ಡಿಕೆ ಶಿವಕುಮಾರ್ ಲಿಂಗಾಯತರ ಕ್ಷಮೆ ಯಾಚಿಸಬೇಕು: ಮಾತೆ ಮಹಾದೇವಿ
Recommended Video

ಬಾಗಲಕೋಟೆ, ಅಕ್ಟೋಬರ್ 20: ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಹಿನ್ನಡೆ ಅನುಭವಿಸಲು ಬೇರೆ ಬೇರೆ ಕಾರಣಗಳಿವೆ. ಅದಕ್ಕೆ ಲಿಂಗಾಯತ ಧರ್ಮದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದಿರುವ ಬಸವ ಪೀಠದ ಅಧ್ಯಕ್ಷೆ ಮಾತೆ ಮಹಾದೇವಿ, ಸಚಿವ ಡಿ.ಕೆ. ಶಿವಕುಮಾರ್ ಅವರು ಲಿಂಗಾಯತ ಸಮಾಜದ ಕ್ಷಮೆ ಕೋರಬೇಕು ಎಂದು ಆಗ್ರಹಿಸಿದ್ದಾರೆ.
ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟವನ್ನು ಸರ್ಕಾರ ಕೈಗೆತ್ತಿಕೊಳ್ಳುವ ಮೂಲಕ ತಪ್ಪು ಮಾಡಿತು. ಇದರಿಂದ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಉಂಟಾಯಿತು ಎಂದು ಸಚಿವ ಡಿ.ಕೆ. ಶಿವಕುಮಾರ್, ಜನತೆಗೆ ಕ್ಷಮೆ ಕೋರಿದ್ದರು.
ಡಿ.ಕೆ. ಶಿವಕುಮಾರ್ ಅವರ ಹೇಳಿಕೆ, ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದ ಕಾಂಗ್ರೆಸ್ ಮುಖಂಡರಿಗೆ ಕಸಿವಿಸಿ ಉಂಟು ಮಾಡಿದೆ. ಮುಖ್ಯವಾಗಿ ಡಿ.ಕೆ. ಶಿವಕುಮಾರ್ ಮತ್ತು ಎಂಬಿ ಪಾಟೀಲ ಅವರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದೆ. ಡಿ.ಕೆ. ಶಿವಕುಮಾರ್ ವಿರುದ್ಧ ಎಂ.ಬಿ ಪಾಟೀಲ್ ತೀವ್ರ ಹರಿಹಾಯ್ದಿದ್ದಾರೆ.
ಈ ನಡುವೆ ಮಾತೆ ಮಹಾದೇವಿ ಅವರೂ ಲಿಂಗಾಯತ ಪ್ರತ್ಯೇಕ ಧರ್ಮದ ಹೋರಾಟದ ಪರವಾಗಿ ಮತ್ತೆ ಮಾತನಾಡಿದ್ದು, ಡಿ.ಕೆ. ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸಿದ್ದರಾಮಯ್ಯ ಮಾನ್ಯತೆ
ಹನ್ನೆರಡನೆಯ ಶತಮಾನದಲ್ಲಿ ಬಸವಣ್ಣ ಈ ಧರ್ಮವನ್ನು ಸ್ಥಾಪಿಸಿದರು. ಅದಕ್ಕೆ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದ ಸಂದರ್ಭದಲ್ಲಿ ಮಾನ್ಯತೆ ನೀಡಿದ್ದಾರೆ. ಈ ಸ್ವತಂತ್ರ ಧರ್ಮದ ಮಾನ್ಯತೆಯಿಂದಾಗಿ ಕಾಂಗ್ರೆಸ್‌ಗೆ ಹಿನ್ನಡೆಯಾಗಿದೆ ಎಂದು ಡಿ.ಕೆ. ಶಿವಕುಮಾರ್ ಹೇಳಿದ್ದು ತಪ್ಪು. ಇದು ಶುದ್ಧ ಸುಳ್ಳು. ಕಾಂಗ್ರೆಸ್ ಹಿನ್ನಡೆಗೆ ಬೇರೆ ಕಾರಣಗಳಿವೆ. ಇದಕ್ಕೆ ಧರ್ಮದ ಮೇಲೆ ಗೂಬೆ ಕೂರಿಸುವುದು ಸರಿಯಲ್ಲ ಎಂದು ಮಾತೆ ಮಹಾದೇವಿ ಹೇಳಿದರು.

ಹೋರಾಟದಿಂದಲೇ ಹೆಚ್ಚು ಮತ
ಪ್ರತ್ಯೇಕ ಧರ್ಮದ ಹೋರಾಟದಿಂದಲೇ ಕಾಂಗ್ರೆಸ್‌ಗೆ ವಿಧಾನಸಭೆ ಚುನಾವಣೆಯಲ್ಲಿ ಹೆಚ್ಚು ಮತಗಳು ದೊರೆತಿವೆ. ಬೀದರ್‌ನ ಐವರು ಶಾಸಕರಲ್ಲಿ ನಾಲ್ವರು ಕಾಂಗ್ರೆಸ್‌ನವರೇ ಆಗಿದ್ದಾರೆ. ಹೀಗಿರುವಾಗ ಡಿ.ಕೆ. ಶಿವಕುಮಾರ್ ಬಹಳ ವಿಚಿತ್ರವಾದ ಮಾತುಗಳನ್ನು ಆಡಿದ್ದಾರೆ. ಅವರ ಹೇಳಿಕೆ ಸರಿಯಲ್ಲ. ಖಂಡನಾರ್ಹ ಎಂದು ಮಾತೆ ಮಹಾದೇವಿ ಅಭಿಪ್ರಾಯಪಟ್ಟರು.

ಹೋರಾಟದಿಂದ ಹಿಂದೆ ಸರಿದಿದ್ದೇನೆ
ಒಂದು ಸಂದರ್ಭದಲ್ಲಿ ಪ್ರತ್ಯೇಕ ಲಿಂಗಾಯತ ಧರ್ಮದ ಹೋರಾಟದಲ್ಲಿ ಮುಂಚೂಣಿಯಲ್ಲಿದ್ದೆ. ಈಗ ಅದರಿಂದ ಹೊರ ಬಂದಿದ್ದೇನೆ. ಈಗ ಲಿಂಗಾಯತ ಧರ್ಮದ ಬಗ್ಗೆ ಏನನ್ನೂ ಮಾತನಾಡುವುದಿಲ್ಲ. ಉಪ ಸಭಾಪತಿಯಾಗಿರುವುದರಿಂದ ನಾನು ಮಾತನಾಡುವಂತಿಲ್ಲ. ಕೇಂದ್ರ ಸರ್ಕಾರದ ಮುಂದೆ ಈ ವಿಷಯವಿದೆ. ಈ ಸಂದರ್ಭದಲ್ಲಿ ಮಾತನಾಡಬಾರದು. ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಹೋರಾಟಕ್ಕೆ ಹಿನ್ನಡೆಯಾಗಿಲ್ಲ. ಇದರ ಬಗ್ಗೆ ವಿನಯ್ ಕುಲಕರ್ಣಿ ಮತ್ತು ಎಂ.ಬಿ. ಪಾಟೀಲ್ ಅವರನ್ನು ಕೇಳಬೇಕು ಎಂದು ಬಸವರಾಜ ಹೊರಟ್ಟಿ ಹೇಳಿದ್ದಾರೆ.

ರಾಜಕೀಯ ದುರುದ್ದೇಶ ಕಾಣಿಸುತ್ತಿಲ್ಲ
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯನ್ನು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಸ್ವಾಗತಿಸಿದ್ದಾರೆ. ಶಿವಮೊಗ್ಗದಲ್ಲಿ ಮಾತನಾಡಿದ ಯಡಿಯೂರಪ್ಪ, ಡಿಕೆ ಶಿವಕುಮಾರ್ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ. ಅದರಲ್ಲಿ ರಾಜಕೀಯ ಉದ್ದೇಶವೂ ಕಾಣಿಸುತ್ತಿಲ್ಲ. ಅವರು ವಾಸ್ತವ ಅರ್ಥ ಮಾಡಿಕೊಂಡು ಸ್ವಂತ ಅಭಿಪ್ರಾಯ ನೀಡಿದ್ದಾರೆ. ಅವರ ಅಭಿಪ್ರಾಯವನ್ನು ಸ್ವಾಗತಿಸುತ್ತೇನೆ. ಈ ಬಗ್ಗೆ ಟೀಕೆ ಟಿಪ್ಪಣಿಗಳು ಬೇಡ. ಕುಹಕ, ವಿರೋಧ ಯಾರಿಗೂ ಶೋಭೆಯಲ್ಲ ಎಂದಿದ್ದಾರೆ.

ಡಿಕೆಶಿ ಅಧ್ಯಯನ ಮಾಡಲಿ
ಡಿ.ಕೆ. ಶಿವಕುಮಾರ್ ಅವರ ಹೇಳಿಕೆಯಿಂದ ಲಿಂಗಾಯತ ಸಮುದಾಯಕ್ಕೆ ಅಸಮಾಧಾನ ಉಂಟಾಗಿದೆ. ಧರ್ಮದ ಏಳಿಗೆಯನ್ನು ಕೆಲವರಿಗೆ ಸಹಿಸಲು ಸಾಧ್ಯವಾಗುತ್ತಿಲ್ಲ. ಡಿ.ಕೆ. ಶಿವಕುಮಾರ್ ಲಿಂಗಾಯತ ಧರ್ಮದ ಬಗ್ಗೆ ಅಧ್ಯಯನ ಮಾಡಲಿ. ಪ್ರತ್ಯೇಕ ಧರ್ಮ ಮಾನ್ಯತೆ ತಪ್ಪಲ್ಲ ಎಂದು ಅವರು ಹೇಳಿಕೆ ನೀಡಬೇಕು. ತಮ್ಮದೇ ಸರ್ಕಾರದ ಸಂಪುಟ ನಿರ್ಧಾರಕ್ಕೆ ಅವರು ಬದ್ಧರಾಗಿರಬೇಕು ಎಂದು ಬಸವಜಯ ಮೃತ್ಯುಂಜಯಸ್ವಾಮೀಜಿ ಹೇಳಿದ್ದಾರೆ.












Click it and Unblock the Notifications