ಚುನಾವಣಾ ಪ್ರಚಾರ; ಅಮಿತ್ ಶಾ VS ಸಿದ್ದರಾಮಯ್ಯ ಮಾತಿನ ಯುದ್ಧ
ಬೆಂಗಳೂರು, ಏಪ್ರಿಲ್ 25; ಕರ್ನಾಟಕ ವಿಧಾನಸಭೆ ಚುನಾವಣಾ ಪ್ರಚಾರ ಬಿರುಸುಗೊಂಡಿದೆ. ಬಿಜೆಪಿಯ ರಾಷ್ಟ್ರೀಯ ನಾಯಕರು ರಾಜ್ಯದಲ್ಲಿ ಮೇ 10ರಂದು ನಡೆಯುವ ಚುನಾವಣೆಗೆ ಪ್ರಚಾರ ನಡೆಸುತ್ತಿದ್ದಾರೆ. ಕರ್ನಾಟಕದ ನೆಲಕ್ಕೆ ಬರುವ ಬಿಜೆಪಿಯ ರಾಷ್ಟ್ರೀಯ ನಾಯಕರ ಮುಖ್ಯ ಟಾರ್ಗೆಟ್ ಮಾಜಿ ಮುಖ್ಯಮಂತ್ರಿ ಮತ್ತು ವರುಣ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಸಿದ್ದರಾಮಯ್ಯ.
ಸೋಮವಾರದಿಂದ ಕರ್ನಾಟಕದಲ್ಲಿ ಪ್ರಚಾರ ನಡೆಸುತ್ತಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಕಾಂಗ್ರೆಸ್ ಪಕ್ಷದ ವಿರುದ್ಧ ಟೀಕೆಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಇದಕ್ಕೆ ತಿರುಗೇಟು ನೀಡುತ್ತಿದ್ದಾರೆ. ಅಮಿತ್ ಶಾ ಮತ್ತು ಸಿದ್ದರಾಮಯ್ಯ ನಡುವಿನ ಮಾತಿನ ಮಲ್ಲಯುದ್ಧದ ಝಲಕ್‌ಗಳು ಇಲ್ಲಿವೆ ನೋಡಿ...

ಮಂಗಳವಾರ ವಿಜಯಪುರದಲ್ಲಿ ಮಾತನಾಡಿದ ಅಮಿತ್ ಶಾ, "ಕಾಂಗ್ರೆಸ್ ಪಕ್ಷಕ್ಕೆ ಮತ ನೀಡಿದರೆ ಪಿಎಫ್‌ಐ ನಿಷೇಧ ವಾಪಸ್ ಪಡೆಯುತ್ತಾರೆ. ಹೇಳಿಕೊಳ್ಳುವಂತಹ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕಾಂಗ್ರೆಸ್ ಪಕ್ಷ ಮಾಡಿಲ್ಲ. ಯಾವುದೇ ಪರಿಸ್ಥಿತಿಯಲ್ಲಿಯೂ ಬಿಜೆಪಿಯನ್ನು ಅಧಿಕಾರಕ್ಕೆ ತನ್ನಿ" ಎಂದು ಕರೆ ನೀಡಿದರು.
ಸಿದ್ದರಾಮಯ್ಯ ಅಮಿತ್ ಶಾ ಹೇಳಿಕೆಗೆ ತಿರುಗೇಟು ನೀಡುವ ಮೂಲಕ ಮಾತಿನ ಸಮರ ಮುಂದುವರೆಸಿದ್ದಾರೆ. ಟ್ವೀಟ್ ಮೂಲಕ ಅವರು, "ಸನ್ಮಾನ್ಯ ಗೃಹ ಸಚಿವ ಅಮಿತ್ ಶಾ ಅವರು ಒಂದೋ ತಮ್ಮ ಸುಳ್ಳು ಆರೋಪವನ್ನು ಸಾಬೀತುಪಡಿಸಬೇಕು, ಇಲ್ಲವೇ ತಾವು ಹೇಳಿದ್ದು ಸುಳ್ಳು ಎಂದು ಕ್ಷಮೆ ಕೇಳಬೇಕು. ರಾಜ್ಯದಲ್ಲಿ ಬಿಜೆಪಿ ಪಕ್ಷದ್ದೇ ಸರ್ಕಾರ ಇದೆ. ಯಾವ ಪಿಎಫ್‌ಐ ಕಾರ್ಯಕರ್ತರ ಮೊಕದ್ದಮೆಗಳನ್ನು ನಮ್ಮ ಸರ್ಕಾರ ವಾಪಾಸ್ ಪಡೆದಿದೆ ಎನ್ನುವುದನ್ನು ಕಡತ ನೋಡಿ ತಿಳಿದುಕೊಳ್ಳಲು ಅಮಿತ್ ಶಾ ಅವರಿಗೇನು ದಾಡಿ? ಸುಮ್ಮನೆ ಸುಳ್ಳು ಉಗುಳುವುದು ಯಾಕೆ?" ಎಂದು ಪ್ರಶ್ನಿಸಿದರು.

ಅಪಮಾನ ಮಾಡಿದ್ದಾರೆ; ಅಮಿತ್ ಶಾ, 'ಕಾಂಗ್ರೆಸ್ ಪಕ್ಷ ಲಿಂಗಾಯತರಿಗೆ ಪದೇ ಪದೇ ಅವಮಾನ ಮಾಡುತ್ತಲೇ ಬಂದಿದೆ. ಕಾಂಗ್ರೆಸ್ ಅಧ್ಯಕ್ಷರು ಮತ್ತು ಸಿದ್ದರಾಮಯ್ಯ ಲಿಂಗಾಯತರಿಗೆ ಅವಮಾನ ಮಾಡಿದ್ದಾರೆ. ನಿಜಲಿಂಗಪ್ಪ, ವೀರೇಂದ್ರ ಪಾಟೀಲರಿಗೂ ಅವಮಾನ ಮಾಡಿದ್ದಾರೆ. ನಮ್ಮಲ್ಲಿನ ಒಂದಿಬ್ಬರು ನಾಯಕರು ಅಲ್ಲಿಗೆ ಹೋಗಿದ್ದಕ್ಕೆ ಗೆದ್ದು ಬಿಡುತ್ತೇವೆ ಎಂದು ಕೊಂಡಿದ್ದಾರೆ" ಎಂದು ಹೇಳಿದ್ದರು.
ಸಿದ್ದರಾಮಯ್ಯ ಟ್ವೀಟ್ ಮೂಲಕ, "ರಾಜ್ಯದ ಬಿಜೆಪಿ ಪಕ್ಷದಲ್ಲಿರುವ ಲಿಂಗಾಯತ ನಾಯಕರು ತಮ್ಮ ನಿಜವಾದ ಶತ್ರುಗಳು ಯಾರೆಂದು ಅರ್ಥಮಾಡಿಕೊಳ್ಳದೆ, ವೃಥಾ ಕಾಂಗ್ರೆಸ್ ನಾಯಕರ ಮೇಲೆ ಆರೋಪ ಮಾಡುವುದರಲ್ಲಿ ತಲ್ಲೀನರಾಗಿದ್ದಾರೆ. ಇದು ಕೂಡಾ ಆರ್. ಎಸ್. ಎಸ್‌ನ ವಿಘ್ನ ಸಂತೋಷಿಗಳ ಹುನ್ನಾರವೇ ಆಗಿದೆ" ಎಂದು ಹೇಳಿದ್ದರು.
"ಹುಬ್ಬಳ್ಳಿಯಲ್ಲಿ ಜಗದೀಶ್ ಶೆಟ್ಟರ್ ಅವರನ್ನು ಸೋಲಿಸುವ ಹೊಣೆಯನ್ನು ಈಗ ಬಿ. ಎಸ್. ಯಡಿಯೂರಪ್ಪನವರ ಮೇಲೆ ಹೊರಿಸಲಾಗಿದೆ. ಈ ದಾಯಾದಿಗಳ ಕಾದಾಟದಲ್ಲಿ ಯಾರು ಸೋತರೂ ಒಬ್ಬ ಲಿಂಗಾಯತ ನಾಯಕರು ಸೋತ ಹಾಗೆ ಅಲ್ಲವೇ?" ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.
ಮುಖ್ಯಮಂತ್ರಿ ಮಾಡಲಾಗಿದೆ; ಅಮಿತ್ ಶಾ ಕಾಂಗ್ರೆಸ್‌ಗೆ ಹೋಗಿರುವ ಜಗದೀಶ್ ಶೆಟ್ಟರ್, ಲಕ್ಷ್ಮಣ ಸವದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. "ಲಿಂಗಾಯತರಿಗೆ ಅವಮಾನ ಮಾಡಿರುವ ಪಕ್ಷಕ್ಕೆ ಅವರು ಹೋಗಿದ್ದಾರೆ. ಕಾಂಗ್ರೆಸ್‌ಗೆ ಆ ಇಬ್ಬರು ನಾಯಕರಿಂದ ಯಾವುದೇ ಲಾಭವಿಲ್ಲ. ಲಿಂಗಾಯತ ಸಿಎಂಗಳನ್ನು ಅವಮಾನಿಸಿದ್ದು ಕಾಂಗ್ರೆಸ್ ಪಕ್ಷ. ಆದರೆ ಬಿಜೆಪಿ ಯಡಿಯೂರಪ್ಪರನ್ನು ಮುಖ್ಯಮಂತ್ರಿ ಮಾಡಿದೆ" ಎಂದು ದೂರಿದ್ದಾರೆ.
ಸಿದ್ದರಾಮಯ್ಯ ತಮ್ಮ ಟ್ವೀಟ್‌ನಲ್ಲಿ, "ಒಲ್ಲೆನೆಂದರೂ ಬಲತ್ಕಾರವಾಗಿ ವರುಣಾ ಕ್ಷೇತ್ರದಲ್ಲಿ ವಿ. ಸೋಮಣ್ಣ ಎಂಬ ಲಿಂಗಾಯತ ನಾಯಕನನ್ನು ಅಭ್ಯರ್ಥಿ ಮಾಡಿದ್ದು ಮತ್ತು ಲಕ್ಷ್ಮಣ ಸವದಿ, ಸೊಗಡು ಶಿವಣ್ಣ, ಸಂಜಯ್ ಪಾಟೀಲ್ ಮೊದಲಾದ ಲಿಂಗಾಯತ ನಾಯಕರಿಗೆ ಟಿಕೆಟ್ ನಿರಾಕರಿಸಿ ರಾಜಕೀಯವಾಗಿ ಮುಗಿಸಲು ಪ್ರಯತ್ನಿಸಿದ್ದು ಕೂಡಾ ಆರ್. ಎಸ್. ಎಸ್‌ನ ವಿಘ್ನ ಸಂತೋಷಿಗಳು' ಎಂದು ಅಮಿತ್ ಶಾ ಮತ್ತು ಬಿಜೆಪಿಗೆ ತಿರುಗೇಟು ನೀಡಿದ್ದಾರೆ.
ನಿಮಗೆ ನಂಬರ್ ಬಂದಿಲ್ಲ; "ನಾವು ಮಾಡಿದ ಕೆಲಸಗಳಲ್ಲಿ ಕಾಂಗ್ರೆಸ್ 10 ಪರ್ಸೆಂಟ್ ಮಾಡಿದ್ದರೂ ಮತ ಕೇಳಲು ಬರಬೇಕಾದ ಅವಶ್ಯಕತೆ ಇರಲಿಲ್ಲ. ಸಿದ್ದರಾಮಯ್ಯ ಮತ್ತು ಡಿ. ಕೆ. ಶಿವಕುಮಾರ್ ಮುಖ್ಯಮಂತ್ರಿಯಾಗಲು ಗುದ್ದಾಡುತ್ತಿದ್ದಾರೆ. ಆದರೆ ನಿಮಗೆ ನಂಬರ್ ಬಂದಿಲ್ಲಾ ಯಾಕೆ ಗುದ್ದಾಡುತ್ತಿದ್ದೀರಿ?" ಎಂದು ಅಮಿತ್ ಶಾ ವ್ಯಂಗ್ಯವಾಡಿದ್ದಾರೆ.
ಸಿದ್ದರಾಮಯ್ಯ, "ನಮ್ಮಲ್ಲಿ ಜಾತಿ ಆಧಾರದ ಮೇಲೆ ಮುಖ್ಯಮಂತ್ರಿ ಯಾರಾಗಬೇಕೆಂದು ತೀರ್ಮಾನ ಮಾಡುವುದಿಲ್ಲ, ಶಾಸಕರ ಅಭಿಪ್ರಾಯ ಪಡೆದು ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಇದು ನಮ್ಮಲ್ಲಿ ನಡೆದುಕೊಂಡುಬಂದ ಪದ್ಧತಿ. ಬಿಜೆಪಿಯವರು ಜಾತಿ ಮೇಲೆ ಮಾಡಿದರೆ ಅದು ಅವರ ಪಕ್ಷದ ವಿಚಾರ. ವೀರಶೈವ-ಲಿಂಗಾಯತರ ಬಗ್ಗೆ ನಮಗೆ ಗೌರವ ಇರುವುದರಿಂದಲೇ ಹೆಚ್ಚು ಟಿಕೆಟ್‌ಗಳನ್ನು ಅವರಿಗೆ ನೀಡಿದ್ದೇವೆ. ಕಳೆದ ಬಾರಿ 47 ಲಿಂಗಾಯತ ಅಭ್ಯರ್ಥಿಗಳಿಗೆ ಪಕ್ಷದ ಟಿಕೆಟ್ ನೀಡಿದ್ದರೆ, ಈ ಬಾರಿ ಅದಕ್ಕಿಂತ ಹೆಚ್ಚು ಅಂದರೆ ಸುಮಾರು 52-53 ಕ್ಷೇತ್ರಗಳಲ್ಲಿ ಟಿಕೇಟ್ ನೀಡಿದ್ದೇವೆ" ಎಂದು ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ.












Click it and Unblock the Notifications