ಮುಂಗಾರು ಮಳೆ ಆರಂಭ: ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಬಗ್ಗೆ ಅಪ್‌ಡೇಟ್ ಕೊಟ್ಟ ಸಿದ್ದರಾಮಯ್ಯ
ಬೆಂಗಳೂರು, ಜೂನ್ 01: ರಾಜ್ಯದಲ್ಲಿ ಈ ಬಾರಿ ಮುಂಗಾರು ಅವಧಿಗೆ ಮುನ್ನವೇ ಕ್ರಿಯಾಶೀಲವಾಗಿದೆ. ಎಲ್ಲಾ ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚಿನ ಮಳೆಯಾಗಿದೆ. ರಾಜ್ಯದಲ್ಲಿ ಕಳೆದ ವರ್ಷ ದಾಖಲೆ ಮಟ್ಟದಲ್ಲಿ ಆಹಾರ ಧಾನ್ಯಗಳ ಉತ್ಪಾದನೆಯಾಗಿದೆ. ಈ ವರ್ಷ ಕೂಡ ಕೃಷಿ ಚಟುವಟಿಕೆಗಳು ಚೆನ್ನಾಗಿ ಆರಂಭವಾಗಿದೆ. ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರ ಯಾವುದೇ ಕಾರಣಕ್ಕೂ ಕೊರತೆಯಾಗದಂತೆ ದಾಸ್ತಾನು ಮಾಡಿ ವಿತರಿಸಲು ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೇಳಿದರು.
ಎಲ್ಲಾ ಜಿಲ್ಲಾಧಿಕಾರಿಗಳು ಮತ್ತು ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿದ್ದರಾಮಯ್ಯ ಅವರು, ರಾಜ್ಯದಲ್ಲಿ ನಾವೆಲ್ಲರೂ ಗಾಬರಿ ಪಡಬೇಕಾದ ಸಂಗತಿಯಿದೆ. ಏಕ ಬೆಳೆ ಪದ್ಧತಿ, ಅತಿಯಾದ ರಾಸಾಯನಿಕಗಳ ಬಳಕೆ ಮುಂತಾದ ಕಾರಣದಿಂದ ರಾಜ್ಯದ ಶೇ. 43 ಕ್ಕೂ ಹೆಚ್ಚಿನ ಕೃಷಿ ಭೂಮಿಯಲ್ಲಿ ಸಾವಯವ ಇಂಗಾಲ ಕಡಿಮೆಯಾಗಿದೆ. ಇದರಿಂದ ಭೂಮಿ ವೇಗವಾಗಿ ಮರುಭೂಮಿಯಾಗುತ್ತಿದೆ. ಕೃತಕ ರಸಗೊಬ್ಬರ ಬಳಕೆ, ರಾಸಾಯನಿಕಗಳ ಬಳಕೆ ಹೆಚ್ಚಾಗುತ್ತದೆ. ಉತ್ಪಾದನೆ ಕಡಿಮೆಯಾಗುತ್ತದೆ. ಇದರಿಂದ ಹಲವು ಸಮಸ್ಯೆಗಳುಂಟಾಗುತ್ತವೆ. ಇದನ್ನು ನಿಭಾಯಿಸಲು, ಮಣ್ಣನ್ನು ಮತ್ತೆ ಜೀವಂತಗೊಳಿಸಲು ಆಕ್ಷನ್ ಪ್ಲಾನ್ ಸಿದ್ಧ ಪಡಿಸಲು ಸೂಚಿಸಲಾಗಿದೆ. ಈ ಕುರಿತು ರೈತರಿಗೆ ಶಿಕ್ಷಣ ನೀಡಲು ಸೂಚಿಸಲಾಗಿದೆ.

ಹಿಂದಿನ ವರ್ಷಗಳಿಗೆ ಹೋಲಿಸಿದರೆ ರೈತರ ಆತ್ಮಹತ್ಯೆಗಳು ಕಡಿಮೆಯಾಗಿವೆ. ನಮ್ಮ ಉದ್ದೇಶ ಒಂದೂ ಆತ್ಮಹತ್ಯೆ ಯಾಗದಂತೆ ಗಮನ ಹರಿಸಬೇಕು. ಇದಕ್ಕೋಸ್ಕರ ಈಗಾಗಲೆ ಗ್ರಾಮ ಮಟ್ಟದಲ್ಲಿ ತಂಡಗಳನ್ನು ಮಾಡಲಾಗಿದೆ. ಈ ತಂಡಗಳನ್ನು ಇನ್ನಷ್ಟು ಆಕ್ಟಿವೇಟ್ ಮಾಡಬೇಕು. ಖಾಸಗಿ ಲೇವಾದೇವಿಗಾರರನ್ನು, ಮೈಕ್ರೋ ಫೈನಾನ್ಸ್ ಗಳನ್ನು ನಿಯಂತ್ರಿಸಲು ಜಿಲ್ಲಾ ಮಟ್ಟದಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ.
ಈ ಬಾರಿ ಮಳೆಗಾಲದ ಆರಂಭದಲ್ಲೇ ಪ್ರವಾಹ ಪರಿಸ್ಥಿತಿ, ಗುಡ್ಡ ಕುಸಿತ ಪ್ರಕರಣಗಳು ವರದಿಯಾಗುತ್ತಿವೆ. ಇಂತಹ ಪ್ರಕರಣಗಳಲ್ಲಿ ಸಾವು ನೋವು ಸಂಭವಿಸದಂತೆ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಬೇಕು. ಮನೆ ಹಾನಿ, ಬೆಳೆಹಾನಿ, ಜೀವ ಹಾನಿ ಪ್ರಕರಣಗಳಲ್ಲಿ ಕಡ್ಡಾಯವಾಗಿ ಸ್ಥಳಕ್ಕೆ ಭೇಟಿ ನೀಡಿ ತುರ್ತಾಗಿ ಪರಿಹಾರ ವಿತರಿಸಲು ಸೂಚನೆ ನೀಡಲಾಗಿದೆ.
ರಾಜ್ಯದ 28 ಜಿಲ್ಲೆಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದ್ದು, ಮಳೆ ಹಾನಿಗೆ ಪರಿಹಾರ ಒದಗಿಸಲು ಯಾವುದೇ ಅನುದಾನದ ಕೊರತೆಯಿಲ್ಲ. ಜಿಲ್ಲೆಗಳಲ್ಲಿ ಎಸ್.ಡಿ.ಆರ್.ಎಫ್ ಅಡಿ ಒಟ್ಟಾರೆಯಾಗಿ ಒಂದು ಸಾವಿರ ಕೋಟಿಗಿಂತಲೂ ಹೆಚ್ಚು ಹಣ ಲಭ್ಯವಿದ್ದು, ಅತಿವೃಷ್ಟಿಯಿಂದ ಮನೆಗಳಿಗೆ ಹಾನಿ ಉಂಟಾದರೆ ಮಾರ್ಗಸೂಚಿಯಂತೆ ಪರಿಹಾರ ಕಾರ್ಯ ನಡೆಸಲು ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಜಿಲ್ಲೆಗಳಲ್ಲಿ DC, CEO ಮತ್ತು SP ಈ ಮೂರು ಹುದ್ದೆಗಳು ಅತ್ಯಂತ ಮುಖ್ಯವಾದ ಹುದ್ದೆಗಳು. ಈ ಅಧಿಕಾರಿಗಳು ತಮ್ಮ ಇಗೊ (Ego) ಬಿಟ್ಟು ಸರ್ಕಾರ ಮತ್ತು ಜನರ ನಡುವೆ ಸೇತುವೆಯಂತೆ ಕೆಲಸ ಮಾಡಬೇಕು. ಈ ಮೂವರ ನಡುವೆ ಸಮನ್ವಯತೆ ಇದ್ದರೆ ಮಾತ್ರ ಜಿಲ್ಲೆಯ ಅಭಿವೃದ್ಧಿ ಸಾಧ್ಯ. ಜಿಲ್ಲೆಗಳಲ್ಲಿ ಸಾಮಾನ್ಯವಾಗಿ ಬಡವರು, ಶೋಷಿತರು, ರೈತರು, ಮಹಿಳೆಯರು ತಮ್ಮ ಕೆಲಸಗಳಿಗಾಗಿ ಸರ್ಕಾರಿ ಕಚೇರಿಗಳಿಗೆ ಬರುತ್ತಾರೆ. ಇಂತಹ ದುರ್ಬಲ ವರ್ಗದವರ ಬಗ್ಗೆ ಡಿಸಿ, ಸಿಇಒಗಳು ಸಹಾನುಭೂತಿಯಿಂದ ಅವರ ಸಮಸ್ಯೆಗಳನ್ನು ಆಲಿಸಿ ಅದನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸಲು ಸೂಚನೆ ನೀಡಿದ್ದೇನೆ.
ಕಾನೂನು ಸುವ್ಯವಸ್ಥೆಗೂ, ಅಭಿವೃದ್ಧಿಗೂ ನೇರ ಸಂಬಂಧವಿದೆ. ಎಲ್ಲಾ ಜಿಲ್ಲೆಗಳಲ್ಲಿಯೂ ಕಾನೂನು, ವ್ಯವಸ್ಥೆ ಸರಿಯಾಗಿರಬೇಕು. ಸಂವಿಧಾನದ ಆಶಯ ಮತ್ತು ಧ್ಯೇಯೋದ್ದೇಶಗಳಿಗೆ ಭಂಗ ತರುವ ಶಕ್ತಿಗಳನ್ನು ಮೊಳಕೆಯಲ್ಲೇ ಚಿವುಟಿ ಹಾಕಲು ಡಿಸಿ ಮತ್ತು ಎಸ್ಪಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದೇನೆ. ದ್ವೇಷ ಭಾಷಣದ ಬಗ್ಗೆ ಸುಪ್ರೀಂಕೋರ್ಟ್ ಸ್ಪಷ್ಟ ನಿರ್ದೇಶನ ನೀಡಿದ್ದರೂ, ಯಾಕೆ ಜಿಲ್ಲೆಗಳಲ್ಲಿ ದ್ವೇಷ ಭಾಷಣದ ವಿರುದ್ಧ ಕ್ರಮ ಕೈಗೊಳ್ಳುತ್ತಿಲ್ಲ? ತಕ್ಷಣ ದೂರು ದಾಖಲಿಸಿ ಕಾನೂನು ಪ್ರಕಾರ ಕ್ರಮ ಜರುಗಿಸಬೇಕು. ಇದೇ ರೀತಿ ಸರ್ಕಾರದ ಯೋಜನೆಗಳ ಬಗ್ಗೆ, ಕೈಗೊಂಡಿರುವ ಕ್ರಮಗಳ ಬಗ್ಗೆ ಸುಳ್ಳು ಸುದ್ದಿಗಳನ್ನು, ಮಾಹಿತಿಗಳನ್ನು ಹರಡುವ ಪ್ರಕರಣಗಳಲ್ಲಿ ತಕ್ಷಣ ಕ್ರಮ ಕೈಗೊಳ್ಳಲು ಸ್ಪಷ್ಟ ಸೂಚನೆ ನೀಡಲಾಗಿದೆ.












Click it and Unblock the Notifications