ಬೆಂಬಲ ಬೆಲೆ: ಹೆಸರು, ಉದ್ದು, ಸೂರ್ಯಕಾಂತಿ ಖರೀದಿಗೆ ಸೂಚನೆ: ಇಲ್ಲಿದೆ ದರಪಟ್ಟಿ
ಬೆಂಗಳೂರು, ಸೆಪ್ಟೆಂಬರ್ 26: ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆ ಅಡಿಯಲ್ಲಿ ಮುಂಗಾರು ಹಂಗಾಮಿನ ಉದ್ದಿನಕಾಳು, ಹೆಸರುಕಾಳು ಹಾಗೂ ಸೂರ್ಯಕಾಂತಿ ಖರೀದಿ ಪ್ರಕ್ರಿಯೆ ಆರಂಭಿಸಬೇಕು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರು ಜಿಲ್ಲಾ ಟಾಸ್ಕ್‌ಪೋರ್ಸ್ ಸಮಿತಿಗಳಿಗೆ ಆದೇಶ ಮಾಡಿದ್ದು, ಖರೀದಿ ಏಜನ್ಸಿಗಳೊಂದಿಗೆ ಚರ್ಚೆ ಮಾಡಿ ತ್ವರಿತವಾಗಿ ನೋಂದಣಿ ಹಾಗೂ ಖರೀದಿ ಪ್ರಕ್ರಿಯೆ ಆರಂಭ ಮಾಡಿ ಎಂದು ನಿರ್ದೇಶನ ನೀಡಿದ್ದಾರೆ.
ಬೆಂಬಲ ಬೆಲೆ ಯೋಜನೆಯನ್ನು ದುರ್ಬಳಕೆ ಮಾಡಿಕೊಳ್ಳಲು ವರ್ತಕರಿಗೆ ಅವಕಾಶ ನೀಡಬಾರದು. ರೈತರ ಹೆಸರಿನಲ್ಲಿ ಮಾರಾಟ ಮಾಡಲು ಬರುವ ವರ್ತಕರ ಬಗ್ಗೆ ಎಚ್ಚರಿಕೆ ವಹಿಸಬೇಕು ಹಾಗೂ ಅವರಿಂದ ಖರೀದಿ ಮಾಡಬಾರದು ಎಂದು ಸಚಿವ ಶಿವಾನಂದ ಪಾಟೀಲ ಅವರು ತಿಳಿಸಿದ್ದಾರೆ. ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳ, ಕರ್ನಾಟಕ ರಾಜ್ಯ ದ್ವಿದಳ ಧಾನ್ಯಗಳ ಅಭಿವೃದ್ಧಿ ಮಂಡಳಿ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾ ಮಂಡಳಗಳನ್ನು ಖರೀದಿ ಏಜನ್ಸಿಗಳನ್ನಾಗಿ ನೇಮಕ ಮಾಡಲಾಗಿದೆ.

ಗದಗ, ಧಾರವಾಡ, ಹಾವೇರಿ, ಬೆಳಗಾವಿ, ವಿಜಯಪುರ, ಬಾಗಲಕೋಟೆ, ಕೊಪ್ಪಳ, ಕಲಬುರಗಿ, ಯಾದಗಿರಿ, ಬೀದರ್, ತುಮಕೂರು, ಹಾಸನ, ಮೈಸೂರು ಮತ್ತು ಚಿತ್ರದುರ್ಗ ಜಿಲ್ಲೆಗಳಲ್ಲಿ ಹೆಸರುಕಾಳು, ಕಲಬುರಗಿ, ಬೀದರ್, ಯಾದಗಿರಿ, ಗದಗ, ಧಾರವಾಡ, ವಿಜಯಪುರ ಬಾಗಲಕೋಟ ಮತ್ತು ಬೆಳಗಾವಿ ಜಿಲ್ಲೆಗಳಲ್ಲಿ ಉದ್ದಿನಕಾಳು ಹಾಗೂ ಬಾಗಲಕೋಟೆ, ಬಳ್ಳಾರಿ, ಚಾಮರಾಜ ನಗರ, ಚಿತ್ರದುರ್ಗ, ಗದಗ, ಕಲಬುರಗಿ, ರಾಯಚೂರು, ವಿಜಯಪುರ, ವಿಜಯನಗರ, ಯಾದಗಿರಿ, ಮೈಸೂರು, ಚಿಕ್ಕಮಗಳೂರು, ಬೆಳಗಾವಿ ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ಸೂರ್ಯಕಾಂತಿ ಖರೀದಿ ಮಾಡಲಾಗುವುದು ಎಂದು ಸಚಿವರಾದ ಶಿವನಂದ ಪಾಟೀಲ ಅವರು ತಿಳಿಸಿದ್ದಾರೆ.
ನೋಂದಣಿ ಕಾಲಾವಧಿಯನ್ನು 80 ದಿನ ಹಾಗೂ ಖರೀದಿ ಅವಧಿಯನ್ನು 90ದಿನ ನಿಗದಿಪಡಿಸಲಾಗಿದ್ದು, ನೋಂದಣಿ ಮತ್ತು ಖರೀದಿ ಪ್ರಕ್ರಿಯೆಯನ್ನು ಏಕಕಾಲಕ್ಕೆ ಆರಂಭಿಸಬೇಕು. ಖರೀದಿ ಸಂಸ್ಥೆಗಳು ರೈತರಿಗೆ ಅನುಕೂಲವಾಗುವಂತೆ ನಾಫೆಡ್ ಹಾಗೂ ಎನ್‌ಸಿಸಿಎಫ್ ಮಾರ್ಗಸೂಚಿ ಅನ್ವಯ ಹಾಗೂ ತಾಂತ್ರಿಕ ಮತ್ತು ವೈಜ್ಞಾನಿಕ ಸೌಲಭ್ಯದಿಂದ ಕೂಡಿರುವ ಗೋದಾಮುಗಳನ್ನು ಹೊಂದಿರುವ ಸಂಸ್ಥೆಗಳ ಮೂಲಕ ಒಡಂಬಡಿಕೆ ಮಾಡಿಕೊಂಡು ಖರೀದಿ ಕೇಂದ್ರ ತೆರೆಯಬೇಕು ಎಂದು ಸೂಚನೆ ನೀಡಿದ್ದಾರೆ.












Click it and Unblock the Notifications