ಕುಮಾರಸ್ವಾಮಿ ಯಾವತ್ತೂ ಸ್ವಂತ ಶಕ್ತಿ ಮೇಲೆ ಅಧಿಕಾರಕ್ಕೆ ಬರಲ್ಲ: ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ ಇಂದು ಮೈಸೂರಿನಲ್ಲಿ ₹2,578 ಕೋಟಿಯ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಉದ್ಘಾಟಿಸಿ, ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನಾ ಸಮಾವೇಶ ಉದ್ದೇಶಿಸಿ ಮಾತನಾಡಿದರು. ಇದೇ ವೇಳೆ ಅವರು ವಿಪಕ್ಷಗಳ ವಿರುದ್ಧವೂ ಗುಡುಗಿದರು. ಜೆಡಿಎಸ್-ಬಿಜೆಪಿ ಸುಳ್ಳುಗಳಿಗೆ ನಮ್ಮ ಅಭಿವೃದ್ಧಿ ಕಾರ್ಯಗಳೇ ಉತ್ತರ. ರಾಜ್ಯದ ಜನರ ಮನೆ ಬಾಗಿಲಿಗೆ ನಮ್ಮ ಯೋಜನೆಗಳ ಮೂಲಕ ತಲುಪಿದ್ದೇವೆ. ರಾಜ್ಯದ ಜನರಿಗೆ ಸರಣಿ ಸುಳ್ಳುಗಳ ಮೂಲಕ ಹಾದಿ ತಪ್ಪಿಸುತ್ತಿರುವ ಬಿಜೆಪಿ ಮತ್ತು ಜೆಡಿಎಸ್‌ನವರು ಒಂದೇ ವೇದಿಕೆಗೆ ಬರಲಿ. ನಮ್ಮ ಸರ್ಕಾರದ ಅಭಿವೃದ್ಧಿ ಕಾರ್ಯಗಳ ಬಗ್ಗೆ ಬಹಿರಂಗ ಚರ್ಚೆ ನಡೆಸೋಣ. ನಾನೂ ಬರುತ್ತೇನೆ. ಅವರು ನನ್ನ ಈ ಸವಾಲು ಸ್ವೀಕರಿಸಲಿ ಎಂದು ತೊಡೆತಟ್ಟಿದ್ದಾರೆ.
ಅಭಿವೃದ್ಧಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಅಪಪ್ರಚಾರ ಮಾಡುತ್ತಿರುವ ಬಿಜೆಪಿಯವರಿಗೆ ಇವತ್ತಿನ ಅಭಿವೃದ್ಧಿ ಕಾರ್ಯಗಳೇ ಉತ್ತರ. ಬಿಜೆಪಿ-ಜೆಡಿಎಸ್‌ನವರಿಗೆ ಈ ಮಟ್ಟಿನ ಮತ್ಸರ ಇರಬಾರದು. ನಮ್ಮ ಅಭಿವೃದ್ಧಿ ಕಾರ್ಯಗಳನ್ನು ಸಹಿಸದೆ ಅತೀ ಮತ್ಸರ ಪಡುತ್ತಿದ್ದಾರೆ. ಬಿಜೆಪಿ ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿದರೆ, ಜೆಡಿಎಸ್‌ನ ಹೆಚ್‌ಡಿ ಕುಮಾರಸ್ವಾಮಿ ಸ್ವಂತ ಶಕ್ತಿ ಮೇಲೆ ಯಾವತ್ತೂ ಅಧಿಕಾರಕ್ಕೆ ಬರಲು ಸಾಧ್ಯವೇ ಇಲ್ಲ. ರಾಜ್ಯದ ಜನರ ಪ್ರೀತಿ, ವಿಶ್ವಾಸ, ಅಭಿಮಾನ ಉಳಿಸಿಕೊಳ್ಳದ ಇವರಿಗೆ ನಮ್ಮ ಸರ್ಕಾರದ ಬಗ್ಗೆ ಟೀಕಿಸುವ ನೈತಿಕತೆ ಎಲ್ಲಿದೆ? ಎಂದು ಪ್ರಶ್ನಿಸಿದ್ದಾರೆ.

ಅನ್ಯಾಯ ಪ್ರಶ್ನಿಸುವ ಧೈರ್ಯ ಇಲ್ಲ
ಬಿಜೆಪಿ ಮತ್ತು ಜೆಡಿಎಸ್ ರಾಜ್ಯದ ಪರವಾಗಿ ಇಲ್ಲ, ರಾಜ್ಯದ ಜನರ ಪರವಾಗಿ ಇಲ್ಲ. ಪ್ರತಿ ವರ್ಷ ನಾವು ರಾಜ್ಯದಿಂದ ಕೇಂದ್ರಕ್ಕೆ ಕೊಡುವ ತೆರಿಗೆಯಲ್ಲಿ ರಾಜ್ಯಕ್ಕೆ ಬರುತ್ತಿರುವುದು ಅತ್ಯಲ್ಪ. ರಾಜ್ಯಕ್ಕೆ ಆದ ಅನ್ಯಾಯವನ್ನು ಸರಿಪಡಿಸಿ ಎಂದು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕೇಳುವ ಧೈರ್ಯ ಕೇಂದ್ರ ಸಚಿವ ಕುಮಾರಸ್ವಾಮಿ, ಪ್ರಹ್ಲಾದ್ ಜೋಶಿ ಸೇರಿ ಸಂಸದರಾದ ಬೊಮ್ಮಾಯಿ ಸೇರಿ ಯಾರಿಗೂ ಇಲ್ಲ. ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಸೊಲ್ಲೆತ್ತದ ಬಿಜೆಪಿ-ಜೆಡಿಎಸ್ ರಾಜ್ಯದ ಜನಕ್ಕೆ ದ್ರೋಹ ಎಸಗಿದ್ದಾರೆ ಎಂದು ದೂರಿದ್ದಾರೆ.
ನಾವು ಐದು ಗ್ಯಾರಂಟಿಗಳಲ್ಲದೆ ಅಭಿವೃದ್ಧಿ ಕಾರ್ಯಗಳಿಗೆ ಲಕ್ಷ ಕೋಟಿಯಷ್ಟು ಹಣ ಕೊಟ್ಟಿದ್ದೇವೆ. ನಾವು ಜಾರಿ ಮಾಡಿರುವ ಅಭಿವೃದ್ಧಿ ಕಾರ್ಯಗಳು ಕೇವಲ ಕಾಂಗ್ರೆಸ್ ನವರಿಗೆ ಕೊಟ್ಟಿದ್ದಲ್ಲ, ಬಿಜೆಪಿ-ಜೆಡಿಎಸ್ ಬೆಂಬಲಿಗರು ಮತ್ತು ಮತದಾರರಿಗೂ ಪ್ರತೀ ದಿನ, ಪ್ರತೀ ತಿಂಗಳೂ ಸರ್ಕಾರದ ನೆರವು ದೊರೆಯುತ್ತಿದೆ. ಮೊನ್ನೆಯಷ್ಟೇ ಶಕ್ತಿ ಯೋಜನೆಯಡಿ ಪ್ರಯಾಣಿಸಿದ 500ನೇ ಕೋಟಿಯ ಮಹಿಳೆಗೆ ನಾನೇ ಉಚಿತ ಟಿಕೆಟ್ ಕೊಟ್ಟಿದ್ದೇನೆ. ಇದು ನಮ್ಮ ಸರ್ಕಾರದ ಬದ್ಧತೆ ಎಂದು ಬೆನ್ನುತಟ್ಟಿಕೊಂಡಿದ್ದಾರೆ.
ಜವಾಹರಲಾಲ್ ನೆಹರೂ ಅವಧಿಯಿಂದ ಇಂದಿರಾಗಾಂಧಿ, ರಾಜೀವ್ ಗಾಂಧಿ, ಮನಮೋಹನ್ ಸಿಂಗ್ ಅವಧಿಯವರೆಗೂ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ರೂಪಿಸಿ ಜಾರಿ ಮಾಡುತ್ತಿರುವುದು ನಮ್ಮ ಪಕ್ಷದ ಸರ್ಕಾರ ಎನ್ನುವುದನ್ನು ಇಡೀ ದೇಶ ಮರೆಯಲು ಸಾಧ್ಯವಿಲ್ಲ. ಆಹಾರ ಭದ್ರತಾ ಕಾಯ್ದೆ, ಕಡ್ಡಾಯ ಶಿಕ್ಷಣ ಕಾಯ್ದೆ, ನರೇಗಾ, ಮಾಹಿತಿ ಹಕ್ಕು ಕಾಯ್ದೆ ಈ ಎಲ್ಲವೂ ಆಗಿದ್ದು ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ. ಬಿಜೆಪಿ ಅವಧಿಯಲ್ಲಿ ಇವರು ಏನು ಮಾಡಿದ್ದಾರೆ ತೋರಿಸಲಿ? ಎಂದು ಸವಾಲ್ ಹಾಕಿದ್ದಾರೆ.
ಮನುವಾದಿಗಳು ಸಾಮಾಜಿಕ ನ್ಯಾಯ ಮತ್ತು ಹಿಂದುಳಿದ ಸಮುದಾಯಗಳ ಅಭಿವೃದ್ಧಿಯ ವಿರೋಧಿಗಳು, ಸಂವಿಧಾನದ ವಿರೋಧಿಗಳು. ಆದ್ದರಿಂದ ಸಾಮಾಜಿಕ ನ್ಯಾಯದ ಪರವಾಗಿರುವ ನಮ್ಮನ್ನು ಟೀಕಿಸುತ್ತಿದ್ದಾರೆ. ಸಂವಿಧಾನವನ್ನು ಬದಲಾಯಿಸಲು ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ದೇಶದ ಜನ ಮತ್ತು ಕಾಂಗ್ರೆಸ್ ಪಕ್ಷ ಬಿಜೆಪಿ ಮತ್ತು ಮನುವಾದಿಗಳ ಷಡ್ಯಂತ್ರವನ್ನು ಸೋಲಿಸುತ್ತಾರೆ ಎಂದು ಸಿದ್ದರಾಮಯ್ಯ ವಿಪಕ್ಷಗಳಿಗೆ ಎಚ್ಚರಿಕೆ ಕೊಟ್ಟಿದ್ದಾರೆ.












Click it and Unblock the Notifications