ಲೋಕಸಭಾ ಚುನಾವಣೆಗೆ ಕಮಲ ಪಡೆ ಸಜ್ಜು; ಅಖಾಡಕ್ಕಿಳಿದ ರಾಜಾಹುಲಿ: ಬಿ ಎಸ್ ಯಡಿಯೂರಪ್ಪ ಹೇಳಿದಿಷ್ಟು
ಬೆಂಗಳೂರು, ಸೆಪ್ಟೆಂಬರ್ 18: ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಹೀನಾಯವಾಗಿ ಸೋಲು ಕಂಡ ಬಿಜೆಪಿ, ಲೋಕಸಭಾ ಚುನಾವಣೆಗೆ ಭರ್ಜರಿ ತಯಾರಿ ನಡೆಸಿದೆ. ಲೋಕಸಭಾ ಚುನಾವಣೆಯಲ್ಲಿ 25 ಕ್ಷೇತ್ರಗಳ ಮೇಲೆ ಕಣ್ಣೀಟ್ಟಿರುವ ಬಿಜೆಪಿ ಮಾಜಿ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ರಾಜ್ಯ ಪ್ರವಾಸಕ್ಕೆ ಸಜ್ಜಾಗಿದೆ.
ಈ ಕುರಿತು ಬೆಂಗಳೂರಿನಲ್ಲಿ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿ ಸದಸ್ಯ ಬಿ ಎಸ್ ಯಡಿಯೂರಪ್ಪ ಮಾತನಾಡಿ, ಭೀಕರ ಬರಗಾಲ, ಕುಡಿಯುವ ನೀರಿನ ಹಾಹಾಕಾರ, ಕೆಆರ್ ಎಸ್ ಸೇರಿ ಜಲಾಶಯಗಳು ಖಾಲಿ ಆಗಿದ್ದರೂ ಪಕ್ಕದ ರಾಜ್ಯಕ್ಕೆ ನೀರು ಹರಿಸುತ್ತಿರುವುದು ಈ ಸರಕಾರ ಜನಹಿತವನ್ನು ಸಂಪೂರ್ಣ ಮರೆತಿರುವುದಕ್ಕೆ ಸ್ಪಷ್ಟ ಉದಾಹರಣೆ ಎಂದು ಕಿಡಿಕಾರಿದ್ದಾರೆ.

ಕಾಂಗ್ರೆಸ್ ಸರಕಾರದ ವೈಫಲ್ಯವನ್ನು ಖಂಡಿಸಿ ರಾಜ್ಯಾದ್ಯಂತ ಪ್ರವಾಸದ ಪ್ರಾರಂಭ ಮಾಡಲಾಗಿದೆ. ನಾನು ಮುಖ್ಯಮಂತ್ರಿಯಾಗಿದ್ದಾಗ ಬರಗಾಲವಿದ್ದರೂ ಏಕಾಂಗಿಯಾಗಿ ರಾಜ್ಯದ ಉದ್ದಗಲಕ್ಕೆ ಪ್ರವಾಸ ಮಾಡಿ ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದೆ. ಮನೆ ಹಾನಿ ಸಂಬಂಧ 50 ಸಾವಿರದ ಬದಲಾಗಿ 5 ಲಕ್ಷ ಪರಿಹಾರ ಕೊಡಲಾಯಿತು. ಸಿದ್ದರಾಮಯ್ಯರ ಸರಕಾರದ ಯಾವೊಬ್ಬ ಸಚಿವರೂ ಬರಗಾಲದ ಕುರಿತು ತುಟಿ ಪಿಟಿಕ್ ಎನ್ನುತ್ತಿಲ್ಲ ಎಂದು ಆಕ್ಷೇಪ ವ್ಯಕ್ತಪಡಿಸಿದರು.
ಬರಗಾಲದ ಮಾರ್ಗಸೂಚಿ ಬದಲಿಸಲು ಕೇಂದ್ರ ಸರಕಾರಕ್ಕೆ ಪತ್ರ ಬರೆದು ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ರಾಜ್ಯ ಸರಕಾರ ಮಳೆ ಕೊರತೆ ಸಾಧ್ಯತೆ ಗಮನಿಸಿ ಯಾವುದೇ ಮುನ್ನೆಚ್ಚರಿಕೆ ಕ್ರಮ ವಹಿಸಿಲ್ಲ. ಇದರಿಂದ ರೈತರಿಗೆ ಮಳೆಯೂ ಇಲ್ಲದೆ, ಪಂಪ್ ಸೆಟ್‍ಗಳಿಗೆ ವಿದ್ಯುತ್ ಇಲ್ಲದಂತಾಗಿದೆ. ಕಾಂಗ್ರೆಸ್ ಸರಕಾರ ಕರ್ನಾಟಕದಲ್ಲಿ ಈಗಾಗಲೇ ಜನಮನ್ನಣೆಯನ್ನು ಕಳೆದುಕೊಂಡಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಎಲ್ಲ ಸ್ಥಾನಗಳನ್ನು ಗೆಲ್ಲಲು ಶ್ರಮಿಸಲಾಗುವುದು ಎಂದು ತಿಳಿಸಿದರು.
ರಾಜ್ಯದ ಎಲ್ಲ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲು ಆಶೀರ್ವಾದ ಪಡೆಯುವ ದೃಷ್ಟಿಯಿಂದ ಕುರುಡುಮಲೆ ದೇವಸ್ಥಾನಕ್ಕೆ ಬಂದಿದ್ದೇವೆ. ನರೇಂದ್ರ ಮೋದಿಜಿ ಅವರ ಆರೋಗ್ಯ ವೃದ್ಧಿ, ಅವರು ಮತ್ತೊಮ್ಮೆ ಭಾರತ ದೇಶದ ಪ್ರಧಾನಿಯಾಗಲಿ ಪ್ರಾರ್ಥನೆ ಮಾಡಿದ್ದಾಗಿ ಹೇಳಿದರು.
ಇನ್ನೂ ಈ ವೇಳೆ ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದಗೌಡ ಅವರು ಮಾತನಾಡಿ, ಜನಜಾಗೃತಿ ಮತ್ತು ಕಾಂಗ್ರೆಸ್ಸಿಗರನ್ನು ಸರಿದಾರಿಗೆ ತರುವ ಪ್ರಯತ್ನದ ಅಂಗವಾಗಿ ಈ ಪ್ರವಾಸ ನಡೆಯಲಿದೆ. ಬಿಜೆಪಿಯ ಅನೇಕ ಜನಪರ ಯೋಜನೆಗಳನ್ನು ಕಾಂಗ್ರೆಸ್ ಸರಕಾರ ಕೈಬಿಟ್ಟಿದೆ. ಜನವಿರೋಧಿ ಆಡಳಿತದ ವಿರುದ್ಧ ಜನಾಂದೋಲನಕ್ಕೆ ಬಿಜೆಪಿ ಮುಂದಾಗಿದೆ. ಸಂಸತ್ ಅಧಿವೇಶನ, ಗಣೇಶ, ಗೌರಿ ಹಬ್ಬದ ಬಳಿಕ ಎಲ್ಲ 224 ಕ್ಷೇತ್ರಗಳಿಗೂ ಬಿಜೆಪಿ ನಾಯಕರು ತೆರಳಿ ಸಿದ್ದರಾಮಯ್ಯ ಸರಕಾರದ ಜನವಿರೋಧಿ ನೀತಿಯನ್ನು ತಿಳಿಸಲಿದ್ದಾರೆ ಎಂದು ತಿಳಿಸಿದರು.
ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್, ಹಿರಿಯ ಮುಖಂಡರಾದ ಕೆ.ಎಸ್.ಈಶ್ವರಪ್ಪ, ಗೋವಿಂದ ಕಾರಜೋಳ, ಸಂಸದ ಮುನಿಸ್ವಾಮಿ, ಸಚಿವರಾದ ಡಾ.ಅಶ್ವತ್ಥನಾರಾಯಣ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮತ್ತು ವಿಧಾನಪರಿಷತ್ ಸದಸ್ಯ ಎನ್.ರವಿಕುಮಾರ್ ಮುಖಂಡ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಜಿಲ್ಲಾಧ್ಯಕ್ಷ ವೇಣುಗೋಪಾಲ್ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.












Click it and Unblock the Notifications