New Year 2026: ಹೊಸ ವರ್ಷಾಚರಣೆ ಸಂಭ್ರಮ: ಪೊಲೀಸ್ ಅಧಿಕಾರಿಗಳಿಗೆ ಸಿದ್ದರಾಮಯ್ಯ ಕೊಟ್ಟ ಸೂಚನೆಗಳೇನು?
ಬೆಂಗಳೂರು: ಹೊಸ ವರ್ಷಾಚರಣೆಗೆ ರಾಜ್ಯ ರಾಜಧಾನಿ ಬೆಂಗಳೂರು ಸಿದ್ದವಾಗುತ್ತಿದೆ. ಹೊಸ ವರ್ಷದ ಸಂಭ್ರಮದ ವೇಳೆ ಕಾನೂನು ಸುವ್ಯವಸ್ಥೆಯನ್ನ ಕಾಪಾಡಲು ನಗರ ಪೊಲೀಸರು ಭರ್ಜರಿ ತಯಾರಿ ನಡೆಸುತ್ತಿದ್ದಾರೆ. ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ಹಾಗೂ ಅಹಿತಕರ ಘಟನೆ ನಡೆಯದಂತೆ ಸೂಕ್ತ ವ್ಯವಸ್ಥೆಯನ್ನ ಕಲ್ಪಿಸುವ ನಿಟ್ಟಿನಲ್ಲಿ ಹಾಗೂ ಹೊಸ ವರ್ಷಾಚರಣೆ ವೇಳೆ ಜನರ ಸುರಕ್ಷತೆ ನಮ್ಮ ಆದ್ಯ ಕರ್ತವ್ಯ. ಯಾವುದೇ ಕಾರಣಕ್ಕೂ ಮಹಿಳೆ ಮತ್ತು ಮಕ್ಕಳಿಗೆ ಸಮಸ್ಯೆ ಆಗಬಾರದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಖಡಕ್ ಸೂಚನೆ ನೀಡಿದ್ದಾರೆ.
ಗೃಹ ಕಚೇರಿ ಕೃಷ್ಣಾದಲ್ಲಿ ಇಂದು ಪೊಲೀಸ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಮುಖ್ಯಮಂತ್ರಿಗಳು ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾಹಿತಿ ಪಡೆದರು. ಹೊಸ ವರ್ಷಾಚರಣೆ ವೇಳೆ ಬೆಂಗಳೂರು ಮಹಾ ನಗರದಲ್ಲಿ ಅಹಿತಕರ ಘಟನೆಗಳಿಗೆ ಆಸ್ಪದವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪೊಲೀಸ್ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಹೊಸ ವರ್ಷಾಚರಣೆ ಸಂದರ್ಭದಲ್ಲಿ ಮಹಿಳೆಯರ ಸುರಕ್ಷತೆಗೆ ಎಲ್ಲಾ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ನೋಡಿಕೊಳ್ಳಬೇಕು. ಹೊಸ ವರ್ಷಾಚರಣೆ ಬಳಿಕ ಜನರು ಸುಲಭವಾಗಿ ಜನರು ತಮ್ಮ ಮನೆಗಳಿಗೆ ಹಿಂತಿರುಗಲು ಅನುಕೂಲವಾಗುವಂತೆ ಮಧ್ಯರಾತ್ರಿ ಬಳಿಕ ಹೆಚ್ಚಿನ ಸಂಖ್ಯೆಯಲ್ಲಿ ಬಿಎಂಟಿಸಿ ಬಸ್‌ಗಳ ವ್ಯವಸ್ಥೆಯನ್ನು ಮಾಡಬೇಕು. ಮಹಾತ್ಮಾ ಗಾಂಧಿ ರಸ್ತೆ, ಬ್ರಿಗೇಡ್ ರೋಡ್, ಚರ್ಚ್ ಸ್ಟೀಟ್, ಕೋರಮಂಗಲ, ಇಂದಿರಾನಗರ ಸೇರಿದಂತೆ ಪ್ರಮುಖ ಸ್ಥಳಗಳಲ್ಲಿ ಜನದಟ್ಟಣೆಯಾಗಿ ಯಾವುದೇ ಅನಾಹುತವಾಗದಂತೆ ಕ್ರಮಗಳನ್ನು ಕೈಗೊಳ್ಳಬೇಕು. ಇದಕ್ಕಾಗಿ ಆಧುನಿಕ ತಂತ್ರಜ್ಞಾನದ ಸಮರ್ಪಕ ಬಳಕೆ ಮಾಡಬೇಕು.
ಭದ್ರತೆಗಾಗಿ 20 ಸಾವಿರ ಪೊಲೀಸರನ್ನು ಬೆಂಗಳೂರು ನಗರದಲ್ಲಿ ನಿಯೋಜಿಸಲಾಗುತ್ತಿದ್ದು, ಬೇರೆ ಜಿಲ್ಲೆಗಳಿಂದ 1200 ಪೊಲೀಸರನ್ನು ಈ ಬಾರಿ ನಿಯೋಜಿಸುತ್ತಿದ್ದೇವೆ. ಮಹಿಳಾ ಪೊಲೀಸರನ್ನು ಹೆಚ್ಚಿನ ಸಂಖ್ಯೆಯಲ್ಲಿ ನಿಯೋಜಿಸಬೇಕು. ಚೆನ್ನಮ್ಮ ಪಡೆಗಳನ್ನು ಸಕ್ರಿಯವಾಗಿ ನಿಯೋಜಿಸಬೇಕು. ನಗರದಲ್ಲಿ ಹೊಸ ವರ್ಷಾಚರಣೆ ಸುಗಮವಾಗಿ ನಡೆಯಲು ಸಾಧ್ಯವಾಗುವಂತೆ 4 ಕಂಟ್ರೋಲ್ ರೂಂ, 78 ಕಾವಲು ಗೋಪುರ, 164 ಮಹಿಳಾ ಸಹಾಯ ಡೆಸ್ಕ್, 55 ಅಂಬುಲೆನ್ಸ್ಗಳ ವ್ಯವಸ್ಥೆ ಮಾಡಲಾಗಿದೆ. ಕಳೆದ ಮೂರು ದಿನಗಳಲ್ಲಿ 3,500 ಡ್ರಿಂಕ್ ಆಂಡ್ ಡ್ರೈವ್ ಪ್ರಕರಣಗಳನ್ನು ದಾಖಲಿಸಲಾಗಿದೆ.
ನಗರದಲ್ಲಿರುವ 50 ಫ್ಲೈ ಓವರ್ಗಳಲ್ಲಿ ಹೊಸ ವರ್ಷಾಚರಣೆ ರಾತ್ರಿ ದ್ವಿಚಕ್ರ ವಾಹನಗಳ ಸಂಚಾರ ಸ್ಥಗಿತಗೊಳಿಸಲಾಗುವುದು. ಕಿಡಿಗೇಡಿಗಳ ಮೇಲೆ ನಿರಂತರ ನಿಗಾ ಇರಿಸಬೇಕು. ವ್ಹೀಲಿಂಗ್ ಮಾಡುವುದಕ್ಕೆ ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು. ಮಾದಕ ದ್ರವ್ಯ ಚಟುವಟಿಕೆಗಳ ನಿಯಂತ್ರಣಕ್ಕೆ ನಿರ್ದಾಕ್ಷಿಣ್ಯ ಕ್ರಮಗಳನ್ನು ಕೈಗೊಳ್ಳಬೇಕು. ಇದನ್ನು ಯಾವುದೇ ಕಾರಣಕ್ಕೂ ಸಹಿಸಲು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಅವರು ಎಚ್ಚರಿಕೆ ನೀಡಿದರು.
ಸಚಿವರಾದ ಡಾ. ಜಿ ಪರಮೇಶ್ವರ್, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ಡಾ ಶಾಲಿನಿ ರಜನೀಶ್, ನಗರ ಪೊಲೀಸ್ ಆಯುಕ್ತರಾದ ಸೀಮಂತ್ ಕುಮಾರ್ ಸಿಂಗ್, ರಾಜ್ಯ ಪೊಲೀಸ್ ಮಹಾನಿರ್ದೇಶಕರಾದ ಡಾ ಎಂ ಎ ಸಲೀಂ , ಜಿ ಬಿ ಎ ಮುಖ್ಯ ಆಯುಕ್ತರಾದ ಮಹೇಶ್ವರ ರಾವ್, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಹಾಜರಿದ್ದರು.












Click it and Unblock the Notifications