ನನ್ನ ಗಮನಕ್ಕೆ ಬಾರದೆ RSS ಬಗ್ಗೆ ಮಾತನಾಡಿದ್ದೇನೆ : ಪ್ರಜ್ವಲ್ ರೇವಣ್ಣ
ಹಾಸನ, ಏಪ್ರಿಲ್ 07: ನನ್ನ ಗಮನಕ್ಕೆ ಬಾರದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ. ನಾನೊಬ್ಬ ಯುವಕನಾಗಿ ಹೋರಾಟದ ಮೂಲಕ ಮಾತನಾಡುತ್ತಿದ್ದೆ. ಆದರೆ, ಇವತ್ತು ಅರಿವಾಗಿದೆ, ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ ಎಂದು ಪ್ರಜ್ವಲ್ ರೇವಣ್ಣ ಹೇಳಿದರು.
ಹಾಸನ ಜಿಲ್ಲೆಯ ಸಕಲೇಶಪುರದಲ್ಲಿ ಜೆಡಿಎಸ್ ಮತ್ತು ಬಿಜೆಪಿ ಚುನಾವಣಾ ಪ್ರಚಾರ ಸಭೆಯಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ, ನೀವು ಕ್ಷಮಿಸುವುದಾದರೆ ಹೇಳುತ್ತಿದ್ದೇನೆ.ನನ್ನ ಗಮನಕ್ಕೆ ಬಾರದೆ ಆರ್‌ಎಸ್‌ಎಸ್ ಬಗ್ಗೆ ಮಾತನಾಡಿದ್ದೇನೆ, ನಾನು ಆರ್‌ಎಸ್‌ಎಸ್ ಬಗ್ಗೆ ತಿಳಿದುಕೊಳ್ಳದೆ ಮಾತನಾಡಿದ್ದೇನೆ. ಆರ್‌ಎಸ್‌ಎಸ್ ಮುಖಂಡರು ಹಾಗೂ ಕಾರ್ಯಕರ್ತರನ್ನ ಕ್ಷಮಿಸಿ ಅಂತ ಕೇಳುತ್ತೇನೆ, ನಾನು ಒಬ್ಬ ಯುವಕನಾಗಿ ಹೋರಾಟದ ಮೂಲಕ ಮಾತನಾಡುತ್ತಿದ್ದೆ. ಆದರೆ ಇವತ್ತು ಅರಿವಾಗಿದೆ, ಹಾಗಾಗಿ ನಿಮ್ಮೆಲ್ಲರ ಕ್ಷಮೆ ಕೇಳುತ್ತೇನೆ ಎಂದು ಹೇಳಿದರು.

ನಾನು ಆಯ್ಕೆಯಾದ ಸಂದರ್ಭದಲ್ಲಿ ಕೇವಲ 27 ವರ್ಷ ವಯಸ್ಸು, ಐದು ವರ್ಷ ಸಂಸದನಾಗಿ ಕೆಲಸ ಮಾಡಿದ್ದೇನೆ. ಐದು ವರ್ಷ ಮಾಡಿದ ಕೆಲಸ, ಪ್ರಗತಿ ಬಗ್ಗೆ ಯಾರು ಪ್ರಶ್ನೆ ಮಾಡಲ್ಲ. ಪ್ರಜ್ವಲ್‌ರೇವಣ್ಣ ಗೆದ್ದರೆ ಬಿಜೆಪಿ ಕಾರ್ಯಕರ್ತರನ್ನು ತೆಗೆದುಕೊಂಡು ಹೋಗುವ ಕೆಲಸ ಮಾಡ್ತಾನಾ ಎಂಬ ಪ್ರಶ್ನೆ ನಿಮ್ಮಲ್ಲಿದೆ. ನಮ್ಮ ರಾದಾ ಮೋಹನ್ ದಾಸ್ ಜಿ ಹೇಳಿದ್ದಾರೆ ನಮ್ಮದು ಕಾಂಟ್ರಾಕ್ಟ್ ಮದುವೆ ಅಲ್ಲ ಅಂತ. ಐವತ್ತು, ಅರವತ್ತು ವರ್ಷ ಕೊಂಡೊಯ್ಯುವ ಸಂಬಂಧ ಇದು ಎಂದರು.
ಜೆಡಿಎಸ್-ಬಿಜೆಪಿ ಪ್ರತಿಯೊಬ್ಬ ಕಾರ್ಯಕರ್ತರನ್ನು ಗೌರವಿಸಿ ಒಗ್ಗಟ್ಟಾಗಿ ತೆಗೆದುಕೊಂಡು ಹೋಗುವ ಕೆಲಸ ಮಾಡುತ್ತೇನೆ. ನಿಮ್ಮೆಲ್ಲರ ಆಶೀರ್ವಾದ ನನ್ನ ಮೇಲೆ ಇರಲಿ, ನಾನು ಐದು ವರ್ಷದಲ್ಲಿ ಸಣ್ಣಪುಟ್ಟ ತಪ್ಪುಗಳನ್ನು ಮಾಡಿದ್ದರೆ ಕ್ಷಮಿಸಿ. ಒಬ್ಬ ಯುವಕ ನಡೆಯುವಾಗ ಎಡವುತ್ತಾನೆ, ಈಗ ಎಡವಿರಬಹುದು, ಸಣ್ಣಪುಟ್ಟ ವಿಚಾರಗಳಲ್ಲಿ ಎಡವಿದ್ರೆ ತಪ್ಪು ತಿದ್ದಿಕೋ ಎಂದು ಸಂದೇಶ ಕೊಟ್ಟರೆ ಕೈ ಮುಗಿದು ನಮಸ್ಕಾರ ಮಾಡುತ್ತೇನೆ.
ದಯವಿಟ್ಟು ನನ್ನ ಮೇಲೆ ವಿಶ್ವಾಸವಿಡಿ. ತಪ್ಪುಗಳನ್ನು ಸರಿಮಾಡಿಕೊಂಡು ಯಾರಿಗೂ ಕೆಟ್ಟ ಹೆಸರು ಬಾರದೆ ಕೆಲಸ ಮಾಡುತ್ತೇನೆ, ಒಬ್ಬ ಸಂಸದನಾಗಿ ಅಲ್ಲ, ಒಬ್ಬ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. 400 ಸೀಟ್ ಗೆಲ್ಲಿಸುವ ಮೂಲಕ ಮತ್ತೊಮ್ಮೆ ನರೇಂದ್ರಮೋದಿ ಅವರು ಪ್ರಧಾನ ಮಂತ್ರಿಯಾಗಬೇಕು. ಅದರಲ್ಲಿ ನಾನೊಬ್ಬ ಇರಲು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡುತ್ತೇನೆ ಎಂದು ಹೇಳಿದರು.











Click it and Unblock the Notifications