ಕುಡುಕ ಪತಿ ಕಾಟ ತಾಳದೆ ಗೃಹಿಣಿ ಆತ್ಮಹತ್ಯೆ
ಬೆಂಗಳೂರು, ಡಿ.3: ನಗರದ ಲಗ್ಗೆರೆ ಬಳಿಯ ಚೌಡೇಶ್ವರಿ ನಗರದಲ್ಲಿ ಗೃಹಿಣಿಯೊಬ್ಬರು ಮಂಗಳವಾರ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕುಡುಕ ಪತಿಯ ಕಾಟ ತಾಳಲಾರದೆ ನೇಣಿಗೆ ಶರಣಾಗಿರುವ ಮಹಿಳೆಯನ್ನು ಭಾರತಿ ಎಂದು ಗುರುತಿಸಲಾಗಿದೆ.
ರಾಜಗೋಪಾಲನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರೆಸಿದ್ದಾರೆ.35 ವರ್ಷ ಭಾರತಿ ಅವರು ತಮ್ಮ ಪತಿಯ ದುಶ್ಚಟವನ್ನು ಬಿಡಿಸಲು ನಾನಾ ರೀತಿಯಲ್ಲಿ ಯತ್ನಿಸಿ ವಿಫಲರಾಗಿದ್ದರು. ನಿನ್ನೆ ರಾತ್ರಿ ಪತಿ ಪತ್ನಿ ನಡುವೆ ಜೋರು ಜಗಳವಾಗಿದೆ. ಪತ್ನಿಯನ್ನು ಪತಿರಾಯ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಸಮಸ್ಯೆಗೆ ಪರಿಹಾರ ಸಿಗದ ಕಾರಣ ಜೀವನದಲ್ಲಿ ಜಿಗುಪ್ಸೆ ಹೊಂದಿದ ಭಾರತಿ ಅವರು ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದಾರೆ.
ಸ್ಪೀಕ್ ಏಷ್ಯಾ ಹಗರಣ : ಆನ್ ಲೈನ್ ಸಮೀಕ್ಷೆ ನಡೆಸುವ ನೆಪವೊಡ್ಡಿ ಜನತೆ ಪಂಗನಾಮ ಹಾಕಿದ್ದ 'ಸ್ಪೀಕ್ ಏಷ್ಯಾ' ಸಂಸ್ಥೆ ಮಾಸ್ಟರ್ ಮೈಂಡ್ ಸೆರೆ ಸಿಕ್ಕಿದ್ದಾನೆ. ಸುಮಾರು 2,200 ಕೋಟಿ ಹಗರಣ ಅವ್ಯವಹಾರದ ಪ್ರಮುಖ ಆರೋಪಿ ರಾಮ್ ವಿಲಾಸ್ ಪಾಲ್ ನನ್ನು ದೆಹಲಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಮ್ ವಿಲಾಸ್ ನ ಸೋದರ ರಾಮ್ ಸುಮರನ್ ಪಾಲ್ ನನ್ನು ನ.25ರಂದು ಬಂಧಿಸಲಾಗಿತ್ತು.
ರಾಮ್ ನಿವಾಸ್ ಪಾಲ್ ಉತ್ತರ ಪ್ರದೇಶದ ಷಹಜಾನ್ ಪುರದ ನಿವಾಸಿಯಾಗಿದ್ದು, ಸ್ಪೀಕ್ ಏಷ್ಯಾ ಕಂಪನಿಯ ಹಣಕಾಸು ಅವ್ಯವಹಾರದ ಪ್ರಮುಖ ಆರೋಪಿಯಾಗಿದ್ದಾನೆ. ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿದ್ದ ರಾಮ್ ನನ್ನು ದೆಹಲಿ ಕ್ರೈಂ ಬ್ರಾಂಚ್ ಪೊಲೀಸರು ಭಾನುವಾರ ಬಂಧಿಸಿದ್ದಾರೆ. ಈತ ಅಭಯ್ ಸಿಂಗ್ ಚಂದೇಲ್ ಎನ್ನುವ ಹೆಸರನ್ನು ಇಟ್ಟುಕೊಂಡು ಬೆಂಗಳೂರಿನಲ್ಲಿ ವಾಸವಾಗಿದ್ದ.
'ಸ್ಪೀಕ್ ಏಷ್ಯಾ' ಒಂದು ಅಂತರ್ಜಾಲ ಮಾರುಕಟ್ಟೆ ಸಮೀಕ್ಷೆ ಕಂಪನಿಯಾಗಿದ್ದು. 2010ರಲ್ಲಿ ಹುಟ್ಟಿಕೊಂಡಿತ್ತು. ಅದು 11 ಸಾವಿರ ರು. ಪಡೆದು ಗ್ರಾಹಕರನ್ನು ನೋಂದಣಿ ಮಾಡಿಕೊಂಡಿತ್ತು. ಅಲ್ಲದೆ, ವಿವಿಧ ಉಳಿತಾಯ ಖಾತೆಗಳನ್ನು ಆರಂಭಿಸಿ ವರ್ಷಕ್ಕೆ 52 ಸಾವಿರವನ್ನು ನೀಡುವುದಾಗಿ ನಂಬಿಸಿ ಸುಮಾರು 2,200 ಕೋಟಿಗೂ ಹೆಚ್ಚು ಹಣ ಪಡೆದು ವಂಚಿಸಿತ್ತು. ದೇಶಾದ್ಯಂತ 24 ಲಕ್ಷ ಜನರು ಸ್ಪೀಕ್ ಏಷ್ಯಾ ಕಂಪನಿಯಿಂದ ವಂಚನೆಗೆ ಒಳಗಾಗಿದ್ದರು.
ದಾರ್ಶನಿಕ, ವಿನಿವಿಂಕ್ಸ್, ಗ್ರೀನ್ ಗ್ಲೋರಿ, ಗಲ್ಫ್ ಮುಂತಾದ ಮನಿ ಸ್ಕೀಮ್, ಬ್ಲೇಡ್ ಕಂಪನಿಗಳು ಹಣ ತೊಡಗಿಸಿ ಪಂಗನಾಮ ಹಾಕಿದ ಕುಖ್ಯಾತ ಸಂಸ್ಥೆಗಳಾಗಿವೆ. [ಕುಂದಾಪುರದ ಬ್ಲೇಡ್ ಕಂಪನಿ ಬಗ್ಗೆ ಇಲ್ಲಿ ಓದಿ] ಕ್ರೈಂ ಸುದ್ದಿಗಳ ವರದಿ ಇಲ್ಲಿದೆ ತಪ್ಪದೇ ಓದಿ...

ಉಡುಪಿ
ಗಂಗೊಳ್ಳಿ: ಚಂದ್ರಶೇಖರ ಶೆಟ್ಟಿ ತಂದೆ:ವಿಠ್ಠಲ ಶೆಟ್ಟಿ ವಾಸ: ನಾರ್ಕಳಿ ನಡುಬೆಟ್ಟು ಹರ್ಕೂರು ಗ್ರಾಮ ಕುಂದಾಪುರ ತಾಲೂಕುರವರು ನಂದಿಕೇಶ್ವರ ದೈವಸ್ಥಾನದ ಅನುವಂಶಿಕ ಮುಖ್ಯಸ್ಥರಾಗಿದ್ದು ದೈವಸ್ಥಾನದ ಪೂಜೆಯನ್ನು ಪಾತ್ರಿ ಯವರಾದ ಪ್ರದೀಪ ಶೆಟ್ಟಿ ಎಂಬವರು ಮಾಡುತ್ತಿದ್ದು ಹರ್ಕೂರು ಗ್ರಾಮದ ನಾರ್ಕಳಿ ನಡುಬೆಟ್ಟು ನಂದಿಕೇಶ್ವರ ದೈವ ಸ್ಥಾನದ ಪೂಜೆಯನ್ನು ಮಾಡಿ ಬಾಗಿಲು ಬೀಗವನ್ನು ಹಾಕಿ ಹೋಗಿದ್ದು ನಿನ್ನೆ ದೇವಸ್ಥಾನಕ್ಕೆ ಬಂದಾಗ ದೇವಸ್ಥಾನದ ಬಾಗಿಲಿಗೆ ಹಾಕಿದ್ದ, ಬೀಗವನ್ನು ಮುರಿದಿದ್ದು, ಒಳಗೆ ಹೋಗಿ ನೋಡಿದಾಗ ದೇವರ ಎದುರು ಇರಿಸಿದ್ದ ಕಾಣಿಕೆ ಡಬ್ಬಿ ಇರಲಿಲ್ಲ.
ಕಾಣಿಕೆ ಡಬ್ಬಿಯ ಬೀಗವನ್ನು ಮುರಿದು ಅದರಲ್ಲಿ ಇದ್ದ ನಗದು ರೂಪಾಯಿ ಹಾಗೂ ಚಿಲ್ಲರೆ ಹಣ ರೂಪಾಯಿ ಸುಮಾರು 24,000/- ಕಳವು ಮಾಡಿಕೊಂಡು ಹೋಗಿರುವುದಾಗಿದೆ ಎಂಬುದಾಗಿ ಚಂದ್ರಶೇಖರ ಶೆಟ್ಟಿರವರು ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಅಪರಾಧ ಕ್ರಮಾಂಕ 124/2013 ಕಲಂ 454,457,380 ಐ.ಪಿ.ಸಿ ಯಂತೆ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.

ತುಮಕೂರು
ಡಿ.02ರಂದು ಪಿರ್ಯಾದಿ ನಾಗರಾಜು ಬಿನ್ ಯಲ್ಲಪ್ಪ, ಚಿಕ್ಕತೊಟ್ಲುಕೆರೆ ತುಮಕೂರು ತಾಲ್ಲೂಕು ರವರು ಠಾಣೆಗೆ ಹಾಜರಾಗಿ ನೀಡಿದ ಲಿಖಿತ ದೂರು: ದಿನಾಂಕ-01-12-2013 ರಂದು ಸಾಯಿಂಕಾಲ ಸುಮಾರು 6-30 ಗಂಟೆಯ ಸಮಯದಲ್ಲಿ ನಮ್ಮ ಬಾಬ್ತು ತುಳಸಿಪುರ ಗ್ರಾಮದ ಸರ್ವೆ ನಂಬರ್ 35/2 ರ ಜಮೀನಿನಲ್ಲಿ ನಾನು ಮತ್ತು ನಮ್ಮ ಅಣ್ಣ ವೆಂಕಟರಾಮಯ್ಯ ನವರು ಬಟನ್ಸ್ ಹೂವನ್ನು ಕಟಾವು ಮಾಡುತ್ತಿರುವಾಗ ನಮ್ಮ ಅಣ್ಣ ವೆಂಕಟರಾಮಯ್ಯನವರು ಯಾವುದೋ ಹಾವು ಕಾಲಿಗೆ ಕಡಿಯಿತು ಎಂದು ಕಿರುಚಿಕೊಂಡಾಗ ನಾನು ಮತ್ತು ಪಕ್ಕದ ಜಮೀನಿನ ರಮೇಶ್ ಎಂಬುವರು ಹೋಗಿ ನೋಡಿದಾಗ ಬಲ ಕಾಲಿಗೆ ಯಾವುದೋ ವಿಷ ಪೂರಿತ ಹಾವು ಕಚ್ಚಿದ್ದು, ನಾವು ಶಿಶ್ರುಷೆ ಮಾಡಿ ನಂತರ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ ಸುಮಾರು 7-45 ಗಂಟೆ ಸಮಯದಲ್ಲಿ ಮೃತಪಟ್ಟಿರುತ್ತಾರೆ.

ಶಿವಮೊಗ್ಗ
ವಿನೋಬನಗರ ಠಾಣೆ ಮನೆ ಕಳ್ಳತನ ಪ್ರಕರಣ: ಪಿರ್ಯಾದಿದಾರರ ಸುರೇಶ್, ವಾಸ ಸೂರ್ಯಲೇಔಟ್ ಶಿವಮೊಗ್ಗ ಅಕ್ಕ ಮತ್ತು ಭಾವ ರವರು ಶಬರಿಮಲೆ ಯಾತ್ರೆಗೆ ಕೇರಳಕ್ಕೆ ಹೋಗಿದ್ದು ಆ ಸಮಯದಲ್ಲಿ ಮನೆಗೆ ಬೀಗ ಹಾಕಿ ಪಿರ್ಯಾದಿದಾರರಿಗೆ ಬೀಗದ ಕೀ ಯನ್ನು ಕೊಟ್ಟು ಹೋಗಿದ್ದು ಈ ಸಮಯದಲ್ಲಿ ಯಾರೋ ಕಳ್ಳರು ಮನೆಯ ಟೇರಸ್ ಬಾಗಿಲನ್ನು ಮುರಿದು ಮನೆಯ ಒಳ ಹೋಗಿ ಮನೆಯಲ್ಲಿದ್ದ ಕಂಪ್ಯೂಟರ್ ಮಾನಿಟರ್ ಮತ್ತು ಎಲ್ ಇ ಡಿ ಟಿವಿ ಯನ್ನು ಕಳ್ಳತನ ಮಾಡಿಕೊಂಡು ಹೋಗಿರುತ್ತಾರೆ.

ಕೋಲಾರ : ಕೊಲೆಪ್ರಯತ್ನ
ತಂದೆಯೇ ತನ್ನ ಮಗಳ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಕೊಲೆಗೆ ಪ್ರಯತ್ನಸಿರುವ ಘಟನೆ ಮಾಸ್ತಿ ಬಳಿಯ ದೀಗೂರು ಗ್ರಾಮದಲ್ಲಿ ಇತ್ತೀಚೆಗೆ ಸಂಭವಿಸಿರುತ್ತದೆ.
ದೀಗೂರು ಗ್ರಾಮದ ವಾಸಿ ರಾಜಪ್ಪ ಎಂಬುವರು ತನ್ನ ಮಗಳಾದ ಶ್ವೇತ ಎಂಬುವರ ಮೇಲೆ ಕೊಲೆ ಮಾಡುವ ಉದ್ದೆಶದಿಂದ ಹಲ್ಲೆ ನಡೆಸಿ ಚಾಕುವಿನಿಂದ ಮುಖಕ್ಕೆ, ಹುಬ್ಬು ಮತ್ತು ಕಿವಿಯ ಬಳಿ ತಿವಿದು ಗಾಯ ಪಡಿಸಿರುತ್ತಾನೆ. ಶ್ವೇತ ರವರು ಆಂದ್ರ ಪ್ರದೇಶದ ತನ್ನ ಗಂಡನ ಮನೆಗೆ ಹೋಗಲು ನಿರಾಕರಿಸಿದ್ದರ ಹಿನ್ನೆಯಲ್ಲಿ ಆರೋಪಿ ಈ ಕೃತ್ಯ ಎಸಗಿರುವುದಾಗಿ ತಿಳಿದು ಬಂದಿರುತ್ತದೆ. ಈ ಬಗ್ಗೆ ಮಾಸ್ತಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿರುತ್ತದೆ.

ಚಿಕ್ಕಮಗಳೂರು
ಮನುಷ್ಯ ಕಾಣೆ ನಗರ ಪೊಲೀಸ್ ಠಾಣೆ ಮೊ.ಸಂ.222/2013 - ಕಲಂ: ಮನುಷ್ಯ ಕಾಣೆ -ಪಿರ್ಯಾದುದಾರ ಉಮಾ ಜ್ಯೋತಿನಗರ ವಾಸಿ ಇವರ ಗಂಡನಾದ ಬಸವರಾಜು ರವರು ಆಟೋ ಡ್ರೈವರ್ ಮೋಹಿದ್ದೀನ್ ಹತ್ತಿರ ಔಷದಿಯನ್ನು ಕೊಟ್ಟು 9-30 ಗಂಟೆಗೆ ಕಳುಹಿಸಿದ್ದು, ಔಷಧಿ ಕವರ್ನೊಳಗೆ ಬಸವರಾಜು ಒಂದು ಪತ್ರ ಬರೆದಿಟ್ಟಿದ್ದು, ಅದರಲ್ಲಿ ತಂದೆ ರುದ್ರಪ್ಪ ಆತ್ಮಹತ್ಯೆ ಮಾಡಿಕೊಂಡು ಸಾವನ್ನಪ್ಪಿರುತ್ತಾರೆ. ಜಮೀನು ವಿಚಾರದಲ್ಲಿ ಕೇಸು ಕೂಡ ಅಗಿರುತ್ತೆ. ಆದರೆ ನ್ಯಾಯ ದೊರಕಲಿಲ್ಲವೆಂದು ಬೇಸರದಿಂದ ತನ್ನ ಗಂಡ ನಾಪತ್ತೆಯಾಗಿರುತ್ತಾರೆ.












Click it and Unblock the Notifications