ಕುಕ್ಕೆ ಸುಬ್ರಹ್ಮಣ್ಯ ಸೇರಿ ಈ ದೇವಸ್ಥಾನಗಳಲ್ಲಿ ಹಿರಿಯ ನಾಯಕರಿಗೆ ನೇರ ದರ್ಶನಕ್ಕೆ ಅವಕಾಶ: ಮುಜರಾಯಿ ಇಲಾಖೆ ಮಹತ್ವದ ಆದೇಶ
ರಾಜ್ಯದ ಪ್ರಮುಖ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ಹಿರಿಯ ನಾಗರಿಕರು ಗಂಟೆಗಟ್ಟಲೆ ನಿಲ್ಲುವ ತೊಂದರೆ ತಪ್ಪಲಿದೆ. ಮುಜರಾಯಿ ಇಲಾಖೆ ಹಿರಿಯ ನಾಗರಿಕರ ಅನುಕೂಲಕ್ಕಾಗಿ ಹೊಸ ಆದೇಶ ಹೊರಡಿಸಿದ್ದು, ಮುಜರಾಯಿ ಇಲಾಖೆಯ ದೇವಾಲಯಗಳಲ್ಲಿ ಹಿರಿಯ ನಾಗರಿಕರಿಗೆ ನೇರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.
65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರು ರಾಜ್ಯದ 358 ಸರ್ಕಾರಿ ದೇವಾಲಯಗಳಲ್ಲಿ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲ ಎಂದು ರಾಮಲಿಂಗಾ ರೆಡ್ಡಿ ನೇತೃತ್ವದ ಮುಜರಾಯಿ ಇಲಾಖೆ ಆದೇಶ ಹೊರಡಿಸಿದೆ.

ಅಖಿಲ ಕರ್ನಾಟಕ ಹಿಂದೂ ದೇವಾಲಯಗಳ ಅರ್ಚಕ, ಆಗಮಿಕರ ಮತ್ತು ಉಪಾಧಿವಂತ ಫೆಡರೇಷನ್‌ನ ಮನವಿಯನ್ನು ಆಧರಿಸಿ ಮುಜರಾಯಿ ಇಲಾಖೆ ಈ ಸುತ್ತೋಲೆ ಹೊರಡಿಸಿದೆ. ಹಿರಿಯ ನಾಗರಿಕರು 202 ಪ್ರವರ್ಗ 'ಎ' ಮತ್ತು 156 ವರ್ಗ 'ಬಿ' ಮುಜರಾಯಿ ದೇವಸ್ಥಾನಗಳಲ್ಲಿ ಸರದಿಯಲ್ಲಿ ನಿಲ್ಲದೆ ನೇರವಾಗಿ ದರ್ಶನ ಪಡೆಯಬಹುದು ಎಂದು ಹೇಳಿದೆ.
ಮುಜರಾಯಿ ಇಲಾಖೆಯ ಆದೇಶದ ಅನ್ವಯ 65 ವರ್ಷಕ್ಕೂ ಮೇಲ್ಪಟ್ಟವರು ಇನ್ನು ಕುಕ್ಕೆ ಸುಬ್ರಹ್ಮಣ್ಯ, ಬೆಂಗಳೂರಿನ ದೊಡ್ಡ ಗಣಪತಿ, ಬನಶಂಕರಿ ಮತ್ತು ಧರ್ಮರಾಯ ಸ್ವಾಮಿ, ಬೆಳಗಾವಿಯ ರೇಣುಕಾ ಯಲ್ಲಮ್ಮ ದೇವಸ್ಥಾನ ಸೇರಿದಂತೆ ಹಲವು ಪ್ರಮುಖ ದೇವಾಲಯಗಳಲ್ಲಿ ನೇರ ದರ್ಶನ ಪಡೆಯಬಹುದಾಗಿದೆ.
ಇತ್ತೀಚಿನ ದಿನಗಳಲ್ಲಿ ದೇವಾಲಯಗಳಿಗೆ ಭೇಟಿ ನೀಡುವ ಭಕ್ತರ ಸಂಖ್ಯೆಯಲ್ಲಿ ಗಣನೀಯವಾಗಿ ಹೆಚ್ಚಳವಾಗಿದ್ದು, ಹಿರಿಯ ನಾಗರಿಕರು ಸರತಿ ಸಾಲಿನಲ್ಲಿ ಗಂಟೆ ಗಟ್ಟಲೆ ದರ್ಶನಕ್ಕೆ ಕಾಯುವುದು ಕಷ್ಟಕರವಾಗಿದೆ ಈ ಕಾರಣಕ್ಕೆ ಮುಜರಾಯಿ ಆಯುಕ್ತ ಬಸವರಾಜೇಂದ್ರ ಎಚ್ ಸುತ್ತೋಲೆ ಹೊರಡಿಸಿದ್ದಾರೆ.
ವಯಸ್ಸಿನ ದಾಖಲೆ ತೋರಿಸಬೇಕು
"65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ಹಿರಿಯ ನಾಗರಿಕರಿಗೆ ವಯಸ್ಸನ್ನು ಖಚಿತಪಡಿಸಲು ಅಥವಾ ಆಧಾರ್ ಒದಗಿಸುವ ಮೂಲಕ ತ್ವರಿತ ದರ್ಶನ ಪಡೆಯಲು ವ್ಯವಸ್ಥೆ ಮಾಡಲು ನಿರ್ದೇಶಿಸಲಾಗಿದೆ" ಎಂದು ಅದು ಹೇಳಿದೆ.
ಹಿರಿಯ ನಾಗರಿಕರಿಗೆ ಪ್ರತ್ಯೇಕ ಜಾಗ ಲಭ್ಯವಿದ್ದಲ್ಲಿ ಮೀಸಲಿಡುವಂತೆ ದೇವಸ್ಥಾನದ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಹಿರಿಯ ನಾಗರಿಕರಿಗೆ ತ್ವರಿತ ದರ್ಶನಕ್ಕೆ ಸಹಾಯ ಮಾಡಲು ಸಹಾಯ ಕೇಂದ್ರವನ್ನು ಸ್ಥಾಪಿಸಲು ದೇವಾಲಯದ ಅಧಿಕಾರಿಗಳಿಗೆ ಸುತ್ತೋಲೆಯಲ್ಲಿ ತಿಳಿಸಲಾಗಿದೆ.
ಶಕ್ತಿ ಯೋಜನೆಯಡಿ ಮಹಿಳೆಯರಿಗೆ ಉಚಿತ ಸಾರಿಗೆ ವ್ಯವಸ್ಥೆ ಕಲ್ಪಿಸಿದ ಬಳಿಕ ರಾಜ್ಯದ ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ಭೇಟಿ ನೀಡುವವರ ಸಂಖ್ಯೆ ಗಣನೀಯವಾಗಿ ಹೆಚ್ಚಳವಾಗಿದೆ. ಮಹಿಳೆಯರ ಜೊತೆಗೆ ಕುಟುಂಬಸ್ಥರು, ಮಕ್ಕಳೂ ಕೂಡ ಪ್ರವಾಸಕ್ಕೆ ತೆರಳುತ್ತಿದ್ದಾರೆ.












Click it and Unblock the Notifications