Railway Revenue: ನೈಋತ್ಯ ರೈಲ್ವೆ ಆದಾಯ ಏರಿಕೆ: ಗೂಡ್ಸ್-ಪ್ರಯಾಣಿಕ ಸೇವೆಯ ಆದಾಯ ಮಾಹಿತಿ
ಹುಬ್ಬಳ್ಳಿ, ಮಾರ್ಚ್ 05: ಇತ್ತೀಚೆಗೆ ಭಾರತೀಯ ರೈಲ್ವೆಯ ಸರಕು ಸಾಗಾಣೆ ಹೆಚ್ಚಿಸಿಕೊಂಡು ಮಹತ್ವದ ಸಾಧನೆ ಮಾಡಿತ್ತು. ಇದೀಗ ಕರ್ನಾಟಕ ವ್ಯಾಪ್ತಿಯ ನೈಋತ್ಯ ರೈಲ್ವೆ ವಲಯ (South Western Railway)ದ ಆದಾಯ ಕಳೆದ ವರ್ಷಕ್ಕಿಂತ ಶೇಕಡಾ ಶೇಕಡಾ 11.09 ರಷ್ಟು ಹೆಚ್ಚಾಗಿದೆ.
ಮಂಗಳವಾರ ಈ ಕುರಿತು ಖುದ್ದು ಮಾಹಿತಿ ನೀಡಿರುವ ನೈಋತ್ಯ ರೈಲ್ವೆಯ ಪ್ರಧಾನ ವ್ಯವಸ್ಥಾಪಕ ಅರವಿಂದ ಶ್ರೀವಾಸ್ತವ ಅವರು, ನೈಋತ್ಯ ರೈಲ್ವೆ ವಲಯದ ಒಟ್ಟು ಆದಾಯ 2023ರ ಎಪ್ರಿಲ್‌ನಿಂದ 2024ರ ಫೆಬ್ರವರಿ ಅವಧಿಯಲ್ಲಿ ಒಟ್ಟು 6,970.18 ಕೋಟಿ ರೂಪಾಯಿ ಆದಾಯ ಗಳಿಸಿದೆ.

ಸದ್ಯದ ನೈಋತ್ಯ ರೈಲ್ವೆಯ ಗಳಿಸಿದ ಆದಾಯವು ಕಳೆದ ವರ್ಷಕ್ಕಿಂತ ಶೇ. 11.09 ರಷ್ಟು ಅಧಿಕವಾಗಿದೆ. ಇದೇ ಅವಧಿಯಲ್ಲಿ ಕಳೆದ ವರ್ಷ 6,274.16 ರೂಪಾಯಿ ಆದಾಯ ಸಂಗ್ರವಾಗಿತ್ತು ಎಂದರು.
ಪ್ರಯಾಣಿಕ ಸೇವೆ ಆದಾಯವು ಏರಿಕೆ
ನೈಋತ್ಯ ರೈಲ್ವೆಯ ಮೂಲ ಪ್ರಯಾಣಿಕರ ಆದಾಯವು 2023ರ ಏಪ್ರಿಲ್ ನಿಂದ 2024ರ ಫೆಬ್ರವರಿವರೆಗೆ 2,837.87 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ 2,514.44 ಕೋಟಿ ರೂ.ಗಳಿತ್ತು. ಈ ಆದಾಯ ಶೇ.12.86 ರಷ್ಟು ಹೆಚ್ಚಳವಾಗಿದೆ.
ಕೇವಲ ಪ್ರಯಾಣಿಕರು ಮಾತ್ರವಲ್ಲದೇ, ಸರಕು ಸಾಗಣಿಕೆಯಲ್ಲೂ ಸಹ ನೈಋತ್ಯ ರೈಲ್ವೆಯ ಆದಾಯವು ಗಮನಾರ್ಹ ಬೆಳವಣಿಗೆ ಹೊಂದಿದೆ. ಈ ಫೆಬ್ರವರಿ ವರೆಗೆ 4,590.52 ಕೋಟಿ ರೂಪಾಯಿ ತಲುಪಿದೆ. ಹಿಂದಿನ ವರ್ಷದ 4,167.88 ಕೋಟಿ ರೂ.ಗಳಿಗೆ ಹೋಲಿಸಿದರೆ ಶೇಕಡಾ 10.14 ರಷ್ಟು ಗಮನಾರ್ಹ ಹೆಚ್ಚಳ ಕಂಡಿದೆ.

ಸರಕು ಸಾಗಾಣೆಯಲ್ಲಿ ಪ್ರಗತಿ
ಸರಕು ಸಾಗಣಿಯು ಈ ಫೆಬ್ರವರಿವರೆಗೆ 45.32 ಮಿಲಿಯನ್ ಟನ್ ಆಗಿದ್ದು, ಕಳೆದ ವರ್ಷದ ಇದೇ ಅವಧಿಯಲ್ಲಿ 41.73 ಮಿಲಿಯನ್ ಟನ್ ಗೆ ಹೋಲಿಸಿದರೆ ಶೇಕಡಾ 8.60ರಷ್ಟು ಗಣನೀಯ ಹೆಚ್ಚಾಗಿದ್ದನ್ನು ಅಧಿಕಾರಿಗಳು ಖಚಿತ ಪಡಿಸಿದ್ದಾರೆ.
ಬಂಡವಾಳ ವೆಚ್ಚ (ಕ್ಯಾಪೆಕ್ಸ್) ಗಮನಾರ್ಹ ಏರಿಕೆ ಕಂಡಿದ್ದು, ಇದೇ ಫೆಬ್ರವರಿವರೆಗೆ 6,462.40 ಕೋಟಿ ರೂಪಾಯಿ ತಲುಪಿದೆ. ಇದು ಹಿಂದಿನ ವರ್ಷದ 4,075.65 ಕೋಟಿ ರೂಪಾಯಿ ಗಳಿಂದ ಶೇಕಡಾ 58.56ರಷ್ಟು ಗಮನಾರ್ಹವಾಗಿ ಹೆಚ್ಚಳ ಕಂಡಿದೆ.
ಈ ಸಾಧನೆಗೆ ಕಾರಣಗಳೇನು?
ಮೂರು ವಿಭಾಗಗಳ ವ್ಯಾಪಾರ ಅಭಿವೃದ್ಧಿ ಘಟಕಗಳ ವ್ಯಾಪಕ ಮಾರುಕಟ್ಟೆ ಉಪಕ್ರಮಗಳಿಂದಾಗಿ ಸರಕು ಸಾಗಣಿಯಲ್ಲಿ ಬೆಳವಣಿಗೆ ಸಾಧ್ಯವಾಗಿದೆ. ಸಂಪನ್ಮೂಲ ವಿಶ್ವಾಸಾರ್ಹತೆಯನ್ನು ಹೆಚ್ಚಿಸುವ ಮೂಲಕ ವ್ಯಾಗನ್‌ಗಳ ಸಮಯೋಚಿತ ಪೂರೈಕೆಯನ್ನು ಸಕ್ರಿಯಗೊಳಿಸುವಲ್ಲಿ ಮತ್ತು ನಿರ್ವಹಣಾ ಸಿಬ್ಬಂದಿಯ ಅಪಾರ ಪ್ರಯತ್ನದಿಂದಾಗಿ ಸರಕು ಸಾಗಣಿಯ ಬೆಳವಣಿಗೆಯಲ್ಲಿ ಸಾಧ್ಯವಾಗಿದೆ.
ನೈಋತ್ಯ ರೈಲ್ವೆ ಮಾರ್ಗಗಳ ದ್ವಿಪಥಗೊಳಿಸಲಾಗಿದೆ. ಅಲ್ಲದೇ ನೈಋತ್ಯ ರೈಲ್ವೆ ವ್ಯಾಪ್ತಿಯಲ್ಲಿ ಶೇಕಡಾ 85ರಷ್ಟು ವಿದ್ಯುದ್ದೀಕರಣ ಮಾಡಲಾಗಿದ್ದು, ಬಾಕಿ ಕೆಲಸ ಪ್ರಗತಿಯಲ್ಲಿದೆ. ಇದೆಲ್ಲವು ಸಹ ಸರಕು ರೈಲುಗಳ ಸಾಗಣೆ ಅವಧಿಯನ್ನು ತಗ್ಗಿಸಿದೆ. ಜತೆಗೆ ಚಲನಶೀಲತೆ ಮತ್ತು ವಿಶ್ವಾಸಾರ್ಹತೆಗೆ ಕಾರಣವಾಗಿದೆ ಎಂದು ಅರವಿಂದ ಶ್ರೀವಾಸ್ತವ ಅವರು ವಿವರಿಸಿದರು.












Click it and Unblock the Notifications