Thirthahalli: ಮಲೆನಾಡಿನ ಮಳೆ ದುರಂತ: ಗುಡ್ಡ ಕುಸಿದು ದಂಪತಿ 3ವರ್ಷದ ಮಗು ಸಾವು! ಇಬ್ಬರು ಹೆಣ್ಮಕ್ಕಳು ಅನಾಥ
ಶಿವಮೊಗ್ಗ: ಮಲೆನಾಡಿನ ಸ್ವರ್ಗ ಅಂತ ಕರೆಸಿಕೊಳ್ಳುವ ಶಿವಮೊಗ್ಗ ಮಳೆಗಾಲದಲ್ಲಿ ಹಚ್ಚ ಹರಿಸಿನಿಂದ ಕಂಗೊಳಿಸುತ್ತದೆ. ಇಲ್ಲಿನ ಮಳೆ ಅದೆಷ್ಟೋ ನದಿ, ಜಲಾಶಯಗಳಿಗೆ ಜೀವಕಳೆ ತರುತ್ತದೆ. ನಿರಂತರ ಮಳೆಗೆ ಉಂಟಾಗುವ ಗುಡ್ಡ ಕುಸಿತದಿಂದ ಅದೆಷ್ಟೋ ಜನ, ಜಾನುವಾರುಗಳ ಸಾವಿಗೂ ಕಾರಣವಾಗುತ್ತಿದೆ. ಅಂತದ್ದೆ ಒಂದು ಘಟನೆ ಜಿಲ್ಲೆ ತೀರ್ಥಹಳ್ಳಿ ತಾಲೂಕಿನ ಇಂದಿರಾ ನಗರದಲ್ಲಿ ನಡೆದಿದ್ದು, ಭಾರೀ ಮಳೆಗೆ ಗುಡ್ಡ ಕುಸಿದು ಒಂದೇ ಕುಟುಂಬದ ಮೂವರು ಮೃತಪಟ್ಟಿದ್ದಾರೆ.
ಮೊನ್ನೆ ಶನಿವಾರ ತಡರಾತ್ರಿ ನಡೆದ ಗುಡ್ಡ ಕುಸಿದು, ಈ ದುರ್ಮರಣ ಸಂಭವಿಸಿದೆ. ಮಲ್ಲಿಕಾರ್ಜುನ್ (35) ಅವರ ಪತ್ನಿ ನಾಗವೇಣಿ (28) ದಂಪತಿಯ 3 ವರ್ಷದ ಮಗ ಸಂತೋಷ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಕಲ್ಯಾಣ ಕರ್ನಾಟಕ ಭಾಗದಿಂದ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನ ಕೊಕ್ಕರೆಗ್ರಾಮದ ಈ ದಂಪತಿಯು ತೀರ್ಥಹಳ್ಳಿಯ ಇಂದಿರಾ ನಗರಕ್ಕೆ ಕೆಲವು ದಿನಗಳ ಹಿಂದಷ್ಟೇ ದುಡಿಯಲು ಆಗಮಿಸಿದ್ದರು. ಮೃತರಿಗೆ ತವರೂರಲ್ಲಿ ಇನ್ನಿಬ್ಬರು ಮಕ್ಕಳಿದ್ದು, ಅವರೀಗ ಅನಾಥರಾಗಿದ್ದಾರೆ. ಕುಟುಂಬಸ್ಥರು ಶೋಕ ಸಾಗರದಲ್ಲಿ ಮುಳುಗಿದ್ದಾರೆ.

ನಾಲ್ಕು ದಿನಗಳ ಹಿಂದಷ್ಟೇ ಈ ಬಡ ಕುಟುಂಬ ಶಿವಮೊಗ್ಗದ ತೀರ್ಥಹಳ್ಳಿಗೆ ಬಂದಿದ್ದರು. ಹೊಟ್ಟೆಪಾಡಿಗೆ ಕೆಲಸವರಸಿ ಬಂದು ಇಂದಿರಾನಗರದಲ್ಲಿ ಶೆಡ್ ಹಾಕಿಕೊಂಡು ವಾಸವಿದ್ದರು. ಅವರಿಗೆ ಇಬ್ಬರು ಹೆಣ್ಣು ಮಕ್ಕಳಾದ ಮಹಾಲಕ್ಷ್ಮೀ 3ನೇ ತರಗತಿ ಹಾಗೂ ದಿವ್ಯಾ 1ನೇ ತರಗತಿಯಲ್ಲಿ ಸ್ವಗ್ರಾಮದಲ್ಲಿ ಓದುತ್ತಿದ್ದಾರೆ. ಅವರನ್ನು ನೋಡಿಕೊಳ್ಳಲು ಅಜ್ಜಿ ಗೌರಮ್ಮ ಮನೆಯಲ್ಲಿದ್ದಾರೆ. ಈ ಮೂವರನ್ನು ಮನೆಯಲ್ಲಿ ಬಿಟ್ಟು ಕೆಲಸಕ್ಕೆ ಬಂದ ನಾಲ್ಕು ದಿನದಲ್ಲೇ ಈ ಮಹಾರದುಂತ ನಡೆದಿದ್ದು, ಬಡ ಕುಟುಂಬದ ಆಧಾರಸ್ತಂಭವೇ ವಿನಾಶವಾದಂತಾಗಿದೆ.
ತಂದೆ, ತಾಯಿ ಕಳೆದುಕೊಂಡ ಹೆಣ್ಣು ಮಕ್ಕಳು ಅನಾರಾಗಾಗಿದ್ದಾರೆ. ದುಡಿಯಲು ಶಕ್ತಿ ಇಲ್ಲದ ಅಜ್ಜಿಯು ಕೊನೆಗಾಲದಲ್ಲಿ ಕಣ್ಣೀರಲ್ಲಿ ಕೈ ತೊಳೆಯುವಂತಾಗಿದೆ. ಹೆಣ್ಣು ಮಕ್ಕಳ ಭವಿಷ್ಯ ನೆನೆದು ಇಡೀ ಗ್ರಾಮಸ್ಥರೇ ಕಣ್ಣೀರಿಟ್ಟಿದ್ದಾರೆ.
ಘಟನೆಯ ಹಿನ್ನೆಲೆ
ಮಲೆನಾಡಿನ ಶಿವಮೊಗ್ಗ, ತೀರ್ಥಹಳ್ಳಿ ಸೇರಿದಂತೆ ವಿವಿಧೆಡೆ ಕಳೆದ ಒಂದೆರಡು ವಾರಗಳಿಂದ ನಿರಂತರವಾಗಿ ಮಳೆ ಆಗುತ್ತಿದೆ. ಇಲ್ಲಿನ ಇಂದಿರಾ ನಗರದಲ್ಲಿ ಗುಡ್ಡದ ಕೆಳಗೆ ಕೆರೆಯ ಪಕ್ಕದಲ್ಲಿ ಸಿಮೆಂಟ್ ಶೆಡ್‌ಗಳನ್ನು ಹಾಕಿಕೊಂಡು ಈ ಬಡ ಕುಟುಂಬ ಆಗಷ್ಟೇ ಬಂದು ನೆಲೆಸಿತ್ತು. ಈ ವರ್ಷ ಬರಗಾಲ ಬಿದ್ದಿದ್ದು ಇಲ್ಲಿಗೆ ಬಂದು ನಾಲ್ಕು ಕಾಸು ದುಡಿಯುವುದು ದಂಪತಿಯ ಕನಸಾಗಿತ್ತು. ಅದು ನನಸಾಗುವುದರೊಳಗೆ ಜವರಾಯ ಅಟ್ಟಹಾಸ ಮೆರೆದಿದ್ದಾನೆ.
ತಡರಾತ್ರಿ ಘಟನೆ, 40 ಕುಟುಂಬಗಳಲ್ಲಿ ಆತಂಕ
ನಿರಂತರ ಮಳೆಗೆ ತಡರಾತ್ರಿ 2.30ರ ಸುಮಾರಿಗೆ ಗುಡ್ಡದ ಮಣ್ಣು ಕುಸಿದಿದೆ. ತಡೆಗೋಡೆ ಮನೆಗಳ ಮೇಲೆ ಬಿದ್ದಿದೆ. ಅಲ್ಲಿಯೇ ಇದ್ದ ದಂಪತಿ ಶೆಡ್ ಮೇಲೆಯು ಜರಿ ಬಿದ್ದ ಪರಿಣಾಮ ರಾತ್ರಿ ನಿದ್ರೆಯಲ್ಲಿದ್ದ ಕೊಕ್ಕರೆಗ್ರಾಮದ ಕುಟುಂಬವು ಚಿರನಿದ್ರೆಗೆ ಜಾರಿದರು. ಜರಿದ ಗುಡ್ಡದ ಮಣ್ಣಿನಡಿ ಸಿಲುಕಿದ ಮಲ್ಲಿಕಾರ್ಜುನ್ ಸೇರಿದಂತೆ ಪತ್ನಿ, ಪುತ್ರ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಇದೇ ಜಾಗದಲ್ಲಿ ವಲಸೆ ಬಂದ ಹೊಸಪೇಟೆಯ 15, ದಾವಣಗೆರೆ ಭಾಗದ 5 ಸೇರಿದಂತೆ ಬಡ ಕುಟುಂಬಗಳ ಸುಮಾರು 40ಕ್ಕೂ ಅಧಿಕ ಮಂದಿ ವಾಸಿಸುತ್ತಿದ್ದಾರೆ. ಈ ಘಟನೆಯಿಂದ ಅವರಲ್ಲಿಯೂ ಜೀವ ಭಯ ಶುರುವಾಗಿದೆ.
ಘಟನೆ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಬಂದ ಸ್ಥಳೀಯ ಪೊಲೀಸರು, ಅಗ್ನಿಶಾಮಕ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. 2004ರಲ್ಲಿಯೂ ಇದೇ ಜಾಗದಲ್ಲಿ ಗುಡ್ಡ ಕುಸಿದಿತ್ತು. ಈ ಹಿನ್ನೆಲೆಯಲ್ಲಿ ಮನೆ ಮಾಲೀಕ ರಮೇಶ್ ಎನ್ನುವವರು ಸುಮಾರು 60 ಅಡಿ ಎತ್ತರದ ತಡೆಗೋಡೆ ನಿರ್ಮಿಸಿದ್ದರು. ಅದರ ಸುತ್ತಮುತ್ತ ಶೆಡ್ ಹಾಕಿ ಕಾರ್ಮಿಕರು ತಂಗಲು ಜಾಗ ಮಾಡಿಕೊಡಲಾಗಿತ್ತು.


Click it and Unblock the Notifications
