ಜ.29 ರಂದು ಸಂಪುಟ ವಿಸ್ತರಣೆ; ಬಿಎಸ್‌ವೈಗೆ ಜ್ಯೋತಿಷಿಗಳ ಸಲಹೆ ಏನು?
ಬೆಂಗಳೂರು, ಜ. 25: ರಾಜ್ಯ ಬಿಜೆಪಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆಗೆ ಕೊನೆಗೂ ಬಿಜೆಪಿ ಹೈಕಮಾಂಡ್ ಹಸಿರು ನಿಶಾನೆ ತೋರಿಸಿದೆ. ಇದೇ ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಸೂಚನೆ ಕೊಟ್ಟಿದೆ ಎಂಬ ಖಚಿತ ಮಾಹಿತಿ ಬಿಜೆಪಿ ವಲಯದಿಂದಲೇ ಬಂದಿದೆ.
ಇವತ್ತು ಡಾಲರ್ಸ್ ಕಾಲನಿಯ ನಿವಾಸದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ್ದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ್ ಅವರು ಸಂಪುಟ ವಿಸ್ತರಣೆ ಕುರಿತಂತೆ ಹೈಕಮಾಂಡ್ ಸಂದೇಶವನ್ನು ಯಡಿಯೂರಪ್ಪ ಅವರಿಗೆ ತಲುಪಿಸಿದ್ದಾರೆ ಎನ್ನಲಾಗಿದೆ.
ಇದೇ ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡುವಂತೆ ಹೈಕಮಾಂಡ್ ಸೂಚನೆ ಕೊಟ್ಟಿದೆ. ಹೈಕಮಾಂಡ್‌ನಿಂದ ಸಂದೇಶ ಬಳಿಕ ಜನವರಿ 29 ರಂದು ಸಂಪುಟ ವಿಸ್ತರಣೆ ಮಾಡುವ ಬಗ್ಗೆ ಜ್ಯೋತಿಷಿಗಳ ಸಲಹೆಯನ್ನು ಯಡಿಯೂರಪ್ಪ ಪಡೆದಿದ್ದಾರೆ. ಯಾವುದೇ ತೊಂದರೆಯಿಲ್ಲ ಸಂಪುಟ ವಿಸ್ತರಣೆ ಮಾಡಲು ಸೂಕ್ತ ಸಮಯ ಎಂದು ಜ್ಯೋತಿಷಿಗಳು ಕೂಡ ಸಲಹೆ ಕೊಟ್ಟಿದ್ದಾರೆ ಎನ್ನಲಾಗಿದೆ.

ಜನವರಿ 29ರಂದು ವಸಂತ ಪಂಚಮಿ ವಿಶೇಷ ದಿನ. ಅಂದು ಬೆಳಗ್ಗೆ 10.45ರ ಬಳಿಕ ರಾಜಯೋಗ ಆರಂಭವಾಗುತ್ತದೆ. ಈ ವೇಳೆ ಸಂಪುಟ ವಿಸ್ತರಣೆ ಮಾಡುವಂತೆ ಜ್ಯೋತಿಷಿಗಳು ಸಲಹೆ ಕೊಟ್ಟಿದ್ದಾರೆ. ಹೈಕಮಾಂಡ್ ಸಂಪುಟ ವಿಸ್ತರಣೆ ಮಾಡಲು ಹೇಳಿರುವ ಹಿನ್ನೆಲೆಯಲ್ಲಿ ರಾಜ್ಯಪಾಲರ ಸಮಯ ಕೇಳುವ ಸಿದ್ದತೆಯಲ್ಲಿ ಸಿಎಂ ಬಿಎಸ್ ಯಡಿಯೂರಪ್ಪ ಇದ್ದಾರೆ ಎಂಬ ಮಾಹಿತಿಯಿದೆ.
ದಾವೋಸ್‌ನಿಂದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಹಿಂದಿರುಗಿದ ಬಳಿಕ ಸಂಪುಟ ವಿಸ್ತರಣೆ ಒತ್ತಡ ಹೆಚ್ಚಾಗುತ್ತಿದೆ. ಕಳೆದ ಡಿಸೆಂಬರ್ 9 ರಂದೇ ಉಪ ಚುನಾವಣೆಯ ಫಲಿತಾಂಶ ಬಂದಿದೆ. ಹೀಗಿದ್ದಾಗೂ ಸಂಪುಟ ವಿಸ್ತರಣೆ ಮಾಡಲು ಮುಂದಾಗದೆ ಇರುವುದು ನೂತನ ಶಾಸಕರಿಗೆ ಆತಂಕವನ್ನುಂಟು ಮಾಡಿತ್ತು. ಜೊತೆಗೆ ವಿರೋಧ ಪಕ್ಷಗಳ ನಾಯಕರು ಬಿಜೆಪಿ ಸರ್ಕಾರದ ಮೇಲೆ ಆರೋಪ ಮಾಡಲು ಅವಕಾಶ ಸಿಕ್ಕಂತಾಗಿತ್ತು.











Click it and Unblock the Notifications