SSLC Exam 2026: ಪರೀಕ್ಷೆಗಳಲ್ಲಿ ಶೇ.100ರಷ್ಟು ಗುರಿ ಸಾಧನೆಗೆ ನೀಲನಕ್ಷೆ ಜಾರಿ, ಮಕ್ಕಳಿಗೆ ಪ್ರಯೋಜನ ಹೇಗೆ?
ಬೆಂಗಳೂರು: ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ 2026 ಪರೀಕ್ಷೆಗಳಿಗೆ ವಿದ್ಯಾರ್ಥಿಗಳು ತಯಾರಿ ಆರಂಭಿಸಿದ್ದಾರೆ. ಕರ್ನಾಟಕ ಪರೀಕ್ಷಾ ಮತ್ತು ಮೌಲ್ಯಮಾಪನ ಮಂಡಳಿ (KSEAB) ಮುಂದಿನ ಮಾರ್ಚ್-ಏಪ್ರಿಲ್ ನಲ್ಲಿ ವಾರ್ಷಿಕ ಪರೀಕ್ಷೆ ನಡೆಸಲಿದೆ. 10ನೇ ತರಗತಿ ಎಲ್ಲ ಪರೀಕ್ಷೆಗಳಲ್ಲಿ ಶೇ.100ರಷ್ಟು ಫಲಿತಾಂಶದ ಗುರಿ ಸಾಧನೆಗೆ ಶಿಕ್ಷಣ ಇಲಾಖೆ ಮೊದಲ ಬಾರಿಗೆ ಹೊಸ ಪ್ಲಾನ್ ಮಾಡಿಕೊಂಡಿದೆ.
ಮಂಡಳಿಯು ಶಿಕ್ಷಕರು ಮತ್ತು 10 ನೇ ತರಗತಿ ವಿದ್ಯಾರ್ಥಿಗಳಿಗೆ ಉತ್ತಮ ಅಭ್ಯಾಸಗಳ ನೀಲನಕ್ಷೆ ರೂಪಿಸಿದೆ. ಇದು ವಿದ್ಯಾರ್ಥಿಗಳ ಕಾರ್ಯಕ್ಷಮತೆ ಹೆಚ್ಚಿಸಲು ನೀಲನಕ್ಷೆ ಜೊತೆಗೆ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ಕೈಗೊಳ್ಳಲು ನಿರ್ಧಾರ ಮಾಡಿದೆ. ಮಂಡಳಿಯು ಇತ್ತೀಚೆಗೆ ಎಸ್‌ಎಸ್‌ಎಲ್‌ಸಿ ಅರ್ಹತಾ ಅಂಕಗಳನ್ನು ಶೇ.35 ರಿಂದ ಶೇ.25ರಷ್ಟು ಇಳಿಸಿದ್ದಕ್ಕೆ ಸಾಕಷ್ಟು ಟೀಕೆ ಎದುರಿಸಿತ್ತು. ಹೊಸ ಕ್ರಮಗಳ ಮೂಲಕ ಕಳೆದ ವರ್ಷದ ಶೇ.73.4 ರಷ್ಟಾದ ಸಾಧನೆಗಿಂತಲೂ ಹೆಚ್ಚಿನ ಅಂಕಗಳ ಗಳಿಕೆಗೆ ಕಾರ್ಯಪ್ರವೃತ್ತವಾಗಿದೆ. ವಿದ್ಯಾರ್ಥಿಗಳಿಗೆ ಮತ್ತು ಮಕ್ಕಳಿಗೆ ಈ ನೀಲನಕ್ಷೆ ಹೇಗೆ ಸಹಾಯ ಮಾಡಲಿದೆ? ಎಂದು ಇಲ್ಲಿ ತಿಳಿಯೋಣ..

ನೀಲನಕ್ಷೆ ಪ್ರಯೋಜನ ಕುರಿತು ಮಾಹಿತಿ ನೀಡಿದ ತುಮಕೂರು ಜಿಲ್ಲೆಯ ಸರ್ಕಾರಿ ಪ್ರೌಢಶಾಲೆ ಶಿಕ್ಷಕ ಶಶಿಕುಮಾರ್ ಅವರು, 'ಈವರೆಗೆ ನೀಲನಕ್ಷೆಯನ್ನು ಅಂತಿಮ ಪರೀಕ್ಷೆಗಳಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸುವ ಶಿಕ್ಷಕರ ಜೊತೆಗೆ ಮಾತ್ರವೇ ಈ ನೀಲನಕ್ಷೆ ಹಂಚಿಕೊಳ್ಳಲಾಗುತ್ತಿತ್ತು. 2026ರಿಂದ ಅದನ್ನು ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳು ಮತ್ತು ಇತರ ಶಿಕ್ಷಕರಿಗೆ ನೀಡಲಾಗಿದೆ'. ಈ ಮೂಲಕ ಹೊಸ ಮೈಲಿಗಲ್ಲು ಸಾಧನೆಗೆ ಮಂಡಳಿ ಮುಂದಾಗಿದೆ.
ನೀಲನಕ್ಷೆಯ ಪ್ರಯೋಜನ
ಡಿಎಸ್‌ಇಆರ್‌ಟಿ ಅಧಿಕೃತ ವೆಬ್‌ಸೈಟ್‌ನಲ್ಲಿ ಈಗಾಗಲೇ ಮಾದರಿ ಪ್ರಶ್ನೆ ಪತ್ರಿಕೆಗಳು ಲಭ್ಯವಿವೆ. ಪರೀಕ್ಷೆಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ಯಾವ ಅಧ್ಯಾಯಗಳಿಗೆ ಹೆಚ್ಚು ಅಥವಾ ಯಾವುದಕ್ಕೆ ಕಡಿಮೆ ಆದ್ಯತೆ ನೀಡಬೇಕು ಎಂಬುದರ ಸ್ಪಷ್ಟತೆಯನ್ನು ನೀಲನಕ್ಷೆ ನೀಡಲಿದೆ. ಸರಾಸರಿಗಿಂತ ಕಡಿಮೆ ವಿದ್ಯಾರ್ಥಿಗಳು ಎಲ್ಲಾ ಅಧ್ಯಾಯಗಳನ್ನು ಅಧ್ಯಯನ ಮಾಡುವ ಬದಲು ನಿರ್ದಿಷ್ಟ ಅಧ್ಯಾಯಗಳ ಮೇಲೆ ಕೇಂದ್ರೀಕರಿಸಲು ಇದು ಸಹಾಯ ಮಾಡುತ್ತದೆ ಎಂದು ಅವರು ತಿಳಿಸಿದರು.
ರಾಜ್ಯದಾದ್ಯಂತ ಎಲ್ಲಾ ಶಾಲೆಗಳಲ್ಲಿ ಶಿಕ್ಷಕರು ಪಠ್ಯಕ್ರಮ ಬೋಧನೆ ಪೂರ್ಣಗೊಳಿಸಿದ್ದಾರೆ. ಪರಿಷ್ಕರಣಾ ತರಗತಿ ನಡೆಸಲು ನೀಲನಕ್ಷೆ ಬಳಸುತ್ತಿದ್ದಾರೆ. ಅತೀ ಮುಖ್ಯವಾಗಿರುವ ಅಧ್ಯಾಯಗಳ ಮೇಲೆ ಶಿಕ್ಷಕರು ಗಮನಹರಿಸಿದ್ದಾರೆ. ಇದರಿಂದ ಮಕ್ಕಳ ಪರೀಕ್ಷಾ ತಯಾರಿಕೆಗೂ ಸಹಾಯವಾಗುತ್ತದೆ. ಈ ಮೂಲಕ ಸದರಿ ವರ್ಷ ವಾರ್ಷಿಕ ಪರೀಕ್ಷೆಗಳಲ್ಲಿ ಹತ್ತನೇ ತರಗತಿಯಲ್ಲಿ ಶೇಕಡಾವಾರು ಪ್ರಮಾಣ ಹೆಚ್ಚಳದ ನಿರೀಕ್ಷೆ ಇದೆ ಎಂದರು.
ಮಾತ್ರವಲ್ಲದೇ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಕಾರ್ಯದರ್ಶಿ ರಶ್ಮಿ ಮಹೇಶ್ ಮತ್ತು ಆಯುಕ್ತ ವಿಕಾಸ್ ಕಿಶೋರ್ ಸೇರಿದಂತೆ ಅಧಿಕಾರಿಗಳು 10ನೇ ತರಗತಿ ಮಕ್ಕಳ ಕಲಿಕಾ ಸಾಮರ್ಥ್ಯ, ಮಟ್ಟ ಗುರುತಿಸಲು ವಿದ್ಯಾರ್ಥಿಗಳನ್ನು ಭೇಟಿ ಮಾಡುತ್ತಿದ್ದಾರೆ. ಶಾಲೆಗಳಿಗೆ ಭೇಟಿ ನೀಡಿ ಕೆಲ ಕಾಲ ಮಕ್ಕಳೊಂದಿಗೆ ಸಂವಹನ ನಡೆಸುತ್ತಿದ್ದಾರೆ.
ಇಲಾಖೆ ಕೋರಿದಂತೆ ನಾವು ವಿದ್ಯಾರ್ಥಿಗಳಿಗೆ ಪ್ರತ್ಯೇಕ ಟ್ರ್ಯಾಕರ್ ನಿರ್ವಹಣೆಗೆ ವ್ಯವಸ್ಥೆ ಮಾಡಿದ್ದೇವೆ. ಇದರಿಂದ ಮಕ್ಕಳ ಅಂಕಗಳ ಪರಿಷ್ಕರಣೆಗೆ, ಸುಧಾರಿಸಲು ಸಹಾಯವಾಗುತ್ತದೆ ಎಂದು ಸಿಡ್ಲಘಟ್ಟದ ಸರ್ಕಾರಿ ಪ್ರೌಢಶಾಲೆಯ ಗಣಿತ ಶಿಕ್ಷಕ ಶಿವಕುಮಾರ್ ಮಾಹಿತಿ ನೀಡಿದರು.
03 ಸುತ್ತಿನಲ್ಲಿ ಪೂರ್ವಸಿದ್ಧತಾ ಪರೀಕ್ಷೆಗಳು
ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ವಾರ್ಷಿಕ ಪರೀಕ್ಷೆಗೂ ಮುನ್ನ ಮೂರು ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ನಡೆಸಲಾಗುತ್ತಿದೆ. ಈ ಪದ್ಧತಿ ಕಳೆದ ವರ್ಷದಿಂದ ಜಾರಿಗೆ ಬಂದಿದೆ. ಹೀಗೆ ವಿವಿಧ ಪೂರ್ವ ಸಿದ್ಧತಾ ಪರೀಕ್ಷೆಗಳನ್ನು ವಿದ್ಯಾರ್ಥಿಗಳು ಎದುರಿಸಿದರೆ ಈ ಸರಣಿ ಪರೀಕ್ಷೆಗಳು ಅಂತಿಮ ಪರೀಕ್ಷೆಗಳಂತೆಯೇ ಇರುವುದರಿಂದ ವಿದ್ಯಾರ್ಥಿಗಳಲ್ಲಿನ ಭಯ ದೂರವಾಗುತ್ತದೆ. ಅಂತಿಮ ಪರೀಕ್ಷೆಗೆ ಮಾನಸಿಕವಾಗಿ ಮಕ್ಕಳು ಸಿದ್ಧವಾಗುತ್ತಾರೆ ಎಂದು ಸರ್ಕಾರಿ ಶಾಲೆಗಳ ಶಿಕ್ಷಕರು ಮಾಹಿತಿ ನೀಡಿದ್ದಾರೆ.












Click it and Unblock the Notifications