ಮಂಡ್ಯ : ರಸ್ತೆ ಅಭಿವೃದ್ಧಿಗೆ 192 ಕೋಟಿ ಕೊಟ್ಟ ಸಿಎಂ
ಮಂಡ್ಯ, ಜುಲೈ 13 : ತಮ್ಮ ವಿರುದ್ಧ ಮುನಿಸಿಕೊಂಡಿರುವ ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮನವೊಲಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮುಂದಾಗಿದ್ದಾರೆ. ಜಿಲ್ಲೆಯ ಬಹುದಿನದ ಬೇಡಿಕೆಯಾದ ಕೆರಗೋಡು-ಗುಬ್ಬಿ ರಸ್ತೆ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಒಪ್ಪಿಗೆ ನೀಡಿದ್ದು, ಹಣ ಬಿಡುಗಡೆಗೆ ಆದೇಶ ನೀಡಿದ್ದಾರೆ.
ಕೆರಗೋಡು-ಗುಬ್ಬಿ ನಡುವಿನ 35 ಕಿ.ಮೀ.ಉದ್ದದ ರಸ್ತೆಯನ್ನು ಹೈಟೆಕ್ ರಸ್ತೆಯಾಗಿ ಅಭಿವೃದ್ಧಿ ಮಾಡಲು ಒಪ್ಪಿಗೆ ನೀಡಬೇಕೆಂದು ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಹಿಂದೆ ಮುಖ್ಯಮಂತ್ರಿಗಳಿಗೆ ಮನವಿ ಮಾಡಿದ್ದರು. ಈಗ ಈ ಬೇಡಿಕೆಗೆ ಸಿದ್ದರಾಮಯ್ಯ ಅವರು ಸ್ಪಂದಿಸಿದ್ದಾರೆ. [ರಾಜೀನಾಮೆ ಬಗ್ಗೆ ಸಚಿವ ಅಂಬರೀಶ್ ಹೇಳಿದ್ದಿಷ್ಟು]

35 ಕಿ.ಮೀ.ರಸ್ತೆಯನ್ನು ಹೈಟೆಕ್ ರಸ್ತೆಯಾಗಿ ಅಭಿವೃದ್ಧಿಪಡಿಸಲು ಹಣಕಾಸು ಖಾತೆಯನ್ನೂ ಹೊಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಪ್ಪಿಗೆ ನೀಡಿದ್ದು, 192 ಕೋಟಿ ಅನುದಾನ ಬಿಡುಗಡೆ ಮಾಡಲು ಆದೇಶ ನೀಡಿದ್ದಾರೆ. ಇದರಿಂದ ಮಂಡ್ಯ ಜಿಲ್ಲೆಯ ಬಹುದಿನದ ಬೇಡಿಕೆ ಈಡೇರಿದಂತಾಗಿದೆ. [ಅಂಬರೀಶ್ ಬರೆದ ಪತ್ರದಲ್ಲೇನಿದೆ?]
ರಸ್ತೆ ಅಭಿವೃದ್ಧಿ ಕಾರ್ಯಕ್ರಮದ ಶಂಕುಸ್ಥಾಪನೆಗೆ ಬರುವಂತೆ ಸಚಿವ ಅಂಬರೀಶ್ ಅವರು ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿದ್ದಾರೆ. ಶೀಘ್ರದಲ್ಲಿಯೇ ಹೈಟೆಕ್ ರಸ್ತೆ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಗುವ ಸಾಧ್ಯತೆ ಇದೆ. [ಸ್ಥಳೀಯರು ಟೋಲ್ ಕಟ್ಟಬೇಕಿಲ್ಲ : ಹೈಕೋರ್ಟ್]
ಜನರು ಪ್ರತಿಭಟನೆ ನಡೆಸಿದ್ದರು : 2014ರಲ್ಲಿ ಮಂಡ್ಯ-ಗುಬ್ಬಿ ಹೆದ್ದಾರಿ ರಸ್ತೆ ಅಭಿವೃದ್ಧಿಗೆ ಮಾಡುವಂತೆ ಆಗ್ರಹಿಸಿ ಸಾತನೂರು, ಹೊನಗಾನಹಳ್ಳಿ, ಹುಲಿವಾನ, ಮರಿಲಿಂಗನದೊಡ್ಡಿ, ಕೆರಗೋಡು, ಹಲ್ಲೆಗೆರೆ ಮುಂತಾದ ಗ್ರಾಮದ ಜನರು ಪ್ರತಿಭಟನೆ ನಡೆಸಿದ್ದರು. ರಸ್ತೆಯಲ್ಲಿ ಎತ್ತಿನ ಗಾಡಿಗಳನ್ನು ನಿಲ್ಲಿಸಿ, ಅಡುಗೆ ತಯಾರಿಸಿ ಊಟ ಮಾಡಿ ರಸ್ತೆ ತಡೆ ಮಾಡಿದ್ದರು.
ಅಂಬರೀಶ್ ಮನವೊಲಿಕೆ ಯತ್ನ : ಮಂಡ್ಯ ಜಿಲ್ಲೆಯ ಬಹುದಿನದ ಬೇಡಿಕೆ ಈಡೇರಿಸಿರುವ ಸಿದ್ದರಾಮಯ್ಯ ಅವರು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವ ಅಂಬರೀಶ್ ಮನವೊಲಿಗೆ ಮಾಡಲು ಮುಂದಾಗಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆ.
ಮಂಡ್ಯ ಜಿಲ್ಲೆಯ ವಿಚಾರದಲ್ಲಿ ತಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ ಎಂದು ಸಚಿವ ಅಂಬರೀಶ್ ಬೆಳಗಾವಿಯಿಂದ ಮುನಿಸಿಕೊಂಡು ಬೆಂಗಳೂರಿಗೆ ಬಂದಿದ್ದರು. ಮುಖ್ಯಮಂತ್ರಿಗಳಿಗೆ ಬಹಿರಂಗ ಪತ್ರ ಬರೆಯುವ ಮೂಲಕ ಅಸಮಾಧಾನವನ್ನು ಹೊರಹಾಕಿದ್ದರು.












Click it and Unblock the Notifications