ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ನೀಡಿದ್ದ ಭದ್ರತೆ ಹಿಂಪಡೆದ ರಾಜ್ಯ ಸರ್ಕಾರ
ಬೆಂಗಳೂರು, ಜನವರಿ 30: ಮಾಜಿ ಸಚಿವರುಗಳಾಗಿದ್ದ ಕೆಲವು ಕಾಂಗ್ರೆಸ್-ಜೆಡಿಎಸ್ ನಾಯಕರಿಗೆ ನೀಡಲಾಗಿದ್ದ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದೆ.
ಮೈತ್ರಿ ಸರ್ಕಾರದಲ್ಲಿ ಸಚಿವರಾಗಿದ್ದ 'ಬಿ' ಭದ್ರತಾ ಶ್ರೇಣಿ ಹೊಂದಿದ್ದ 27 ಮಂದಿಯ ಭದ್ರತೆಯನ್ನು ರಾಜ್ಯ ಸರ್ಕಾರ ಹಿಂಪಡೆದಿದ್ದು, ಅದೇ ಅವಧಿಯಲ್ಲಿ ಸಚಿವರಾಗಿದ್ದ 'ಎ' ಭದ್ರತಾ ಶ್ರೇಣಿ ಹೊಂದಿದ್ದವರ ಭದ್ರತೆಯನ್ನು ಹಾಗೆಯೇ ಮುಂದುವರೆಸಲಾಗಿದೆ.
ಡಾ.ಜಿ.ಪರಮೇಶ್ವರ್‌ಗೆ ಝೆಡ್ ಪ್ಲಸ್ ಜೊತೆಗೆ ಪೈಲೆಟ್, ಎಚ್.ಡಿ.ರೇವಣ್ಣಗೆ ಝೆಡ್ ಶ್ರೇಣಿ, ಡಿ.ಕೆ.ಶಿವಕುಮಾರ್ ಅವರಿಗೆ ವೈ ಪ್ಲಸ್ ಜೊತೆಗೆ ಎಸ್ಕಾರ್ಟ್, ಕೆ.ಜಿ.ಜಾರ್ಜ್ ಗೆ ವೈ ಶ್ರೇಣಿ ಜೊತೆಗೆ ಎಸ್ಕಾರ್ಟ್, ಎಂ.ಬಿ.ಪಾಟೀಲ್ ಗೆ ಝೆಡ್ ಪ್ಲಸ್ ಪೈಲೆಟ್ ಭದ್ರತೆ ಇತ್ತು. ಇವರು ಎ ಭದ್ರತಾ ಶ್ರೇಣಿಯಲ್ಲಿದ್ದವರಾಗಿದ್ದರು. ಇವರ ಭದ್ರತೆ ಹಾಗೆಯೇ ಮುಂದುರೆಯಲಿದೆ.

'ಬಿ' ಭದ್ರತಾ ಶ್ರೇಣಿಯಲ್ಲಿದ್ದ ಮಾಜಿ ಸಚಿವರಾದ ಬಂಡೆಪ್ಪ ಕಾಶಂಪುರ್, ಜಿ.ಟಿ.ದೇವೇಗೌಡ, ಡಿ.ಸಿ.ತಮ್ಮಣ್ಣ, ಕೃಷ್ಣಭೈರೇಗೌಡ, ಎಂ.ಸಿ.ಮನಗೂಳಿ, ಎನ್.ಎಚ್.ಶಿವಶಂಕರ ರೆಡ್ಡಿ, ಶ್ರೀನಿವಾಸ್, ರಮೇಶ್ ಜಾರಕಿಹೊಳಿ, ವೆಂಕಟರಾವ್ ನಾಡಗೌಡ, ಪ್ರಿಯಾಂಕ್‍ಖರ್ಗೆ, ಸಿ.ಎಸ್.ಪುಟ್ಟರಾಜು, ಯು.ಟಿ.ಖಾದರ್, ಸಾ.ರಾ.ಮಹೇಶ್, ಎನ್.ಮಹೇಶ್, ಶಿವಾನಂದ ಪಾಟೀಲ್, ವೆಂಕಟರಮಣಪ್ಪ, ರಾಜಶೇಖರ್ ಪಾಟೀಲ್, ಸಿ.ಪುಟ್ಟರಂಗ ಶೆಟ್ಟಿ, ಆರ್.ಶಂಕರ್, ಜಯಮಾಲ, ಆರ್.ಬಿ.ತಿಮ್ಮಾಪುರ, ತುಕಾರಾಂ.ಇ, ರಹೀಂ ಖಾನ್, ಸತೀಶ್ ಜಾರಕಿಹೊಳಿ, ಪಿ.ಟಿ.ಪರಮೇಶ್ವರ್ ನಾಯಕ್ ಮತ್ತು ಜಮೀರ್ ಅಹಮ್ಮದ್ ಅವರಿಗೆ ನೀಡಲಾಗಿದ್ದ ಭದ್ರತೆಯನ್ನು ಹಿಂಪಡೆಯಲಾಗಿದೆ.
ಭದ್ರತೆ ಹಿಂಪಡೆದಿರುವ ಬಗ್ಗೆ ಬೆಂಗಳೂರು ಪೊಲೀಸ್ ಆಯುಕ್ತರು ಆದೇಶ ಹೊರಡಿಸಿದ್ದು, ಆದೇಶವೂ ತಕ್ಷಣದಿಂದ ಜಾರಿ ಆಗಲಿದೆ ಎಂದು ತಿಳಿಸಿದ್ದಾರೆ.












Click it and Unblock the Notifications