ಶಿರಾಡಿಘಾಟ್ ರಸ್ತೆ ರಿಪೇರಿಗೆ ಇನ್ನೆಷ್ಟು ದಿನ ಬೇಕು?
ಬೆಂಗಳೂರು, ಫೆ. 11 : ಶಿರಾಡಿ ಘಾಟ್ ರಸ್ತೆ ದುರಸ್ತಿಯ ಮೊದಲ ಹಂತದ ಕಾಮಗಾರಿಯನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುತ್ತದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದ್ದಾರೆ. ದುರಸ್ತಿ ಕಾಮಗಾರಿ ಆರಂಭವಾಗಿದೆ ಎಂದು ಅವರು ತಿಳಿಸಿದ್ದಾರೆ.
ಮಂಗಳವಾರದ ವಿಧಾನ ಪರಿಷತ್ತಿನ ಕಲಾಪದಲ್ಲಿ ಎಂ. ಶ್ರೀವಾಸ್ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, 26 ಕಿ.ಮೀ ಉದ್ದದ ಶಿರಾಡಿ ಘಾಟ್ ರಸ್ತೆಯನ್ನು 13 ಕಿ.ಮೀ ನಂತೆ ಎರಡು ಭಾಗಗಳನ್ನಾಗಿ ಮಾಡಿಕೊಂಡು ರಸ್ತೆ ದುರಸ್ತಿ ಕಾಮಗಾರಿಯನ್ನು ಮಾಡಲಾಗುತ್ತಿದೆ ಎಂದರು. [ಶಿರಾಡಿ ಬಂದ್, ಪರ್ಯಾಯ ಮಾರ್ಗಗಳು]

ಈಗಾಗಲೇ ಕಾಮಗಾರಿಯನ್ನು ಆರಂಭಿಸಲಾಗಿದೆ. ಮೊದಲ ಹಂತದ 13 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ಮೇ ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಉಳಿದ 13 ಕಿ.ಮೀ ಉದ್ದದ ರಸ್ತೆ ಕಾಮಗಾರಿಯನ್ನು ಮುಂದಿನ ಆರು ತಿಂಗಳಿನಲ್ಲಿ ಪೂರ್ಣಗೊಳಿಸಲು ಉದ್ದೇಶಿಸಲಾಗಿದೆ ಎಂದು ಮಾಹಿತಿ ನೀಡಿದರು. [ಕುಂಭಕರ್ಣನ ನಿದ್ದೆಗೆ ಜಾರಲಿರುವ ಶಿರಾಡಿಘಾಟ್]
ಈ ಪ್ರದೇಶದಲ್ಲಿ 500 ಮಿ.ಮೀ ನಷ್ಟು ಮಳೆ ಬೀಳುವುದರಿಂದ ಹಾಗೂ ಬಿದ್ದ ಮಳೆ ನೀರು ಮೋರಿಗಳಿಗೆ ಹರಿದು ಹೋಗಲು ಸೂಕ್ತ ವ್ಯವಸ್ಥೆ ಇಲ್ಲದಿರುವುದರಿಂದ ರಸ್ತೆ ಹಾಳಾಗುತ್ತಿದೆ. ಈ ಮಾರ್ಗದಲ್ಲಿ ಬಾರಿ ವಾಹನಗಳು ಓಡಾಟ ನಡೆಸುತ್ತವೆ. ಆದ್ದರಿಂದ ರಸ್ತೆ ಪದೇ-ಪದೇ ದುರಸ್ತಿ ಮಾಡಬೇಕಾಗಿದೆ ಎಂದರು.
ಸದ್ಯ ಸುಭದ್ರವಾಗಿ ರಸ್ತೆಯನ್ನು ನಿರ್ಮಾಣ ಮಾಡಲು ಸರ್ಕಾರ ಕಾಮಗಾರಿಯನ್ನು ಆರಂಭಿಸಿದೆ. ಕೆಲವು ಭಾಗಗಳಲ್ಲಿ ಸಿಮೆಂಟ್ ಕಾಂಕ್ರೀಟ್ ಹಾಕಿ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಅಗತ್ಯವಿರುವ ಕಡೆ ರಸ್ತೆ ಅಗಲೀಕರಣ ಕಾರ್ಯವನ್ನು ಕೈಗೊಳ್ಳಲಾಗಿದೆ ಎಂದು ಸಚಿವರು ಪರಿಷತ್ತಿನಗೆ ಮಾಹಿತಿ ನೀಡಿದರು.
ಅಂದಹಾಗೆ ಬೆಂಗಳೂರು-ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ 48ರ ಶಿರಾಡಿ ಘಾಟ್ ರಸ್ತೆಯನ್ನು ಜನವರಿ 2ರಿಂದ ಬಂದ್ ಮಾಡಲಾಗಿದೆ. ಕಾಂಕ್ರೀಟ್ ರಸ್ತೆ ನಿರ್ಮಾಣ ಕಾಮಗಾರಿ ನಡೆಯುತ್ತಿರುವುದರಿಂದ ವಾಹನ ಸಂಚಾರವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ.












Click it and Unblock the Notifications