ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳತ್ತ ವಿದ್ಯಾರ್ಥಿಗಳನ್ನ ಸೆಳೆಯಲು ಮಾಸ್ಟರ್ ಪ್ಲಾನ್: ಕೌಶಲ ಅಭಿವೃದ್ಧಿಗೆ AI ಸಾಥ್
ಬೆಂಗಳೂರು: ರಾಜ್ಯದ ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಶಿಕ್ಷಣದ ಗುಣಮಟ್ಟವನ್ನ ಜಾಗತಿಕ ಮಟ್ಟಕ್ಕೆ ಏರಿಸಲು ಮತ್ತು ವಿದ್ಯಾರ್ಥಿಗಳಲ್ಲಿ ಉದ್ಯೋಗಾರ್ಹತೆಯನ್ನ ಹೆಚ್ಚಿಸಲು ರಾಜ್ಯ ಉನ್ನತ ಶಿಕ್ಷಣ ಇಲಾಖೆಯು ಮಹತ್ವದ ಹೆಜ್ಜೆಯಿಟ್ಟಿದೆ.
ಕೇವಲ ಪಠ್ಯಪುಸ್ತಕಕ್ಕೆ ಸೀಮಿತವಾಗಿದ್ದ ಸಾಂಪ್ರದಾಯಿಕ ಶಿಕ್ಷಣ ಪದ್ಧತಿಯಿಂದ ಹೊರಬಂದು, ಭವಿಷ್ಯದ ಕಾರ್ಪೊರೇಟ್ ಜಗತ್ತಿಗೆ ತಕ್ಕಂತೆ ಸಮಗ್ರ ಮತ್ತು ಫಲಿತಾಂಶ ಆಧಾರಿತ ವಿದ್ಯಾರ್ಥಿ ಅಭಿವೃದ್ಧಿ ಮಾದರಿಯನ್ನ ಜಾರಿಗೆ ತರಲು ಸರ್ಕಾರ ಮುಂದಾಗಿದೆ.

ಈ ಹೊಸ ವ್ಯವಸ್ಥೆಯನ್ನು ರೂಪಿಸಲು, ಅಭಿವೃದ್ಧಿಪಡಿಸಲು ಮತ್ತು ವ್ಯವಸ್ಥಿತವಾಗಿ ಅನುಷ್ಠಾನಗೊಳಿಸಲು ಉನ್ನತ ಮಟ್ಟದ ತಜ್ಞರ ಸಮಿತಿಯೊಂದನ್ನ ರಚಿಸಲಾಗಿದೆ.
ಎಐ ತಂತ್ರಜ್ಞಾನ ಮತ್ತು ಡಿಜಿಟಲ್ ಪ್ರೊಫೈಲ್ ವ್ಯವಸ್ಥೆ
ಈ ನೂತನ ವಿದ್ಯಾರ್ಥಿ ಅಭಿವೃದ್ಧಿ ಮಾದರಿಯ ಪ್ರಮುಖ ಆಕರ್ಷಣೆಯೇ ಕೃತಕ ಬುದ್ಧಿಮತ್ತೆ ಅಂದರೆ ಈ ಎಐ ತಂತ್ರಜ್ಞಾನದ ಸಮರ್ಪಕ ಬಳಕೆ. ಕಾಲೇಜಿಗೆ ಕಾಲಿಡುವ ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಪ್ರಗತಿ, ಅವರಲ್ಲಿರುವ ವಿಶೇಷ ಕೌಶಲಗಳು, ಸಾಧನೆ ಹಾಗೂ ಕಲಿಕೆಯಲ್ಲಿ ಎದುರಾಗುವ ಹಿನ್ನಡೆಯನ್ನ ನಿಖರವಾಗಿ ದಾಖಲಿಸಲು ನಿರಂತರವಾಗಿ ನವೀಕರಿಸಲ್ಪಡುವ ಡಿಜಿಟಲ್ ಪ್ರೊಫೈಲ್‌ಗಳನ್ನು ಸೃಷ್ಟಿಸಲಾಗುತ್ತದೆ.
ಎಐ ತಂತ್ರಜ್ಞಾನದ ನೆರವಿನಿಂದ ವಿದ್ಯಾರ್ಥಿಗಳ ಕಲಿಕೆಯಲ್ಲಿರುವ ನ್ಯೂನತೆಗಳನ್ನ ಗುರುತಿಸಿ, ಅವರಿಗೆ ಅಗತ್ಯವಾದ ಮಾರ್ಗದರ್ಶನ ಹಾಗೂ ಹೆಚ್ಚುವರಿ ತರಬೇತಿಯನ್ನ ನೀಡಲಾಗುತ್ತದೆ. ಮರುಮೌಲ್ಯಮಾಪನಕ್ಕೂ ಇದು ದಾರಿಮಾಡಿಕೊಡಲಿದ್ದು, ವಿದ್ಯಾರ್ಥಿಗಳ ವೈಯಕ್ತಿಕ ಅಗತ್ಯಗಳಿಗೆ ತಕ್ಕಂತೆ ಶೈಕ್ಷಣಿಕ ಯೋಜನೆಗಳನ್ನ ರೂಪಿಸಲಾಗುತ್ತದೆ.
ಉದ್ಯೋಗಾವಕಾಶ ಮತ್ತು ಕೌಶಲ ವೃದ್ಧಿಗೆ ವಿಶೇಷ ಒತ್ತು
ವಿದ್ಯಾರ್ಥಿಗಳನ್ನು ಕೇವಲ ಪರೀಕ್ಷೆಗಾಗಿ ಸಿದ್ಧಪಡಿಸದೆ, ಅವರಲ್ಲಿ ಕೌಶಲ ತುಂಬಿ ಭವಿಷ್ಯದ ವೃತ್ತಿಜೀವನಕ್ಕೆ ರೆಡಿ ಮಾಡುವುದು ಈ ಸಮಿತಿಯ ಪ್ರಮುಖ ಗುರಿಯಾಗಿದೆ. ಸಂವಹನ ಕೌಶಲ, ನಾಯಕತ್ವ ಗುಣ, ಸಮಸ್ಯೆಗಳನ್ನ ಬಗೆಹರಿಸುವ ಸಾಮರ್ಥ್ಯ ಹಾಗೂ ವೃತ್ತಿಪರ ನೈತಿಕತೆಗೆ ವಿಶೇಷ ಆದ್ಯತೆ ನೀಡಲಾಗುವುದು.
ವಿದ್ಯಾರ್ಥಿಗಳ ಆಸಕ್ತಿ ಮತ್ತು ಅವರ ವೃತ್ತಿ ಗುರಿಗಳಿಗೆ ತಕ್ಕಂತೆ ಉದ್ಯೋಗಾವಕಾಶ, ಇಂಟರ್ನ್‌ಶಿಪ್, ಸಂಶೋಧನಾ ಅವಕಾಶಗಳು ಹಾಗೂ ಉನ್ನತ ಶಿಕ್ಷಣಕ್ಕೆ ಅಗತ್ಯವಾದ ಮಾರ್ಗಸೂಚಿಗಳನ್ನ ಸಿದ್ಧಪಡಿಸಲಾಗುತ್ತದೆ.
ಕಾಲೇಜುಗಳ ದೈನಂದಿನ ಕಾರ್ಯನಿರ್ವಹಣೆ, ಸುಧಾರಣೆ ಮತ್ತು ಯೋಜನೆಗಳ ಅನುಷ್ಠಾನವನ್ನ ನಿರಂತರವಾಗಿ ಮೇಲ್ವಿಚಾರಣೆ ಮಾಡಲು ಕೇಂದ್ರೀಕೃತ ಡಿಜಿಟಲ್ ಪೋರ್ಟಲ್ ಒಂದನ್ನು ಕೂಡ ಅಭಿವೃದ್ಧಿಪಡಿಸಲಾಗುತ್ತಿದೆ.
ಖಾಲಿ ಉಳಿದ ಇಂಜಿನಿಯರಿಂಗ್ ಸೀಟುಗಳು
ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಸಾಕಷ್ಟು ಮೂಲಸೌಕರ್ಯಗಳಿದ್ದರೂ ಸೀಟುಗಳು ಭರ್ತಿಯಾಗದಿರುವುದು ಸರ್ಕಾರದ ಕಳವಳಕ್ಕೆ ಕಾರಣವಾಗಿದೆ. ಹೌದು, ಪ್ರಸ್ತುತ 2026-27ನೇ ಶೈಕ್ಷಣಿಕ ಸಾಲಿನಲ್ಲಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ರಾಜ್ಯದ 17 ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳಲ್ಲಿ ಒಟ್ಟು 4,704 ಸೀಟುಗಳನ್ನು ಪ್ರಕಟಿಸಿತ್ತು.
ಆದರೆ, ಈ ಪೈಕಿ ಕೇವಲ 3,302 ಸೀಟುಗಳು ಮಾತ್ರ ಭರ್ತಿಯಾಗಿದ್ದು, ಬರೋಬ್ಬರಿ 1,402 ಖಾಲಿ ಉಳಿದ ಇಂಜಿನಿಯರಿಂಗ್ ಸೀಟುಗಳು ಹಾಗೇ ಉಳಿದುಕೊಂಡಿವೆ. ಹೀಗಾಗಿ, ಸರ್ಕಾರಿ ಕಾಲೇಜುಗಳತ್ತ ವಿದ್ಯಾರ್ಥಿಗಳನ್ನ ಸೆಳೆಯಲು ಪರ್ಯಾಯವಾಗಿ ಏನೆಲ್ಲಾ ಬದಲಾವಣೆಗಳನ್ನ ಮಾಡಬಹುದು ಎಂಬುದರ ಕುರಿತು ಈ ತಜ್ಞರ ಸಮಿತಿ ಗಂಭೀರ ಚಿಂತನೆ ನಡೆಸಲಿದೆ.
ತಜ್ಞರ ಸಮಿತಿ ರಚನೆ ಕುರಿತು ಸಚಿವರ ಪ್ರತಿಕ್ರಿಯೆ
ಈ ಹೊಸ ಕ್ರಮದ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ, "ಸರ್ಕಾರಿ ಇಂಜಿನಿಯರಿಂಗ್ ಕಾಲೇಜುಗಳ ಬಲವರ್ಧನೆಯ ಜೊತೆಗೆ ವಿದ್ಯಾರ್ಥಿಗಳಿಗೆ ಕೌಶಲಪೂರ್ಣ ಕಲಿಕೆಯಾಗಬೇಕು ಎಂಬುದು ಸರ್ಕಾರದ ಮುಖ್ಯ ಉದ್ದೇಶ. ಈ ನಿಟ್ಟಿನಲ್ಲಿ ಸಾಕಷ್ಟು ಚರ್ಚೆ ನಡೆಸಿ, ಪಠ್ಯಕ್ರಮದಲ್ಲಿ ಬದಲಾವಣೆ ಮತ್ತು ತಂತ್ರಜ್ಞಾನ ಆಧಾರಿತ ಬೋಧನೆ ಸೇರಿದಂತೆ ಹಲವು ವಿನೂತನ ಕ್ರಮಗಳನ್ನು ಅಳವಡಿಸಿಕೊಳ್ಳಲು ಈ ತಜ್ಞರ ಸಮಿತಿ ರಚನೆ ಮಾಡಲಾಗಿದೆ" ಎಂದು ತಿಳಿಸಿದ್ದಾರೆ.
ಸಮಿತಿಯಲ್ಲಿ ಯಾರ್ಯಾರಿದ್ದಾರೆ?
ಈ ಮಹತ್ವದ ಸಮಿತಿಯಲ್ಲಿ ಉನ್ನತ ಶಿಕ್ಷಣ ಇಲಾಖೆಯ ಯುಯುಸಿಎಂಎಸ್‌ನ ಪ್ರೊ. ಭಾಗ್ಯವಾನ್, ಐಐಟಿ ಮದ್ರಾಸ್‌ನ ಪ್ರೊ. ಎಡಮನಾ ಪ್ರಸಾದ್, ತಮಿಳುನಾಡಿನ ಬನ್ನಾರಿ ಅಮ್ಮನ್ ತಾಂತ್ರಿಕ ಸಂಸ್ಥೆಯ ಡಾ. ಎ. ಅಮರ ಕಾರ್ತಿಕ್, ಯೋಗಿ ವೇಮನ ವಿವಿಯ ಪ್ರೊ. ವಿ. ರಾಮಕೃಷ್ಣ, ಎಸ್‌ಕೆಎಸ್‌ಜೆಟಿಐನ ಪ್ರೊ. ಕಿರಣ್ ಕುಮಾರ್ ಬಿ.ವಿ. ಹಾಗೂ ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್ತಿನ ಕಾರ್ಯನಿರ್ವಾಹಕ ನಿರ್ದೇಶಕ ಪ್ರೊ. ಶಿವಶಂಕರ್ ಅವರು ಕಾರ್ಯನಿರ್ವಹಿಸಲಿದ್ದಾರೆ.
ತಾಂತ್ರಿಕ ಶಿಕ್ಷಣ ನಿರ್ದೇಶಕರು ಈ ಸಮಿತಿಯ ಅನುಷ್ಠಾನದ ಸಮನ್ವಯ ಮತ್ತು ಮೇಲ್ವಿಚಾರಣೆ ನಡೆಸಿ ಸರ್ಕಾರಕ್ಕೆ ಶೀಘ್ರದಲ್ಲೇ ವರದಿ ಸಲ್ಲಿಸಲಿದ್ದಾರೆ.


Click it and Unblock the Notifications
