ಲೋಕ ಫಲಿತಾಂಶದ ಬಳಿಕ ರಾಜ್ಯ ಬಿಜೆಪಿಯಲ್ಲಿ ಮಹತ್ವದ ಬದಲಾವಣೆ?
Recommended Video
ಬೆಂಗಳೂರು, ಮೇ 02: ಲೋಕಸಭೆ ಫಲಿತಾಂಶದ ಬಳಿಕ ರಾಜ್ಯ ರಾಜಕಾರಣದಲ್ಲಿ ಮಹತ್ವದ ಬದಲಾವಣೆ ಆಗುತ್ತದೆಯೆಂದು ಬಿಜೆಪಿ ಹೇಳುತ್ತಲೇ ಬರುತ್ತಿದೆ, ಆದರೆ ಲೋಕಸ ಫಲಿತಾಂಶದ ಬಳಿಕ ಸ್ವತಃ ಬಿಜೆಪಿಯಲ್ಲಿಯೇ ಮಹತ್ವದ ಬದಲಾವಣೆ ಆಗಲಿದೆ ಎನ್ನಲಾಗುತ್ತಿದೆ.
ಹೌದು, ಬಹು ದಿನಗಳಿಂದಲೂ ಚರ್ಚೆಯಲ್ಲೇ ಇದ್ದ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾವಣೆ ವಿಷಯದಲ್ಲಿ ಗಟ್ಟಿ ನಿರ್ಧಾರವು ಮೇ 23 ರ ಬಳಿಕ ಹೊರಬೀಳಲಿದೆ ಎನ್ನಲಾಗುತ್ತಿದೆ.
ಯಡಿಯೂರಪ್ಪ ಅವರನ್ನು ವಯಸ್ಸಿನ ಕಾರಣದಿಂದಾಗಿ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಸಿ ಸಮ ಅನುಭವಿ, ಸಮ ಉತ್ಸಾಹಿಯೊಬ್ಬರಿಗೆ ರಾಜ್ಯ ಬಿಜೆಪಿಯ ನೊಗವನ್ನು ಹೆಗಲಿಗೇರಿಸುವ ಕಾರ್ಯವನ್ನು ಬಿಜೆಪಿ ಹೈಕಮಾಂಡ್ ಮಾಡುವುದು ಬಹುತೇಕ ಖಚಿತವಾಗಿದೆ.
ಮೇ 23ರ ಫಲಿತಾಂಶದಲ್ಲಿ ಬಿಜೆಪಿ ಮತ್ತು ಮಿತ್ರಪಕ್ಷಗಳು ಗೆಲ್ಲುವುದು ಖಾಯಂ ಎಂದು ಬಿಜೆಪಿ ಆಂತರಿಕ ಸಮೀಕ್ಷೆ ಹೇಳಿದೆ. ಹಾಗಾಗಿ ಫಲಿತಾಂಶ ಹೊರಬಿದ್ದ ಕೂಡಲೇ ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಮಾಡಿದರೆ, ಮುಂದಿನ ಚುನಾವಣೆ ವೇಳೆಗೆ ಅವರನ್ನು ತಯಾರು ಮಾಡಲು, ಅಧ್ಯಕ್ಷ ಸ್ಥಾನ ಬದಲಾವಣೆ ಬಳಿಕ ಏಳುವ ಗೊಂದಲಗಳನ್ನು ನಿವಾರಿಸಲು ಸಾಕಷ್ಟು ಸಮಯ ದೊರಕುತ್ತದೆ ಎಂಬುದು ಹೈಕಮಾಂಡ್ ಲೆಕ್ಕಾಚಾರ.

ಮುಂಚೆಯೇ ಬೇಡಿಕೆ ಹೋಗಿತ್ತು
ರಾಜ್ಯದ ಬಿಜೆಪಿ ಅಧ್ಯಕ್ಷರನ್ನು ಬದಲಾಯಿಸುವ ಬೇಡಿಕೆ ಲೋಕಸಭೆ ಚುನಾವಣೆಗೆ ಮುನ್ನವೇ ಹೈಕಮಾಂಡ್‌ಗೆ ಹೋಗಿತ್ತು, ಬೇಡಿಕೆ ಹೋಗಿರುವುದರಲ್ಲಿ ಸಂಘಟನಾ ಕಾರ್ಯದರ್ಶಿ ಅವರ ಹಸ್ತಕ್ಷೇಪವೇ ಹೆಚ್ಚಿದೆಯೆಂದು ಹೇಳಲಾಗುತ್ತಿತ್ತು, ಆದರೆ ಯಡಿಯೂರಪ್ಪ ಅವರ ಪ್ರಭಾವದ ಅರಿವಿದ್ದ ಹೈಕಮಾಂಡ್ ಲೋಕಸಭೆ ಚುನಾವಣೆಗೆ ಮುನ್ನಾ ಹಾಗೊದು ರಿಸ್ಕ್ ತೆಗೆದುಕೊಳ್ಳಲು ಹಿಂದೇಟು ಹಾಕಿತು.

ಬದಲಾವಣೆಯಂತೂ ಖಾಯಂ
ಆದರೆ ಮೇ 23 ರ ಬಳಿಕ ರಾಜ್ಯ ರಾಜಕಾರಣದಲ್ಲಿ ಬದಲಾವಣೆ ಆಗಲಿ ಅಥವಾ ಆಗದೇ ಇರಲಿ ರಾಜ್ಯ ಬಿಜೆಪಿ ಅಧ್ಯಕ್ಷ ಸ್ಥಾನ ಬದಲಾವಣೆಯಂತೂ ಖಾಯಂ ಎನ್ನಲಾಗುತ್ತಿದೆ. ಇತ್ತೀಚೆಗಷ್ಟೆ ತೇಜಸ್ವಿನಿ ಅನಂತ್‌ಕುಮಾರ್ ಅವರನ್ನು ಉಪಾಧ್ಯಕ್ಷರನ್ನಾಗಿ ನೇಮಿಸಲಾಗಿತ್ತು.

ಹಲವು ಮುಖಂಡರ ಪಟ್ಟಿ ಹೈಕಮಾಂಡ್ ಬಳಿ
ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಶ್, ಅವರ ಆಪ್ತ ಸಿ.ಟಿ.ರವಿ, ಅಹಿಂದಕ್ಕೆ ಸೇರಿದ ಕೆ.ಎಸ್.ಈಶ್ವರಪ್ಪ, ವೀರಶೈವ-ಲಿಂಗಾಯತ ಸಮುದಾಯದ ಜಗದೀಶ್ ಶೆಟ್ಟರ್, ಒಕ್ಕಲಿಗ ಸಮುದಾಯದ ಆರ್.ಅಶೋಕ್, ಹಿಂದುಳಿದ ಜಾತಿಯ ಅರವಿಂದ ಲಿಂಬಾವಳಿ, ದಲಿತ ಸಮುದಾಯಕ್ಕೆ ಸೇರಿದ ಶ್ರೀರಾಮುಲು ಹೀಗೆ ಹಲವರ ಹೆಸರು ಪಟ್ಟಿಯಲ್ಲಿದೆ ಇವರಲ್ಲಿ ಯಾರಿಗೆ ಅವಕಾಶ ಸಿಗುತ್ತದೆಯೋ ನೋಡಬೇಕಿದೆ.

ಯಡಿಯೂರಪ್ಪ ಪುತ್ರಗೆ ನೀಡುವಂತೆ ಒತ್ತಾಯ
ಇವರು ಮಾತ್ರವಲ್ಲದೆ ಯಡಿಯೂರಪ್ಪ ಅವರ ಇಬ್ಬರು ಪುತ್ರರಾದ ಬಿ.ವೈ.ರಾಘವೇಂದ್ರ ಮತ್ತು ಬಿವೈ.ವಿಜಯೇಂದ್ರ ಅವರ ಹೆಸರೂ ಸಹ ಪಟ್ಟಿಯಲ್ಲಿದೆ, ಈ ಇಬ್ಬರಲ್ಲಿ ಒಬ್ಬರಿಗೆ ಸ್ಥಾನ ನೀಡಬೇಕೆಂದು ಯಡಿಯೂರಪ್ಪ ಅವರು ಪಟ್ಟಾಗಿ ಒತ್ತಾಯ ಹೇರಿದ್ದಾರೆ. ಜೊತೆಗೆ ಹೊಸ ಶಾಸಕ ಪ್ರೀತಂ ಗೌಡ ಅವರ ಹೆಸರೂ ಸಹ ಚಾಲ್ತಿಯಲ್ಲಿದೆ ಎನ್ನಲಾಗಿದೆ.












Click it and Unblock the Notifications