ಕೊರೊನಾ ಮೂರನೇ ಅಲೆ: 3,000 ವೈದ್ಯರು, 7,000 ನರ್ಸುಗಳು, 7,000 ಗ್ರೂಪ್ ಡಿ ಸಿಬ್ಬಂದಿ ನೇಮಕ
ಬೆಂಗಳೂರು, ಆ, 16: ಕೊರೊನಾ ವೈರಸ್ ಮೊದಲ ಹಾಗೂ ಎರಡನೇ ಅಲೆಯಿಂದ ರಾಜ್ಯ ಸರ್ಕಾರ ಸಾಕಷ್ಟು ಪಾಠಗಳನ್ನು ಕಲಿತಿದೆ. ಆದಾಗ್ಯೂ ಕೂಡ ಇನ್ನೂ ಹಲವು ಕಾರ್ಯಕ್ರಮಗಳನ್ನು ಸರ್ಕಾರ ರೂಪಿಸಿಕೊಳ್ಳಬೇಕಿದೆ. ಜೊತೆಗೆ ಹಲವು ಸೌಲಭ್ಯಗಳನ್ನು ಜನರಿಗೆ ಸರ್ಕಾರ ಕೊಡಬೇಕಿದೆ. ಎಲ್ಲರಿಗೂ ಆರೋಗ್ಯ ಎಂಬ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕಿದೆ. ಮುಂದುವರೆದ ದೇಶಗಳೇ ಕೊರೊನಾ ದಾಳಿಯಲ್ಲಿ ನೆಲ ಕಚ್ಚಿವೆ. ಹೀಗಾಗಿ ನಮ್ಮ ರಾಜ್ಯದಲ್ಲಿಯೂ ಕೊರೊನಾವೈರಸ್ ಮೂರನೇ ಅಲೆಯ ಆತಂಕ ಕಾಡುತ್ತಿದೆ. ಇದೇ ಸಂದರ್ಭದಲ್ಲಿ ಸರ್ಕಾರದಿಂದ ಮಹತ್ವದ ಮಾಹಿತಿ ಬಂದಿದೆ.
ಕೊರೊನಾ ವೈರಸ್ 3ನೇ ಅಲೆ ಮಾತ್ರವಲ್ಲ ಭವಿಷ್ಯದಲ್ಲಿ ಯಾವುದೇ ರೀತಿಯ ಆರೋಗ್ಯ ತುರ್ತು ಸಂದರ್ಭ ಬಂದರೂ ಸಶಕ್ತವಾಗಿ ಎದುರಿಸಲು ಸಾಧ್ಯವಾಗುವಂತೆ ರಾಜ್ಯದ ಎಲ್ಲ ಜಿಲ್ಲಾ, ತಾಲೂಕು ಆಸ್ಪತ್ರೆ, ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಆರೋಗ್ಯ ಮೂಲಭೂತ ಸೌಲಭ್ಯಗಳನ್ನು ಆಮೂಲಾಗ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಅಶ್ವತ್ಥನಾರಾಯಣ ಹೇಳಿದ್ದಾರೆ.

ಶೀಘ್ರ ಇಷ್ಟೊಂದು ವೈದ್ಯಕೀಯ ಸಿಬ್ಬಂದಿ ನೇಮಕ!
"ಇದೇ ನಿಟ್ಟಿನಲ್ಲಿ 3,000 ವೈದ್ಯರನ್ನು ನೇಮಕ ಮಾಡಿಕೊಳ್ಳಲಾಗಿದ್ದು, ಇದರಲ್ಲಿ 2,000 ಮಂದಿ ತಜ್ಞ ವೈದ್ಯರಿದ್ದು, ಉಳಿದ 1,000 ಸಾಮಾನ್ಯ ವೈದ್ಯರಿದ್ದಾರೆ. ಅಲ್ಲದೆ, ಇನ್ನೂ 3,000 ವೈದ್ಯರನ್ನೂ, 7,000 ನರ್ಸುಗಳನ್ನು ಹಾಗೂ ಗ್ರೂಪ್ ಡಿ ವಿಭಾಗದಲ್ಲಿ 7,000 ಸಿಬ್ಬಂದಿ ಸೇರಿದಂತೆ ಒಟ್ಟು 17 ಸಾವಿರ ವೈದ್ಯಕೀಯ ಸಿಬ್ಬಂದಿಯನ್ನು ನೇಮಕಾತಿ ಮಾಡಿಕೊಳ್ಳಲಾಗತ್ತಿದೆ" ಎಂದು ಡಾ. ಅಶ್ವಥ್ ನಾರಾಯಣ ಎಂದು ಹೇಳಿದ್ದಾರೆ.
ಬೆಂಗಳೂರಿನ ವಿಜಯನಗರದ ಆದಿಚುಂಚನಗಿರಿ ಶಾಖಾ ಮಠದಲ್ಲಿ ಕೋವಿಡ್-19 ಸಂಕಷ್ಟದಲ್ಲಿ ಕೊರೋನಾ ನಿಗ್ರಹ ಪಡೆಯ ಕಾರ್ಯಕರ್ತರಾಗಿ ಕೆಲಸ ಮಾಡಿದ ಗಣ್ಯರು, ಸಿಬ್ಬಂದಿಯ ಸೇವೆಯನ್ನು ಶ್ಲಾಘಿಸಿ ಸನ್ಮಾನಿಸಿದ 'ನಿಮ್ಮ ಸ್ಪಂದನೆ, ನಮ್ಮ ವಂದನೆ' ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾಹಿತಿ ನೀಡಿದ್ದಾರೆ.

ಕೋವಿಡ್ ಸೋಂಕಿತ ಮಕ್ಕಳಿಗೆ ಪ್ರತ್ಯೇಕ ವಿಭಾಗ
ಕೋವಿಡ್ ಸೋಂಕಿತರಿಗೆ ಪ್ರತ್ಯೇಕ ಐಸಿಯು, ಆಕ್ಸಿಜನ್ ಸೌಲಭ್ಯ, ವೆಂಟಿಲೇಟರ್, ಸಿಬ್ಬಂದಿ, ಪ್ರತ್ಯೇಕ ಮಕ್ಕಳ ವಿಭಾಗ ಇತ್ಯಾದಿಗಳನ್ನು ಸ್ಥಾಪನೆ ಮಾಡಲಾಗುತ್ತಿದೆ. ಮುಖ್ಯವಾಗಿ ಎಲ್ಲ ಸರಕಾರಿ ಮತ್ತು ಖಾಸಗಿ ವೈದ್ಯ ಕಾಲೇಜುಗಳಲ್ಲಿ 50,000 ಕೆಎಲ್ ಸಾಮರ್ಥ್ಯದಷ್ಟು ಆಕ್ಸಿಜನ್ ಸಂಗ್ರಹಕ್ಕೆ ಅವಕಾಶ ಆಗುವಂತೆ ಸೌಕರ್ಯ ಕಲ್ಪಿಸಲಾಗುತ್ತಿದೆ. ಅದೇ ರೀತಿ ಜಿಲ್ಲಾ ಆಸ್ಪತ್ರೆಗಳಲ್ಲಿ 20,000 ಕೆಎಲ್, ತಾಲೂಕು ಆಸ್ಪತ್ರೆಗಳಲ್ಲಿ 6,000-7,000 ಕೆಎಲ್ ಸಾಮರ್ಥ್ಯದ ಆಕ್ಸಿಜನ್ ಟ್ಯಾಂಕ್‌ಗಳನ್ನು ಅಳವಡಿಸಲಾಗುತ್ತಿದೆ. ಆ ಕೆಲಸಗಳು ಈಗಾಗಲೇ ಪ್ರಗತಿಯಲ್ಲಿವೆ ಎಂದು ಡಾ. ಅಶ್ವಥ್ ನಾರಾಯಣ ಇದೇ ವೇಳೆ ಹೇಳಿದ್ದಾರೆ.

ತಾಲೂಕು ಆಸ್ಪತ್ರೆಯಲ್ಲಿ ಐಸಿಯು ಬೆಡ್‌ಗಳ ಪ್ರತ್ಯೇಕ ವಿಭಾಗ
ಅಲ್ಲದೆ ಪ್ರತಿ ತಾಲೂಕು ಆಸ್ಪತ್ರೆಯಲ್ಲಿ ಕನಿಷ್ಠ 25, ಜಿಲ್ಲಾಸ್ಪತ್ರೆಗಳಲ್ಲಿ 100 ಐಸಿಯು ಬೆಡ್‌ಗಳ ಪ್ರತ್ಯೇಕ ವಿಭಾಗವನ್ನು ಸ್ಥಾಪನೆ ಮಾಡಲಾಗುತ್ತಿದೆ. ಯಾವುದೇ ಆಸ್ಪತ್ರೆಯಲ್ಲಿ ಐಸಿಯು ಅಥವಾ ಐಸಿಯುಯೇತರ ಯಾವುದೇ ಬೆಡ್ ಇದ್ದರೂ ಅದಕ್ಕೆ ಆಕ್ಸಿಜನ್ ಸೌಲಭ್ಯ ಒದಗಿಸಲಾಗುವುದು.
ಈವರೆಗೆ ಸರಕಾರದ ವೈದ್ಯಕೀಯ ವ್ಯವಸ್ಥೆಯಲ್ಲಿ 30,000 ಬೆಡ್ಗಳಿದ್ದು, ಆ ಸಂಖ್ಯೆಯನ್ನು 65,000ಕ್ಕೆ ಹೆಚ್ಚು ಮಾಡಲಾಗುತ್ತಿದೆ. 6,000 ಹೆಚ್ಚುವರಿ ಐಸಿಯು ಬೆಡ್‌ಗಳ ವ್ಯವಸ್ಥೆ ಮಾಡಲಾಗುತ್ತಿದೆ. ಜತೆಗೆ, ಎಲ್ಲಡೆಯೂ ಸುಧಾರಿತ ತಂತ್ರಜ್ಞಾನವನ್ನೂ ಅಳವಡಿಸಲಾಗುತ್ತಿದೆ ಎಂದು ಡಾ. ಅಶ್ವಥ್ ನಾರಾಯಣ ಮಾಹಿತಿ ನೀಡಿದರು.
Recommended Video

ನಿಮ್ಮ ಸ್ಪಂದನೆ, ನಮ್ಮ ವಂದನೆ!
ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ ಸಾನ್ನಿಧ್ಯ ವಹಿಸಿ ಕೊರೊನಾ ಸಂಕಷ್ಟ ಕಾಲದಲ್ಲಿ ಶ್ರಮಿಸಿದವರಿಗೆ ಸನ್ಮಾನಿಸಿದರು. ವಿಜಯನಗರ ಶಾಖಾ ಮಠದ ಸೌಮ್ಯನಾಥ ಸ್ವಾಮೀಜಿ, ಅಭಿಮಾನಿ ಸಮೂಹ ಸಂಸ್ಥೆಗಳ ಮುಖ್ಯಸ್ಥ ಟಿ. ವೆಂಕಟೇಶ್, ಶಾಸಕ ಎನ್.ಎ. ಹ್ಯಾರೀಸ್, ಡಾ. ವಿಜಯಲಕ್ಷ್ಮೀ ಬಾಳೇಕುಂದ್ರಿ, ಡಾ.ಸಿ.ಎನ್. ಮಂಜುನಾಥ್, ಡಾ. ಪ್ರಸನ್ನ, ಮುಂತಾದವರು ಉಪಸ್ಥಿತರಿದ್ದರು.












Click it and Unblock the Notifications