ಅವರನ್ನು ಕ್ಷಮಿಸಿಬಿಡು ತಂದೆಯೇ; ಸಿದ್ದರಾಮಯ್ಯ ಟ್ವೀಟ್
ಬೆಂಗಳೂರು, ಅಕ್ಟೋಬರ್ 20 : "ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ" ಎಂದು ಪ್ರತಿಪಕ್ಷ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಭಾನುವಾರ ಟ್ವಿಟರ್ ಮೂಲಕ ಆರೋಗ್ಯ ಸಚಿವ ಬಿ. ಶ್ರೀರಾಮುಲುಗೆ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. " ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು" ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ ಎಂದು ಸಚಿವರ ಹೇಳಿಕೆಯನ್ನು ಉಲ್ಲೇಖಿಸಿದ್ದಾರೆ.

"ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ: "ಅವರನ್ನು ಕ್ಷಮಿಸಿಬಿಡು ತಂದೆಯೇ, ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ" ಎಂದು ಸಿದ್ದರಾಮಯ್ಯ ಟ್ವೀಟ್‌ನಲ್ಲಿ ಹೇಳಿದ್ದಾರೆ.
ಚಿತ್ರದುರ್ಗದಲ್ಲಿ ಮಾತನಾಡಿದ್ದ ಬಿ. ಶ್ರೀರಾಮುಲು, "ವೀರ ಸಾವರ್ಕರ್ ಹಾಗೂ ನಾಥೂರಾಮ್ ಗೋಡ್ಸೆ ಬಗ್ಗೆ ಹಗುರವಾಗಿ ಮಾತನಾಡುವ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು" ಎಂದು ಹೇಳಿಕೆ ನೀಡಿದ್ದರು.
"ಸಿದ್ದರಾಮಯ್ಯ ಅವರಿಗೆ ನಾಲಿಗೆಯ ಮೇಲೆ ಹಿಡಿತವಿಲ್ಲ.ಬಾಯಿ ಚಪಲಕ್ಕೆ ಅವರು ಮಾತನಾಡುತ್ತಾರೆ. ಸಾವರ್ಕರ್ ಬಗ್ಗೆ ಅವರು ಓದಿಕೊಂಡು ಮಾತನಾಡಲಿ" ಎಂದು ಹೇಳಿದ್ದರು.
ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, "ಸಾರ್ವರ್ಕರ್ ಅವರಿಗೆ 'ಭಾರತ ರತ್ನ' ಆ ಮೇಲೆ ಕೊಡುವಿರಂತೆ,
ಮೊದಲು ಸಾಮಾಜಿಕ ಸೇವೆಗಾಗಿ ತನ್ನ ಬದುಕನ್ನು ತೇದು ಲಿಂಗೈಕ್ಯವಾಗಿರುವ ಸಿದ್ದಗಂಗಾ ಮಠದ ಡಾ.ಶಿವಕುಮಾರ ಸ್ವಾಮೀಜಿಗಳಿಗೆ ಮೊದಲು ಭಾರತರತ್ನ ನೀಡಿ. ಕನಿಷ್ಠ ಈ ಒಂದು ಭರವಸೆಯನ್ನಾದರೂ ಈಡೇರಿಸಿ" ಎಂದು ಟ್ವೀಟ್ ಮಾಡಿದ್ದರು.
ಆರೋಗ್ಯ ಸಚಿವ ಶ್ರೀರಾಮುಲು ಈ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, "ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು" ಎಂದು ಹೇಳಿಕೆ ನೀಡಿದ್ದರು.
2018ರ ಕರ್ನಾಟಕ ವಿಧಾನಸಭೆ ಚುನಾವಣೆ ಸಮಯದಿಂದ ಸಿದ್ದರಾಮಯ್ಯ, ಬಿ. ಶ್ರೀರಾಮುಲು ನಡುವೆ ವಾಕ್ಸಮರ ನಡೆಯುತ್ತಿದೆ. ಬಾದಾಮಿ ಕ್ಷೇತ್ರದಲ್ಲಿ ಇಬ್ಬರು ಎದುರಾಳಿಯಾಗಿದ್ದರು. ಸಿದ್ದರಾಮಯ್ಯ ಶ್ರೀರಾಮುಲುರನ್ನು ಸೋಲಿಸಿದ್ದರು.
ಸಿದ್ದರಾಮಯ್ಯ ಟ್ವೀಟ್
'ಸಿದ್ದರಾಮಯ್ಯ ಭೂಮಿ ಮೇಲೆ ಇರಬಾರದು' ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ.
— Siddaramaiah (@siddaramaiah) October 20, 2019
ತನ್ನ ಸಾವು ಬಯಸಿದವರಿಗೆ ಏಸುಕ್ರಿಸ್ತ ಹೇಳಿದ್ದನ್ನೇ ಶ್ರೀರಾಮುಲು ಅವರಿಗೆ ಹೇಳುವೆ:
"ಅವರನ್ನು ಕ್ಷಮಿಸಿಬಿಡು ತಂದೆಯೇ,
ಅವರೇನು ಮಾಡುತ್ತಿದ್ದಾರೆ ಎನ್ನುವುದು ಅವರಿಗೆ ತಿಳಿದಿಲ್ಲ" pic.twitter.com/cunQdpgzH7












Click it and Unblock the Notifications