾದಿಗಳ ವಿರೋಧದ ನಡುವೆಯೂ ಸ್ಟೀಲ್ ಸೇತುವೆ ನಿರ್ಮಾಣ ಶತಸಿದ್ದ ಎನ್ನುತ್ತಿದ್ದ ಸಿದ್ದರಾಮಯ್ಯ, ಬೆಂಗಳೂರಿಗರಿಗೆ ಬೇಡವಾದ ಸೇತುವೆ ನಮಗ್ಯಾಕೆ ಎಂದು ಉಲ್ಟಾ ಹೊಡೆದು ಯೋಜನೆಗೆ ಕೃಷ್ಣಾರ್ಪಣ ಬಿಟ್ಟಿದ್ದಾಗಿದೆ.
ಕಿಕ್ ಬ್ಯಾಕ್ ಭೀತಿಯಿಂದ ಸೇತುವೆ ನಿರ್ಮಾಣದಿಂದ ಸಿದ್ದರಾಮಯ್ಯ ಸರಕಾರ ಹಿಂದಕ್ಕೆ ಸರಿದಿದ್ದು, ಇದು ನಮ್ಮ ಹೋರಾಟಕ್ಕೆ ಸಂದ ಜಯ ಎಂದು ಬಿಜೆಪಿ ಇದರ ರಾಜಕೀಯ ಲಾಭ ಪಡೆದುಕೊಳ್ಳುತ್ತಿರಲು ಮುಂದಾದ ಬೆನ್ನಲ್ಲೇ ಬೆಂಗಳೂರು ನಗರಾಭಿವೃದ್ದಿ ಸಚಿವ ಕೆ ಜೆ ಜಾರ್ಜ್ ಪತ್ರಿಕಾಗೋಷ್ಠಿ ನಡೆಸಿ ಸರಕಾರದ ನಿಲುವನ್ನು ಸಮರ್ಥಿಸಿ ಕೊಂಡಿದ್ದಾರೆ.
ಬೆಂಗಳೂರು ಮಹಾನಗರದ ನೀರಿನ ಸಮಸ್ಯೆಯ ಬಗ್ಗೆ ಕರೆದಿದ್ದ ಮಾಧ್ಯಮ ಸಭೆ ಉಕ್ಕಿನ ಸೇತುವೆಯ ವಿಚಾರದ ಕಡೆ ತಿರುಗಿ, ಸೀತೆ, ರಾಮ, ಅಗ್ನಿಕುಂಡ..ಹೀಗೆ ರಾಮಾಯಣದ ಎಲ್ಲಾ ಪ್ರಮುಖ ಪಾತ್ರಧಾರಿಗಳನ್ನು ಪತ್ರಕರ್ತರ ಮುಂದೆ ಜಾರ್ಜ್ ಎಳೆದು ತಂದಿದ್ದೂ ಆಯಿತು.
ಈಗ ವಿಚಾರ ಏನಪ್ಪಾ ಏನಂದರೆ, ಪತ್ರಿಕಾಗೋಷ್ಠಿಯಲ್ಲಿ ತಾವು ಮತ್ತು ತಮ್ಮ ಸರಕಾರ ಕಳಂಕರಹಿತ ಎಂದು ಜಾರ್ಜ್ ತಮಗೆ ತಾವೇ ಕ್ಲೀನ್ ಚಿಟ್ ನೀಡಲು ಬಳಸಿಕೊಂಡ ಪದಪುಂಜಗಳು ಸಾರ್ವಜನಿಕ ವಲಯದಲ್ಲಿ ಚರ್ಚೆ ಮತ್ತು ಲೇವಡಿಗೊಳಗಾಗುತ್ತಿದೆ. ಮುಂದೆ ಓದಿ..

ಉಕ್ಕಿನ ಸೇತುವೆ ಕೈಬಿಟ್ಟ ಸರಕಾರ
ಉಕ್ಕಿನ ಸೇತುವೆ ಯೋಜನೆಯನ್ನು ಸರಕಾರ ಕೈಬಿಟ್ಟ ವಿಚಾರದಲ್ಲಿ ಸದ್ಯದ ಮಟ್ಟಿಗೆ ಯಡಿಯೂರಪ್ಪ ನಿಲುವು ಸಾರ್ವಜನಿಕ ವಲಯದಲ್ಲಿ ಬಿಗಿಯಾಗಿ ನಿಂತಿರುವುದು ಹೌದು. ಬಿಜೆಪಿ ಆರೋಪಿಸುತ್ತಿರುವಂತೆ ಕಿಕ್ ಬ್ಯಾಕಿಗೆ ಹೆದರಿ ಸರಕಾರ ಈ ಯೋಜನೆಯನ್ನು ಕೈಬಿಟ್ಟಿತು ಎನ್ನುವ ತಮ್ಮ ಪಕ್ಷದದ ನಿಲುವನ್ನು ಜನರಿಗೆ ಅರ್ಥಮಾಡಿಸುವಲ್ಲಿ ಬಿಜೆಪಿ ತಕ್ಕಮಟ್ಟಿಗೆ ಯಶಸ್ಸನ್ನು ಕಂಡಿದೆ.

ಸರಕಾರದ ನಿಲುವು ಸಮರ್ಥಿಸಿಕೊಂಡ ಜಾರ್ಜ್
ಒಂದು ದಿನದ ಹಿಂದೆಯೇ ನಿರ್ಧರಿಸಿದ್ದಂತೆ, ಗುರುವಾರ (ಮಾ 2), ವಿಪಕ್ಷಗಳೂ ಅಚ್ಚರಿ ಪಡುವಂತೆ, ಉಕ್ಕಿನ ಸೇತುವೆ ಯೋಜನೆಯನ್ನು ಕೈಬಿಡುವ ನಿರ್ಧಾರಕ್ಕೆ ಸರಕಾರ ಬಂತು. ನಾವೇನೂ ತಪ್ಪು ಮಾಡಿಲ್ಲ, ಉಕ್ಕಿನ ಸೇತುವೆ ಭ್ರಷ್ಟಾಚಾರದ ಸ್ಮಾರಕ ಎನ್ನುವ ಕಳಂಕ ನಮಗೆ ಬೇಡ ಎಂದು ಜಾರ್ಜ್, ಸರಕಾರದ ನಿಲುವನ್ನು ಪ್ರಕಟಿಸಿದ್ದರು.

ಸೀತೆಯಷ್ಟೇ ಪವಿತ್ರ ಎಂದ್ರು ಜಾರ್ಜ್ ಸಾಹೇಬ್ರು
ನಾನು ಚಿಕ್ಕಾಸು ಕಪ್ಪ ಪಡೆದಿಲ್ಲ. ವಿರೋಧ ಪಕ್ಷಗಳಾದ ನಿಮಗೆ ಸಂಶಯ ಏನಾದರೂ ಇದ್ದರೆ, ಅಗ್ನಿಕುಂಡ ಸಿದ್ಧಪಡಿಸಿ. ಸೀತೆಯಂತೆ ಅಗ್ನಿಪರೀಕ್ಷೆ ಎದುರಿಸುವೆ. ಅಗ್ನಿಕುಂಡದಿಂದ ನಿಷ್ಕಳಂಕವಾಗಿ ಹೊರಬರುವೆ ಎಂದು ಬಿಜೆಪಿ ಮುಖಂಡರಿಗೆ ಜಾರ್ಜ್, ರಾಮಾಯಣದ ಘಟನೆಯನ್ನು ಉಲ್ಲೇಖಿಸಿ ಸವಾಲೆಸೆದಿದ್ದರು.

ಅಗ್ನಿಕುಂಡಕ್ಕೆ ಹಾರಿ ಹೊರ ಬರುವೆ
ಜಾರ್ಜ್ ಅವರ ಮೇಲಿನ ಹೇಳಿಕೆ ಈಗ ಚರ್ಚೆಯ ವಿಷಯವಾಗಿದೆ. ಸೀತಾಮಾತೆ ಏನೋ ಅಗ್ನಿಕುಂಡದಿಂದ ಪತಿವ್ರತೆಯಾಗಿ ಹೊರಬಂದರು. ಇತ್ತೀಚಿನ ದಿನಗಳಲ್ಲಿ ಒಂದಲ್ಲಾ ಒಂದು ಹಗರಣದಿಂದ ಸುದ್ದಿಯಾಗುತ್ತಿರುವ ರಾಜ್ಯ ಕಾಂಗ್ರೆಸ್ಸಿಗರು ಏನಾದರೂ ಅಗ್ನಿಕುಂಡಕ್ಕೆ ಬಿದ್ದರೆ ಕಥೆ ಏನು ಎಂದು ಜನರು ಅಲ್ಲಲ್ಲಿ ಲೇವಡಿ ಮಾಡಿಕೊಳ್ಳುತ್ತಿದ್ದಾರೆ.

ಸಿದ್ದು ಸರಕಾರದ ದಿನಕ್ಕೊಂದು ನಿರ್ಧಾರ
ಕೆಪಿಎಸ್ಸಿ, ಕೆಪಿಟಿಸಿಎಲ್, ಕಲ್ಲಿದ್ದಲು ಟೆಂಡರ್, ಕೈಗಾರಿಕೆಗೆ ಭೂಮಿ ಮಂಜೂರು, ರೈತರ ಹೆಸರಿನಲ್ಲಿ ಬೇನಾಮಿ ದಾಖಲೆ ಮುಂತಾದ ವಿಚಾರಗಳಲ್ಲಿ ಸಿದ್ದರಾಮಯ್ಯ ಸರಕಾರ ದಿನಕ್ಕೊಂದು ನಿರ್ಧಾರ ತೆಗೆದುಕೊಳ್ಳುತ್ತಿರುವುದು ಸಾರ್ವಜನಿಕ ವಲಯದಲ್ಲಿ ಹಲವು ಸಂಶಯ/ಚರ್ಚೆಗೆ ಆಸ್ಪದ ಮಾಡಿಕೊಟ್ಟಿದೆ. ಇಂತಹ ಸಂದರ್ಭದಲ್ಲಿ ಜಾರ್ಜ್ ಅಗ್ನಿಕುಂಡ ಹೇಳಿಕೆ ಹಾಸ್ಯಾಸ್ಪದವಾಗಿ ಕಾಣುತ್ತಿದೆ.












Click it and Unblock the Notifications