ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನ; ಬಹು ಅಂಗಾಂಗ ಕಸಿ ಆಸ್ಪತ್ರೆಗೆ 4000 ಕೋಟಿ ವೆಚ್ಚ: ಸಿದ್ದರಾಮಯ್ಯ
ಬೆಂಗಳೂರು: ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆಗೆ ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಐದು ವರ್ಷಗಳಲ್ಲಿ 4000 ಕೋಟಿ ವೆಚ್ಚ ಮಾಡುವ ಗುರಿ ಹೊಂದಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ವಿಧಾನ ಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸಾವಿರ ಹಾಸಿಗೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣ ಮತ್ತು ನಿರ್ವಹಣೆ ಕುರಿತು ವೈದ್ಯಕೀಯ ಶಿಕ್ಷಣ ಇಲಾಖೆ ಹಾಗೂ ಅಜೀಂ ಪ್ರೇಮ್ ಜಿ ಪ್ರತಿಷ್ಠಾನ ನಡುವೆ ಒಡಂಬಡಿಕೆಗೆ ಸಹಿ ಹಾಕಿದ ನಂತರ ಮಾತನಾಡಿ, ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ವತಿಯಿಂದ ಸಾವಿರ ಆಸ್ಪತ್ರೆಗಳ ಚಾರಿಟಬಲ್ ಸೂಪರ್ ಸ್ಪೆಷಾಲಿಟಿ ಹಾಗೂ ಮಾನವ ಬಹು ಅಂಗಾಂಗ ಕಸಿ ಆಸ್ಪತ್ರೆ ನಿರ್ಮಾಣಕ್ಕೆ ಸಾವಿರಾರು ಕೋಟಿ ರೂ ಗಳ ಆರೋಗ್ಯ ಸಂಬಂಧಿಸಿದಂತೆ ಒಡಂಬಡಿಕೆಗೆ ಸಹಿ ಮಾಡಲಾಗಿದೆ. ಇದಕ್ಕಾಗಿ ರಾಜೀವ್ ಗಾಂಧಿ ಎದೆ ರೋಗಗಳ ಆಸ್ಪತ್ರೆ ಆವರಣದಲ್ಲಿ ಸರ್ಕಾರ 10 ಎಕರೆ ಸ್ಥಳವನ್ನು 99 ವರ್ಷಗಳ ಅವಧಿಗೆ ಗುತ್ತಿಗೆ ಆಧಾರದ ಮೇಲೆ ನೀಡಲು ಒಪ್ಪಂದವಾಗಿದೆ ಎಂದರು.

ಅಜೀಂ ಪ್ರೇಮ್ ಜಿ ಅವರ ಈ ಮಹತ್ಕಾರ್ಯಕ್ಕೆ ಸರ್ಕಾರ ಆಭಾರಿಯಾಗಿದೆ. ಅದರಲ್ಲಿಯೂ ಉಚಿತವಾಗಿ ಈ ಕಾರ್ಯವನ್ನು ನೆರವೇರಿಸಲು ಮುಂದಾಗಿರುವುದು ಶ್ರೇಷ್ಠ ಕಾರ್ಯ ಎಂದರು . ಅಜೀಂ ಪ್ರೇಮ್ ಜಿ ಪ್ರತಿಷ್ಠಾನವು ಕಳೆದ 25 ವರ್ಷಗಳಿಂದ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರದಲ್ಲಿ ದೊಡ್ಡ ಪ್ರಮಾಣದಲ್ಲಿ ಸೇವೆ ಸಲ್ಲಿಸುತ್ತಿದೆ. 2021ರಲ್ಲಿ ಶಿಕ್ಷಕರ ತರಬೇತಿಗೆ, 2024 ರಲ್ಲಿ ಎಲ್.ಕೆ.ಜಿ ಯಿಂದ ಹತ್ತನೇ ತರಗತಿಯವರೆಗೆ ವಾರದಲ್ಲಿ ನಾಲ್ಕು ದಿನ ಮೊಟ್ಟೆ ಕೊಡುವ ಕಾರ್ಯಕ್ರಮಕ್ಕೆ ಒಂದೂವರೆ ಕೋಟಿ ರೂ ನೀಡುವ ಮೂಲಕ ಕೈಜೋಡಿಸಿದ್ದಾರೆ. ಸರ್ಕಾರಿ ಕಾಲೇಜುಗಳಲ್ಲಿ ಓದಿರುವವವರಿಗೆ ವರ್ಷಕ್ಕೆ 30 ಸಾವಿರ ವಿದ್ಯಾರ್ಥಿ ವೇತನವನ್ನು ದೀಪಿಕಾ ವಿದ್ಯಾರ್ಥಿ ವೇತನದಡಿ ನೀಡುತ್ತಿದ್ದಾರೆ ಎಂದು ತಿಳಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಅಜೀಂ ಪ್ರೇಮ್ ಜಿ ಅವರಿಗೆ ಧನ್ಯವಾದಗಳನ್ನು ತಿಳಿಸಿದರು.
ಅಜೀಂ ಪ್ರೇಮ್ ಜಿ ಪ್ರತಿಷ್ಠಾನದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನುರಾಗ್ ಬೆಹರ್ , ಸಾರ್ವಜನಿಕ ವ್ಯವಸ್ಥೆಗಳಲ್ಲಿ ನಂಬಿಕೆಯಿಟ್ಟಿರುವ ಸಂಸ್ಥೆಯಾಗಿದ್ದು, ಸಾರ್ವಜನಿಕ ವ್ಯವಸ್ಥೆಗಳು ಬಲಗೊಳ್ಳಬೇಕು ಎಂದರು. ಆರೋಗ್ಯ ಶುರುವಾಗುವುದು ಆಶಾ ಕಾರ್ಯಕರ್ತರು, ಪ್ರಾಥಮಿಕ ಆರೋಗ್ಯ ಕೇಂದ್ರಗಳಿಂದ. ನಮ್ಮ ಜನತೆ ಖಾಯಿಲೆ ಬೀಳದಿರುವಂತೆ ತಡೆಯುವುದು ನಮ್ಮ ಮುಖ್ಯ ಗುರಿಯಾಗಬೇಕು. ಕರ್ನಾಟಕ ಅತ್ಯಂತ ಕ್ರಿಯಾಶೀಲ ರಾಜ್ಯವಾಗಿದ್ದು, ಆರೋಗ್ಯ ವ್ಯವಸ್ಥೆಯನ್ನು ಬಲಬಡಿಸುವಲ್ಲಿ ಅಧಿಕಾರಿಗಳು, ಆಡಳಿತ ಒಟ್ಟಾಗಿ ಕೆಲಸ ಮಾಡುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಸ್ಪತ್ರೆಯ ಸಂಪೂರ್ಣ ಬಂಡವಾಳ ಮತ್ತು ಕಾರ್ಯನಿರ್ವಹಣಾ ವೆಚ್ಚವನ್ನು ಫೌಂಡೇಷನ್ ಭರಿಸಲಿದೆ. ಇದನ್ನು ಸರ್ಕಾರಿ ಮಾಲೀಕತ್ವದ ಜಮೀನಿನಲ್ಲಿ ಸ್ಥಾಪಿಸಲಾಗುತ್ತದೆ. ಅಜೀಂ ಪ್ರೇಮ್‌ಜಿ ಫೌಂಡೇಷನ್ ಸ್ಥಾಪಿಸುವ ಪ್ರತ್ಯೇಕ ಲಾಭೇತರ ಸಂಸ್ಥೆಯ ಮೂಲಕ ಈ ಆಸ್ಪತ್ರೆಯನ್ನು ನಿರ್ಮಿಸಿ ನಿರ್ವಹಿಸಲಾಗುತ್ತದೆ. ಆಸ್ಪತ್ರೆಯ ಆಡಳಿತ ಮಂಡಳಿಯು ಸರ್ಕಾರಿ ಪ್ರತಿನಿಧಿಗಳನ್ನು ಹೊಂದಿರಲಿದೆ.
ಜಮೀನನ್ನು ಗುತ್ತಿಗೆ ಪಡೆದು ಅಗತ್ಯ ಅನುಮೋದನೆಗಳನ್ನು ಗಳಿಸಿದ ನಂತರ ಐದು ವರ್ಷಗಳೊಳಗೆ ಆಸ್ಪತ್ರೆಯು ಸಂಪೂರ್ಣವಾಗಿ ಕಾರ್ಯ ನಿರ್ವಹಿಸುವ ನಿರೀಕ್ಷೆ ಇದೆ. ಆಸ್ಪತ್ರೆಯ ಎಲ್ಲ ಚಟುವಟಿಕೆಗಳು ಸಾರ್ವಜನಿಕ ಹಿತಾಸಕ್ತಿಯ ಉದ್ದೇಶಕ್ಕೆ ತಕ್ಕುದಾಗಿ ಇರಲಿವೆ.












Click it and Unblock the Notifications