Karnataka BJP: ರಾಜ್ಯ ಬಿಜೆಪಿ ನಾಯಕರು ಒಂದಾಗುವುದು ಮರೀಚಿಕೆ: ಏಕೆ ಗೊತ್ತಾ?
ಬೆಂಗಳೂರು, ಜನವರಿ 30: ರಾಜ್ಯದಲ್ಲಿ ಬಿಜೆಪಿಯ ಈಗಿನ ಕಥೆ ಮನೆಯೊಂದು ಬಾಗಿಲುಗಳು ಹತ್ತಾರು ಎಂಬಂತಾಗಿದೆ. ಅಸಮಾಧಾನಿತರು, ತಟಸ್ಥರು, ಅವಕಾಶವಾದಿಗಳು ಹೀಗೆ ಹತ್ತಾರು ನಾಯಕರ ಗುಂಪುಗಳಿಂದ ವಿಭಜನೆಗೊಳ್ಳುತ್ತಾ ಸಾಗುತ್ತಿದ್ದು, ನಿಷ್ಠಾವಂತ ನಾಯಕರು ಮತ್ತು ಕಾರ್ಯಕರ್ತರು ಲೆಕ್ಕಕ್ಕಿಲ್ಲದಂತಾಗಿ ಮೂಲೆ ಸೇರುವಂತಾಗಿದೆ. ಹಿರಿಯ ಮತ್ತು ಕಿರಿಯ ನಾಯಕರ ನಡುವೆ ಹಗ್ಗಜಗ್ಗಾಟಗಳು ಶುರುವಾಗಿದ್ದು, ಪ್ರತಿಷ್ಠೆಯ ಕಾರಣದಿಂದಾಗಿ ಪಕ್ಷದ ಪ್ರಾಬಲ್ಯ ಮಣ್ಣುಪಾಲಾಗುವ ಲಕ್ಷಣಗಳು ಎದ್ದು ಕಾಣಿಸುತ್ತಿವೆ.
ಹಿರಿಯನಾಯಕ ಬಿಜೆಪಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಿ ಬೆಳೆಸಿದ ಬಿ.ಎಸ್.ಯಡಿಯೂರಪ್ಪ ಅವರ ಪುತ್ರ ಎಂಬ ಕಾರಣಕ್ಕೆ ಮತ್ತು ಹಿರಿಯರೊಂದಿಗೆ ಕಿರಿಯರನ್ನು ಒಟ್ಟಾಗಿ ಕೊಂಡೊಯ್ಯುವ ಮತ್ತು ಪಕ್ಷ ಸಂಘಟನೆಗಳಲ್ಲಿ ತೊಡಗಿಸಿಕೊಳ್ಳುವ ಚಾಕಚಕ್ಯತೆಯಿದೆ ಎಂದು ಬಿ.ವೈ.ವಿಜಯೇಂದ್ರರಿಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ನೀಡಿರಲಿಲ್ಲ. ಅದಾಗಲೇ ಬಿ.ಎಸ್.ಯಡಿಯೂರಪ್ಪರಿಂದ ಸಿಎಂ ಸ್ಥಾನವನ್ನು ಕಿತ್ತು ಬಸವರಾಜಬೊಮ್ಮಾಯಿ ಅವರಿಗೆ ನೀಡಿರುವುದು ಮಾತ್ರವಲ್ಲದೆ, ಯಡಿಯೂರಪ್ಪರನ್ನು ಮೂಲೆಗುಂಪು ಮಾಡಿದ್ದಾರೆ ಎಂಬ ಕಳಂಕವನ್ನು ತೊಡೆದುಹಾಕಲು ಹೈಕಮಾಂಡ್ ಪಟ್ಟ ನೀಡಿತ್ತು.

ನಿಜ ಹೇಳಬೇಕೆಂದರೆ ನಳೀನ್ ಕುಮಾರ್ ಕಟೀಲ್ ಅಧ್ಯಕ್ಷರಾಗಿದ್ದ ಕಾಲದಲ್ಲಿ ಪಕ್ಷದಲ್ಲಿ ಭಿನ್ನಮತವಿತ್ತಾದರೂ ಈಗಿನಂತೆ ಅದು ಬೀದಿಗೆ ಬಿದ್ದಿರಲಿಲ್ಲ. ಆದರೆ ಹಿಂದೂ ಕಾರ್ಯಕರ್ತರಲ್ಲಿ ತಾವು ಕಟ್ಟಿ ಬೆಳೆಸಿದ ಪಕ್ಷ ಅಧಿಕಾರದಲ್ಲಿದ್ದರೂ ತಮಗೆ ರಕ್ಷಣೆ ಇಲ್ಲ ಎಂಬ ಆಕ್ರೋಶವಿತ್ತು. ಅದನ್ನು ಹಿಂದೂ ಕಾರ್ಯಕರ್ತರ ಕೊಲೆಯಾದಾಗ ಹೊರ ಹಾಕಲಾಗಿತ್ತು. ಅದನ್ನು ಹೊರತುಪಡಿಸಿದರೆ ಇವತ್ತಿನಂತೆ ತೀವ್ರತೆ ಪಡೆದುಕೊಂಡಿರಲಿಲ್ಲ. ನಳೀನ್ ಕುಮಾರ್ ಕಟೀಲ್ ನಂತರ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟವನ್ನು ಯಡಿಯೂರಪ್ಪ ಅವರ ಪುತ್ರ ಬಿ.ವೈ.ವಿಜಯೇಂದ್ರರಿಗೆ ಕಟ್ಟಿದ ಬಳಿಕ ಪಕ್ಷದೊಳಗೆ ಅಸಮಾಧಾನ ತಾರಕಕ್ಕೇರಿದೆ.
ಬಿ.ವೈ.ವಿಜಯೇಂದ್ರರನ್ನು ವಿರೋಧಿಸುತ್ತಿರುವುದೇಕೆ?
ಈ ಹಿಂದೆ ಯಡಿಯೂರಪ್ಪ ಅವರು ಬಿಜೆಪಿಯನ್ನು ಬಿಟ್ಟು ಕೆಜೆಪಿ ಕಟ್ಟಿದಾಗ ಲಿಂಗಾಯಿತರು ಅವರ ಬೆನ್ನಿಗೆ ನಿಂತಿದ್ದರು. ಒಂದಷ್ಟು ನಾಯಕರು ಅವರ ಜತೆಗೆ ಪಕ್ಷ ಬಿಟ್ಟು ಹೋದ ಕಾರಣದಿಂದಾಗಿ ಬಿಜೆಪಿ ಸಂಕಷ್ಟ ಅನುಭವಿಸಿತ್ತು. ಇದರ ಅರಿವಿದ್ದ ಹೈಕಮಾಂಡ್ ಬಿಎಸ್ ವೈನ್ನು ಸಿಎಂ ಸ್ಥಾನದಿಂದ ಇಳಿಸಿದ ಕಳಂಕ ಹೋಗಲಾಡಿಸಲು ಮತ್ತು ಲಿಂಗಾಯಿತ ನಾಯಕರ ಒಲವು ಗಳಿಸಲು ವಿಜಯೇಂದ್ರರಿಗೆ ರಾಜ್ಯಾಧ್ಯಕ್ಷ ಸ್ಥಾನವನ್ನು ನೀಡಲಾಗಿತ್ತು. ಆದರೆ ದುರಂತವೇನೆಂದರೆ ಇವತ್ತು ವಿಜಯೇಂದ್ರರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವಂತೆ ಒತ್ತಾಯ ಮಾಡುತ್ತಿರುವವರಲ್ಲಿ ಲಿಂಗಾಯಿತ ನಾಯಕರೇ ಮುಂಚೂಣಿಯಲ್ಲಿದ್ದಾರೆ.

ಯಡಿಯೂರಪ್ಪ ಅವರು ಸಿಎಂ ಆಗಿದ್ದಾಗಲೇ ಪುತ್ರ ವಿಜಯೇಂದ್ರ ವಿರುದ್ಧ ಆರೋಪಗಳು ಬಂದಿತ್ತು. ಅವರ ವಿರುದ್ಧವೇ ಪಕ್ಷದ ನಾಯಕರು ಸಿಡಿದೆದ್ದಿದ್ದರು. ಆ ವೇಳೆ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಅದಾದ ನಂತರ ರಾಜ್ಯದಲ್ಲಿ ಬಿಜೆಪಿ ಆಡಳಿತವಿತ್ತಾದರೂ ಕಾಂಗ್ರೆಸ್ ರಾಜ್ಯದಲ್ಲಿ ಬೊಮ್ಮಾಯಿ ಸರ್ಕಾರವನ್ನು ಅಲುಗಾಡಿಸಲು ಸರ್ವತಂತ್ರವನ್ನು ಮಾಡಿತ್ತು. ಅದರಲ್ಲಿ ಯಶಸ್ವಿಯೂ ಆಯಿತು.
ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರದ ವಿರುದ್ಧ ಭ್ರಷ್ಟಾಚಾರದ ಆರೋಪಗಳನ್ನು ಮಾಡುತ್ತಾ ಅದನ್ನು ಜನರ ಬಳಿಗೆ ತೆಗೆದುಕೊಂಡು ಹೋಗುವಲ್ಲಿ ಯಶಸ್ವಿಯಾಯಿತು. ಅಷ್ಟರಲ್ಲಾಗಲೇ ಬಿಜೆಪಿಯಲ್ಲಿ ಒಳಜಗಳಗಳು ಆರಂಭವಾಗಿದ್ದವು. 2023 ಚುನಾವಣೆ ಹೊತ್ತಿಗೆ ಕಾಂಗ್ರೆಸ್ ರಾಜ್ಯದಲ್ಲಿ ಸದೃಢವಾಗಿತ್ತು. ಹೀಗಾಗಿ ಚುನಾವಣೆಯಲ್ಲಿ ಬಿಜೆಪಿ ಸೋಲು ಕಂಡು ಕಾಂಗ್ರೆಸ್ ಅಧಿಕಾರಕ್ಕೆ ಬಂದಿತ್ತು.
ಬಲಗೊಳ್ಳುತ್ತಿರುವ ಯತ್ನಾಳ್ ಟೀಮ್
ಇದಾದ ಬಳಿಕ ಬಿಜೆಪಿಯಲ್ಲಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಸಂಬಂಧಿಸಿದಂತೆ ಲಾಭಿ ಶುರುವಾಗಿತ್ತು. ಬಸವನಗೌಡ ಯತ್ನಾಳ್, ಸಿ.ಟಿ.ರವಿ ಸೇರಿದಂತೆ ಹಲವು ಹಿರಿಯ ನಾಯಕರು ರೇಸ್ ನಲ್ಲಿದ್ದರು. ಆದರೆ ಹಿರಿಯರನ್ನೆಲ್ಲ ಬದಿಗೆ ಸರಿಸಿ ಬಿ.ವೈ.ವಿಜಯೇಂದ್ರರವರಿಗೆ ಮಣೆಹಾಕಲಾಯಿತು. ಯಾವಾಗ ವಿಜಯೇಂದ್ರ ಅಧ್ಯಕ್ಷರಾದರೋ ಬಸವನಗೌಡ ಯತ್ನಾಳ್ ನಿಗಿನಿಗಿ ಕೆಂಡವಾಗಿ ಬಿಟ್ಟರು. ಇದಾದ ಬಳಿಕ ಲೋಕಸಭಾ ಚುನಾವಣೆ ನಡೆಯಿತು. ಈ ವೇಳೆ ಟಿಕೆಟ್ ವಿಚಾರಕ್ಕೆ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಪಕ್ಷದಿಂದ ಹೊರ ಹೋದರು. ಒಂದಷ್ಟು ಜಟಾಪಟಿಗಳ ನಂತರ 2019ರ ಲೋಕಸಭಾ ಚುನಾವಣೆಗೆ ಹೋಲಿಸಿದರೆ, 2024 ಲೋಕಸಭಾ ಚುನಾವಣೆಯಲ್ಲಿ ಹೆಚ್ಚಿನ ಸಾಧನೆಯೇನೂ ಕಾಣಲಿಲ್ಲ.

ಈ ಹಿಂದೆ ನಡೆದ ವಿಧಾನಸಭಾ ಉಪಚುನಾವಣೆಯಲ್ಲಿಯೂ ಕಳಪೆ ಸಾಧನೆ ಮಾಡಿತು. ಅಷ್ಟರಲ್ಲಾಗಲೇ ಬಿಜೆಪಿಯ ಭಿನ್ನಮತ ಗಡಿದಾಟಿ ಹೋಗಿತ್ತು. ಹೈಕಮಾಂಡ್ ಮಧ್ಯಪ್ರವೇಶ ಮಾಡಿದರೂ ಪ್ರಯೋಜನವಾಗಲಿಲ್ಲ. ಯತ್ನಾಳ್ ನೇತೃತ್ವದ ಅಸಮಾಧಾನಿತರ ತಂಡಕ್ಕೆ ಸೇರ್ಪಡೆಗೊಳ್ಳುವವರ ಸಂಖ್ಯೆಯೂ ಹೆಚ್ಚಾಯಿತು. ವಕ್ಫ್ ವಿರುದ್ಧದ ಹೋರಾಟ ನಡೆಸುವ ಮೂಲಕ ತಮ್ಮ ಶಕ್ತಿ ಪ್ರದರ್ಶನವನ್ನು ಯತ್ನಾಳ್ ಟೀಮ್ ಮಾಡುವ ಮೂಲಕ ವಿಜಯೇಂದ್ರ ಟೀಮ್ ಗೆ ಟಾಂಗ್ ನೀಡಿತು. ವಿಜಯೇಂದ್ರ ಪರವಾಗಿ ರೇಣುಕಾಚಾರ್ಯ, ಕಟ್ಟಾಸುಬ್ರಹ್ಮಣ್ಯ ಸೇರಿದಂತೆ ಒಂದಷ್ಟು ಜನ ಮಾತನಾಡಿದರೂ ಉಳಿದಂತೆ ಘಟಾನುಘಟಿಗಳು, ಹಿರಿಯ ನಾಯಕರು ಹೀಗೆ ಎಲ್ಲರೂ ಮೌನಕ್ಕೆ ಜಾರಿದ್ದು, ತಟಸ್ಥರಾಗಿದ್ದರು.
ಬಿವೈವಿ ತೀರ್ಮಾನಕ್ಕೆ ಪಕ್ಷದೊಳಗೆ ಆಕ್ರೋಶ
ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಕೆಳಗಿಳಿಸಬೇಕೆಂಬ ಹೋರಾಟ ಒಂದು ಕಡೆಯಾದರೆ ಮತ್ತೊಂದು ಕಡೆ ಅವರ ಕಾರ್ಯವೈಖರಿಗೆ ತಟಸ್ಥರಾಗಿದ್ದವರೇ ಸಿಡಿದೇಳುವಂತಾಗಿದೆ. ಯಾರನ್ನೂ ವಿಶ್ವಾಸಕ್ಕೆ ತೆಗೆದುಕೊಳ್ಳದೆ ತಾವೇ ಮಾಡುತ್ತಿರುವ ತೀರ್ಮಾನಗಳು ಪಕ್ಷದೊಳಗೆ ಕಿಡಿ ಹೊತ್ತಿಸುತ್ತಿವೆ. ಕೋಲಾರ ಜಿಲ್ಲೆಯಲ್ಲಿ ಅದರಲ್ಲೂ ಚಿಕ್ಕಬಳ್ಳಾಪುರದಲ್ಲಿ ಬಾವುಟ ಕಟ್ಟಲು ಪಕ್ಷಕ್ಕೆ ಜನರಿಲ್ಲದ ಕಾಲದಲ್ಲಿ ಧೈರ್ಯ ಮಾಡಿ ಬಿಜೆಪಿಗೆ ಬಂದು ಪಕ್ಷವನ್ನು ಗೆಲ್ಲಿಸಿಕೊಂಡಿದ್ದ ಡಾ.ಕೆ.ಸುಧಾಕರ್ ಅವರು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದರೂ ಲೋಕಸಭಾ ಚುನಾವಣೆಯಲ್ಲಿ ಗೆದ್ದು ಬಂದಿದ್ದರು.
ಇದುವರೆಗೆ ತಮ್ಮ ಪಾಡಿಗೆ ತಾವು ಎಂಬಂತಿದ್ದ ಸುಧಾಕರ್ ಇದೀಗ ವಿಜಯೇಂದ್ರ ವಿರುದ್ಧ ತಿರುಗಿ ಬಿದ್ದಿದ್ದಾರೆ. ಜಿಲ್ಲಾಧ್ಯಕ್ಷರ ಆಯ್ಕೆ ವೇಳೆ ತಮ್ಮನ್ನು ಒಂದೇ ಒಂದು ಮಾತು ಕೇಳದೆ ತಮ್ಮದೇ ವಿರುದ್ಧ ಕೆಲಸ ಮಾಡಿದವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಿರುವುದಕ್ಕೆ ಬಹಿರಂಗ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅತ್ತ ದಾವಣಗೆರೆಯಲ್ಲಿಯೂ ಇಂತಹದ್ದೇ ಪರಿಸ್ಥಿತಿ ನಿರ್ಮಾಣವಾಗಿದೆ. ವಿಜಯೇಂದ್ರರ ವಿರುದ್ಧ ಪಕ್ಷದೊಳಗೆ ಆಕ್ರೋಶಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಇದರ ಪರಿಣಾಮ ಒಂದೇ ಮನೆ ಹತ್ತು ಬಾಗಿಲು ಎನ್ನುವಂತಾಗಿದೆ.
ಪಕ್ಷದಲ್ಲಿ ಮರೀಚಿಕೆಯಾದ ಒಗ್ಗಟ್ಟು
ಬಿಜೆಪಿಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಿಸಿದರೆ ಬಿ.ವೈ.ವಿಜಯೇಂದ್ರ ಅವರು ರಾಜ್ಯಾಧ್ಯಕ್ಷರಾಗಿ ಇರುವ ತನಕ ಪಕ್ಷದಲ್ಲಿನ ಗೊಂದಲಗಳು ಬಗೆಹರಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಭಿನ್ನಮತೀಯ ನಾಯಕರ ಪ್ರಮುಖ ಬೇಡಿಕೆ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಇಳಿಸುವುದೇ ಆಗಿರುವುದರಿಂದ ಅದು ಈಡೇರುವ ತನಕ ಅವರು ಸಮ್ಮನಿರುವುದಿಲ್ಲ. ಒಂದು ವೇಳೆ ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಿದ ತಕ್ಷಣ ಎಲ್ಲವೂ ಸರಿ ಹೋಗುತ್ತಾ? ಖಂಡಿತಾ ಇಲ್ಲ... ಇದೆಲ್ಲವನ್ನು ಗಮನಿಸಿದರೆ ಏನೇ ತಿಪ್ಪರಲಾಗ ಹಾಕಿದರೂ ರಾಜ್ಯ ಬಿಜೆಪಿ ಒಗ್ಗಟ್ಟು ತರುವುದು ಕಷ್ಟವೇ.











Click it and Unblock the Notifications