Karnataka Rains: ಕರಾವಳಿ- ಒಳನಾಡಿನ 5 ದಿನದ ಹವಾಮಾನ ವರದಿ, ಆರೆಂಜ್-ಯೆಲ್ಲೋ ಅಲರ್ಟ್
ಬೆಂಗಳೂರು, ಜುಲೈ 16: ಮುಂಗಾರು ಮಳೆ ಕರ್ನಾಟಕದ ರಾಜ್ಯದ ಕರಾವಳಿ ಭಾಗವನ್ನು ಅಕ್ಷರಶಃ ನಲುಗುವಂತೆ ಮಾಡಿದೆ. ಕಳೆದ ಸುಮಾರು ಮೂರು ವಾರಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆ ಮುಂದಿನ ಐದು ದಿನ ಇದೇ ಭಾಗದಲ್ಲಿ ಮತ್ತಷ್ಟು ತೀವ್ರಗೊಳ್ಳಲಿದೆ. ಉಳಿದ ಭಾಗದ ಕೆಲವು ಜಿಲ್ಲೆಗಳಿಗೂ ಯೆಲ್ಲೋ ಅಲರ್ಟ್ ಕೊಡಲಾಗಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳು, ಮಲೆನಾಡಿನ ಜಿಲ್ಲೆಗಳು ಸೇರಿದಂತೆ ರಾಜ್ಯ ಕೆಲವು ಒಳನಾಡಿನ ಜಿಲ್ಲೆಗಳಿಗೆ ಮತ್ತು ಅತ್ಯಧಿಕ ಮಳೆಯ ನಿರೀಕ್ಷೆ ಇದೆ. ರೆಡ್ ಅಲರ್ಟ್ ನಿಂದ ಯೆಲ್ಲೋ ಅಲರ್ಟ್‌ಗೆ ಮರಳಿದ್ದ ಕರಾವಳಿಯ ಮೂರು ಜಿಲ್ಲೆಗಳು ಮತ್ತೆ ನಿಧಾನವಾಗಿ ಆರೆಂಜ್ ಅಲರ್ಟ್‌ನತ್ತ ಮರಳುತ್ತಿವೆ.

ಜಲೈ 17 ರಿಂದ ಮುಂದಿನ ಐದು ದಿನಗಳು ರಾಜ್ಯದ ಹಲವೆಡೆ ಮುಂಗಾರು ಚುರುಕಾಗಿರಲಿದೆ. ಮುಂದಿನ ನಾಲ್ಕು ದಿನ ಗುಡುಗು ಮಿಂಚು ಸಹಿತ ನಿರಂತರ ಧಾರಾಕಾರವಾಗಿ ಮಳೆ ಬರುವುದರಿಂದ ಉತ್ತರ ಕನ್ನಡ, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳು ಯೆಲ್ಲೋ ಅಲರ್ಟ್, ಐದನೇ ದಿನ ಆರೆಂಜ್ ಅಲರ್ಟ್ ಘೋಷಿಸಲಾಗಿದೆ.
ಕರಾವಳಿ ಜನರಿಗೆ ಮತ್ತೆ ಮಳೆ ಭೀತಿ?
ಈ ಮುನ್ಸೂಚನೆಯಿಂದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಸೇರಿದಂತೆ ಕೆಲವು ಪ್ರದೇಶಗಳು, ಉಡುಪಿ, ಕುಂದಾಪುರ ಸೇರಿದಂತೆ ಸಮುದ್ರ ತೀರದ ಪ್ರದೇಶಗಳ ಜನರಲ್ಲಿ ವ್ಯಾಪಕ ಮಳೆ ಭೀತಿ, ಸಂಕಷ್ಟ ಎದುರಾಗುವ ಭಯ ಆವರಿಸಿದೆ.
ಇನ್ನೂ ಅದೇ ರೀತಿ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗುವ ಸಾಧ್ಯತೆ ಇದೆ. ಚಿಕ್ಕಮಗಳೂರು, ಹಾಸನ, ಕೊಡಗು, ಶಿವಮೊಗ್ಗ, ಕಲಬುರಗಿ, ಬೆಳಗಾವಿ, ಬೀದರ್ ಮತ್ತು ಧಾರವಾಡ ಜಿಲ್ಲೆಗಳಲ್ಲಿ ಜುಲೈ 20 ಮತ್ತು ಜುಲೈ 22ರಂದು ಯೆಲ್ಲೋ ಅಲರ್ಟ್ ನೀಡಲಾಗಿದೆ.

ಈ ಭಾಗದಲ್ಲಿ ಎರಡು ದಿನ ವ್ಯಾಪಕ ಮಳೆ ಬೀಳುವ ಸಂಭವವಿದೆ. ನಾಳೆ ಸೋಮವಾರ ಜುಲೈ 17ರಿಂದ ಬೆಳಗಾವಿ, ಬೀದರ್, ಕಲಬುರಗಿ, ಕೊಪ್ಪಳ, ರಾಯಚೂರು, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಹಾವೇರಿ ಜಿಲ್ಲೆಗಳಲ್ಲಿ ಹಾಗೂ ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಬಳ್ಳಾರಿ, ರಾಮನಗರ, ಚಿಕ್ಕಬಳ್ಳಾಪುರ, ಕೋಲಾರ, ಚಾಮರಾಜನಗರ, ಮೈಸೂರು, ಮಂಡ್ಯ, ದಾವಣಗೆರೆ, ಹಾಸನ, ತುಮಕೂರು, ಚಿತ್ರದುರ್ಗ ಜಿಲ್ಲೆಗಳಲ್ಲಿ ಪ್ರತಿದಿನ ಆಗಾಗ ಜಿಟಿ ಜಿಟಿ ಮಳೆಯಾಗಲಿದೆ. ಕೆಲವೆಡೆ ತುಂತುರು ಮಳೆ ಮತ್ತು ಬಿಸಿಲಿನ ದರ್ಶನವಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ದಾಖಲಾದ ಮಳೆ, ತಾಪಮಾನ ವಿವರ
ಕಳೆದ 24 ಗಂಟೆಯಲ್ಲಿ ಉತ್ತರ ಕನ್ನಡ, ಚಿಕ್ಕಮಗಳೂರು, ಶೃಂಗೇರಿ, ಸಿದ್ದಾಪುರ, ತಾಳಗುಪ್ಪ, ಪೆಣಂಬೂರು, ಮಂಗಳೂರು, ದಕ್ಷಿಣ ಕನ್ನಡ ಸೆರಿದಂತೆ ಕರಾವಳಿ ಭಾಗದಲ್ಲಿಯೆ ಅತ್ಯಧಿಕ ಮಳೆ ದಾಖಲಾಗಿದೆ. ಉಳಿದ ಹಲವೆಡೆ ಹಗುರ ಮಳೆ ಬಿದ್ದಿದೆ. ರಾಜ್ಯದ ಗರಿಷ್ಠ ತಾಪಮಾನ ಕಲಬುರಗಿಯಲ್ಲಿ 35 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ, ಅತ್ಯಧಿಕ ಕನಿಷ್ಠ ತಾಪಮಾನ ಬಾಗಲಕೋಟೆಯಲ್ಲಿ 15 ಡಿಗ್ರಿ ಸೆಲ್ಸಿಯಸ್ ದಾಖಲಾಗಿದೆ ಎಂದು ವರದಿ ತಿಳಿಸಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮುಂದಿನ ಮೂರು ನಾಲ್ಕು ದಿನ ಹಗುರದಿಂದ ಸಾಧಾರಣ ಮಳೆ ಆಗಾಗ ಕಾಣಸಿಕೊಳ್ಳಲಿದೆ. ಬಿಸಿಲಿನ ದರ್ಶನವಾದರೂ ಸಹಿತ ಚಳಿಯ ವಾತಾವರಣ ಕಂಡು ಬರಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.












Click it and Unblock the Notifications