ಸ್ವಪಕ್ಷಿಯರ ವಿರೋಧ; ಮಾಜಿ ಸಿಎಂ ಸಿದ್ದರಾಮಯ್ಯ ಅಹಿಂದ ಸಂಘಟನೆಗೆ ಬೀಳುತ್ತಾ ಬ್ರೇಕ್?
ಬೆಂಗಳೂರು, ಫೆ. 11: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಮಾಡಲು ಉದ್ದೇಶಿಸಿದ್ದಾರೆ ಎನ್ನಲಾಗುತ್ತಿರುವ ಅಹಿಂದ ಸಂಘಟನೆಗೆ ಕಾಂಗ್ರೆಸ್ ಪಕ್ಷದಲ್ಲಿಯೇ ತೀವ್ರ ವಿರೋಧ ವ್ಯಕ್ತವಾಗಿದೆ ಎಂದು ತಿಳಿದು ಬಂದಿದೆ. ಅಹಿಂದ ಸಮಾವೇಶಗಳನ್ನು ನಡೆಸಲು ಸಿದ್ದರಾಮಯ್ಯ ಅವರು ಚಿಂತನೆ ನಡೆಸಿದ್ದಾರೆ. ಇದೇ ಹಿನ್ನೆಲೆಯಲ್ಲಿ ಅಹಿಂದ ಮುಖಂಡರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಆದರೆ ಸಿದ್ದರಾಮಯ್ಯ ಅವರ ಅಹಿಂದ ಸಮಾವೇಶಕ್ಕೆ ಸ್ವಪಕ್ಷೀಯರಲ್ಲೇ ಅಸಮಾಧಾನ ವಕ್ಯವಾಗಿದೆ ಎಂಬ ಮಾಹಿತಿ ಕಾಂಗ್ರೆಸ್ ಪಕ್ಷದ ಉನ್ನತ ಮೂಲಗಳಿಂದ ಬಂದಿದೆ.
ಸಿದ್ದರಾಮಯ್ಯ ಅವರು ಮತ್ತೆ ಅಹಿಂದಾ ಸಂಘಟನೆ, ಸಮಾವೇಶಗಳನ್ನು ನಡೆಸದಂತೆ ಕಾಂಗ್ರೆಸ್‌ನಲ್ಲಿನ ತಟಸ್ಥ ಬಣ ಹೈಕಮಾಂಡ್ ಗಮನಕ್ಕೆ ತಂದಿದೆ. ಕೆಪಿಸಿಸಿ ಮಾಜಿ ಅಧ್ಯಕ್ಷ ಡಾ. ಜಿ. ಪರಮೇಶ್ವರ್, ಪರಿಷತ್ ಸದಸ್ಯ ಬಿ.ಕೆ. ಹರಿಪ್ರಸಾದ್, ಮಾಜಿ ಕೇಂದ್ರ ಸಚಿವ ಕೆ.ಹೆಚ್. ಮುನಿಯಪ್ಪ ಬಣದಿಂದ ಹೈಕಮಾಂಡ್ ಮೇಲೆ ಒತ್ತಡ ಹಾಕಲಾಗಿದೆ ಎನ್ನಲಾಗುತ್ತಿದೆ.
ಪ್ರಸ್ತುತ ಉಪಚುನಾವಣೆಗಳು ಎದುರಾಗಲಿವೆ. ಮೂರು ವಿಧಾನಸಭೆ, ಒಂದು ಲೋಕಸಭೆಗೆ ಉಪಚುನಾವಣೆ ನಡೆಯಲಿದೆ. ಈಗ ಅಹಿಂದ ಸಮಾವೇಶ ನಡೆಸಿದರೆ ಪಕ್ಷಕ್ಕೆ ಹಿನ್ನೆಯಾಗುತ್ತದೆ. ಅಹಿಂದ ಸಮುದಾಯ ಹೊರತುಪಡಿಸಿ ಉಳಿದವರು ಕಾಂಗ್ರೆಸ್ ಪಕ್ಷದಿಂದ ದೂರ ಉಳಿಯುತ್ತಾರೆ. ಲಿಂಗಾಯತ, ಒಕ್ಕಲಿಗರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ. ಆ ಮತಗಳು ನಮ್ಮಿಂದ ದೂರ ಸರಿಯಬಹುದು. ಈಗ ಅಹಿಂದ ಸಮಾವೇಶ ನಡೆಸಲು ಕಾಲ ಪಕ್ವವಾಗಿಲ್ಲ.

Recommended Video
ಸಿದ್ದರಾಮಯ್ಯನವರು ಏಕಪಕ್ಷೀಯ ಪ್ರವಾಸವೂ ಸರಿಯಲ್ಲ. ನೀವು ಸಿದ್ದರಾಮಯ್ಯನವರಿಗೆ ತಿಳಿಹೇಳುವ ಕೆಲಸ ಮಾಡಿ ಎಂದು ಎಐಸಿಸಿ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ಗಮನಕ್ಕೆ ರಾಜ್ಯ ಕಾಂಗ್ರೆಸ್ ನಾಯಕರು ತಂದಿದ್ದಾರೆ ಎನ್ನಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ಅವರ ಅಹಿಂದ ಸಂಘಟನೆಗೆ ಬ್ರೇಕ್ ಬೀಳುವ ಸಾಧ್ಯತೆಯಿದೆ ಎಂಬ ಮಾತುಗಳು ಕಾಂಗ್ರೆಸ್ ವಲಯದಿಂದಲೇ ಕೇಳಿ ಬಂದಿವೆ.












Click it and Unblock the Notifications