ಮೋದಿಯವರ ಈ 9 ವರ್ಷಗಳ ಆಡಳಿತದಲ್ಲಿ ದೇಶ ಎಷ್ಟು ಹಾಳಾಗಿದೆ ನೋಡಿ: ಸಿದ್ದರಾಮಯ್ಯ ಹೇಳಿದ್ದೇನು?
ಬೆಂಗಳೂರು,ಮೇ4: ನಂಬರ್ ಒನ್ ಕರ್ನಾಟಕದ ಬಗ್ಗೆ ಮಾತನಾಡುವ ಮೋದಿಯವರು ಭಾರತವನ್ನು ಪಾತಾಳದತ್ತ ಎಳೆದೊಯ್ಯುತ್ತಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ಈ ಕುರಿತು ಮಾಹಿತಿ ನೀಡಿದ ಸಿದ್ದರಾಮಯ್ಯ ಅವರು, ಮೋದಿಯವರು ಈ ದೇಶದ ಪ್ರಧಾನಿ ಎಂಬುದನ್ನು ಮರೆತು ಕರ್ನಾಟಕದ ಮುಖ್ಯಮಂತ್ರಿ ಅಭ್ಯರ್ಥಿಯಂತೆ ಮಾತನಾಡುತ್ತಿದ್ದಾರೆ. ಪ್ರತಿ ಬಾರಿ ಚುನಾವಣೆ ಬಂದಾಗಲೂ ಹೇಳಿದ್ದನ್ನೆ ಹೇಳುತ್ತಿದ್ದಾರೆ. ಬಿಜೆಪಿಯವರ ದುರಂತ ಸ್ಥಿತಿ ಹೇಗಿದೆಯೆಂದರೆ ಹೇಳಿಕೊಳ್ಳಲು ಒಂದೇ ಒಂದು ಕಾರ್ಯಕ್ರಮವಿಲ್ಲ. ಸಾಧನೆ ಇಲ್ಲ ಎಂದರು.

ಮೋದಿಯವರಾದಿಯಾಗಿ ಬಿಜೆಪಿ ನಾಯಕರು ಕರ್ನಾಟಕವನ್ನು ನಂಬರ್ ಒನ್ ಮಾಡುತ್ತೇವೆ ಎನ್ನುತ್ತಾರೆ. ಮೋದಿಯವರು ಹೋದ ಎಲ್ಲ ರಾಜ್ಯಗಳಲ್ಲೂ ಹೀಗೆ ಹೇಳುತ್ತಾರೆ. ಇಷ್ಟಕ್ಕೂ ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿಯೆ ಕರ್ನಾಟಕವು ಅನೇಕ ವಿಚಾರಗಳಲ್ಲಿ ನಂಬರ್ ಒನ್ ಆಗಿತ್ತು. ಕೈಗಾರಿಕೆ, ಸೇವಾ ವಲಯಗಳಲ್ಲಿ ನಾವು ಮುಂದೆಯೇ ಇದ್ದೆವು. ಈ ಪ್ರತಿಷ್ಠೆಯನ್ನು ಹಾಳು ಮಾಡಿದ್ದೆ ಬಿಜೆಪಿ ಸರ್ಕಾರ.
ಮೋದಿಯವರ ಈ 9 ವರ್ಷಗಳ ಆಡಳಿತದಲ್ಲಿ ದೇಶ ಎಷ್ಟು ಹಾಳಾಗಿದೆ ನೋಡಿ
1. ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 2014 ರಲ್ಲಿ 55ನೆ ಸ್ಥಾನದಲ್ಲಿದ್ದ ದೇಶ 2022-23 ರಲ್ಲಿ 107 ನೇ ಸ್ಥಾನಕ್ಕೆ ಕುಸಿದಿದೆ.
2. ಲಿಂಗ ತಾರತಮ್ಯದಲ್ಲಿ 146 ದೇಶಗಳಲ್ಲಿ 114 ನೇ ಸ್ಥಾನದಲ್ಲಿದ್ದ ದೇಶ ಈಗ 135 ನೆ ಸ್ಥಾನಕ್ಕೆ ಕುಸಿದಿದೆ.
3. ಪತ್ರಿಕಾ ಸ್ವಾತಂತ್ರ್ಯದಲ್ಲಿ 2014 ರಲ್ಲಿ 140 ನೆ ಸ್ಥಾನದಲ್ಲಿದ್ದ ಭಾರತ 161 ನೇ ಸ್ಥಾನಕ್ಕೆ ಕುಸಿದಿದೆ.

4. ಕಾನೂನು ಸುವ್ಯವಸ್ಥೆಯ ವಿಚಾರದಲ್ಲಿ 2016 ದಲ್ಲಿ 66 ರಲ್ಲಿ 2022 ರಲ್ಲಿ 77 ಸ್ಥಾನಕ್ಕೆ ಕುಸಿದಿದೆ.
5. ಮಾನವ ಅಭಿವೃದ್ಧಿ ಸೂಚ್ಯಂಕದಲ್ಲಿ 2014 ರಲ್ಲಿ 130 ನೇ ಸ್ಥಾನದಲ್ಲಿದ್ದ ಭಾರತ 2022 ರಲ್ಲಿ 132 ನೇ ಸ್ಥಾನಕ್ಕೆ ಕುಸಿದಿದೆ.
6. 2011-12 ಸ್ಥಿರ ಬೆಲೆಗಳಲ್ಲಿ ತಲಾದಾಯವು 2014-15 ರಲ್ಲಿ 72805 ರೂಪಾಯಿಗಳಿದ್ದರೆ 2022-23 ರಲ್ಲಿ 98 ಸಾವಿರ ರೂಪಾಯಿಗಳಾಗಿದೆ. 9 ವರ್ಷಗಳಲ್ಲಿ ಹೆಚ್ಚಾದ ತಲಾದಾಯ ಕೇವಲ 15 ಸಾವಿರ ರೂಪಾಯಿಗಳು ಮಾತ್ರ.
7. ಚೀನಾ ದೇಶದಿಂದ ಆಮದು ಮಾಡಿಕೊಳ್ಳುವ ಪ್ರಮಾಣ ಸುಮಾರು 10 ಲಕ್ಷ ಕೋಟಿ ರೂಗಳಿದ್ದರೆ, ರಫ್ತು ಮಾಡುವ ಪ್ರಮಾಣ 3 ಲಕ್ಷ ಕೋಟಿ ರೂಪಾಯಿಗಳಷ್ಟೂ ಇಲ್ಲ. ಹಾಗಿದ್ದರೆ ಮೇಕ್ ಇನ್ ಇಂಡಿಯಾ ಘೋಷಣೆ ಎಲ್ಲಿ?
8. 2014 ರಲ್ಲಿ ಪ್ರತಿಯೊಬ್ಬರ ತಲೆಯ ಮೇಲೆ 57 ಸಾವಿರ ರೂಪಾಯಿ ಸಾಲವಿದ್ದರೆ, 2023 ರಲ್ಲಿ 1.90 ಲಕ್ಷ ರೂಪಾಯಿಗಳಷ್ಟಾಗಿದೆ.
9. ಅಡುಗೆ ಗ್ಯಾಸ್, ಡೀಸೆಲ್, ಪೆಟ್ರೋಲ್, ಅಡುಗೆ ಎಣ್ಣೆ, ಅಕ್ಕಿ, ಬೇಳೆ ಸೇರಿದಂತೆ ಎಲ್ಲ ಬೆಲೆಗಳು ದುಪ್ಪಟ್ಟಾಗಿವೆ. ಎಲ್ಲ ರೀತಿಯಲ್ಲೂ ಜನರನ್ನು ಕೊಳ್ಳೆ ಹೊಡೆಯಲಾಗುತ್ತಿದೆ.
10. ಸಣ್ಣ ಕೈಗಾರಿಕೆಗಳನ್ನು ಮುಚ್ಚುತ್ತಿರುವುದರಿಂದ ನಿರುದ್ಯೋಗ ತಾರಕಕ್ಕೇರುತ್ತಿದೆ. ಸೇವಾ ವಲಯದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆನ್ಸ್ ದಾಂಗುಡಿಯಿಡುತ್ತಿರುವದರಿಂದ ಕೋಟ್ಯಾಂತರ ಹುದ್ದೆಗಳು ಕಣ್ಮರೆಯಾಗುತ್ತವೆ. ಈಗಾಗಲೆ ಅನೇಕ ದೇಶಗಳು ಆರ್ಟಿಫಿಷಿಯಲ್ ಇಂಟೆಲಿಜೆನ್ಸನ್ನು ಹೇಗೆ ನಿಭಾಯಿಸಬೇಕು ಎಂದು ಕಾನೂನು ಮಾಡಿವೆ. ನಮ್ಮಲ್ಲಿ ಮೋದಿ ಸರ್ಕಾರ ಕಣ್ಣು ಮುಚ್ಚಿ ಕೂತಿದೆ.

ಮೋದಿಯವರು ಅದಾನಿ, ಅಂಬಾನಿ ಮುಂತಾದ ಕೆಲವೇ ಕಾರ್ಪೊರೇಟ್ ಕಂಪೆನಿಗಳನ್ನು ಉದ್ಧಾರ ಮಾಡುತ್ತಿದ್ದಾರೆ, ದೇಶದ 140 ಕೋಟಿ ಜನರನ್ನು ದಿನೇ ದಿನೇ ಬಿಕ್ಕಟ್ಟಿಗೆ ನೂಕುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವಿರುದ್ದ ಕಿಡಿಕಾರಿದರು.
ಈಗ ಕರ್ನಾಟಕದ ಮೇಲೆ ಬಿಜೆಪಿಯವರೆಲ್ಲ ಮುಗಿಬಿದ್ದಿರುವ ಕಾರಣ ಏನು ಗೊತ್ತೆ?
ಅಂಬಾನಿಯ ಕಣ್ಣು ನಮ್ಮ ನಂದಿನ ಹಾಲಿನ ಮೇಲೆ ಇದೆ. ಅದಾನಿಯ ಕಣ್ಣು ನಮ್ಮ ರೈತರ ಕೃಷಿ ಉತ್ಪನ್ನಗಳ ಮೇಲೆ, ನಮ್ಮ ವಿದ್ಯುತ್ತಿನ ಮೇಲೆ ಇದೆ. ಅವರಿಗೆ ಸಹಾಯ ಮಾಡಲು ಅತ್ತೂ ಕರೆದು ಪ್ರಚಾರ ಮಾಡಲಾಗುತ್ತಿದೆ.
ಕರ್ನಾಟಕದ ಪವಿತ್ರ ಹನುಮನ ನೆಲವಾದ ಬಳ್ಳಾರಿಯ ಬೆಟ್ಟಗಳ ಒಡಲು ಬಗೆದು ಅದಿರು ವಿದೇಶಗಳಿಗೆ ಮಾರಿದ ದುಡ್ಡಲ್ಲಿ ಬಿಜೆಪಿಯು ದೇಶದಲ್ಲಿ ಪಾರ್ಟಿ ಕಟ್ಟಿತು. ಈಗ 40 ಪರ್ಸೆಂಟ್ ಕೊಳ್ಳೆ ಹೊಡೆದು ಕೊಬ್ಬಿ ಕೂತಿದೆ. ಕರ್ನಾಟಕವನ್ನು ಎಲ್ಲ ರೀತಿಯಲ್ಲೂ ಸುಲಿಗೆ ಮಾಡಿ ಎಟಿಎಂ ಮಾಡಿಕೊಂಡಿರುವುದು ಬಿಜೆಪಿ ಪಕ್ಷ.
ಅಂತಿಮವಾಗಿ ನಾನು ಮೋದಿಯವರಿಗೆ ಹೇಳುವುದಿಷ್ಟೆ ನೀವು ಮೊದಲು ಕುಸಿದು ಹೋಗಿರುವ ಭಾರತದ ಚೈತನ್ಯವನ್ನು ಮೇಲೆತ್ತಿ. ಕರ್ನಾಟಕಕ್ಕೆ ದ್ರೋಹ ಮಾಡದೆ ಕೊಡಬೇಕಾದ ಅನುದಾನಗಳನ್ನು ಕೊಡಿ. ನಮ್ಮ ರಾಜ್ಯವನ್ನು ಹೇಗೆ ಮುನ್ನಡೆಸಬೇಕು, ನಂಬರ್ 1 ಮಾಡಬೇಕೆಂದು ನಮಗೆ ಗೊತ್ತಿದೆ. ಯಾಕೆಂದರೆ ನಿಮ್ಮ ಗುಜರಾತ್ ಮಾಡೆಲ್ ಎಂಥದ್ದು ಎಂಬುದನ್ನು ಅರ್ಥ ಮಾಡಿಕೊಳ್ಳಲು ನೀವು ಮುಖ್ಯಮಂತ್ರಿಯಿದ್ದಾಗಿನಿಂದ ಈ ವರೆಗೆ ನಿಮ್ಮ ರಾಜ್ಯದ ಮಕ್ಕಳ ಮತ್ತು ಮಹಿಳೆಯರ ಅಪೌಷ್ಟಿಕತೆಯ ಪ್ರಮಾಣವನ್ನು ನೋಡಿದರೆ ಸಾಕು ಅರ್ಥವಾಗುತ್ತದೆ.
ಯಾವುದೆ ನಾಡಿನ ಅಭಿವೃದ್ಧಿ ನಿರ್ಧಾರವಾಗುವುದು ಅಲ್ಲಿನ ಮಕ್ಕಳು ಮತ್ತು ಮಹಿಳೆಯರ ಆರೋಗ್ಯ ಹೇಗಿದೆ ಎಂಬುದರ ಮೇಲೆ ಎಂಬುದು ತಿಳಿದಿರಲಿ. ಮುಂದಿನ ಮೂರು ದಿನ ರಾಜ್ಯದಲ್ಲಿರುತ್ತೀರಿ. ದಯಮಾಡಿ ನಿಮ್ಮ ಅಳು ನಿಲ್ಲಿಸಿ ಕರ್ನಾಟಕಕ್ಕೆ ಏನು ಕೊಟ್ಟಿದ್ದೀರಿ ಎಂಬುದನ್ನು ಮಾತನಾಡಿ. ನಿಮ್ಮ ದ್ರೋಹದ ಟ್ರಬಲ್ ಎಂಜಿನ್ ಸರ್ಕಾರದಿಂದ ಕರ್ನಾಟಕದ ಜನರು ಅಳುವಂತಾಗಿದೆ.
ಕರ್ನಾಟಕ ರಾಜ್ಯವು ಉಳಿಯಬೇಕಾದರೆ, ತನ್ನ ವೈಭವವನ್ನು ಉಳಿಸಿಕೊಳ್ಳಬೇಕಾದರೆ ಜನರು ಬಿಜೆಪಿಯನ್ನು ಸೋಲಿಸಿ ಮನೆಗೆ ಕಳಿಸುವುದೊಂದೆ ದಾರಿ ಎಂಬ ಮಾತನ್ನು ಸಾವಧಾನದಿಂದ ಯೋಚಿಸಿ ತೀರ್ಮಾನಿಸಬೇಕೆಂದು ಜಾಣರಾದ ನಾಡಿನ ಜನರನ್ನು ಕೇಳಿಕೊಳ್ಳುತ್ತೇನೆ ಎಂದರು.












Click it and Unblock the Notifications