ಉಚಿತ ಪ್ರಯಾಣ: 1.2 ಕೋಟಿ ಮಹಿಳೆಯರು 'ಶಕ್ತಿ ಸ್ಮಾರ್ಟ್ ಕಾರ್ಡ್'ಗೆ ಅರ್ಜಿ ಸಲ್ಲಿಸಲಿದ್ದಾರೆ
ಬೆಂಗಳೂರು, ಜೂನ್ 13: ರಾಜ್ಯದಲ್ಲಿ ಕಳೆದ ಎರಡು ದಿನದಿಂದ ಮಹಿಳೆಯರು ಬಸ್‌ಗಳಲ್ಲಿ ಉಚಿತ ಪ್ರಯಾಣ ಆರಂಭಿಸಿದ್ದಾರೆ. ಸದ್ಯ ಆಧಾರ್ ಗುರುತಿನ ಚೀಟಿ ತೋರಿಸಿ ಸಂಚರಿಸುತ್ತಿರುವ ಮಹಿಳೆಯರು ಮುಂದಿನ ದಿನಗಳಲ್ಲಿ ಸ್ಮಾರ್ಟ್ ಕಾರ್ಡ್ ಪಡೆದು ಉಚಿತವಾಗಿ ಬಸ್‌ಗಳಲ್ಲಿ ಓಡಾಡಲಿದ್ದಾರೆ. ಈ ಸ್ಮಾರ್ಟ್ ಕಾರ್ಡ್‌ಗಾಗಿ ಕೋಟಿಗಟ್ಟಲೇ ಮಹಿಳೆಯರು ಅರ್ಜಿ ಸಲ್ಲಿಸುವ ನಿರೀಕ್ಷೆ ಇದೆ ಎಂದು ಸಾರಿಗೆ ಸಂಸ್ಥೆಗಳು ತಿಳಿಸಿವೆ.
ಜೂನ್ 11ರಂದು ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಸೌಲಭ್ಯ ಕಲ್ಪಿಸುವ 'ಶಕ್ತಿ ಯೋಜನೆ' ಜಾರಿಯಾಗಿದೆ. ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಖಾತರಿಪಡಿಸಲು ನೂತನವಾಗಿ ಪ್ರಾರಂಭಿಸಲಾದ 'ಶಕ್ತಿ' ಯೋಜನೆಯನ್ನು ಪಡೆಯಲು ಸುಮಾರು 1.2 ಕೋಟಿ ಮಹಿಳೆಯರು ಸ್ಮಾರ್ಟ್ ಕಾರ್ಡ್‌ಗಳಿಗೆ ಅರ್ಜಿ ಸಲ್ಲಿಸಬಹುದು. ಹೀಗೆಂದು ಕರ್ನಾಟಕದಲ್ಲಿ ರಸ್ತೆ ಸಾರಿಗೆ ಸಂಸ್ಥೆಗಳು (RTC) ಅಂದಾಜು ಮಾಡಿದೆ.

ಭಾನುವಾರ ಯೋಜನೆಯ ಪ್ರಾರಂಭದ ದಿನದಂದು, ರಾಜ್ಯ ಸರ್ಕಾರದ ನಾಲ್ಕು ಸಾರಿಗೆ ನಿಗಮಗಳಲ್ಲಿ ನಿರ್ವಹಿಸುವ ಬಸ್‌ಗಳಲ್ಲಿ ಒಟ್ಟು 5.7 ಲಕ್ಷಕ್ಕೂ ಹೆಚ್ಚು ಮಹಿಳೆಯರು ಸಂಚಾರ ನಡೆಸಿದ್ದಾರೆ. ಮಧ್ಯಾಹ್ನ 1 ರಿಂದಲೇ ಆರಂಭವಾದ ಅವರ ಉಚಿತ ಪ್ರಯಾಣದ ಸವಾರಿ ಮಧ್ಯರಾತ್ರಿಯವರೆಗೆ ಮುಂದುವರಿಯಿತು.
ನಿತ್ಯ ಉಚಿತ ರೈಡ್‌ನಿಂದ 1.4 ಕೋಟಿ ವೆಚ್ಚ
ಉಚಿತ ರೈಡ್‌ಗಳಿಗೆ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಿಂದ ನಿತ್ಯ ಸುಮಾರು 1.4 ಕೋಟಿ ವೆಚ್ಚವಾಗುತ್ತದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (BMTC) ಅತೀ ಹೆಚ್ಚು ಮಹಿಳಾ ಪ್ರಯಾಣಿಕರು ಎರಡು ಲಕ್ಷಕ್ಕೂ ಹೆಚ್ಚು ಮಂದಿ ಉಚಿತವಾಗಿ ಬಸ್ ಪ್ರಯಾಣ ಅನುಭವಿಸಿದ್ದಾರೆ. ಕಲ್ಯಾಣ ಕರ್ನಾಟಕ RTC ಯಲ್ಲಿ 50,000-ಕ್ಕೂ ಹೆಚ್ಚು ಮಹಿಳೆಯರು ಉಚಿತವಾಗಿ ಪ್ರಯಾಣಿಸಿದ್ದಾರೆ ಎಂದು ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದ ವ್ಯವಸ್ಥಾಪಕ ನಿರ್ದೇಶಕ ಅನ್ಬುಕುಮಾರ್ ಮಾಹಿತಿ ನೀಡಿದರು.
ಕೆಎಸ್‌ಆರ್ಟಿಸಿಯಲ್ಲಿ 1.93 ಲಕ್ಷ ಮಂದಿ ಮಹಿಳೆಯರು ಉಚಿತವಾಗಿ ಸಂಚಾರ ನಡೆಸಿದರು. ಇತ್ತ ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬಸ್‌ಗಳಲ್ಲಿ ಒಂದು ಲಕ್ಷಕ್ಕೂ ಅಧಿಕ ಮಂದಿ ಸವಾರಿ ಮಾಡಿದರು.
'ಶಕ್ತಿ' ಯೋಜನೆ ಆರಂಭವಾದ ನಂತರ ಮಹಿಳೆಯರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಸಾಕಷ್ಟು ಬಸ್‌ಗಳ ಆಸನಗಳು ಭರ್ತಿಯಾಗಿದ್ದು, ಕೆಲವೆಡೆ ನಿಂತುಕೊಂಡೆ ಬಸ್‌ನಲ್ಲಿ ಮಹಿಳೆಯು ಓಡಾಡಿದ್ದು ಕಂಡು ಬಂದಿದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ ಎಂದರು.
ರಾಜ್ಯದಲ್ಲಿ ಮುಂದಿನ ದಿನಗಳಲ್ಲಿ ಈ 'ಶಕ್ತಿ' ಯೋಜನೆಯಡಿ ವಿದ್ಯಾರ್ಥಿಗಳು, ಟ್ರಾನ್ಸ್‌ಜೆಂಡರ್, ಮಹಿಳೆಯರು ಸೇರಿದಂತೆ 1.2 ಕೋಟಿ ಮಂದಿ ಸ್ಮಾರ್ಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಲಿದ್ದಾರೆ ಎಂದು ಸಾರಿಗೆ ಇಲಾಖೆ ಅಂದಾಜಿಸಿದೆ. ಸ್ಮಾರ್ಟ್ ಕಾರ್ಡ್‌ಗಳನ್ನು ಹೊಂದಿರುವ ಎಲ್ಲಾ ಮಹಿಳೆಯರು ನಿಯಮಿತವಾಗಿ ಪ್ರಯಾಣಿಸುವಂತಿಲ್ಲ."
ಅರ್ಜಿ ಸಲ್ಲಿಕೆ ಹೇಗೆ?
ಉಚಿತ ಪ್ರಯಾಣಕ್ಕೆ ಅರ್ಹರಾದ ಮಹಿಳೆಯರು ಮುಂದಿನ 03 ತಿಂಗಳಲ್ಲಿ https://sevasindhuservices.karnataka.gov.in/ ವೆಬ್‌ಸೈಟ್‌ನಲ್ಲಿ ಆನ್‌ಲೈನ್‌ನಲ್ಲಿ ಮೂಲಕ ಅರ್ಜಿ ಸಲ್ಲಿಸಬೇಕು. ಬಳಿಕ ಸರ್ಕಾರದಿಂದ ಅರ್ಜಿದಾರ ಮಹಿಳೆಯರು 'ಶಕ್ತಿ' ಸ್ಮಾರ್ಟ್ ಕಾರ್ಡ್ ಪಡೆಯಲಿದ್ದಾರೆ. ಆದರೆ ಸರ್ಕಾರ ಯಾವಾಗಿನಿಂದ ಶಕ್ತಿ ಸ್ಮಾರ್ಟ್ ಕಾರ್ಡ್ ವಿತರಿಸಲಿದೆ, ಆರಂಭಿಕ ದಿನಾಂಕ ಬಗ್ಗೆ ಇನ್ನು ಸ್ಪಷ್ಟವಾಗಿಲ್ಲ. ಕಾರ್ಡ್ ನೀಡುವವರೆಗೆ ಮಹಿಳೆಯರು ಆಧಾರ್ ಗುರುತಿನ ಚೀಟಿಯ ನಕಲು ಪ್ರತಿ ತೋರಿಸಿ ನಾಲ್ಕು ನಿಗಮದ ಬಸ್‌ಗಳಲ್ಲಿ ಉಚಿತವಾಗಿ ರಾಜ್ಯಾದ್ಯಂತ ಪ್ರಯಾಣಿಸಬಹುದಾಗಿದೆ ಎಂದು ಸರ್ಕಾರ ಆದೇಶದಲ್ಲಿ ತಿಳಿಸಿದೆ.












Click it and Unblock the Notifications