ಜರ್ಮನಿ, ದುಬೈನಿಂದ ಕಾಲ್ಕಿತ್ತ ಪ್ರಜ್ವಲ್ ರೇವಣ್ಣ, ಈಗ ಎಲ್ಲಿದ್ದಾರೆ?: ಎಸ್‌ಐಟಿಗೆ ಸಿಕ್ಕ ಮಾಹಿತಿ ಇಲ್ಲಿದೆ
ಬೆಂಗಳೂರು, ಮೇ 04: ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ತಂದೆ ಎಚ್‌ಡಿ ರೇವಣ್ಣ ಅವರನ್ನು ಎಸ್‌ಐಟಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ. ಇದರ ಬೆನ್ನಲ್ಲೆ ವಿದೇಶದಲ್ಲಿದ್ದ ಪ್ರಜ್ವಲ್ ಬೇರೆ ದೇಶಕ್ಕೆ ಹಾರಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಹಾಗಾದರೆ, ಪ್ರಜ್ವಲ್ ರೇವಣ್ಣ ಎಲ್ಲಿದ್ದಾರೆ?
ಏಪ್ರಿಲ್ 18ರಂದು ಪ್ರಜ್ವಲ್ ರೇವಣ್ಣಗೆ ಸಂಬಂಧಿಸಿ ಅಶ್ಲೀಲ ವಿಡಿಯೋಗಳಿರುವ ಪೆನ್‌ಡ್ರೈವ ವಿಚಾರ ಬೆಳಕಿಗೆ ಬಂತು. ಬಳಿಕ ಚುನಾವಣೆಯಲ್ಲಿ ಮತದಾನ ಮಾಡಿದ ಬೆನ್ನಲ್ಲೆ ಕರ್ನಾಟಕ ಸರ್ಕಾರ ರಾಜ್ಯ ಮಹಿಳಾ ಆಯೋಗ ಒತ್ತಾಯದ ಮೇರೆಗೆ ಪೆನ್‌ಡ್ರೈವ್ ಪ್ರಕರಣವನ್ನು ಎಸ್‌ಐಟಿಗೆ ವಹಿಸಿದರು.

ಅಂದೇ ಬೆಂಗಳೂರಿನಿಂದ ಜರ್ಮನಿಗೆ ಹಾರಿದ್ದ ಪ್ರಜ್ವಲ್ ರೇವಣ್ಣ ಇಂದು ಆ ದೇಶದಲ್ಲಿ ಇರದೇ, ಒಂದು ದೇಶದಿಂದ ಮತ್ತೊಂದು ದೇಶಕ್ಕೆ ಕಾಲ್ಕಿತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ವಿರುದ್ಧ ಬ್ಲೂಕಾರ್ನರ್ ನೋಟಿಸ್ (Blue Corner Notice) ಜಾರಿಯಾಗುತ್ತದೆ ಎಂಬ ಭಯದಿಂದ ಜರ್ಮನಿಯಿಂದ ತೆರಳಿದ್ದಾರೆ ಎಂದು ತಿಳಿದು ಬಂದಿದೆ.
ಹಂಗೇರಿಗೆ ಹಾರಿರುವ ಪ್ರಜ್ವಲ್ ರೇವಣ್ಣ
ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಜರ್ಮನಿಗೆ ಹಾರಿದ್ದ ಪ್ರಜ್ವಲ್ ರೇವಣ್ಣ ಅಲ್ಲಿಂದ ದುಬೈಗೆ ತೆರಳಿದ್ದರು ಎನ್ನಲಾಗಿತ್ತು. ಇದೀಗ ಅಲ್ಲಿಂದ ಹಂಗೇರಿಯ ಬಡಾಪೆಸ್ಟ್‌ನಲ್ಲಿ ತಂಗಿದ್ದಾರೆ ಎಂದು ಹೇಳಲಾಗುತ್ತಿದೆ. ಸದ್ಯಕ್ಕೆ ಎಸ್‌ಐಟಿ ನೋಟಿಸ್ ನೀಡಿತ್ತು. ಪ್ರಜ್ವಲ್ ರೇವಣ್ಣ ವಿಚಾರಣೆಗೆ ಹಾಜರಾಗಲು ಏಳು ದಿನ ಕಾಲಾವಕಾಶ ಕೋರಿದ್ದಾರೆ.

ಪ್ರಕರಣದ ತನಿಖೆ ತೀವ್ರಗೊಳಿಸಿರುವ ಎಸ್‌ಐಟಿ ಅಧಿಕಾರಿಗಳು ಪ್ರಜ್ವಲ್ ರೇವಣ್ಣ ಪಾಸ್‌ಪೋರ್ಟ್ ಎಂಟ್ರಿಯ ಮಾಹಿತಿ ಬಗ್ಗೆ ಸುಳಿವು ಪತ್ತೆ ಮಾಡಿದ್ದಾರೆ. ಪಾಸ್‌ಪೋರ್ಟ್ ಎಲ್ಲಿ ಎಂಟ್ರಿ ಆಗಿದೆ ಎಂಬುದರ ಮಾಹಿತಿ ಮೇರೆಗೆ ಪ್ರಜ್ವಲ್ ಇದೀಗ ಹಂಗೇರಿಯಲ್ಲಿದ್ದಾರೆ ಎಂದು ತನಿಖಾಧಿಕಾರಿಗಳು ಮಾಹಿತಿ ಕಲೆ ಮಾಡಿದ್ದಾರೆ.
ಎಚ್‌ಡಿ ರೇವಣ್ಣ ಬಂಧನ
ಇತ್ತ ಪ್ರಜ್ವಲ್ ರೇವಣ್ಣ ಹಾಗೂ ಎಚ್‌ಡಿ ರೇವಣ್ಣ ಅವರಿಗೆ ಲುಕ್‌ಔಟ್ ನೋಟಿಸ್ ಜಾರಿಗೊಳಿಸಲಾಗಿದೆ. ಇದರ ಬೆನ್ನಲ್ಲೆ ಶನಿವಾರ ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರ ಮನೆಯಲ್ಲಿದ್ದ ಎಚ್‌ಡಿ ರೇವಣ್ಣ ಅವರನ್ನು ಎಸ್‌ಐಟಿ ತನಿಖಾಧಿಕಾರಿಗಳು ಬಂಧಿಸಿದ್ದಾರೆ.
ಪೆನ್‌ಡ್ರೈವ್ ಪ್ರಕರಣದಲ್ಲಿ ಸುಮಾರು 2000 ಅಶ್ಲೀಲ ವಿಡಿಯೋ, ಫೋಟೋಗಳಿವೆ ಎನ್ನಲಾಗಿದೆ. ನೂರಾರು ಮಹಿಳೆಯರ ಮೇಲೆ ಅತ್ಯಾಚಾರ, ಲೈಂಗಿಕ ದೌರ್ಜನ್ಯ ನಡೆಸಲಾಗಿದೆ ಎಂದು ಹೇಳಲಾಗಿದೆ. ಈ ಪ್ರಕರಣದಲ್ಲಿ ಎಚ್‌ಡಿ ರೇವಣ್ಣ ಎ1 ಆರೋಪಿಯಾಗಿದ್ದು, ಅವರನ್ನು ಬಂಧಿಸಿ ವಶಕ್ಕೆ ಪಡೆದು ವಿಚಾರಣೆ ಆರಂಭಿಸಲಾಗಿದೆ.
ಮೂಲಗಳ ಪ್ರಕಾರ ಜರ್ಮನಿಗೆ ಹಾರಿ ಅಲ್ಲಿಂದ ಹಂಗೇರಿಗೆ ತೆರಳಿದ್ದಾರೆ ಎನ್ನಲಾದ ಪ್ರಜ್ವಲ್ ರೇವಣ್ಣ ಇಂದು ಕರ್ನಾಟಕದ ಮಂಗಳೂರಿಗೆ ಬರಲಿದ್ದು, ಅಲ್ಲಿಯೇ ಅವರನ್ನು ಬಂಧಿಸಲಾಗುವುದು ಅಂತಲೂ ಹೇಳಲಾಗುತ್ತಿದೆ. ಮತ್ತೊಂದೆಡೆ ಕರ್ನಾಟಕದಲ್ಲಿ ಎರಡನೇ ಹಂತದ ಚುನಾವಣೆ ನಡೆದ ಬಳಿಕ ಪ್ರಜ್ವಲ್ ಎಸ್‌ಐಟಿ ಮುಂದೆ ಹಾಜರಾಗಲಿದ್ದಾರೆ ಅಂತಲೂ ಹೇಳಲಾಗುತ್ತಿದೆ.












Click it and Unblock the Notifications