ಹಾಸನ ಪ್ರಕರಣ: ಚಾಲಕರ ತಪ್ಪಿನಿಂದ ಅಪಘಾತ, ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ: ಸಿದ್ದರಾಮಯ್ಯ ಪ್ರಶ್ನೆ!
ಹಾಸನದಲ್ಲಿ ನಡೆದ ಭೀಕರಣ ಅಪಘಾತ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೀಡಿರುವ ಹೇಳಿಕೆಯು ವಿವಾದಕ್ಕೆ ಕಾರಣವಾಗಿದೆ. ಚಾಲಕರ ತಪ್ಪಿನಿಂದ ಅಪಘಾತ, ಇದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ. ಈ ವಿಚಾರವಾಗಿ ಅವರು ಕೊಟ್ಟ ಹೇಳಿಕೆಯ ವಿವರ ಇಲ್ಲಿದೆ.
ಅಪಘಾತ ಸಂದರ್ಭದಲ್ಲಿ ಮೃತರ ಕುಟುಂಬದವರಿಗೆ ಸರ್ಕಾರ ಪರಿಹಾರ ನೀಡುವುದು ಸಾವಿನ ನಷ್ಟಕ್ಕೆ ಸಮಾನ ಎಂದಲ್ಲ. ಮೃತರ ಕುಟುಂಬಕ್ಕೆ ಸಾಂತ್ವನ ಹೇಳಲು, ತಮ್ಮವರನ್ನು ಕಳೆದುಕೊಂಡ ಕುಟುಂಬಕ್ಕೆ ಆರಂಭಿಕ ದಿನಗಳಲ್ಲಿ ಆರ್ಥಿಕ ಸಂಕಷ್ಟಗಳು ಬಾಧಿಸದಿರಲಿ ಎಂಬ ಉದ್ದೇಶದಿಂದ ಪರಿಹಾರ ನೀಡಲಾಗುತ್ತದೆ. ಸರ್ಕಾರ ರಸ್ತೆ ಸುರಕ್ಷತಾ ಕಾನೂನುಗಳನ್ನು ಜಾರಿ ಮಾಡಿದ್ದು, ಸುರಕ್ಷತಾ ಕ್ರಮಗಳನ್ನು ಕೈಗೊಂಡಿದೆ. ಚಾಲಕರ ತಪ್ಪಿನಿಂದ ಅಪಘಾತವಾಗಿದೆ. ಅದಕ್ಕೆ ಸರ್ಕಾರ ಹೇಗೆ ಹೊಣೆಯಾಗಲು ಸಾಧ್ಯ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶ್ನೆ ಮಾಡಿದ್ದಾರೆ.

ಹಾಸನ ಉಸ್ತುವಾರಿ ಸಚಿವರಾದ ಕೃಷ್ಣಭೈರೇಗೌಡ ಅವರಿಗೆ ಮೃತರ ಸಂಬಂಧಿಕರನ್ನು ಭೇಟಿ ಮಾಡಿ, ಸಂತೈಸಿ, ಪರಿಹಾರ ಘೋಷಣೆ ಮಾಡುವಂತೆ ಸೂಚಿಸಿದ್ದೇನೆ. ಮೃತರ ಕುಟುಂಬದವರು ಆರ್ಥಿಕವಾಗಿ ಹಿಂದುಳಿದಿದ್ದಾರೆ ಎಂಬ ಕಾರಣಕ್ಕೆ ಪರಿಹಾರ ನೀಡಲಾಗುತ್ತಿದೆ. ಮೃತರ ಕುಟುಂಬದವರಿಗೆ ಸಾವಿನ ದುಃಖ ಭರಿಸುವ ಶಕ್ತಿಯನ್ನು ಭಗವಂತ ನೀಡಲಿ ಎಂದು ಪ್ರಾರ್ಥಿಸುತ್ತೇನೆ ಎಂದಿದ್ದಾರೆ.
ಸಿದ್ದರಾಮಯ್ಯ ಅವರ ಈ ಹೇಳಿಕೆಗೆ ವಿರೋಧ ಪಕ್ಷಗಳಿಂದ ವಿರೋಧ ವ್ಯಕ್ತವಾಗಿದೆ. ಹಾಸನ ಜಿಲ್ಲೆಯ ಗಣೇಶ ಮೆರವಣಿಗೆಯಲ್ಲಿ ಸಂಭವಿಸಿದ ದುರಂತದಿಂದ ಮಡಿದ ಯುವಕರ ಕುಟುಂಬದ ಸದಸ್ಯರಿಗೆ ಸರ್ಕಾರ 25 ಲಕ್ಷ ರೂಪಾಯಿ ಹಣವನ್ನು ನೀಡಿದರೆ ಸಂತ್ರಸ್ತರ ಕುಟುಂಬಕ್ಕೆ ಅನುಕೂಲವಾಗುತ್ತದೆ. ಇನ್ನು ಮುಂದೆ ಸಾರ್ವಜನಿಕ ಮೆರವಣಿಗೆ ಸಂದರ್ಭದಲ್ಲಿ ಪೊಲೀಸರು ಹೆಚ್ಚಿನ ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು ಆಗ್ರಹಿಸಿದ್ದಾರೆ.
ಈ ಸಂಬಂಧ ಟ್ವೀಟ್ ಮಾಡಿರುವ ಜೆಡಿಎಸ್, ಮಾನವೀಯ ಮೌಲ್ಯ ಕಳೆದುಕೊಂಡಿರಾ ಸಿದ್ದರಾಮಯ್ಯ ಅವರೇ ಎಂದು ಪ್ರಶ್ನೆ ಮಾಡಿದೆ. ಹಾಸನ ತಾಲ್ಲೂಕಿನ ಮೊಸಳೆಹೊಸಳ್ಳಿ ಗ್ರಾಮದಲ್ಲಿ ಗಣೇಶ ವಿಸರ್ಜನೆ ಮೆರವಣಿಗೆ ವೇಳೆ ಟ್ರಕ್ ಹರಿದು 9 ಅಮಾಯಕರು ಪ್ರಾಣ ಕಳೆದುಕೊಂಡಿದ್ದಾರೆ. ಈ ದುರ್ಘಟನೆಯಲ್ಲಿ ಬಹುತೇಕರು ಕಾಲೇಜು ವಿದ್ಯಾರ್ಥಿಗಳಾಗಿದ್ದು, ಕುಟುಂಬಕ್ಕೆ ಆಸರೆಯಾಗಬೇಕಾಗಿದ್ದರು ಬಲಿಯಾಗಿದ್ದಾರೆ.
ಮುಖ್ಯಮಂತ್ರಿಗಳೇ ತಾವು ಮಾನವೀಯತೆ, ಹೃದಯ ವೈಶಾಲ್ಯತೆ ತೋರಿ ಮೃತರ ಕುಟುಂಬದರವರಿಗೆ ತಲಾ 20 ಲಕ್ಷ ರೂ. ಪರಿಹಾರ ಕೊಡಬೇಕು ಎಂದು ಜನತಾದಳ ಪಕ್ಷವು ಆಗ್ರಹಿಸುತ್ತದೆ. ಆರ್‌ಸಿಬಿ ಕಾಲ್ತುಳಿತ ಪ್ರಕರಣದಲ್ಲಿ ಕಾಂಗ್ರೆಸ್ ಸರ್ಕಾರ ತನ್ನ ವೈಫಲ್ಯವನ್ನು ಮುಚ್ಚಿಕೊಳ್ಳಲು 25 ಲಕ್ಷ ರೂ. ಪರಿಹಾರ ಘೋಷಿಸಿತ್ತು.
ಪ್ರಿಯಾಂಕಾ ಗಾಂಧಿ ಮತ್ತು ರಾಹುಲ್ ಗಾಂಧಿಯನ್ನು ಮೆಚ್ಚಿಸಲು ಕೇರಳದ ವ್ಯಕ್ತಿ ಆನೆ ದಾಳಿಯಿಂದ ಮೃತಪಟ್ಟಾಗ 15 ಲಕ್ಷ ರೂ. ಪರಿಹಾರ ನೀಡಲಾಗಿತ್ತು. ವಯನಾಡಿನಲ್ಲಿ ದುರಂತವಾದಾಗ ಕರ್ನಾಟಕ ಸರ್ಕಾರದಿಂದ 10 ಕೋಟಿ ಪರಿಹಾರ ಘೋಷಿಸಲಾಗಿತ್ತು. ಸಿಎಂ ಸಿದ್ದರಾಮಯ್ಯ ಅವರೇ ಹಾಸನದ ದುರಂತದಲ್ಲಿ ಮೃತಪಟ್ಟವರ ಕುಟುಂಬದವರಿಗೂ ಮಾನವೀಯ ನೆಲೆಯಲ್ಲಿ ಇನ್ನೂ ಹೆಚ್ಚಿನ ಪರಿಹಾರ ಕೊಟ್ಟು, ಹೃದಯ ವೈಶಾಲ್ಯತೆ ತೋರಿ ಎಂದು ಆಗ್ರಹಿಸಿದೆ.












Click it and Unblock the Notifications