Breaking: 4 ತಿಂಗಳ ಬಳಿಕ ಎಸ್‌ಎಂ ಕೃಷ್ಣ ಆಸ್ಪತ್ರೆಯಿಂದ ಡಿಸ್ಚಾರ್ಜ್
ಬೆಂಗಳೂರು, ಆಗಸ್ಟ್ 28: ಕರ್ನಾಟಕದ ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ ಎಸ್. ಎಂ. ಕೃಷ್ಣ ಆಸ್ಪತ್ರೆಯಿಂದ ಬುಧವಾರ ಡಿಸ್ಚಾರ್ಜ್ ಆದರು. ವೈದ್ಯರು ಅವರಿಗೆ ಪೂರ್ಣ ಪ್ರಮಾಣದ ವಿಶ್ರಾಂತಿಗೆ ಸಲಹೆ ಮಾಡಿದ್ದಾರೆ. ಏಪ್ರಿಲ್‌ನಲ್ಲಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಎಸ್. ಎಂ. ಕೃಷ್ಣಗೆ ತಜ್ಞ ವೈದ್ಯರ ತಂಡ ನಿರಂತರ ಚಿಕಿತ್ಸೆಯನ್ನು ನೀಡುತ್ತಿತ್ತು. ಹಲವಾರು ರಾಜಕೀಯ ನಾಯಕರು ಆಸ್ಪತ್ರೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು.
ಬುಧವಾರ ಸಂಜೆ ಮಣಿಪಾಲ್ ಆಸ್ಪತ್ರೆಯಿಂದ ಎಸ್. ಎಂ. ಕೃಷ್ಣ (92) ಡಿಸ್ಚಾರ್ಜ್ ಆದರು. ಏಪ್ರಿಲ್ 29ರಂದು ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಸಂಪೂರ್ಣ ಗುಣಮುಖಗೊಂಡ ಅವರನ್ನು ಡಿಸ್ಚಾರ್ಜ್ ಮಾಡಲಾಗಿದ್ದು, ವೈದ್ಯರು ವಿಶ್ರಾಂತಿಗೆ ಸೂಚನೆ ನೀಡಿದ್ದಾರೆ.

ಶ್ವಾಸಕೋಶ ಸೋಂಕಿನ ಕಾರಣಕ್ಕೆ ಎಸ್. ಎಂ. ಕೃಷ್ಣ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅವರ ಆರೋಗ್ಯ ಸುಧಾರಿಸಿದೆ. ವೈದ್ಯರ ಸಲಹೆಯಂತೆ ಡಿಸ್ಚಾರ್ಜ್ ಮಾಡಿಸಿ, ಮನೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಎಂಎಲ್‌ಸಿ ದಿನೇಶ್ ಗೂಳಿಗೌಡ ಹೇಳಿದ್ದಾರೆ. ಎರಡು ವಾರಗಳ ಕಾಲ ಯಾರೂ ಸಹ ಭೇಟಿಗೆ ಬರಬಾರದು ಎಂದು ಮನವಿ ಮಾಡಲಾಗಿದೆ.
ಯಾವುದೇ ಕಾರ್ಯಕ್ರಮಗಳಲ್ಲಿ ಎರಡು ವಾರಗಳ ಕಾಲ ಭಾಗವಹಿಸಬೇಡಿ. ಸಾರ್ವಜನಿಕ ಭೇಟಿಯನ್ನು ಮುಂದೂಡಿ ಎಂದು ವೈದ್ಯರು ಎಸ್. ಎಂ. ಕೃಷ್ಣಗೆ ಸಲಹೆ ಮಾಡಿದ್ದಾರೆ. ಬೆಂಗಳೂರು ನಗರದ ನಿವಾಸದಲ್ಲಿಯೇ ಎಸ್. ಎಂ. ಕೃಷ್ಣ ಸಂಪೂರ್ಣ ವಿಶ್ರಾಂತಿಯನ್ನು ಪಡೆಯಲಿದ್ದಾರೆ.
4 ತಿಂಗಳ ಕಾಲ ಚಿಕಿತ್ಸೆ ನೀಡಿದ ಮಣಿಪಾಲ ಆಸ್ಪತ್ರೆ ವೈದ್ಯರಿಗೆ ಎಸ್. ಎಂ. ಕೃಷ್ಣ ಕುಟುಂಬ ಧನ್ಯವಾದಗಳನ್ನು ಹೇಳಿದೆ. ವೈದ್ಯರ ಸಲಹೆಯಂತೆ ಅವರು ವಿಶ್ರಾಂತಿ ಪಡೆಯಲಿದ್ದು, ಎರಡು ವಾರಗಳ ಕಾಲ ಯಾರೂ ಸಹ ಭೇಟಿಗೆ ಆಗಮಿಸಬಾರದು. ಕುಟುಂಬದವರ ಮನವಿಗೆ ಸಹಕಾರ ನೀಡಬೇಕು ಎಂದು ಅಭಿಮಾನಿಗಳು, ಕಾರ್ಯಕರ್ತರಲ್ಲಿ ಮನವಿ ಮಾಡಲಾಗಿದೆ.
ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಎಸ್. ಎಂ. ಕೃಷ್ಣರನ್ನು ಮೊದಲು ವೈದೇಹಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲು ಮಾಡಲಾಗಿತ್ತು. ಬಳಿಕ ಶ್ವಾಸಕೋಶದ ಸೋಂಕು ಕಾಣಿಸಿಕೊಂಡ ಬಳಿಕ ಮಣಿಪಾಲ್ ಆಸ್ಪತ್ರೆಗೆ ಏಪ್ರಿಲ್ 29ರಂದು ದಾಖಲಿಸಲಾಯಿತು. ಡಾ. ಸತ್ಯನಾರಾಯಣ ಮೈಸೂರು, ಡಾ. ಸುನೀಲ್ ಕಾರಂತ್ ನೇತೃತ್ವದ ವೈದ್ಯರ ತಂಡ ಚಿಕಿತ್ಸೆಯನ್ನು ನೀಡಿದೆ.
ಶ್ವಾಸಕೋಶದ ಸೋಂಕಿನ ಕಾರಣಕ್ಕೆ ಎಸ್. ಎಂ. ಕೃಷ್ಣ ಅವರಿಗೆ ಉಸಿರಾಟದ ತೊಂದರೆ ಕಾಣಿಸಿಕೊಂಡಿತ್ತು. ಆಗ ಅವರನ್ನು ಐಸಿಯುಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿತ್ತು. ಈಗ ಅವರು ಸಂಪೂರ್ಣ ಗುಣಮುಖರಾಗಿದ್ದು, ವೈದ್ಯರ ಸಲಹೆಯಂತೆ ಡಿಸ್ಚಾರ್ಜ್ ಮಾಡಲಾಗಿದೆ.
ಮುಖ್ಯಮಂತ್ರಿ ಸಿದ್ದರಾಮಯ್ಯ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮಾಜಿ ಸಿಎಂ ಬಿ. ಎಸ್. ಯಡಿಯೂರಪ್ಪ ಸೇರಿದಂತೆ ಹಲವಾರು ಗಣ್ಯರು ಆಸ್ಪತ್ರೆಗೆ ಭೇಟಿ ನೀಡಿ ಎಸ್. ಎಂ. ಕೃಷ್ಣ ಆರೋಗ್ಯ ವಿಚಾರಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಕೆಲವು ದಿನಗಳ ಹಿಂದೆ ಎಸ್. ಎಂ. ಕೃಷ್ಣ ನಿಧನ ಹೊಂದಿದ್ದಾರೆ ಎಂಬ ಸುದ್ದಿ ಹರಿದಾಡಿತ್ತು. ಆಗ ಆಸ್ಪತ್ರೆ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿ, ಅವರ ಆರೋಗ್ಯ ಸ್ಥಿರವಾಗಿದೆ. ಚಿಕಿತ್ಸೆಗೆ ಸ್ಪಂದಿಸುತ್ತಿದ್ದಾರೆ ಎಂದು ಸ್ಪಷ್ಟನೆ ನೀಡಿತ್ತು.












Click it and Unblock the Notifications