ಶಾಸಕರ ಸಹಿ ಸಂಗ್ರಹ , ಬಲ ಪ್ರದರ್ಶನಕ್ಕೆ ಜೆಡಿಎಸ್, ಕಾಂಗ್ರೆಸ್ ಸಿದ್ಧತೆ
ಬೆಂಗಳೂರು, ಮೇ 16: ಮೈತ್ರಿ ಮಾಡಿಕೊಳ್ಳಲು ನಿರ್ಧರಿಸಿದ್ದರೂ ಜೆಡಿಎಸ್ ಮತ್ತು ಕಾಂಗ್ರೆಸಿಗೆ ಸರಕಾರ ರಚನೆ ಮಾಡುವಂತೆ ರಾಜ್ಯಪಾಲ ವಜೂಭಾಯಿ ವಾಲಾ ಕರೆ ನೀಡಿಲ್ಲ. ಹೀಗಾಗಿ ಬಲ ಪ್ರದರ್ಶನಕ್ಕೆ ಎರಡೂ ಪಕ್ಷಗಳು ಮುಂದಾಗಿವೆ.
ಇಂದು ಸಂಜೆ ರಾಜ್ಯಪಾಲರನ್ನು ಭೇಟಿಯಾಗಲು ಜೆಡಿಎಸ್ ಮತ್ತು ಕಾಂಗ್ರೆಸ್ ಪಕ್ಷದ ನಾಯಕರಾದ ಎಚ್. ಡಿ. ಕುಮಾರಸ್ವಾಮಿ ಮತ್ತು ಡಾ. ಜಿ. ಪರಮೇಶ್ವರ್ ತಾವು ಹೊಂದಿರುವ ಸಂಖ್ಯಾ ಬಲವನ್ನು ರಾಜ್ಯಪಾಲರ ಮುಂದಿಡಲಿದ್ದಾರೆ. ಇದಕ್ಕಾಗಿ ಎಲ್ಲಾ ಶಾಸಕರ ಸಹಿ ಸಂಗ್ರಹವನ್ನು ಆರಂಭಿಸಿದ್ದು, ಹೆಚ್ಚಿನ ಎಲ್ಲಾ ಶಾಸಕರ ಸಹಿ ಸಂಗ್ರಹಿಸಲಾಗಿದೆ.

ಇವೆಲ್ಲದರ ನಡುವೆ ನಾಳೆ ಮಧ್ಯಾಹ್ನ 12.20ಕ್ಕೆ ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂಬ ಸುದ್ದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಪಾಳಯದಲ್ಲಿ ಬಿರುಸಿನ ಚಟುವಟಿಕೆಗಳು ನಡೆಯುತ್ತಿದ್ದು, ರಾಜ್ಯಪಾಲರಿಂದ ಆಹ್ವಾನ ಪಡೆಯಲು ಕಸರತ್ತುಗಳನ್ನು ಮಾಡಲಾಗುತ್ತಿದೆ.

ಒಂದೊಮ್ಮೆ ಶಾಸಕರ ಸಹಿ ಸಂಗ್ರಹವನ್ನೂ ರಾಜ್ಯಪಾಲರ ಮುಂದಿಟ್ಟಾಗಲೂ ಸರಕಾರ ರಚನೆಗೆ ಆಹ್ವಾನಿಸದೇ ಹೋದರೆ ಸುಪ್ರೀಂ ಕೋರ್ಟ್ ಮೊರೆ ಹೋಗಲೂ ಕಾಂಗ್ರೆಸ್ ಚಿಂತನೆ ನಡೆಸಿದೆ.












Click it and Unblock the Notifications