ಕಾವೇರಿ ವಿಚಾರದಲ್ಲಿ ಸರ್ಕಾರ ಒತ್ತಡಕ್ಕೆ ಜಗ್ಗಬಾರದು, ಬಿಜೆಪಿ ನಿಮ್ಮೊಂದಿಗಿದೆ: ಬೊಮ್ಮಾಯಿ
ಹಾವೇರಿ, ಸೆಪ್ಟಂಬರ್ 13: ಕುಡಿಯವ ಮತ್ತು ರೈತರ ಜಮೀನಿಗೆ ಅತ್ಯವಶ್ಯಕವಾಗಿರುವ ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದ ಜೊತೆಗಿದ್ದೇವೆ. ರಾಜ್ಯ ಸರ್ಕಾರ ರಾಜ್ಯದ ವಾಸ್ತವ ಸ್ಥಿತಿಯನ್ನು ಸುಪ್ರೀಂಕೋರ್ಟ್ ನಲ್ಲಿ ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಬುಧವಾರ ಹಾವೇರಿ ಜಿಲ್ಲೆಯ ಸವಣೂರು ಪಟ್ಟಣದಲ್ಲಿ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಕಾವೇರಿ ವಿಚಾರದಲ್ಲಿ ರಾಜ್ಯ ಸರ್ಕಾರದವರು ಸರ್ವಪಕ್ಷ ಸಬೆ ಕರೆದಿದ್ದರು. ತಡರಾತ್ರಿ ಆಹ್ವಾನ ಬಂದಿದ್ದರಿಂದ ನನಗೆ ಸಭೆಗೆ ಹೋಗಲು ಆಗಿಲ್ಲ. ನಮ್ಮ ನಿಲುವು ಸ್ಪಷ್ಟವಾಗಿದೆ, ನಾವು ಈಗಾಗಲೇ 16 ರಿಂದ 17 ಟಿಎಂಸಿ ನೀರು ಹರಿಸಿದ್ದೇವೆ.

ಇದೀಗ ತಮಿಳುನಾಡಗೆ ಮತ್ತೆ 5000 ಕ್ಯೂಸೆಕ್ಸ್ ನೀರು ಹರಿಸುವುದು ಸಾಧ್ಯವಿಲ್ಲದ ಮಾತು. ನಮಗೆ ಕುಡಿಯುವ ನೀರಿಗೂ ಕೊರತೆಯಿದೆ. ರಾಜ್ಯ ಸರ್ಕಾರ ಸೆಪ್ಟಂಬರ್ 12ರ ನಂತರ ನೀರು ಬಿಡಲು ಆಗುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಗೆ ಅಫಿಡವಿಟ್ ಕೊಡಲಾಗಿದೆ. ಈ ನಿರ್ಧಾರಕ್ಕೆ ರಾಜ್ಯ ಸರಕಾರ ಬದ್ದವಾಗಿರಬೇಕು. ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿ ಗಟ್ಟಿಯಾಗಿ ಪ್ರತಿಪಾದಿಸಬೇಕು ಎಂದು ಅವರು ಸಲಹೆ ನೀಡಿದರು.
ಕೋರ್ಟ್‌ನಲ್ಲಿ ಪ್ರತಿಪಾದಿಸಲು ಸಾಧ್ಯವಾಗುತ್ತಿಲ್ಲ
ರಾಜ್ಯ ಸರ್ಕಾರ ಇನ್ನುಮುಂದೆ ನೆರೆಯ ತಮಿಳುನಾಡಿಗೆ ನೀರು ಬಿಡುವುದಿಲ್ಲ ಎಂದು ಇತ್ತೀಚೆಗೆ ಹೇಳಿತ್ತಾದರೂ ಮತ್ತೆ ನೀರು ಬಿಡುವ ಮೂಲಕ ಅನ್ಯಾಯ ಮಾಡಿದೆ. ಇವತ್ತು ಸರ್ವಪಕ್ಷ ಸಬೆ ಕರೆದಿದ್ದನ್ನು ನೋಡಿದರೆ, ಅವರಿಗೆ ಸುಪ್ರೀಂ ಕೋರ್ಟ್ ನಲ್ಲಿ ಪ್ರತಿಪಾದಿಸಲು ಸಾದ್ಯವಾಗುತ್ತಿಲ್ಲ. ಮತ್ತೆ ರಾಜ್ಯ ಸರ್ಕಾರದವರು ಒತ್ತಡಕ್ಕೆ ಸಿಲುಕಿಕೊಂಡಿದ್ದಾರೆ.

ಕಾವೇರಿ ನೀರಿನ ವಿಚಾರದಲ್ಲಿ ನಾವು ರಾಜ್ಯ ಸರ್ಕಾರದೊಂದಿಗೆ ಇದ್ದೇವೆ. ಸರ್ಕಾರ ತಮಿಳುನಾಡಿನ ಒತ್ತಡಕ್ಕೆ ಮಣಿಯಬಾರದು. ಈ ಸಂದರ್ಭದಲ್ಲಿ ರಾಜ್ಯದ ನಾಯಕತ್ವ ಎಷ್ಟು ಗಟ್ಟಿಯಾಗಿದೆ ಎಂದು ತೋರಿಸಿಕೊಡಬೇಕಿದೆ ಎಂದು ಬಸವರಾಜ ಬೊಮ್ಮಾಯಿ ಹೇಳಿದರು.
ನೀರು ಬಿಡಲ್ಲ ಎಂದರೆ ಸರ್ಕಾರಕ್ಕೆ ಬೆಂಬಲ
ಬೊಮ್ಮಾಯಿ ಅವರು ಮಂಗಳವಾರವಷ್ಟೇ ಕಾವೇರಿ ನೀರು ವಿಚಾರದ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ್ದರು. ರಾಜ್ಯ ಸರ್ಕಾರ ತಮಿಳುನಾಡು ನೀರು ಬಿಡುವುದಿಲ್ಲ ಎಂದರೆ ನಾವು (ಬಿಜೆಪಿ) ಅವರೊಂದಿಗೆ ನಿಲ್ಲುತ್ತೇವೆ ಎಂದು ತಿಳಿಸಿದ್ದರು.
ನಿತ್ಯ ಐದು ಸಾವಿರ ಕ್ಯೂಸೆಕ್ಸ್ ನೀರನ್ನು ಮತ್ತೆ ಎರಡು ವಾರ (ಹದಿನೈದು ದಿನ) ತಮಿಳುನಾಡಿಗೆ ಹರಿಸುವಂತೆ CWRC ಕರ್ನಾಟಕಕ್ಕೆ ಆದೇಶಿಸಿದೆ. ಸದ್ಯದ ವಾಸ್ತವ ಪರಿಸ್ಥಿತಿ ನೋಡಿದರೆ ಕಾವೇರಿ ನದಿಯಲ್ಲಿ ಕುಡಿಯಲು ಸಹ ನೀರಿಲ್ಲದಾಗಿದೆ. ಹೀಗಿದ್ದರೂ ಎಳು ಟಿಎಂಸಿ ನೀರು ಬಿಡಲು ಹೇಳಿದ್ದಾರೆ. ಇತ್ತ ಮಂಡ್ಯ ಭಾಗದ ಬೆಳೆಗಳು ನೀರಿಲ್ಲದೆ ಒಣಗುತ್ತಿವೆ ಎಂದು ತಿಳಿಸಿದರು.












Click it and Unblock the Notifications