ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿದೆ :ಸಿದ್ದರಾಮಯ್ಯ
ಬೆಂಗಳೂರು, ಸೆಪ್ಟಂಬರ್ 04: ಖಾಸಗಿ ಶಾಲೆಗಳ ಪರವಾನಿಗೆಯಿಂದ ಹಿಡಿದು ನಿವೃತ್ತ ಶಿಕ್ಷಕರ ಪಿಂಚಣಿವರೆಗೆ ಶಿಕ್ಷಣ ಇಲಾಖೆಯಲ್ಲಿ ಲಂಚ ನೀಡದೇ ಯಾವ ಕೆಲಸವು ಆಗದ ವಾತಾವರಣ ಇದೆ ಎಂದು ಸಿದ್ದರಾಮಯ್ಯ ಆಕ್ರೋಶ ಹೊರಹಾಕಿದ್ದಾರೆ.
ಈ ಕುರಿತು ಭಾನುವಾರ ಸರಣಿ ಟ್ವೀಟ್ ಮಾಡಿರುವ ಅವರು, ಬಿಜೆಪಿ ಸರ್ಕಾರದ ವಿರುದ್ಧ ಹಾಗೂ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಆರ್‌ಎಸ್‌ಎಸ್‌ನಲ್ಲಿ ತರಬೇತಿ ಪಡೆದು ಬಂದಿರುವ ಸಚಿವ ಬಿ.ಸಿ.ನಾಗೇಶ್ ಅವರು ರಾಜ್ಯ ಶಿಕ್ಷಣ ಸಚಿವರಾದಾಗಿನಿಂದ ಶಿಕ್ಷಣ ಇಲಾಖೆ ಭ್ರಷ್ಟಾಚಾರದ ಕೊಂಪೆಯಾಗಿದೆ. ಆ ಭ್ರಷ್ಟಾಚಾರದ ಕತೆಗಳು ಒಂದೊಂದಾಗಿ ಹೊರಬೀಳುತ್ತಿವೆ. ಪಠ್ಯಪುಸ್ತಕಗಳ ವಿವಾದದ ಮರೆಯಲ್ಲಿ ಇಲ್ಲಿ ನಡೆಯುತ್ತಿರುವುದು ಲಂಚಾವತಾರದ ಕುಣಿದಾಟ ಎಂದಿದ್ದಾರೆ, ಇವರು ಭಕ್ಷಣ ಸಚಿವರು ಎಂದು ಹ್ಯಾಶ್ ಟ್ಯಾಗ್ ಹಾಕಿ ಕಿಡಿ ಕಾಡಿದ್ದಾರೆ.
ಪ್ರಾರಂಭದಿಂದಲೇ ಶಿಕ್ಷಣ ಸಚಿವರು ಹಾಗೂ ಬಿಜೆಪಿ ವಿರುದ್ಧ ಕೇಳಿ ಬರುತ್ತಿದ್ದ ಭ್ರಷ್ಟಾಚಾರದ ಆರೋಪಗಳಿಗೆ ಈಗ ಅನುದಾನ ರಹಿತ ಖಾಸಗಿ ಶಾಲೆಗಳ ಆಡಳಿತ ಮಂಡಳಿಯ ಸಂಘಟನೆ ಪುರಾವೆಗಳನ್ನು ನೀಡಿದೆ. ಈ ಸಂಘಟನೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆದಿವೆ. ಪ್ರತಿ ಟ್ವೀಟ್‌ನಲ್ಲಿ ಇದು ಶಿಕ್ಷಣವೋ? ಭಕ್ಷಣೆಯೋ? ಎಂದು ಟ್ವೀಟ್ ಮಾಡಿದ್ದಾರೆ.

ಶಿಕ್ಷಣ ಇಲಾಖೆಯ ಅಕ್ರಮ
ಖಾಸಗಿ ಶಾಲೆಗಳ ಪರವಾನಿಗೆ ನೀಡುವುದು, ನಿವೃತ್ತಿ ಶಿಕ್ಷಕರ ಪಿಂಚಣಿವರೆಗೆ ಕೆಲಸವಾಗಲು ಲಂಚ ನೀಡಬೇಕು. ಇದು ಶಿಕ್ಷಣ ಇಲಾಖೆಯಲ್ಲಿನ ಪರಿಸ್ಥಿತಿ. ಲಂಚ ಪಡೆದು ಖಾಸಗಿ ಶಾಲೆಗಳಿಗೆ ಅಕ್ರಮವಾಗಿ ಅನುಮತಿ ನೀಡುವ ಇಲಾಖೆಯೇ ಮತ್ತೆ ಅಕ್ರಮ ಎಸಗಿದ ಆರೋಪದ ಮೇಲೆ ದುಡ್ಡು ವಸೂಲಿ ಮಾಡುವ ಕೆಲಸವಾಗುತ್ತಿದೆ. ಇದೊಂದು ಎಂತಹ ಅದ್ಭುತ ಪ್ಲಾನ್ ಎಂದು ಅವರು ಆರೋಪಿಸಿದರು.

ವಿದ್ಯಾರ್ಥಿಗಳ ಸಂಖ್ಯೆಯಲ್ಲಿ ಇಳಿಕೆ
ಕಾಂಗ್ರೆಸ್‌ನ ಮಹತ್ವಾಕಾಂಕ್ಷೆಯ ಶಿಕ್ಷಣ ಹಕ್ಕಿನ ಕಾಯ್ದೆಯನ್ನೂ ರಾಜ್ಯ ಶಿಕ್ಷಣ ಇಲಾಖೆ ಹಳ್ಳ ಹಿಡಿಸಿದೆ. 2012ರಲ್ಲಿ ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಫಲಾನುಭವಿ ವಿದ್ಯಾರ್ಥಿಗಳು 1.20 ಲಕ್ಷ ಇದ್ದರು. ಅವರ ಸಂಖ್ಯೆ ಇದೀಗ ವಿದ್ಯಾರ್ಥಿಗಳ ಸಂಖ್ಯೆ 7 ಸಾವಿರಕ್ಕೆ ಇಳಿಕೆ ಆಗಿದೆ. ಖಾಸಗಿ ಶಾಲೆಗಳಿಗೆ ರಾಜ್ಯ ಬಿಜೆಪಿ ಸರ್ಕಾರವೇ ಬೆಂಬಲ ನೀಡುತ್ತಿದೆ. ಇದು ಶಿಕ್ಷಣವೋ ಇಲ್ಲ ಭಕ್ಷಣೆಯೋ ಎಂದು ಸಿದ್ದರಾಮಯ್ಯ ಪ್ರಾಶ್ನಿಸಿದ್ದಾರೆ.

ಶಿಕ್ಷಣ ಇಲಾಖೆ ರೋಗಗ್ರಸ್ಥವಾಗಿದೆ.
ಶಿಕ್ಷಣ ಹಕ್ಕು ಕಾಯ್ದೆ (ಆರ್‌ಟಿಇ) ಯೋಜನೆಯಡಿ ಖಾಸಗಿ ಶಾಲೆಗಳಿಗೆ ರಾಜ್ಯ ಬಿಜೆಪಿ ಸರ್ಕಾರ ಸುಮಾರು ರೂ.900 ಕೋಟಿ ಬಾಕಿ ಪಾವತಿಸಬೇಕಿದೆ. ಶಿಕ್ಷಣ ಸಚಿವರು 40 ಪರ್ಸೆಂಟ್ ಕಮಿಷನ್ ಲೆಕ್ಕ ಹಾಕುತ್ತಿರುವ ಹಾಗೇ ಕಾಣುತ್ತಿದೆ. ಕಮಿಷನ್ ಎಂಬ ಸಾಂಕ್ರಾಮಿಕ ರೋಗವು ಶಿಕ್ಷಣ ಇಲಾಖೆಯನ್ನೂ ರೋಗಗ್ರಸ್ತ ಗೊಳಿಸಿದೆ. ಭ್ರಷ್ಟಾಚಾರ ಶಿಕ್ಷಣ ಇಲಾಖೆಯಲ್ಲಿ ತಾಂಡವವಾಡುತ್ತಿದೆ.
ಶಿಕ್ಷಣ ಸಚಿವ ಬಿ.ಸಿ.ನಾಗೇಶ ಅವರು ತಮ್ಮ ಇಲಾಖೆಯ ಲಂಚಾವತಾರದ ಕಡೆಗಿನ ಜನರ ಗಮನ ಬೇರೆಯ ಕಡೆಗೆ ಸೆಳೆಯಲಿಕ್ಕಾಗಿಯೇ ಪಠ್ಯಪುಸ್ತಕ, ಭಗವದ್ಗೀತೆ, ಮದರಸಾಕ್ಕೆ ಸಂಬಂಧಿಸಿದ ವಿವಾದ ಹುಟ್ಟುಹಾಕುತ್ತಿದ್ದಾರೆ. ಲಂಚಕೋರರಿಗೆ ಮುಖ ಮರೆಸಿಕೊಳ್ಳಲು ಹಿಂದುತ್ವ ಒಂದು ಮುಖವಾಡ. ಹಿಂದುತ್ವ ಮುಖವಾಡ ಹಾಕಿ ತಮ್ಮ ಭ್ರಷ್ಟತನವನ್ನು ಮರೆ ಮಾಚುತ್ತಾರೆ ಎಂದರು.

ಪತ್ರಗಳ ಬಗ್ಗೆ ತನಿಖೆಗೆ ಆದೇಶಿಸಲಿ
ಗುತ್ತಿಗೆದಾರರು ಸರ್ಕಾರದ 40 ಪರ್ಸೆಂಟ್ ಕಮಿಷನ್ ಬಗ್ಗೆ ಪ್ರಧಾನಿಗೆ ಬರೆದ ಪತ್ರಗಳಿಗೆ ಉತ್ತರ ಸಿಕ್ಕಿಲ್ಲ. ಈಗ ಖಾಸಗಿ ಶಾಲೆಗಳ ಆಡಳಿತವೂ ಹಲವು ವಿಚಾರಗಳಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಎಲ್ಲ ಪತ್ರಗಳ ಬಗ್ಗೆ ಹೈಕೋರ್ಟ್ ನ್ಯಾಯಾಧೀಶರ ನಿಗಾವಣೆಯಲ್ಲಿ ನ್ಯಾಯಾಂಗ ತನಿಖೆಗೆ ಆದೇಶ ನೀಡಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದರು.












Click it and Unblock the Notifications