ಬಾದಾಮಿ : ತಿಮ್ಮಣ್ಣನ ರಕ್ಷಣೆಗೆ ಬಿರುಸಿನ ಕಾರ್ಯಾಚರಣೆ

ಬಾಗಲಕೋಟೆ, ಆ.4 : ಭಾನುವಾರ ಮಧ್ಯಾಹ್ನ ಬಾದಾಮಿ ತಾಲೂಕಿನ ಸೂಳಿಕೇರಿ ಎಂಬಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದ ಆರು ವರ್ಷದ ಬಾಲಕ ತಿಮ್ಮಣ್ಣನನ್ನು ರಕ್ಷಿಸುವ ಕಾರ್ಯಾಚರಣೆ ಅವ್ಯಾಹತವಾಗಿ ಸಾಗಿದೆ. ಬಾವಿಯೊಳಗೆ ಸತತವಾಗಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. ಈ ಹರಸಾಹಸಕ್ಕೆ ಫಲ ಸಿಗಲಿ ಎನ್ನುವ ಹಾರೈಕೆ ನಮ್ಮದು. ಮಗು ಜೀವ ಉಳಿಸುವ ಪ್ರಯತ್ನದ ಕ್ಷಣ-ಕ್ಷಣದ ಮಾಹಿತಿ ಇಲ್ಲಿದೆ. ಕರ್ನಾಟಕದ ಎಲ್ಲಾ ಕನ್ನಡ ಟಿವಿ ಚಾನೆಲ್ ಮತ್ತು ಅಂರ್ತಜಾಲ ವಾಹಿನಿಗಳು ಈ ಸುದ್ದಿ ಬೆಳವಣಿಗೆಗಳನ್ನು ನಿರಂತರವಾಗಿ ಪ್ರಸಾರ ಮಾಡುತ್ತಿವೆ.

ಸಮಯ : 6.30 : ಕೊಳವೆ ಬಾವಿಯೊಳಗೆ ಕ್ಯಾಮರಾ ಇಳಿಸಿದಾಗ ಮಗುವಿನ ಮೇಲೆ ಮಣ್ಣು ಬಿದ್ದಿರುವುದು ತಿಳಿದುಬಂದಿದೆ. ರೋಬೋ ಇಳಿಸುವ ಕಾರ್ಯಾಚರಣೆ ವೇಳೆ ಮಣ್ಣು ಬಿದ್ದಿರಬಹುದು ಎಂದು ಶಂಕಿಸಲಾಗಿದೆ. ಆದರೆ, ಬಾಲಕನ ಕೈ ಕ್ಯಾಮರಾದಲ್ಲಿ ಸೆರೆಯಾಗಿದೆ. ಈಗ ಬಿದ್ದಿರುವ ಮಣ್ಣಿನ ನಡುವೆಯೇ ಹೇಗೆ ಕಾರ್ಯಾಚರಣೆ ಮಾಡಬೇಕು ಎಂದು ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ.

ಸಮುಯ 6.00 : ಬಾಲಕನನ್ನು ರಕ್ಷಿಸುವ ಕಾರ್ಯ ನಡೆಯುತ್ತಿದೆ. ತಿಮ್ಮಣ್ಣ ಬಿದ್ದಿರುವ ಕೊಳವೆ ಬಾವಿಗೆ ಸಮಾನಾಂತರವಾಗಿ ಈಗಾಗಲೇ 80 ಅಡಿ ಆಳದ ಗುಂಡಿ ತೋಡಲಾಗಿದ್ದು, ಕಾರ್ಯಾಚರಣೆ ಮುಂದುವರೆದಿದೆ.

ಸಮಯ 5.57 : ಕೊಳವೆ ಬಾವಿಯನ್ನು ಮುಚ್ಚದ ಸೂಳಿಕೇರಿ ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಓ) ಶೌಖತ್ ಅಲಿ ಅವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲು ಉತ್ತರ ವಲಯ ಐಜಿಪಿ ಭಾಸ್ಕರ್ ರಾವ್ ಆದೇಶ ನೀಡಿದ್ದಾರೆ.

ಸಮಯ 5.40 : ಕೊಳವೆ ಬಾವಿಗೆ ಬಿದ್ದ ಬಾಲಕನ ರಕ್ಷಣಾ ಕಾರ್ಯಕ್ಕೆ ಜನರು ಅಡ್ಡಿ ಉಂಟು ಮಾಡುತ್ತಿದ್ದರು. ಆದ್ದರಿಂದ ಲಘು ಲಾಠಿ ಪ್ರಹಾರ ನಡೆಸಿ ಸ್ಥಳದಲ್ಲಿದ್ದ ಜನರನ್ನು ಪೊಲೀಸರು ಚದುರಿಸಿದ್ದಾರೆ.

ಸಮಯ 5.17 : ಸಾಂಗ್ಲಿಯ ವಿಪತ್ತು ನಿರ್ವಹಣಾ ದಳ ತಿಮ್ಮಣ್ಣನ ಸ್ಥಿತಿ-ಗತಿ ಬಗ್ಗೆ ತಿಳಿದುಕೊಳ್ಳಲು ಬಾವಿಯೊಳಗೆ ಪುನಃ ಕ್ಯಾಮರಾ ಇಳಿಬಿಟ್ಟಿದ್ದಾರೆ. ಘಟನಾ ಸ್ಥಳದಲ್ಲಿ ತುಂತುರು ಮಳೆ ಆರಂಭವಾಗಿದೆ. ಮಧ್ಯಾಹ್ನವೂ ಒಮ್ಮೆ ಮಳೆ ಬಂದು ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು.

ಸಮಯ 4.45 : ತಿಮ್ಮಣ್ಣ ಕೊಳವೆ ಬಾವಿಗೆ ಬಿದ್ದು 26 ಗಂಟೆಗಳು ಕಳೆದಿವೆ. ಸ್ಥಳದಲ್ಲಿ ತಿಮ್ಮಣ್ಣ ತಂದೆ-ತಾಯಿ, ಅಜ್ಜಿ ಆತ ಬದುಕಿ ಬರಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತಾ, ಕಾದು ಕುಳಿತಿದ್ದಾರೆ.

ಸಮಯ 4.30 : ಗದಗದ ಇಟಗಿಯಿಂದ ಬಾಗಲಕೋಟೆಯ ಸೂಳಿಕೇರಿಯತ್ತ ಪ್ರಯಾಣ ಬೆಳೆಸಿದ ಸಿಎಂ ಸಿದ್ದರಾಮಯ್ಯ. ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಸಿಎಂ ಜೊತೆಗಿದ್ದಾರೆ.

ಸಮಯ 4.10 : ಕೊಳವೆ ಬಾವಿಯಲ್ಲಿ 148 ಅಡಿ ಆಳದಲ್ಲಿ ರೋಬೋ ಕಾರ್ಯಾಚರಣೆಗೆ ಅಡ್ಡಿಯಾಗಿರುವ ಕಲ್ಲನ್ನು ತೆಗೆಯುವ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಆರಂಭಿಸಿದೆ.

ಸಮಯ 3.35 : ಸೂಳಿಕೇರಿ ಕೊಳವೆ ಬಾವಿ ದುರಂತದ ಬಗ್ಗೆ ಪತ್ರಿಕಾಗೋಷ್ಠಿ ನಡೆಸಿರುವ ಉತ್ತರ ವಲಯ ಐಜಿಪಿ ಭಾಸ್ಕರ ರಾವ್, ದುರಂತಕ್ಕೆ ಬಾಲಕನ ತಂದೆ ಮಾತ್ರ ಹೊಣೆಯಲ್ಲ. ಬೋರ್ ವೆಲ್ ಕೊರೆದ ಕಂಪನಿಯೂ ಕಾರಣ. ಬೋರ್ ವೆಲ್ ವಿಫಲವಾದ ನಂತೆ ಮುಚ್ಚಿದ್ದರೆ, ಇಂತಹ ಘಟನೆ ನಡೆಯುತ್ತಿರಲಿಲ್ಲ ಎಂದು ಹೇಳಿದರು.

ಸಮಯ 3.15 : ಬಾಲಕ ತಿಮ್ಮಣ್ಣನ ರಕ್ಷಣಾ ಕಾರ್ಯಕ್ಕೆ ಬಂಡೆ ಅಡ್ಡ ಬಂದಿದೆ. ರೋಬೋಗೆ 148 ಅಡಿ ಆಳದಲ್ಲಿ ಬಂಡೆ ಸಿಕ್ಕಿದ್ದು ರೋಬೋ ಕೆಳಗಿಳಿಸಲು ಅಡ್ಡಿ ಉಂಟಾಗುತ್ತಿದೆ. 160 ಅಡಿ ಆಳದಲ್ಲಿ ಬಾಲಕ ಸಿಲುಕಿದ್ದು, ಮುಂದಿನ ಕಾರ್ಯಚರಣೆ ಬಗ್ಗೆ ಅಧಿಕಾರಿಗಳು ಸಮಾಲೋಚನೆ ನಡೆಸುತ್ತಿದ್ದಾರೆ.

ಸಮಯ 2.45 : ಬೋರ್ ವೆಲ್ ನಲ್ಲಿ ಸಿಲುಕಿರುವ ಬಾಲಕ ತಿಮ್ಮಣ್ಣ ಜೀವಂತವಾಗಿದ್ದಾನೆ. ಅವರ ರಕ್ಷಣೆಗಾಗಿ ವಿಶೇಷ ತಂಡವನ್ನು ಕಳುಹಿಸಿ ಕೊಡಲಾಗಿದೆ ಎಂದು ಮುಖ್ಯಮಮಂತ್ರಿ ಸಿದ್ದರಾಮಯ್ಯ ಗದಗ ಜಿಲ್ಲೆಯ ಇಟಗಿ ಗ್ರಾಮದಲ್ಲಿ ಹೇಳಿದ್ದಾರೆ.

ಸಮಯ 2.40 : ತಿಮ್ಮಣ್ಣ ಬೋರ್ ವೆಲ್ ಗೆ ಬಿದ್ದಿರುವ ಸ್ಥಳಕ್ಕೆ ಉತ್ತರ ವಲಯ ಐಜಿಪಿ ಭಾಸ್ಕರ ರಾವ್ ಭೇಟಿ ನೀಡಿ, ಪರಿಶೀಲನೆ ನಡೆಸುತ್ತಿದ್ದಾರೆ.

ಸಮಯ 2 ಗಂಟೆ : ತಿಮ್ಮಣ್ಣ ಬೋರ್ ವೆಲ್ ಗೆ ಬಿದ್ದ ಸ್ಥಳಕ್ಕೆ ಸಾವಿರಾರು ಜನರು ಆಗಮಿಸುತ್ತಿರುವುದರಿಂದ ಕಾರ್ಯಾಚರಣೆಗೆ ಅಡ್ಡಿ ಉಂಟಾಗಿದೆ. ಆದ್ದರಿಂದ ಸ್ಥಳೀಯರನ್ನು ದೂರ ಕಳಿಸಿ ಕಾರ್ಯಾಚರಣೆ ನಡೆಸಲಾಗುತ್ತಿದೆ. ಸ್ಥಳೀಯರನ್ನು ದೂರ ಕಳಿಸಿದ್ದರಿಂದ ಪೊಲೀಸರು ಮತ್ತು ಸ್ಥಳೀಯರ ನಡುವೆ ವಾಗ್ವಾದ ನಡೆಯಿತು.

ಸಮಯ 1 ಗಂಟೆ : ರಕ್ಷಣಾ ಕಾರ್ಯಾಚರಣೆಗೆ ತುಂತುರು ಮಳೆ ಅಡ್ಡಿ, ತಾತ್ಕಾಲಿಕ ಟೆಂಟ್ ನಿರ್ಮಿಸಿ ಕಾರ್ಯಾಚರಣೆ ಆರಂಭಿಸಲಿರುವ ರಕ್ಷಣಾ ತಂಡ

ಸಮಯ 12.30 : ರೋಬೋ ಮೂಲಕ ಬಾಲಕನನ್ನು ರಕ್ಷಿಸುವ ಕಾರ್ಯ ಪುನಃ ಆರಂಭಗೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಆದೇಶದ ಮೇರೆಗೆ ಹೈಟೆಕ್ ಆಂಬ್ಯುಲೆನ್ಸ್ ಅನ್ನು ಘಟನಾ ಸ್ಥಳಕ್ಕೆ ತರಿಸಲಾಗಿದೆ. ಅತ್ಯಾಧುನಿಕ ವೆಂಟಿಲೇಟರ್ ವ್ಯವಸ್ಥೆ ಇರುವ ಅಂಬ್ಯುಲೆನ್ಸ್ ಇದಾಗಿದೆ.

ಸಮಯ 12 ಗಂಟೆ : ರೋಬೋ ಕಾರ್ಯಾಚರಣೆ ನಿಲ್ಲಿಸಿರುವ ಕಾರಣ ಸಾಂಗ್ಲಿಯಿಂದ ಬಂದಿರುವ ವಿಪತ್ತು ನಿರ್ವಹಣಾ ತಂಡ ಬೋರ್ ವೆಲ್ ಪಕ್ಕದಲ್ಲಿ ಸುಂರಂ ತೋಡುವ ಕಾರ್ಯಾಚರಣೆಯನ್ನು ಆರಂಭಿಸಿದೆ.

ಸಮಯ 11.30 : ಮಂಜೇಗೌಡರು ತಂದಿರುವ ರೋಬೋ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.

ಸಮಯ 11 ಗಂಟೆ : ಕೊಳವೆ ಬಾವಿಗೆ ಬಿದ್ದ ಬಾಲಕ ತಿಮ್ಮಣ್ಣ ಬದುಕಿ ಬರಲಿ ಎಂದು ದಾವಣಗೆರೆಯ ಕೆ.ಬಿ. ಬಡಾವಣೆಯಲ್ಲಿ ಗುಳ್ಳಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಲಾಗುತ್ತಿದೆ. ಸೂಳಿಕೇರಿ ಗ್ರಾಮಸ್ಥರು ಸ್ಥಳೀಯ ದೇವಾಲಯಗಳಲ್ಲಿ ವಿಶೇಷ ಪೂಜೆ ಸಲ್ಲಿಸುತ್ತಿದ್ದಾರೆ.

Bagalkot

ಸಮಯ 10.45 : ಆಮ್ಲಜನಕ ಪೈಪ್ ಅಡ್ಡ ಬಂದ ಕಾರಣ ನಿಲ್ಲಿಸಲಾಗಿದ್ದ ರೋಬೋ ಕಾರ್ಯಾಚರಣೆಯನ್ನು ಪುನಃ ಆರಂಭಿಸಲಾಗಿದೆ. ಮಗುವಿನ ಬಳಿಗೆ ರೋಬೋ ತೆರಳಿದೆ.

ಸಮಯ 10 ಗಂಟೆ : ರೋಬೋ ಕಾರ್ಯಾಚರಣೆಗೆ ತಾಂತ್ರಿಕ ತೊಂದರೆ 120 ಅಡಿ ಆಳದಿಂದ ರೋಬೋ ಹೊರಕ್ಕೆ.

ಸಮಯ 9.30 : ಮಂಜೇಗೌಡರು ತಂದಿರುವ ರೋಬೋವನ್ನು ಕೊಳವೆ ಬಾವಿಯೊಳಗೆ ಇಳಿಸಲಾಗಿದೆ. ರೋಬೋ ಕಾರ್ಯಾಚರಣೆ ಆರಂಭವಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಆರ್.ಪಾಟೀಲ್ ಟ್ವಿಟ್ ಮಾಡಿದ್ದಾರೆ.

ಸಮಯ 8.30 : ತಿಮ್ಮಣ್ಣನನ್ನು ರಕ್ಷಿಸಲು ಮಂಜೇಗೌಡರ ರೋಬೋ ಯಂತ್ರದ ಕಾರ್ಯಾಚರಣೆ ಆರಂಭವಾಗಿದೆ. ಮೊದಲು ಬಾವಿಯೊಳಗೆ ಕ್ಯಾಮರಾ ಇಳಿಸಿ ತಿಮ್ಮಣ್ಣನ ಇರುವ ಸ್ಥಳದ ಬಗ್ಗೆ ನಿಖರ ಮಾಹಿತಿ ಪಡೆದು ನಂತರ ರೋಬೋ ಇಳಿಸಲು ತೀರ್ಮಾನಿಸಲಾಗಿದೆ. ಈ ಕಾರ್ಯಾಚರಣೆ ಸುಮಾರು ಒಂದೂವರೆ ಗಂಟೆಗಳ ಕಾಲ ನಡೆಯಬಹುದು ಎಂದು ಅಧಿಕಾರಿಗಳು ಹೇಳಿದ್ದಾರೆ.

ಸಮಯ 7.45 : ಮಂಡ್ಯದಿಂದ ರೈತ ಮತ್ತು ರೋಬೋಟ್ ತಜ್ಞ ಮಂಜೇಗೌಡ ಬಾಲಕನ ರಕ್ಷಣೆಗಾಗಿ ಬಾಗಲಕೋಟೆಗೆ ತೆರಳಿದ್ದಾರೆ. ರೋಬೋಟ್ ಕಾರ್ಯಾಚರಣೆಯನ್ನು ಆರಂಭಿಸಲಾಗಿದೆ. ಅತ್ತ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಮತ್ತು ಹಟ್ಟಿ ಚಿನ್ನದ ಗಣಿ ತಜ್ಞರ ತಂಡ ಬೋರ್ ವೆಲ್ ಪಕ್ಕದಲ್ಲಿ 50 ಅಡಿ ಗುಂಡಿ ತೆಗೆದು ಕಾರ್ಯಾಚರಣೆ ನಡೆಸುತ್ತಿವೆ.

Bore-well

ಘಟನೆ ನಡೆದದ್ದು ಹೇಗೆ : ಆರು ವರ್ಷದ ತಿಮ್ಮಣ್ಣ ಭಾನುವಾರ ಮಧ್ಯಾಹ್ನ ತಂದೆ ಹನುಮಂತ ಹಟ್ಟಿ ಆವರೊಂದಿಗೆ ತೋಟಕ್ಕೆ ತೆರಳಿದ್ದ ಸಂದರ್ಭದಲ್ಲಿ 15 ದಿನಗಳ ಹಿಂದೆ ಕೊರೆಸಿದ್ದ ಕೊಳವೆ ಬಾವಿಗೆ ಕಾಲು ಜಾರಿ ಬಿದ್ದಿದ್ದ. ಸುಮಾರು 160 ಅಡಿ ಆಳದಲ್ಲಿ ತಿಮ್ಮಣ್ಣ ಸಿಕ್ಕಿಹಾಕಿಕೊಂಡಿದ್ದು, ಭಾನುವಾರದಿಂದ ರಕ್ಷಣ ಕಾರ್ಯ ನಡೆಯುತ್ತಿದೆ, ಬಾಲಕನಿಗೆ ಸತತವಾಗಿ ಆಮ್ಲಜನಕ ಪೂರೈಕೆ ಮಾಡಲಾಗುತ್ತಿದೆ. [ಬಾದಾಮಿ: ಕೊಳವೆ ಬಾವಿಗೆ ಬಿದ್ದ ಬಾಲಕ]

ಬಿರುಸಿನಿಂದ ನಡೆಯುತ್ತಿದೆ ಕಾರ್ಯಾಚರಣೆ : ಅವಘಡ ನಡೆದ ಸ್ಥಳ ಬಾಗಲಕೋಟೆಯಿಂದ ಕೇವಲ 13 ಕಿ.ಮೀ ಇರುವುದರಿಂದ ರಕ್ಷಣಾ ಕಾರ್ಯಾಚರಣೆ ಬಿರುಸಿನಿಂದ ನಡೆಯುತ್ತಿದೆ. ವೈದ್ಯರ ತಂಡವೊಂದು ಸ್ಥಳದಲ್ಲಿದ್ದು, ಕೊಳವೆ ಬಾವಿವೊಳಗೆ ಸತತವಾಗಿ ಆಮ್ಲಜನಕ ಪೂರೈಕೆ ಮಾಡುತ್ತಿದೆ. ಸಾಂಗ್ಲಿ ಮತ್ತು ಪುಣೆಯ ವಿಪತ್ತು ನಿರ್ವಹಣಾ ತಂಡ, ಹಟ್ಟಿ ಚಿನ್ನದ ಗಣಿಯ ತಜ್ಞರ ತಂಡ ತಿಮ್ಮಣ್ಣನ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿವೆ. [ಬಾವಿ ಕೊರೆತ : ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು]

ರಾಜ್ಯದ ಕೊಳವೆ ಬಾವಿ ದುರಂತಗಳು

* 2014ರ ಜೂ.17 ವಿಜಾಪುರದಲ್ಲಿ ಅಕ್ಷತಾ (6) ಎಂಬ ಬಾಲಕಿ ಕೊಳವೆ ಬಾವಿಗೆ ಬಿದ್ದಿದ್ದಳು.
* 2009ರಲ್ಲಿ ವಿಜಾಪುರ ಜಿಲ್ಲೆಯ ಇಂಡಿ ತಾಲೂಕಿನಲ್ಲಿ ಕಾಂಚನಾ (9) ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದಳು.
* 2007ರಲ್ಲಿ ಬಾಗಲಕೋಟ ಜಿಲ್ಲೆಯ ಸಿಕ್ಕೇರಿಯಲ್ಲಿ 20 ವರ್ಷದ ಕಲ್ಲವ್ವ ಎಂಬ ಮಹಿಳೆ ಕೊಳವೆ ಬಾವಿಗೆ ಬಿದ್ದಿದ್ದಳು, ಬದುಕಿ ಬಂದಳು.
* 2007ರಲ್ಲಿ ಗುಲ್ಬರ್ಗ ಜಿಲ್ಲೆ ಅಳಂದ ತಾಲೂಕಿನಲ್ಲಿ ಐದು ವರ್ಷದ ಬಾಲಕ ನವನಾಥ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.
*2007ರಲ್ಲಿ ರಾಯಚೂರು ಜಿಲ್ಲೆಯಲ್ಲಿ ಸಂದೀಪ (9) ಎಂಬ ಬಾಲಕ ಕೊಳವೆ ಬಾವಿಗೆ ಬಲಿಯಾಗಿದ್ದ.
* 2000ದಲ್ಲಿ ದಾವಣಗೆರೆಯಲ್ಲಿ ಕರಿಯ ಎಂಬ ಬಾಲಕ ಕೊಳವೆ ಬಾವಿಗೆ ಬಿದ್ದು ಸಾವನ್ನಪ್ಪಿದ್ದ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+