ನಮ್ಮವರಿಗೆ ಕಟ್ಟುವುದು ಗೊತ್ತು, ನಿಮಗೆ ಮುಳುಗಿಸುವುದು ಮಾತ್ರ ಗೊತ್ತು!
ಬೆಂಗಳೂರು, ಫೆಬ್ರವರಿ 12; ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಶನಿವಾರ ಮಂಗಳೂರಿಗೆ ಭೇಟಿ ನೀಡಿದ್ದರು. ಅಲ್ಲಿ ಅವರು ಮಾಡಿದ ಭಾಷಣದ ತುಣುಕಿನ ಮೂಲಕ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.
ಭಾನುವಾರ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ದಕ್ಷಿಣ ಕನ್ನಡದವರು ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು. ಗುಜರಾತಿನವರು ಈ ಬ್ಯಾಂಕುಗಳನ್ನು ನುಂಗಿ ನೀರು ಕುಡಿದರು" ಎಂದು ಟೀಕಿಸಿದ್ದಾರೆ.

ಅಮಿತ್ ಶಾ ನೀಡಿದ, "ಗುಜರಾತ್ ಜನರು ಅಡಿಕೆ ತಿಂದರೆ ದಕ್ಷಿಣ ಕನ್ನಡದ ಜನರು ಅಡಿಕೆ ಬೆಳೆಯುತ್ತಾರೆ" ಎಂಬ ಹೇಳಿಕೆಯನ್ನು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ. "ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು, ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ ಗೊತ್ತು" ಎಂದು ಟ್ವೀಟ್ ಮಾಡಿದ್ದಾರೆ.
ದಕ್ಷಿಣ ಕನ್ನಡದವರು ವಿಜಯಾ ಬ್ಯಾಂಕ್, ಸಿಂಡಿಕೇಟ್ ಬ್ಯಾಂಕ್‌ಗಳನ್ನು ಕಟ್ಟಿ ಬೆಳೆಸಿದರು.
— Siddaramaiah (@siddaramaiah) February 12, 2023
ಗುಜರಾತಿನವರು ಈ ಬ್ಯಾಂಕುಗಳನ್ನು ನುಂಗಿ ನೀರು ಕುಡಿದರು.
ನಮ್ಮವರಿಗೆ ಕಟ್ಟುವುದು, ಬೆಳೆಸುವುದು ಗೊತ್ತು,
ನಿಮಗೆ ಮಾರುವುದು, ಮುಳುಗಿಸುವುದು ಮಾತ್ರ ಗೊತ್ತು.@AmitShah @BJP4Karnataka pic.twitter.com/6Z9Q39Fx9Z
ದಕ್ಷಿಣ ಕನ್ನಡದಲ್ಲಿ ಸಮಾವೇಶ; ಶನಿವಾರ ದಕ್ಷಿಣ ಕನ್ನಡದಲ್ಲಿ ಅಮಿತ್ ಶಾ ಹಲವಾರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕೇಂದ್ರ ಅಡಿಕೆ ಮತ್ತು ಕೊಕ್ಕೊ ಮಾರಾಟ ಮತ್ತು ಸಂಸ್ಕರಣಾ ಸಹಕಾರಿ ನಿಯಮಿತ (ಕ್ಯಾಂಪ್ಕೊ) ಸುವರ್ಣ ಮಹೋತ್ಸವಕ್ಕೆ ಚಾಲನೆ ನೀಡಿದ್ದರು.
ಬಳಿಕ ಮಾತನಾಡಿದ್ದ ಅಮಿತ್ ಶಾ, "ಗುಜರಾತ್ ಜನರು ಅಡಿಕೆ ತಿಂದರೆ, ದಕ್ಷಿಣ ಕನ್ನಡದ ಜನರು ಅಡಿಕೆ ಬೆಳೆಯುತ್ತಾರೆ. ನಾವು ಗುಜರಾತಿನ ಜನರು ಅಡಿಕೆ ತಿನ್ನುವಾಗ ಮಂಗಳೂರಿನ ಜನರನ್ನು ನೆನಪಿಸಿಕೊಳ್ಳುತ್ತೇವೆ" ಎಂದು ಹೇಳಿದ್ದರು.
"ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಡಿಕೆ, ತೆಂಗು, ರಬ್ಬರ್, ಭತ್ತ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲಾಗುತ್ತದೆ. ಕ್ಯಾಂಪ್ಕೊ ಅಡಿಕೆ ಬೆಳೆಗಾರರಿಗೆ ಸಂಕಷ್ಟದ ಸಮಯದಲ್ಲಿ ಸಹಾಯ ಮಾಡಿದೆ" ಎಂದು ತಿಳಿಸಿದ್ದರು.
"ಕರ್ನಾಟಕದ ಸುರಕ್ಷತೆಗಾಗಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ, ಮೋದಿ, ಬಸವರಾಜ ಬೊಮ್ಮಾಯಿಯನ್ನು ಬೆಂಬಲಿಸಬೇಕು. ಟಿಪ್ಪುವನ್ನು ಬೆಂಬಲಿಸುವ ಕಾಂಗ್ರೆಸ್, ಜೆಡಿಎಸ್‌ಗೆ ಮತ ನೀಡುತ್ತೀರಾ ಅಥವ ಅಬ್ಬಕ್ಕನನ್ನು ಗೌರವಿಸುವ ಬಿಜೆಪಿಗೆ ಮತ ನೀಡುತ್ತೀರಾ?" ಎಂದು ಪ್ರಶ್ನಿಸಿದ್ದರು.












Click it and Unblock the Notifications