CIPET: ಬೀದರ್‌ನಲ್ಲಿ ಸಿಪೆಟ್ ಕಟ್ಟಡ ಕಾಮಗಾರಿ ಚಾಲನೆ: ಕೇಂದ್ರ-ರಾಜ್ಯ ಸಚಿವರ ಸಮಾಲೋಚನೆ
ಬೆಂಗಳೂರು, ಜುಲೈ 12: ಬೀದರ್‌ನಲ್ಲಿ ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಆಂಡ್ ಟೆಕ್ನಾಲಜಿ (CIPET) ಕೇಂದ್ರದ ಕಟ್ಟಡಕ್ಕಾಗಿ ಜಿಲ್ಲೆಯಲ್ಲಿ 10 ಎಕರೆ ಜಾಗವನ್ನು ಈಗಾಗಲೇ ಗುರುತಿಸಿದೆ. ರಾಜ್ಯ ಸರ್ಕಾರ ತನ್ನ ಪಾಲಿನ ಅನುದಾನ ನೀಡಿ ಕಟ್ಟಡ ಕಾಮಗಾರಿಗೆ ಚಾಲನೆ ಕೊಡಬೇಕು ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ರಾಜ್ಯ ಸಚಿವ ಭಗವಂತ ಖೂಬಾ ಅವರು ಹೇಳಿದರು.
ಕೇಂದ್ರ ಸಚಿವ ಖೂಬಾ ಅವರು ರಾಜ್ಯ ಕೈಗಾರಿಕೆ ಸಚಿವ ಎಂ.ಬಿ.ಪಾಟೀಲ್ ಅವರನ್ನು ಬುಧವಾರ ವಿಧಾನಸೌಧದ ಕಚೇರಿಯಲ್ಲಿ ಭೇಟಿಯಾದರು. ಕಾಮಗಾರಿಗೆ ಚಾಲನೆ ನೀಡುವ ಸಂಬಂಧ ಸಚಿವರು ಸಮಾಲೋಚನೆ ನಡೆಸಿದರು.

ಸೆಂಟ್ರಲ್ ಇನ್ಸ್ಟಿಟ್ಯೂಟ್ ಆಫ್ ಪ್ಲಾಸ್ಟಿಕ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (CIPET) ಕೇಂದ್ರದ ಸ್ಥಾಪನೆಗಾಗಿ ಜಿಲ್ಲಾಡಳಿತವು ಬೀದರ್ ಜಿಲ್ಲೆ ಔರಾದ ತಾಲ್ಲೂಕಿನ ಬಲ್ಲೂರ ಹತ್ತಿರ 10 ಎಕರೆ ಜಾಗವನ್ನು ಈಗಾಗಲೇ ಗುರುತಿಸಿದೆ. ಅಲ್ಲದೇ, ಕಳೆದ ವರ್ಷ ಇದರ ಭೂಮಿಪೂಜೆಯೂ ನಡೆದಿದೆ ಎಂದು ಖುಬಾ ತಿಳಿಸಿದರು.
ಕೇಂದ್ರ- ರಾಜ್ಯ 50:50 ಅನುದಾನ
ಮಂಜೂರಾಗಿರುವ ಸಿಪೆಟ್ ಕಟ್ಟಡಕ್ಕಾಗಿ ಕೇಂದ್ರ ಸರ್ಕಾರ ತನ್ನ ಪಾಲಿನ ಶೇಕಡ 50ರಷ್ಟು ಅನುದಾನವನ್ನು ಈಗಾಗಲೇ ಬಿಡುಗಡೆ ಮಾಡಿದೆ. ಕರ್ನಾಟಕ ರಾಜ್ಯ ಸರ್ಕಾರವು ತನ್ನ ಪಾಲಿನ ಶೇಕಡ 50 ರಷ್ಟು ಹಣ ಒದಗಿಸಿ ಕಟ್ಟಡ ಕಾಮಗಾರಿಗೆ ಚಾಲನೆ ನೀಡಬೇಕು ಎಂದರು.
ಇದೇ ಸಂದರ್ಭದಲ್ಲಿ ಖೂಬಾ ಅವರು ಬೀದರ್ ಜಿಲ್ಲೆಯಲ್ಲಿ ಕೈಗಾರಿಕೋದ್ಯಮಗಳ ನಿರ್ಮಾಣಕ್ಕೆ ಒತ್ತು ನೀಡುವಂತೆ ಮನವಿ ಮಾಡಿದರು. ಬೀದರ್ ಜಿಲ್ಲೆಯಲ್ಲಿ ಉದ್ದಿಮೆಗಳ ಸ್ಥಾಪನೆಗೆ ಹೂಡಿಕೆ ಮಾಡಲು ಕೆಲವರು ಈ ಹಿಂದೆ ಆಸಕ್ತಿ ತೋರಿದ್ದರು. ಆದರೆ ಕೊರೊನಾ ಪಿಡುಗಿನಿಂದಾಗಿ ಯೋಜನೆಗಳಿಗೆ ಹಿನ್ನಡೆಯಾಗಿತ್ತು. ಈಗ ಪುನಃ ಆಸಕ್ತರನ್ನು ಜಿಲ್ಲೆಯಲ್ಲಿ ಉದ್ಯಮಿಗಳ ಸ್ಥಾಪನೆಗೆ ಆಹ್ವಾನಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಬೀದರ್ ಭಾಗದ ಜನ ಉದ್ಯೋಗ ಹುಡುಕಿಕೊಂಡು ತೆಲಂಗಾಣ ಮತ್ತು ಮಹಾರಾಷ್ಟ್ರಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಹೋಗುತ್ತಿದ್ದಾರೆ. ಜಿಲ್ಲೆಯಲ್ಲಿಯೇ ಉದ್ದಿಮೆಗಳು ಸ್ಥಾಪನೆಯಾದರೆ ಈ ವಲಸೆಗೆ ತಡೆ ಬೀಳುತ್ತದೆ ಎಂದು ವಿವರಿಸಿದರು.
ಉಭಯ ಸಚಿವರ ಭೇಟಿ ವೇಳೆ ಶಾಸಕರಾದ ಶೈಲೇಂದ್ರ ಬೆಲ್ದಾಳೆ ಮತ್ತು ಸಿದ್ದು ಪಾಟೀಲ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ವಿಜಯಪುರ ಏರ್‌ಪೋರ್ಟ್ ಬಾಕಿ ಕೆಲಸಗಳಿಗೆ 70 ಕೋಟಿ ರೂ.
ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣದ ಬಾಕಿ ಉಳಿದಿರುವ ಕಾಮಗಾರಿಗಳಿಗೆ ಅಗತ್ಯವಿರುವ 70 ಕೋಟಿ ರೂ. ಹಣವನ್ನು ಸದ್ಯದಲ್ಲೇ ಒದಗಿಸಲಾಗುವುದು. ಜತೆಗೆ ಬಜೆಟ್‌ನಲ್ಲಿ ಘೋಷಿಸಿರುವಂತೆ ಈ ವರ್ಷವೇ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡುವಂತೆ ನೋಡಿಕೊಳ್ಳಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಮತ್ತು ಬೃಹತ್ ಹಾಗೂ ಮಧ್ಯಮ ಕೈಗಾರಿಕಾ ಸಚಿವ ಎಂಬಿ ಪಾಟೀಲ್ ಇತ್ತೀಚೆಗೆ ತಿಲಳಿಸಿದ್ದರು.
ಸುದ್ದಿಗಾರರ ಜೊತೆ ಮಾತನಾಡಿದ್ದ ಅವರು, ವಿಮಾನ ನಿಲ್ದಾಣ ಕಾಮಗಾರಿಗೆ ನಿಯಮಗಳ ಪ್ರಕಾರ ಮೂಲ ಸೌಲಭ್ಯ ಅಭಿವೃದ್ಧಿ ಇಲಾಖೆ ಟೆಂಡರ್ ಕರೆಯಬೇಕಿತ್ತು. ಆದರೆ, ಹಿಂದಿನ ಬಿಜೆಪಿ ಸರಕಾರವು ಇದನ್ನು ಲೋಕೋಪಯೋಗಿ ಇಲಾಖೆಗೆ ವಹಿಸಿ ಲೋಪವೆಸಗಿದೆ. ಇದನ್ನು ನಾನು ಬೆಳೆಸಲು ಹೋಗುವುದಿಲ್ಲ. ವಿಮಾನ ನಿಲ್ದಾಣ ಕಾಮಗಾರಿಗೆ ಯಾವುದೇ ಅಡೆತಡೆ ಇಲ್ಲದೆ ನಡೆಯುವಂತೆ ನೋಡಿಕೊಳ್ಳಲಾಗುವುದು. ಅಗತ್ಯವಿರುವ ಹಣದ ಸಂಬಂಧ ಈಗಾಗಲೇ ಕಡತವನ್ನು ಸಿದ್ಧ ಮಾಡಿ, ಮುಂದಿನ ಹಂತಕ್ಕೆ ಕಳಿಸಲಾಗಿದೆ ಎಂದು ಹೇಳಿದರು.












Click it and Unblock the Notifications