ಬಿ.ಕೆ ಹರಿ ಪ್ರಸಾದ್ ಪ್ರಭಾವ ಹೆಚ್ಚಿದೆ, ಸಿದ್ದರಾಮಯ್ಯ ಅಸಹಾಯಕರಾಗಿದ್ದಾರೆ: ಬಸವರಾಜ ಬೊಮ್ಮಾಯಿ ಹೇಳಿದ್ದೇನು?
ಬಳ್ಳಾರಿ, ಸೆಪ್ಟೆಂಬರ್ 11: ಸಿದ್ದರಾಮಯ್ಯ ಅವರನ್ನು ಎರಡು ರೂಪದಲ್ಲಿ ನಾ ನೋಡಿರುವೆ. ಸಿದ್ದರಾಮಯ್ಯ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ.. ಅವರ ಆಡಳಿತ ಮೇಲೂ ಇದೆ, ರಾಜಕೀಯ ವಿಚಾರದಲ್ಲೂ ಇದೆ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು
ಇನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತದ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ಸಿದ್ದರಾಮಯ್ಯ ಅವರು 2013 ರಲ್ಲಿ ಒಂದು ರೀತಿಯಲ್ಲಿ ಇದ್ದರು, ಈಗ ಇರುವ ಸಿದ್ದರಾಮಯ್ಯ ಬೇರೆ. ಸಿದ್ದರಾಮಯ್ಯ ಮೇಲೆ ಕೆಲ ಕಾಂಗ್ರೆಸ್ ನಾಯಕರ ಪ್ರಭಾವ ಇದೆ. ಸಿದ್ದರಾಮಯ್ಯ ಅವರ ಮೇಲೆ ಆಂತರಿಕ ಒತ್ತಡ ಇದೆ. ಅದರ ಒಂದು ಭಾಗ ಹರಿಪ್ರಸಾದ ಅವರು ಮಾತನಾಡಿದ್ದಾರೆ. ಅವರು ಸಂಪೂರ್ಣವಾಗಿ ಮಾತನಾಡಿದರೂ ಅದಕ್ಕೆ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿಲ್ಲ, ಇದರಿಂದ ಒಂದು ಗೊತ್ತಾಗುತ್ತದೆ. ಹರಿ ಪ್ರಸಾದ್ ಅವರು ಪ್ರಭಾವ ಹೆಚ್ಚಿದೆ ಎಂದು ಹೇಳಿದರು.

ಸಿದ್ದರಾಮಯ್ಯ ಅವರು ಬಹಳ ಇಂಡಿಪೆಂಡೆಂಟ್ ಆಡಳಿತ ಮಾಡಿದವರು. ಆದರೆ ಅವರು ಈಗ ಒತ್ತಡದಲ್ಲಿ ಆಡಳಿತ ಮಾಡುತಿದ್ದಾರೆ. ಆಂತರಿಕವಾಗಿ ಬಹಳ ಅಡೆತಡೆಯಲ್ಲಿ ಸಿಎಂ ಕೆಲಸ ಮಾಡುತಿದ್ದಾರೆ. ಮುಖ್ಯಮಂತ್ರಿ ಅವರು ಆಡಳಿತದ ಮೇಲೆ ಹಿಡಿತ ಕಳೆದು ಕೊಂಡಿದ್ದಾರೆ. ವರ್ಗಾವಣೆ ದಂದೆ ಅವರ ಮೂಗಿನ ನೇರಕ್ಕೆ ನಡೆದರೂ ಅವರು ಅಸಹಾಯಕರಾಗಿದ್ದಾರೆ ಎಂದು ಬಸವರಾಜ ಬೊಮ್ಮಾಯಿ ತಿಳಿಸಿದರು.
ಇನ್ನೂ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ ಅವರು, ರಾಜ್ಯದ ಆರ್ಥಿಕ ದಿವಾಳಿ ಆದರೂ ಅವರು ಏನು ಮಾಡದ ಪರಿಸ್ಥಿತಿಯಲ್ಲಿ ಇದ್ದಾರೆ. ವರ್ಗಾವಣೆ ಮುಖ್ಯಮಂತ್ರಿ ಕಚೇರಿಯಲ್ಲಿ ನಡೆಯುತ್ತಿದೆ. ಅದನ್ನು ತಡೆಯುವಲ್ಲಿ ಸಿಎಂ ಅಸಹಾಯಕ ಆಗಿದ್ದಾರೆ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳಲ್ಲಿ ಅವರ ಶಾಸಕರು ಅವರ ಆಡಳಿತದ ಬಗ್ಗೆ ಮಾತನಾಡುತ್ತಾರೆ. ಇದು ಸಿದ್ದರಾಮಯ್ಯ ಆಡಳಿತಕ್ಕೆ ಹಿಡಿದ ಕನ್ನಡಿ ಎಂದು ಹೇಳಿದರು.

ಲೋಕಸಭಾ ಚುನಾವಣೆಗೆ ಜೆಡಿಎಸ್ ಜೊತೆಗಿನ ಮೈತ್ರಿ ವಿಚಾರವಾಗಿ ಮಾತನಾಡಿ, ಜೆಡಿಸ್ ಜೊತೆಗಿನ ಮೈತ್ರಿ ವಿಚಾರ ಇನ್ನೂ ಪ್ರಾಥಮಿಕ ಹಂತದಲ್ಲಿದೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಏನು ಹೇಳಿಕೆ ನೀಡಿದ್ದಾರೆ ನನಗೆ ಗೊತ್ತಿಲ್ಲ. ಕರ್ನಾಟಕದಲ್ಲಿ ನಾಲ್ಕು ತಿಂಗಳ ಆಡಳಿತ ನೋಡಿದರೆ. ಎಲ್ಲರೂ ಸೇರಿ ಕಾಂಗ್ರೆಸ್ ವಿರೋಧ ಮಾಡುವ ಅವಶ್ಯಕತೆ ಇದೆ. ಕುಮಾರಸ್ವಾಮಿ ಅವರ ಹೇಳಿಕೆ ಗಮನಿಸಿದರೆ, ಮೈತ್ರಿ ಮಾಡಿಕೊಳ್ಳುವ ವಿಚಾರ ಸುದೀರ್ಘ ಚೆರ್ಚೆ ಆಗಬೇಕು. ಮೈತ್ರಿ ವಿಚಾರ ಇನ್ನೂ ಅಂತಿಮ ಹಂತದ ನಿರ್ಧಾರ ಆಗಿಲ್ಲ. ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದರು.
ವೀರಶೈವ ಲಿಂಗಾಯತ ಸಮುದಾಯ ಕನ್ನಡನಾಡಿಗೆ ದೊಡ್ಡ ಕೊಡುಗೆ ನೀಡಿದೆ. ನಮ್ಮ ಜೀವನ ಪದ್ದತಿಗೆ ಉತ್ಕರ್ಷ ಪದ್ದತಿ ಇದೆ. ಇವತ್ತು ಈ ಪರಂಪರೆ ಬದಲಾವಣೆ ಆಗಿದೆ, ನಮ್ಮ ಸಮಾಜದ ಚಿಂತನೆಯಲ್ಲಿ ಬದಲಾವಣೆ ಆಗಿದೆ. ಯಾವುದೇ ಧರ್ಮ ಸಮಯವನ್ನು ಮೀರಿ ಕಾಲವನ್ನು ಮೀರಿ ತನ್ನ ಅಸ್ತಿತ್ವ ಉಳಿಸಿಕೊಳ್ಳ ಬೇಕು. ನಮ್ಮ ಸಮಾಜ ಈ ನಾಡಿಗೆ ಬಹು ದೊಡ್ಡ ಕೊಡುಗೆಯನ್ನು ನೀಡಿದೆ ಎಂದು ಹೇಳಿದರು.
ಈ ದೇಶದಕ್ಕೆ ಐದು ಸಾವಿರ ವರ್ಷಗಳ ಚರಿತ್ರೆ ಇದೆ.ವ ಚರಿತ್ರೆಯ ಜೊತೆಗೆ ಚಾರಿತ್ರ್ಯ ಇದ್ದರೆ ಮಾತ್ರ ದೇಶ ಬೆಳೆಯುತ್ತದೆ. ನಮ್ಮ ಮನೆಯಿಂದ ನಮ್ಮ ಚಾರಿತ್ರ್ಯ ಬೆಳೆಯುತ್ತದೆ. ನಮ್ಮ ಸಮಾಜಗಳ ನಡುವೆ ಸಾಮ್ಯತೆ ಬೇಕು, ಒಬ್ಬರು ಬೆಳೆಯುತ್ತಾರೆ ಎಂದಾಕ್ಷಣ ಇನ್ನೊಬ್ಬರ ಕಾಲು ಎಳೆಯುತ್ತಾರೆ. ಸಮಾಜಗಳ ನಡುವೆ ಸಮನ್ವಯತೆ ಬೇಕು, ಕೂಡಿ ಕೆಲಸ ಮಾಡಿದರೆ ಸಮಾಜ ಬೆಳೆಯುತ್ತವೆ. ಸಮಾಜ ಸಮಾಜಗಳ ನಡುವಿನ ಸಂಘರ್ಷ ಬಿಡಬೇಕು.
ನಾವು ಈ ನಾಡಿನಲ್ಲಿ ಹುಟ್ಟಿದ್ದು ನಮ್ಮ ಪುಣ್ಯ, ಧರ್ಮ ಆಚರಣೆ, ವಿಚಾರ ವೈಶಾಲ್ಯತೆ ಇರುವ ಸಮಾಜದಲ್ಲಿ ನಾವು ಹುಟ್ಟಿದ್ದೆವೆ. ಮುಂದಿನ ಸಮಾಜಕ್ಕೆ ಈ ಸಂಸ್ಕೃತಿಯನ್ನು ಉಳಿಸಿ ಕೊಡಬೇಕು.ಸಮಾಜವನ್ನು ಕಟ್ಟಿ ಬೆಳಸಲು ಯುವಕರು ಬರಬೇಕು. ಸಮಾಜ ನಿಂತ ನೀರಿನ ಹಾಗೆ ಆಗಬಾರದು. ಸಮಾಜದಲ್ಲಿ ಯುವಕರ ಪಾಲುದಾರಿಕೆ ಹೆಚ್ಚಾಗಬೇಕು. ಹಿರಿಯರಾದ ನಮ್ಮ ಮೇಲೆ ಸಮಾಜದ ಯುವಕರನ್ನು ಬೆಳೆಸುವ ಜವಾಬ್ದಾರಿ ಇದೆ ಎಂದು ಹೇಳಿದರು.












Click it and Unblock the Notifications