ದಾವಣಗೆರೆ; ಮುಂದಿನ ಸಿಎಂ ಸಿದ್ದರಾಮಯ್ಯ ಎಂಬ ಜೈಕಾರ
ದಾವಣಗೆರೆ, ಜುಲೈ 02; 'ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಜೈ' ಎಂಬ ಘೋಷಣೆ ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಕೇಳಿ ಬಂದಿದೆ. ಕಾಂಗ್ರೆಸ್‌ನಲ್ಲಿ ಮುಂದಿನ ಮುಖ್ಯಮಂತ್ರಿ ಯಾರು? ಎಂಬ ಚರ್ಚೆ ನಡೆದಿದ್ದು, ಈ ವಿಚಾರ ಹೈಕಮಾಂಡ್ ತನಕ ಹೋಗದೆ.
ಶುಕ್ರವಾರ ಹರಿಹರ ಶಾಸಕ ರಾಮಪ್ಪ ಪುತ್ರಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ಪ್ರತಿಪಕ್ಷನಾಯಕ ಸಿದ್ದರಾಮಯ್ಯ ಆಗಮಿಸಿದ್ದರು. ಆಗ ಕಲ್ಯಾಣ ಮಂಟಪದಲ್ಲಿ ನೆರೆದಿದ್ದ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಭಿಮಾನಿಗಳು ಘೋಷಣೆ ಕೂಗಿದರು.
ಇದಕ್ಕೂ ಮೊದಲು ದಾವಣಗೆರೆಯಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ಇನ್ನು ಚುನಾವಣೆ ನಡೆದಿಲ್ಲ. ಎಲೆಕ್ಷನ್ ಆದ ಬಳಿಕ ಬಹುಮತ ಬರಬೇಕು. ಶಾಸಕಾಂಗ ಸಭೆ ನಡೆಯಬೇಕು. ಆಮೇಲೆ ಎಲ್ಲವನ್ನೂ ಹೈಕಮಾಂಡ್ ನಿರ್ಧರಿಸಲಿದೆ" ಎಂದು ಹೇಳಿದ್ದರು.

ಆದರೆ ಹರಿಹರದಲ್ಲಿ ಕಾರು ಇಳಿಯುತ್ತಿದ್ದಂತೆ ಕೆಲವರು ಮುಂದಿನ ಮುಖ್ಯಮಂತ್ರಿ ಘೋಷಣೆ ಹಾಕಿರುವುದು ಕುತೂಹಲ ಕೆರಳಿಸಿದೆ. ಇನ್ನು ಮೊದಲಿನಿಂದಲೂ ಸಿದ್ದರಾಮಯ್ಯಗೆ ರಾಮಪ್ಪ ಆಪ್ತರು. ಈ ಹಿನ್ನೆಲೆಯಲ್ಲಿ ರಾಮಪ್ಪ ಮಗಳ ವಿವಾಹಕ್ಕೆ ಸಿದ್ದರಾಮಯ್ಯ ಆಗಮಿಸಿ ವಧು- ವರರನ್ನು ಆಶೀರ್ವದಿಸಿದರು.
ನಿಯಮ ಉಲ್ಲಂಘನೆ; ಕೊರೊನಾ ಸೋಂಕು ಹರಡುವ ಭೀತಿ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಕೇವಲ 40 ಮಂದಿ ಮಾತ್ರ ಕೋವಿಡ್ ಮಾರ್ಗಸೂಚಿ ಪಾಲಿಸಿ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಬೇಕು ಎಂದು ಹೇಳಿದೆ.
ಆದರೆ ರಾಮಪ್ಪ ಪುತ್ರಿಯ ವಿವಾಹದಲ್ಲಿ ಯಾವ ಕೋವಿಡ್ ಮಾರ್ಗಸೂಚಿ ಪಾಲಿಸಲಿಲ್ಲ. ಸಾಮಾಜಿಕ ಅಂತರ ಇರಲಿಲ್ಲ. ನೂರಾರು ಮಂದಿ ಪಾಲ್ಗೊಂಡಿದ್ದರು. ಸಿದ್ದರಾಮಯ್ಯ ಆಗಮಿಸಿದ ವೇಳೆಯಂತೂ ಜನಜಂಗುಳಿಯೇ ನೆರೆದಿತ್ತು.
ಜಿಲ್ಲೆಯ ಮಾಜಿ ಸಚಿವರು, ಮುಖಂಡರು, ಕಾರ್ಯಕರ್ತರು ಸಿದ್ದರಾಮಯ್ಯ ವೇದಿಕೆಗೆ ಬರುತ್ತಿದ್ದಂತೆ ಮುಗಿಬಿದ್ದರು. ತಳ್ಳಾಟ, ನೂಕಾಟವೂ ಆಯ್ತು. ಇದೇ ವೇಳೆಯಲ್ಲಿ ಕೆಲವರು ಸೆಲ್ಫೀ ತೆಗೆದುಕೊಳ್ಳಲು ಸಹ ಮುಂದಾದರು. ರಾಜಕಾರಣಿಗಳಿಗೆ ಕೋವಿಡ್ ಮಾರ್ಗಸೂಚಿ ಅನ್ವಯ ಆಗುವುದಿಲ್ಲವೇ? ಎಂಬ ಪ್ರಶ್ನೆ ಜನರದ್ದು.
ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಯಾರೂ ಮನಸ್ಸು ಮಾಡಲಿಲ್ಲ. ಸಿದ್ದರಾಮಯ್ಯರ ಜೊತೆ ಕಾಣಿಸಿಕೊಳ್ಳಬೇಕೆಂಬ ಆಸೆಯಿಂದ ಮುಗಿಬಿದ್ದರೂ, ಸಿದ್ದರಾಮಯ್ಯರು ಕೋವಿಡ್ ನಿಯಮ ಪಾಲಿಸಲು ಮುಂದಾಗಲಿಲ್ಲ.












Click it and Unblock the Notifications