ವಿಧಾನಮಂಡಲದ ಜಂಟಿ ಅಧಿವೇಶನ ಫೆಬ್ರವರಿ 2 ರಿಂದ
ಬೆಂಗಳೂರು, ಜ.15: ರಾಜ್ಯ ವಿಧಾನಮಂಡಲದ ಜಂಟಿ ಅಧಿವೇಶನ ಫೆ. 2ರಿಂದ ಆರಂಭವಾಗಲಿದೆ. ಒಟ್ಟು 10 ದಿನಗಳ ಕಾಲ ಅಧಿವೇಶನ ನಡೆಯಲಿದ್ದು ವಿವಿಧ ವಿಷಯಗಳು ಚರ್ಚೆಗೆ ಬರಲಿವೆ.
ರಾಜ್ಯ ಸಂಪುಟ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಂಡು ಪ್ರಸ್ತಾವನೆಯನ್ನು ರಾಜ್ಯಪಾಲರ ಒಪ್ಪಿಗೆಗೆ ಕಳುಹಿಸಲಾಗುತ್ತದೆ. ರಾಜ್ಯ ವಿಧಾನಮಂಡಲದ ಉಭಯ ಸದನಗಳ ಸದಸ್ಯರನ್ನುದ್ದೇಶಿಸಿ ವಜುಭಾಯಿ ರೂಡಾಭಾಯಿ ವಾಲಾ ಭಾಷಣ ಮಾಡಲಿದ್ದಾರೆ. ರಾಜ್ಯಪಾಲರಾಗಿ ವಾಲಾ ಆಗಮಿಸಿದ ನಂತರ ಇದೇ ಮೊದಲ ಬಾರಿಗೆ ಜಂಟಿ ಅಧಿವೇಶನ ಉದ್ದೇಶಿಸಿ ಮಾತನಾಡಲಿದ್ದಾರೆ.[ಕಡತಯಜ್ಞ, ಭಾನುವಾರವೂ ನೌಕರರ ಕೆಲಸ]

ವಿಧಾನಸೌಧದಲ್ಲಿ ನವೀಕರಣ ಕಾರ್ಯ ನಡೆಯುತ್ತಿದ್ದು ಜನವರಿ 25ರೊಳಗೆ ಪೂರ್ಣಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಜನವರಿಯಲ್ಲೇ ನಡೆಸಬೇಕಾಗಿದ್ದ ಜಂಟಿ ಅಧಿವೇಶನವನ್ನು ಫೆಬ್ರವರಿಗೆ ಮುಂದೂಡಲಾಗಿತ್ತು. ಫೆ. 2 ರಂದು ವಿಧಾನಸಭೆ ಸಭಾಂಗಣದಲ್ಲಿ ಉಭಯ ಸದನಗಳನ್ನುದ್ದೇಶಿಸಿ ರಾಜ್ಯಪಾಲರು ಭಾಷಣ ಮಾಡಲಿದ್ದಾರೆ.
ಸರ್ಕಾರದ ನಿಲುವು ಹಾಗೂ ಮುಂದಿನ ಒಂದು ವರ್ಷದ ಅವಧಿಯಲ್ಲಿ ಕೈಗೊಳ್ಳಲಿರುವ ಯೋಜನೆ ಹಾಗೂ ಕಾರ್ಯಕ್ರಮಗಳ ರೂಪುರೇಷೆ ಕುರಿತು ರಾಜ್ಯಪಾಲರು ಭಾಷಣ ಮಾಡುವರು.[ಇನ್ಮುಂದೆ 'ಘನವೆತ್ತ' ರಾಜ್ಯಪಾಲರು ಅನ್ನೋ ಹಾಗಿಲ್ಲ]
ಜಂಟಿ ಅಧಿವೇಶನದ ವೇಳೆ ಕಬ್ಬು ಬೆಳೆಗಾರರ ಬಾಕಿ ಹಣ, ಸಿಇಟಿ ಕಾಯ್ದೆ ಗೊಂದಲ, ಕೇಂದ್ರ ಸರ್ಕಾರದ ಭೂ ಸ್ವಾಧೀನ ಕಾಯ್ದೆ, ವಿದ್ಯುತ್ ಅಭಾವ ಮತ್ತಿತರ ಸಮಸ್ಯೆಗಳ ಬಗ್ಗೆ ಬಗ್ಗೆ ಚರ್ಚೆ ನಡೆಯಲಿದೆ. ಫೆ. 2ರಂದು ಆರಂಭವಾಗುವ ಅಧಿವೇಶನ ರಜಾ ದಿನಗಳನ್ನು ಹೊರತುಪಡಿಸಿ 10 ದಿನಗಳ ಕಾಲ ನಡೆಯಲಿದ್ದು ಫೆ. 13ರಂದು ಮುಕ್ತಾಯವಾಗಲಿದೆ.












Click it and Unblock the Notifications