ಮಂತ್ರಿಗಿರಿ ಆಕಾಂಕ್ಷಿಗಳು ಬಂಡಾಯ ಏಳುವುದಿಲ್ಲ: ಸಿದ್ದರಾಮಯ್ಯ
Recommended Video

ಬೆಂಗಳೂರು, ಜೂನ್ 2: ತಮ್ಮನ್ನು ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಿರುವ ಹೈಕಮಾಂಡ್ ನಾಯಕರಿಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕೃತಜ್ಞತೆ ಸಲ್ಲಿಸಿದ್ದಾರೆ.
ಉಭಯ ಪಕ್ಷಗಳು ಸರ್ಕಾರದಲ್ಲಿ ಹೊಂದಾಣಿಕೆಯಿಂದ ಕೆಲಸ ಮಾಡುವಂತೆ ಮತ್ತು ಪಕ್ಷ ಹಾಗೂ ಶಾಸಕರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳು ಬಾರದಂತೆ ನೋಡಿಕೊಳ್ಳಲು ಸಮನ್ವಯ ಸಮಿತಿ ರಚನೆ ಮಾಡಲಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಸರ್ಕಾರದಲ್ಲಿ ಕೈಗೊಳ್ಳಬೇಕಾದ ತೀರ್ಮಾನಗಳ ಬಗ್ಗೆ ತಿಂಗಳಲ್ಲಿ ಒಂದು ಅಥವಾ ಎರಡು ಬಾರಿ ಹಾಗೂ ಅಗತ್ಯ ಬಿದ್ದಾಗ ಸಮಿತಿಯು ಸಭೆ ಸೇರಿ ಚರ್ಚೆ ನಡೆಸಲಿದೆ.
ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮೇಲುಗೈ ಸಾಧಿಸಿದೆ ಎಂಬ ಅಭಿಪ್ರಾಯ ಸರಿಯಲ್ಲ. ಎರಡೂ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ತೀರ್ಮಾನ ಕೈಗೊಂಡಿದ್ದೇವೆ. ಮಂತ್ರಿ ಸ್ಥಾನ ಸಿಗದವರು ಬಂಡಾಯ ಏಳಲಿದ್ದಾರೆ ಎಂಬುದು ಊಹಾಪೋಹ.
— Siddaramaiah (@siddaramaiah) 1 June 2018
ಕಾಂಗ್ರೆಸ್ ಹಾಗೂ ಜೆಡಿಎಸ್ ನೀಡಿರುವ ಚುನಾವಣಾ ಪ್ರಣಾಳಿಕೆಗಳ ಕುರಿತಾಗಿಯೂ ಸಹ ಸಮಿತಿಯು ಚರ್ಚೆ ನಡೆಸಲಿದೆ. ಈ ಪ್ರಣಾಳಿಕೆಗಳನ್ನು ಮುಂದಿಟ್ಟುಕೊಂಡು ರಾಜ್ಯದ ಜನರ ಹಿತದೃಷ್ಟಿಯಿಂದ ಸಾಮಾನ್ಯ ಕನಿಷ್ಠ ಕಾರ್ಯಕ್ರಮಗಳನ್ನು ರೂಪಿಸಲಾಗುವುದು ಎಂದಿದ್ದಾರೆ.

ಸಚಿವ ಸಂಪುಟದಲ್ಲಿ ಖಾತೆಗಳ ಹಂಚಿಕೆ ವಿಚಾರದಲ್ಲಿ ಜೆಡಿಎಸ್ ಮಹತ್ವದ ಖಾತೆಗಳನ್ನು ಪಡೆದುಕೊಳ್ಳುವ ಮೂಲಕ ಕಾಂಗ್ರೆಸ್‌ಗಿಂತ ಮೇಲುಗೈ ಸಾಧಿಸಿದೆ ಎಂಬುದು ಸರಿಯಲ್ಲ. ಎರಡೂ ಪಕ್ಷಗಳ ನಾಯಕರು ಪರಸ್ಪರ ಸಮಾಲೋಚನೆ ನಡೆಸಿಯೇ ಖಾತೆಗಳ ಹಂಚಿಕೆಯ ತೀರ್ಮಾನ ಕೈಗೊಳ್ಳಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ಸಚಿವರ ಸ್ಥಾನ ಸಿಗದ ಕಾಂಗ್ರೆಸ್ ಹಾಗೂ ಜೆಡಿಎಸ್‌ನ ಆಕಾಂಕ್ಷಿಗಳು ಬಂಡಾಯದ ಬಾವುಟ ಹಾರಿಸಲಿದ್ದಾರೆ ಎಂಬುದು ಕೇವಲ ಊಹಾಪೋಹವಷ್ಟೇ. ಉಭಯ ಪಕ್ಷಗಳ ನಾಯಕರು ತೆಗೆದುಕೊಂಡ ನಿರ್ಧಾರಗಳಿಗೆ ಶಾಸಕರು ಬದ್ಧರಾಗಿರುತ್ತಾರೆ ಎಂದು ಅವರು ಹೇಳಿದ್ದಾರೆ.
ಸಮ್ಮಿಶ್ರ ಸರ್ಕಾರಕ್ಕೆ ಸೂಕ್ತ ಸಲಹೆಗಳನ್ನು ನೀಡುವ ಜತೆಯಲ್ಲಿ, ಉಭಯ ಪಕ್ಷಗಳ ನಡುವೆ ಯಾವುದೇ ಗೊಂದಲಗಳು, ಭಿನ್ನಾಭಿಪ್ರಾಯಗಳು ಮೂಡದಂತೆ ನೋಡಿಕೊಳ್ಳಲು ಹಾಗೂ ಅವುಗಳನ್ನು ಬಗೆಹರಿಸುವ ಸಲುವಾಗಿ ಈ ಸಮನ್ವಯ ಸಮಿತಿಯನ್ನು ರಚಿಸಲಾಗಿದೆ.
ಸಿದ್ದರಾಮಯ್ಯ ಅವರು ಸಮನ್ವಯ ಸಮಿತಿಯ ಮುಖ್ಯಸ್ಥರಾಗಿದ್ದರೆ, ಉಪಮುಖ್ಯಮಂತ್ರಿ ಜಿ. ಪರಮೇಶ್ವರ್, ಜೆಡಿಎಸ್‌ನ ಡಾನಿಶ್ ಅಲಿ ಸೇರಿದಂತೆ ಕೆಲವು ಮುಖಂಡರು ಸದಸ್ಯರಾಗಿದ್ದಾರೆ.












Click it and Unblock the Notifications