ಮಾಧ್ಯಮಕ್ಕೆ ಇನ್ನೆಂದೂ ಪ್ರತಿಕ್ರಿಯಿಸಲ್ಲ, ವೀರೇಂದ್ರ ಹೆಗ್ಗಡೆ
ಬೆಳ್ತಂಗಡಿ/ಬೆಂಗಳೂರು, ಅ 17: ನನ್ನ ಕುಟುಂಬದ ಮೇಲೆ ಮತ್ತು ಧರ್ಮಸ್ಥಳ ಕ್ಷೇತ್ರದ ಮೇಲಿನ ಟೀಕೆಯಿಂದ ಬಹಳಷ್ಟು ನೊಂದಿದ್ದೇನೆ. ಸೌಜನ್ಯ ಕೊಲೆ ಪ್ರಕರಣದ ಸಂಬಂಧ ಇನ್ನೆಂದೂ ನಾನೂ ಮಾಧ್ಯಮಕ್ಕೆ ಪ್ರತಿಕ್ರಿಯಿಸುವುದಿಲ್ಲ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಉಜಿರೆಯಲ್ಲಿನ ಶ್ರೀ ರತ್ನವರ್ಮ ಹೆಗ್ಗಡೆ ಕ್ರೀಡಾಂಗಣದಲ್ಲಿ ಹಿತರಕ್ಷಣಾ ವೇದಿಕೆ ಬುಧವಾರ (ಅ 16) ಆಯೋಜಿಸಿದ್ದ ಬೃಹತ್ ಸಮಾವೇಶದಲ್ಲಿ ಮಾತನಾಡುತ್ತಿದ್ದ ಹೆಗ್ಗಡೆ, ಆತ್ಮಾಭಿಮಾನ ಮತ್ತು ಆತ್ಮಸಾಕ್ಷಿಯ ಕೊರತೆ ನನ್ನನ್ನು ಕಾಡುತ್ತಿಲ್ಲ. ಈ ಘಟನೆಯಿಂದ ವೈಯಕ್ತಿಕವಾಗಿ ನನಗೆ ನೋವಾಗಿದ್ದರೂ ಬಡವರ ಸೇವೆಯನ್ನು ಮತ್ತಷ್ಟು ಹುಮ್ಮಸ್ಸಿನಿಂದ ಮುಂದುವರಿಸಿ ಕೊಂಡು ಹೋಗುತ್ತೇನೆ ಎಂದು ಹೇಳಿದ್ದಾರೆ.
ಸೌಜನ್ಯ ಕೊಲೆ ಪ್ರಕರಣದ ತನಿಖೆ ವೇಗವಾಗಿ ನಡೆಯುತ್ತಿಲ್ಲ ಎನ್ನುವ ಆರೋಪಕ್ಕೆ ನಾನು ಹೇಗೆ ಪ್ರತಿಕ್ರಿಯಿಸುವುದು. ಅದು ರಾಜ್ಯ ಸರಕಾರ ಮತ್ತು ಪೊಲೀಸ್ ಇಲಾಖೆಗೆ ಸಂಬಂಧ ಪಟ್ಟ ವಿಚಾರ.
ಸತ್ಯಾಸತ್ಯತೆಯನ್ನು ಪರಿಶೀಲಿಸದೇ ಖಾಸಾಗಿ ವಾಹಿನಿಗಳು ಧರ್ಮಸ್ಥಳಕ್ಕೆ ಸಂಬಂಧ ಪಟ್ಟಂತೆ ದಿನವಿಡೀ ಕಾರ್ಯಕ್ರಮವನ್ನು ಪ್ರಸಾರ ಮಾಡಿದವು. ಕ್ಷೇತ್ರದ ಭಕ್ತಾದಿಗಳು ಮತ್ತು ಅಭಿಮಾನಿಗಳು ಸೇರಿರುವ ಈ ಸಮಾವೇಶದಲ್ಲಿ ನಾವು ಯಾವುದೇ ತನಿಖೆಗೆ ಸಿದ್ದ ಎಂದು ಮತ್ತೊಮ್ಮೆ ಹೇಳುತ್ತಿದ್ದೇನೆ. ಇನ್ನು ಮುಂದೆ ಈ ಘಟನೆಗೆ ಸಂಬಂಧಿಸಿದಂತೆ ನಾನು ಮಾಧ್ಯಮಗಳಿಗೆ ಪ್ರತಿಕ್ರಿಯಿಸುವುದಿಲ್ಲ ಎಂದು ವೀರೇಂದ್ರ ಹೆಗ್ಗಡೆ ಹೇಳಿದ್ದಾರೆ.
ಶ್ರೀಮಂತರು ನಮ್ಮಿಂದ ದೂರವಿದ್ದಾರೆ ಎನ್ನುವುದು ನಮ್ಮ ಭಾವನೆಯಾಗಿತ್ತು. ಈಗ ಬಡವರನ್ನೂ ದೂರಗೊಳಿಸುವ ಪ್ರಯತ್ನ ನಡೆದಿದೆ. ಧರ್ಮಸ್ಥಳದಲ್ಲಿ ಯಾವುದೇ ಭೂಮಾಫಿಯಾ ನಡೆದಿಲ್ಲ ಎಂದು ಹೆಗ್ಗಡೆ ಸ್ಪಷ್ಟ ಪಡಿಸಿದ್ದಾರೆ.
ಧರ್ಮಸ್ಥಳದ ಭಕ್ತಾದಿಗಳು ಮತ್ತು ಅಭಿಮಾನಿಗಳು ಸಮಾವೇಶಕ್ಕೆ ಬರಬೇಕೆಂದು ಕೇವಲ ಒಂದು ದಿನದ ಹಿಂದೆಯಷ್ಟೇ ಪ್ರಕಟಣೆ ಹೊರಡಿಸಲಾಗಿತ್ತು. ಸಾಗರೋಪಾದಿಯಲ್ಲಿ ಇದಕ್ಕೆ ಸ್ಪಂಧಿಸಿದ ಭಕ್ತರಿಂದ ಮತ್ತು ಅಭಿಮಾನಿಗಳಿಂದ ಕ್ರೀಡಾಂಗಣ ಕಿಕ್ಕಿರಿದು ತುಂಬಿತ್ತು.
ಸೌಜನ್ಯ ಪ್ರಕರಣ. ಪೇಜಾವರ ಶ್ರೀ, ಸಿ ಟಿ ರವಿ ಮತ್ತು ಸಚಿವ ಸೊರಕೆ ಹೇಳಿದ್ದೇನು? ಸ್ಲೈಡಿನಲ್ಲಿ..

ಬೆಂಗಳೂರಿನಲ್ಲಿ ಪ್ರತಿಭಟನೆ
ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ಷೇತ್ರದ ಮತ್ತು ಹೆಗ್ಗಡೆಯವರ ವಿರುದ್ದ ಅವಹೇಳನಾಕಾರಿ ಹೇಳಿಕೆ ನೀಡುವುದನ್ನು ಖಂಡಿಸಿ ಬುಧವಾರ (ಅ 16) ನಗರದಲ್ಲಿ ಪ್ರತಿಭಟನೆ ನಡೆದಿದೆ. ಆನಂದರಾವ್ ವೃತ್ತದಿಂದ ಸ್ವಾತಂತ್ರ್ಯ ಉದ್ಯಾನವನದ ವರೆಗೆ ನೂರಾರು ಪ್ರತಿಭಟನೆಕಾರರು ಕೈಗೆ ಕಪ್ಪು ಪಟ್ಟಿ ಧರಿಸಿ ಮೇಣದ ಬತ್ತಿ ಹಿಡಿದುಕೊಂಡು ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಕಮಲಾ ಹಂಪನಾ, ಸಿ ಟಿ ರವಿ, ನಳಿನ್ ಕುಮಾರ್ ಕಟೀಲ್, ಸುರೇಶ್ ಕುಮಾರ್, ವಿ ಆರ್ ಸುದರ್ಶನ್, ಜಗ್ಗೇಶ್, ದೊಡ್ಡಣ್ಣ, ರಾಕ್ ಲೈನ್ ವೆಂಕಟೇಶ್, ಪಿಜಿಆರ್ ಸಿಂಧ್ಯಾ ಮುಂತಾದ ಪ್ರಮುಖರು ಭಾಗವಹಿಸಿದ್ದರು.

ಸಿ ಟಿ ರವಿ
ಬೆಂಗಳೂರಿನಲ್ಲಿ ನಡೆದ ಪ್ರತಿಭಟನೆಯಲ್ಲಿ ಮಾತನಾಡುತ್ತಿದ್ದ ಶಾಸಕ ಸಿ ಟಿ ರವಿ, ನಮ್ಮ ಎಲ್ಲಾ ಇಷ್ಟಾರ್ಥ ಸಿದ್ದಿಗೆ ಧರ್ಮಸ್ಥಳ ಮಂಜುನಾಥನ ಮೊರೆ ಹೋಗುತ್ತೇವೆ. ಹೆಗ್ಗಡೆಯವರು ನಮಗೆ ದೇವರು ಇದ್ದ ಹಾಗೆ. ಅವರ ವಿರುದ್ದದ ಆರೋಪದ ಆಲೋಚನೆಯೇ ದೊಡ್ದ ಅಪರಾಧ. ಮಾಧ್ಯಮಗಳು ಮಹಾನ ವ್ಯಕ್ತಿಗಳ ಮತ್ತು ಕ್ಷೇತ್ರದ ತೇಜೋವಧೆ ಮಾಡುವುದನ್ನು ನಿಲ್ಲಿಸಲಿ.

ಹಿಂದೂ ಜಾಗರಣ ವೇದಿಕೆ
ಧರ್ಮಸ್ಥಳದ ರಾಜ್ಯದ ಅತ್ಯಂತ ಪ್ರಭಾವಿ ದೇವಾಲಯ. ಈ ಕ್ಷೇತ್ರ ಸಾಮಾಜಿಕ ಸಮಾನತೆ ಸಾರುತ್ತದೆ. ಪಟ್ಟಭದ್ರ ಹಿತಾಶಕ್ತಿಗಳು ಅನಾವಶ್ಯಕವಾಗಿ ಪೂಜ್ಯ ಹೆಗ್ಗಡೆಯವರನ್ನು ಎಳೆದು ತರುತ್ತಿದೆ. ಸಿಬಿಐ ತನಿಖೆ ನಡೆಸಿ ಎಂದು ಹೆಗ್ಗಡೆಯವರೇ ಹೇಳುತ್ತಿದ್ದಾರೆ. ಹೀಗಿದ್ದಾಗಲೂ ವಿರೋಧಿಗಳು ತಮ್ಮ ಕೆಟ್ಟ ಬುದ್ದಿಯನ್ನು ಮುಂದುವರಿಸಿ ಕೊಂಡು ಹೋದರೆ ಮುಂದಿನ ದಿನಗಳಲ್ಲಿ ಭಾರೀ ಪ್ರತಿಭಟನೆ ನಡೆಸಲಾಗುವುದು ಎಂದು ಹಿಂದೂ ಜಾಗರಣ ವೇದಿಕೆ ಎಚ್ಚರಿಸಿದೆ.

ಪೇಜಾವರ ಶ್ರೀ
ಶ್ರೀಕ್ಷೇತ್ರ ಮತ್ತು ಹೆಗ್ಗಡೆಯವರ ಮೇಲಿನ ಆರೋಪದಿಂದ ನಾನು ಮನನೊಂದಿದ್ದೇನೆ ಮತ್ತು ಇದನ್ನು ಖಂಡಿಸುತ್ತೇನೆ. ನಾಡಿನ ಧರ್ಮ ದೇಗುಲದ ಧರ್ಮಾಧಿಕಾರಿಯ ವಿರುದ್ದ ನಡೆಯುತ್ತಿರುವ ಆರೋಪದಿಂದಾಗಿ ನನಗೆ ವೈಯಕ್ತಿಕವಾಗಿ ನೋವಾಗಿದೆ. ಹೆಗ್ಗಡೆಯವರ ಸಮಾಜ ಸೇವೆ ಪ್ರಶಂಸನೀಯ, ಸೌಜನ್ಯ ಕುಟುಂಬದ ಮೇಲೆ ನಮಗೆ ಸಹಾನುಭೂತಿಯಿದೆ. ಪ್ರಕರಣದ ನಿಷ್ಪಕ್ಷಪಾತ ತನಿಖೆ ನಡೆಯಲಿ.

ವಿನಯ್ ಕುಮಾರ್ ಸೊರಕೆ
ದುಷ್ಕರ್ಮಿಗಳು ಕ್ಷೇತ್ರದ ವಿರುದ್ದ ಮಾತನಾಡುತ್ತಿದ್ದಾರೆ. ಸರಕಾರದ ಭಾಗವಾಗಿ ಮತ್ತು ಕ್ಷೇತ್ರದ ಭಕ್ತನಾಗಿ ನಾನು ಇದನ್ನು ಸಹಿಸುವುದಿಲ್ಲ. ಸಿಎಂ ಮತ್ತು ಗೃಹ ಮಂತ್ರಿಗಳ ಚರ್ಚಿಸಿ ಸತ್ಯಾಸತ್ಯತೆ ಹೊರತರುವ ಪ್ರಯತ್ನ ಮಾಡುತ್ತೇವೆ. ಆಳ್ವಾಸ್ ಸಂಸ್ಥೆಯ ಡಾ. ಮೋಹನ್ ಆಳ್ವ, ಸಚಿವರಾದ ಯು ಟಿ ಖಾದರ್, ಅಭಯಚಂದ್ರ ಜೈನ್, ಹೆಗ್ಗಡೆ ಸಹೋದರರಾದ ಹರ್ಷೇಂದ್ರ ಕುಮಾರ್ ಮತ್ತು ಸುರೇಂದ್ರ ಕುಮಾರ್ ಮುಂತಾದವರು ಸಮಾವೇಶದಲ್ಲಿ ಭಾಗವಹಿಸಿದ್ದರು.












Click it and Unblock the Notifications