ಹಾಸನ ಪೆನ್‌ಡ್ರೈವ್ ಪ್ರಕರಣ: ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದ ಮಹಿಳಾ ಆಯೋಗ
ಹಾಸನ ಜಿಲ್ಲೆಯಲ್ಲಿ ಹರಿದಾಡುತ್ತಿರುವ ಅಶ್ಲೀಲ ವಿಡಿಯೋ ಪೆನ್‌ಡ್ರೈವ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜ್ಯ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಪ್ರಜ್ವಲ್ ರೇವಣ್ಣ ಚುನಾವಣಾ ಏಜೆಂಟ್ ದೂರು ನೀಡಿದ್ದಾರೆ. ಪ್ರಜ್ವಲ್ ರೇವಣ್ಣ ಅವರ ಹೆಸರು ಕೆಡಿಸಲು ಮಾರ್ಫ್ ಮಾಡಿದ ವಿಡಿಯೋ, ಚಿತ್ರಗಳನ್ನು ಹಂಚಿಕೆ ಮಾಡಲಾಗಿದ್ದು, ಅವರನ್ನು ಚುನಾವಣೆಯಲ್ಲಿ ಸೋಲಿಸಲು ಷಡ್ಯಂತ್ರ ರೂಪಿಸಲಾಗಿದೆ ಎಂದು ಆರೋಪಿಸಲಾಗಿದೆ.

ಪೆನ್‌ಡ್ರೈವ್ ಬಗ್ಗೆ ವ್ಯಾಪಕ ಚರ್ಚೆಯಾಗುತ್ತಿರುವ ಹಿನ್ನಲೆಯಲ್ಲಿ ಮಹಿಳಾ ಆಯೋಗ ಸಿಎಂ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿದ್ದು, ವಿಶೇಷ ತನಿಖಾ ತಂಡವನ್ನು ರಚನೆ ಮಾಡುವಂತೆ ಮನವಿ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರಿಗೆ ಕರ್ನಾಟಕ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌದರಿ ಪತ್ರ ಬರೆದು, ಹಾಸನ ಜಿಲ್ಲೆಯಲ್ಲಿ ಹರಿದಾಟುತ್ತಿರುವ ಪೆನ್‌ಡ್ರೈವ್‌ನಲ್ಲಿ ಮಹಿಳೆಯರ ಮೇಲೆ ಲೈಂಗಿಕ ಹಿಂಸೆಯ ಕುರಿತು, ಸಾವಿರಾರು ಅಮಾಯಕ ಹೆಣ್ಣುಮಕ್ಕಳನ್ನು ಲೈಂಗಿಕ ಕ್ರಿಯೆಗೆ ಬಳಸಿಕೊಂಡು, ಮೊಬೈಲ್‌ನಲ್ಲಿ ಖಾಸಗಿ ವಿಡಿಯೋ ಚಿತ್ರೀಕರಣ ಮಾಡಿಕೊಂಡು ಬ್ಲಾಕ್‌ಮೇಲ್ ಮಾಡುತ್ತಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ ಪ್ರಕಟವಾಗಿದೆ.
ಪ್ರಬಾವಿ ರಾಜಕಾರಣಿಗಳು ಅನೇಕ ಮಹಿಳೆಯರನ್ನು ಲೈಂಗಿಕವಾಗಿ ಬಳಸಿಕೊಳ್ಳುತ್ತಿರುವ, ಕೆಲವರ ಮೇಲೆ ಅತ್ಯಾಚಾರ ಸಹ ಮಾಡುತ್ತಿರುವ ತುಣುಕುಗಳು ಇರುವ ಪೆನ್‌ಡ್ರೈವ್‌ಗಳು ಈಗ ಜನ ಸಾಮಾನ್ಯರ ಕೈಗೆ ಸಿಕ್ಕಿ, ಇಡೀ ಸಮಾಜ ತಲೆ ತಗ್ಗಿಸುವ ಸ್ಥಿತಿ ಇದೆ. ಮಹಿಳೆಯ ಬದುಕು ಮತ್ತು ಘನತೆಯನ್ನು ನಾಶ ಮಾಡುತ್ತಿರುವ ಬಗ್ಗೆ ಸಮೂಹ ಮಾಧ್ಯಮಗಳಲ್ಲಿ, ದಿನಪತ್ರಿಕೆಗಳಲ್ಲಿ ಪ್ರಕಟವಾಗಿದೆ. ಕರ್ನಾಟಕ ರಾಜ್ಯ ಮಹಿಳಾ ಆಯೋಗಕ್ಕೂ ಈ ವಿಚಾರಕ್ಕೆ ಸಂಬಂಧಪಟ್ಟಂತೆ ಹಲವು ಸಂಘಟನೆಗಳು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಮನವಿ ಮಾಡಿವೆ.
ಮಹಿಳೆಯನ್ನು ಬಲವಂತವಾಗಿ ಲೈಂಗಿಕ ಕ್ರಿಯೆಗೆ ಒತ್ತಾಯಿಸುವ ಮೂಲಕ ಚಿತ್ರೀಕರಣ ಮಾಡಲಾಗಿದೆ ಎನ್ನಲಾಗುತ್ತಿದೆ. ಚಿತ್ರೀಕರಣ ಮಾಡಿದ ಮತ್ತು ಅದನ್ನು ಸಾರ್ವಜನಿಕಗೊಳಿಸಿದ ಇಬ್ಬರನ್ನೂ ತನಿಖೆಗೆ ಒಳಪಡಿಸಿ ಮಹಿಳೆಯರ ಘನತೆ ಮತ್ತು ಅಸ್ತಿತ್ವಕ್ಕೆ ಹಾನಿ ಉಂಟುಮಾಡುತ್ತಿರುವವರನ್ನು ಶೀಘ್ರವಾಗಿ ಪತ್ತೆ ಹಚ್ಚಲು ವಿಶೇಷ ತನಿಖಾ ತಂಡವನ್ನು ರಚಿಸಲು ಆದೇಶ ನೀಡಬೇಕು, ಮತ್ತು ಆರೋಪಿಗಳ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಲು ಪೊಲೀಸ್ ಇಲಾಖೆಗೆ ಆದೇಶ ನೀಡುವಂತೆ ಮನವಿ ಮಾಡಲಾಗಿದೆ.












Click it and Unblock the Notifications