ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಜ.10ರಿಂದ ರಾಜ್ಯ ಅಂಗನವಾಡಿ ನೌಕರರ ಮುಷ್ಕರ
ಕೋಲಾರ ಡಿಸೆಂಬರ್ 22: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜನವರಿ 10ರಿಂದ ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡುವ ಮೂಲಕ ಅನಿರ್ಧಿಷ್ಟಾವಧಿ ಧರಣಿಯನ್ನು ಬೆಂಗಳೂರಿನಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ಅಂಗನವಾಡಿ ಕೇಂದ್ರಗಳಿಗೆ ರಾಷ್ಟ್ರೀಯ ಹೊಸ ಶಿಕ್ಷಣ ನೀತಿ ಜಾರಿಯ ಅಪಾಯಗಳು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಜನವರಿ 10ರಂದು ಅಂಗನವಾಡಿ ಕೇಂದ್ರಗಳನ್ನು ಬಂದ್ ಮಾಡಲಾಗುತ್ತಿದೆ ಎಂದು ರಾಜ್ಯ ಅಂಗನವಾಡಿ ನೌಕರರ ಸಂಘದ ರಾಜ್ಯಾಧ್ಯಕ್ಷೆ ಎಸ್. ವರಲಕ್ಷ್ಮೀ ತಿಳಿಸಿದ್ದಾರೆ.
ಈ ಬಗ್ಗೆ ಪರ್ತಕರ್ತರ ಭವನದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ವರಲಕ್ಷ್ಮೀ, "ಸರ್ಕಾರದ ಇಲಾಖೆಗಳ ಎಲ್ಲಾ ಕೆಲಸಗಳಿಗೆ ನಾವು ಬೇಕಾಗಿದೆ. ಆದರೆ ಸರ್ಕಾರಕ್ಕೆ ನಮ್ಮ ಬೇಡಿಕೆಗಳು ಬೇಕಾಗಿಲ್ಲ. ಸರಕಾರ ಈಗಾಗಲೇ ಅಂಗನವಾಡಿ ನೌಕರರಿಗೆ ಸೌಲಭ್ಯಗಳನ್ನು ಒದಗಿಸಿಲ್ಲ. ಬಜೆಟ್ ನಲ್ಲಿ ನೀಡಬೇಕಾದ ಅನುದಾನವೂ ನೀಡಿಲ್ಲ. ಹೀಗಿದ್ದೂ ಎನ್‌ಇಪಿ ಜಾರಿಯಾದರೆ ಅಂಗನವಾಡಿ ಕೇಂದ್ರಗಳನ್ನು ಮುಚ್ಚಬೇಕಾಗುತ್ತದೆ" ಎಂದು ಹರಿಹಾಯ್ದಿದ್ದಾರೆ.
ಹೀಗಾಗಿ ನಮ್ಮ ಬೇಡಿಕೆಗಳ ಈಡೇರದ ಹೊರತು ತಾವು ಧರಣಿ ಕೈಬಿಡುವುದಿಲ್ಲ ಎಂದು ಅವರು ಸರ್ಕಾರಕ್ಕೆ ಎಚ್ಚರಿಸಿದ್ದಾರೆ. ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ ಆರು ಸೇವೆಗಳಿಗೆ ಮಾತ್ರ ಸೀಮಿತ ಮಾಡಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರ, ಶೂ ಸೇರಿದಂತೆ ಅಗತ್ಯವಿರುವ ವಿದ್ಯಾಭ್ಯಾಸದ ಪರಿಕರಗಳನ್ನು ಕೊಡಬೇಕು. ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ಅಂಗನವಾಡಿ ನೌಕರರ ವೇತನವನ್ನು ಹೆಚ್ಚಿಸಬೇಕು. ಕೊರೋನಾ ಸಂದರ್ಭದ ಕೆಲಸದ ಒತ್ತಡದಿಂದ ಮೃತರಾದವರಿಗೆ ಮರಣ ಪರಿಹಾರ 1 ಲಕ್ಷ ರೂ. ಕೊಡಬೇಕು. ಕೊರೋನಾವಾರಿಯರ್ಸ್ ಆಗಿ ಕೆಲಸ ಮಾಡಿ ಸೋಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು ಎಂಬ ಬೇಡಿಕೆ ಸೇರಿದಂತೆ 25 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗಳ ಈಡೇರಿಕೆಗಾಗಿ ಜನವರಿ 19ರಿಂದ ಅನಿರ್ದಿಷ್ಟಾವಧಿ ಮುಷ್ಕರ ಕೈಗೊಳ್ಳಲಾಗುವುದು ಎಂದಿದ್ದಾರೆ.

ರಾಜ್ಯ ಅಂಗನವಾಡಿ ನೌಕರರ ಸಂಘದ ಪ್ರಧಾನ ಕಾರ್ಯದರ್ಶಿ ಹೆಚ್.ಎಸ್.ಸುನಂದಾ ಮಾತನಾಡಿ, ''ಕೊರೊನಾ ಲಾಕ್‌ಡೌನ್ ಇದ್ದಂತಹ ಸಂದರ್ಭದಲ್ಲಿ ಕೇಂದ್ರ ಸರ್ಕಾರ ನೂತನ ಶಿಕ್ಷಣ ನೀತಿ 2020 (ಎನ್‌ಇಪಿ)ನ್ನು ತಂದಿದೆ. ರಾಜ್ಯದಲ್ಲಿ ಸಂಬಂಧಿಸಿದ ಸಂಘಟನೆಗಳ ಬಳಿ ಚರ್ಚಿಸದೇ ಟಾಸ್ಕ್ ಪರ್ಸ್ ಕಮಿಟಿಯನ್ನು ಎನ್‌ಇಪಿಯ ಜಾರಿಗಾಗಿ ನೇಮಕ ಮಾಡಿದೆ. ಎನ್‌ಇಪಿಯ ದಸ್ತಾವೇಜಿನಲ್ಲಿ ಆಶಯಗಳು ಬೆಟ್ಟದಷ್ಟಿವೆ. ಆದರೆ ಜಾರಿಯ ಸಂದರ್ಭದಲ್ಲಿ ಸಂಪೂರ್ಣವಾಗಿ ಖಾಸಗೀಕರಣ ಮತ್ತು ವಾಣಿಜ್ಯೀಕರಣವಾಗುವ ಅಂಶಗಳೇ ಹೆಚ್ಚಾಗಿವೆ. ಐಸಿಡಿಎಸ್ ಯೋಜನೆಗೆ ಸಂಬಂಧಿಸಿ 3 ರಿಂದ 6 ವರ್ಷ ಅಂದರೆ 36 ತಿಂಗಳ ಮಗುವಿನಿಂದ 5 ವರ್ಷ 10 ತಿಂಗಳ ಮಕ್ಕಳು ಅಂಗನವಾಡಿ ಕೇಂದ್ರಕ್ಕೆ ದಾಖಲಾಗುತ್ತಿದ್ದರು. ಶಿಕ್ಷಣ ಇಲಾಖೆ ಸರ್ಕಾರಿ ಶಾಲೆಗಳಲ್ಲಿ ಅನಿಯಮಿತವಾಗಿ ಎಲ್.ಕೆ.ಜಿ - ಯು.ಕೆ.ಜಿ.ಗಳನ್ನು ತೆರೆದಿದ್ದರಿಂದ ಅಂಗನವಾಡಿ ಮಕ್ಕಳನ್ನು ಅಲ್ಲಿ ದಾಖಲು ಮಾಡಿ ಅಂಗನವಾಡಿ ಕೇಂದ್ರಕ್ಕೆ ಈಗಾಗಲೇ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದೆ. 5 ವರ್ಷ ತುಂಬುವುದಕ್ಕೆ ಮೊದಲು ಎನ್‌ಇಪಿಯ ಪ್ರಕಾರ 5 ವರ್ಷದ ಮಕ್ಕಳಿಗೆ ಬಾಲವಾಟಿಕಾ ಎನ್ನುವ ಪ್ರತ್ಯೇಕ ವ್ಯವಸ್ಥೆ ಮಾಡಿದರೆ ಅಂಗನವಾಡಿಗಳಲ್ಲಿ ಕೇವಲ 3 ವರ್ಷದ ಮಕ್ಕಳು ಮಾತ್ರ ಇರುತ್ತಾರೆ. ಇದರಿಂದ ಅಂಗನವಾಡಿ ಕೇಂದ್ರಗಳು ನಿಧಾನಗತಿಯಲ್ಲಿ ಮಕ್ಕಳೇ ಇಲ್ಲದ ಪರಿಸ್ಥಿತಿ ಸಂಭವಿಸುತ್ತದೆ. ಇದರಿಂದಾಗಿ 1974 ಮಕ್ಕಳ ರಾಷ್ಟ್ರೀಯ ನೀತಿ, 1975ರ ಐಸಿಡಿಎಸ್ ಯೋಜನೆಯ ಉದ್ದೇಶ, 2002ರ ವಿಶ್ವ ಸಂಸ್ಥೆಯ ಪೋಷಣೆ 2013ರ ಮಕ್ಕಳ ರಾಷ್ಟ್ರೀಯ ನೀತಿ ಮತ್ತು ಗುರಿಗಳನ್ನು ಸಾಧಿಸಲು ಸಾಧ್ಯವಿಲ್ಲ,'' ಎಂದಿದ್ದಾರೆ.
ಅಂಗನವಾಡಿ ನೌಕರರನ್ನು ಐಸಿಡಿಎಸ್‌ನ 6 ಸೇವೆಗಳಿಗೆ ಮಾತ್ರ ಸೀಮಿತ ಮಾಡಬೇಕು. ಐಸಿಡಿಎಸ್ ಯೇತರ ಕೆಲಸಗಳನ್ನು ನಿರ್ಬಂಧಿಸಬೇಕು ಹಾಗೂ ಕಾರ್ಯಕರ್ತೆಯರನ್ನು ಶಿಕ್ಷಕಿ ಎಂದು ಗುರುತಿಸಬೇಕು. ಅಂಗನವಾಡಿ ನೌಕರರಿಗೆ ತರಬೇತಿ ನೀಡಿ ಇಸಿಸಿಇ ಮಾರ್ಗದರ್ಶನ ಪ್ರಕಾರ ಪೂರ್ವ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಬೇಕು. ಅಂಗನವಾಡಿ ಕೇಂದ್ರಕ್ಕೆ ಹೆಚ್ಚುವರಿ ಸಹಾಯಕಿಯನ್ನು ನೇಮಕ ಮಾಡಬೇಕು. ಅಂಗನವಾಡಿ ಕೇಂದ್ರಗಳಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ಅಂಗನವಾಡಿ ಕೇಂದ್ರಕ್ಕೆ ಬರುವ ಮಕ್ಕಳಿಗೆ ಸಮವಸ್ತ್ರ, ಶೂಗಳು ಅಗತ್ಯವಿರುವ ವಿದ್ಯಾಭ್ಯಾಸದ ಪರಿಕರಗಳನ್ನು ಕೊಡಬೇಕು. ಅಂಗನವಾಡಿ ನೌಕರರ ವೇತನವನ್ನು ಹೆಚ್ಚಿಸಬೇಕು. ಕೊರೋನಾ ವಾರಿಯರ್ಸ್ ಆಗಿ ಕೆಲಸ ಮಾಡಿ ಸೋಂಕಿತರಾಗಿ ನಿಧನರಾದ ಅಂಗನವಾಡಿ ನೌಕರರಿಗೆ ಕೂಡಲೇ 30 ಲಕ್ಷ ಪರಿಹಾರ ಬಿಡುಗಡೆ ಮಾಡಬೇಕು. ಕೊರೋನಾ ಸಂದರ್ಭದ ಕೆಲಸದ ಒತ್ತಡದಿಂದ ಮೃತರಾದವರಿಗೆ ಮರಣ ಪರಿಹಾರ 1 ಲಕ್ಷ ರೂ. ಕೊಡಬೇಕು ಎಂಬ ಬೇಡಿಕೆ ಸೇರಿದಂತೆ 25 ಕ್ಕೂ ಹೆಚ್ಚು ಬೇಡಿಕೆಗಳ ಈಡೇರಿಕೆಗಾಗಿ ಅನಿರ್ಧಿಷ್ಟಾವದಿ ಹೋರಾಟಕ್ಕೆ ಅಂಗನವಾಡಿ ನೌಕರರು ಸಿದ್ದರಾಗಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸಿಐಟಿಯು ಜಿಲ್ಲಾ ಗೌರವ ಅಧ್ಯಕ್ಷ ಗಾಂಧಿನಗರ ನಾರಾಯಣಸ್ವಾಮಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿಜಯಕೃಷ್ಣ, ಅಂಗನವಾಡಿ ನೌಕರರ ಸಂಘದ ಕಲ್ಪನಾ,ಲಕ್ಷ್ಮೀದೇವಮ್ಮ, ಸುಜಾತ ಇದ್ದರು.












Click it and Unblock the Notifications