JDS: ಇಂದು ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆ; ಎಲ್ಲರ ಚಿತ್ತ ಹಾಸನದತ್ತ; ಇಲ್ಲಿದೆ ನೋಡಿ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ!?
ಬೆಂಗಳೂರು, ಏಪ್ರಿಲ್3: ಮಿಷನ್ 123 ಟಾರ್ಗೆಟ್ ಹಾಕಿಕೊಂಡಿರುವ ದಳಪತಿಗಳು ವಿಧಾನಸಭಾ ದಿನಾಂಕ ಘೋಷಣೆಗೂ ಮೊದಲೇ 93 ಅಭ್ಯರ್ಥಿಗಳನ್ನ ಬಿಡುಗಡೆ ಮಾಡಿದ ಜೆಡಿಎಸ್ ನಾಯಕರಿಗೆ ಎರಡನೇ ಪಟ್ಟಿಯೇ ದೊಡ್ಡ ತಲೆನೋವಾಗಿದೆ.
ಹಾಸನ ವಿಧಾನಸಭಾ ಕ್ಷೇತ್ರಕ್ಕೆ ಶುರುವಾದ ಜಟಾಪಟಿ ಕೊನೆಗೂ ಮೆಗಾ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ತಲುಪಿದ್ದು, ಇಂದು(ಸೋಮವಾರ) ಜೆಡಿಎಸ್ ಎರಡನೇ ಪಟ್ಟಿ ಬಿಡುಗಡೆಯಾಗಲಿದೆ. ಮೊದಲ ಪಟ್ಟಿ ಬಿಡುಗಡೆಗಿಂತ ಎರಡನೇ ಪಟ್ಟಿ ಬಿಡುಗಡೆಗೆ ಜೆಡಿಎಸ್ ಭರ್ಜರಿ ಸಿದ್ದತೆ ಮಾಡಿಕೊಂಡಿದ್ದು, ಕೆಲವು ಕ್ಷೇತ್ರಗಳಲ್ಲಿ ಪ್ರಬಲ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಮಾಜಿ ಮುಖ್ಯಮಂತ್ರಿ ಎಚ್.ಡಿ ಕುಮಾರಸ್ವಾಮಿ ತಯಾರಿ ನಡೆಸಿದ್ದಾರೆ.

ಮೊದಲ ಪಟ್ಟಿಯಲ್ಲಿ 93 ಕ್ಷೇತ್ರಗಳ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ನಾಯಕರು, ಎರಡನೇ ಪಟ್ಡಿಯಲ್ಲಿ 30 ರಿಂದ 50 ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಅಭ್ಯರ್ಥಿ ಖಚಿತವಾಗಿರುವ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆ ಮಾಡಲಿದ್ದು, ಕಳೆದ ಚುನಾವಣೆಯಲ್ಲಿ ದ್ವಿತೀಯ ಸ್ಥಾನ ಪಡೆದ ಕ್ಷೇತ್ರಗಳಲ್ಲಿ ಟಿಕೆಟ್ ಘೋಷಣೆಯಾಗಲಿದೆ. ಅಲ್ಲದೇ ಸಮುದಾಯವಾರು ಹಾಗೂ ಪ್ರಾಂತ್ಯವಾರು ಅಭ್ಯರ್ಥಿಗಳನ್ನ ಕುಮಾರಸ್ವಾಮಿ ಅವರು ಫೈನಲ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ಎರಡನೇ ಪಟ್ಟಿಯಲ್ಲಿರುತ್ತಾ ಹಾಸನ ಕ್ಷೇತ್ರ!?
ಹೌದು, ಸಾಕಷ್ಟು ಗೊಂದಲ ಹಾಗೂ ಹಗ್ಗಜಗ್ಗಾಟಕ್ಕೆ ಕಾರಣವಾಗಿರುವ ಕ್ಷೇತ್ರ ಅಂದ್ರೆ ಹಾಸನ ವಿಧಾನಸಭಾ ಕ್ಷೇತ್ರ. ಹಾಸನ ವಿಧಾನಸಭಾ ಕ್ಷೇತ್ರ ಟಿಕೆಟ್ ಗಾಗಿ ಭವಾನಿ ರೇವಣ್ಣ ಪರವಾಗಿ ರೇವಣ್ಣ ಅವರ ಇಡೀ ಕುಟುಂಬ ಪಟ್ಟು ಹಿಡಿದಿದ್ದು, ಇತ್ತ ಸ್ವರೂಪ್ ಪ್ರಕಾಶ್ ಸಹ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ಈಗಾಗಲೇ ಹಲವು ಭಾರಿ ಹಾಸನ ಟಿಕೆಟ್ ವಿಚಾರವಾಗಿ ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠರಾದ ಹೆಚ್.ಡಿ ದೇವೇಗೌಡ ಹಾಗೂ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಮಾಜಿ ಸಚಿವ ಹೆಚ್.ಡಿ ರೇವಣ್ಣ ಸಭೆ ನಡೆಸಿದ್ದು, ಕೊನೆಗೂ ಹಾಸನ ಟಿಕೆಟ್ ವಿಚಾರವಾಗಿ ಅಂತಿಮ ನಿರ್ಧಾರಕ್ಕೆ ಬಂದಿದ್ದಾರೆ ಎನ್ನಲಾಗಿದೆ.
ಭವಾನಿ ರೇವಣ್ಣ ಗೆ ಟಿಕೆಟ್ ನಿರಾಕರಿಸುವ ಹಿಂದಿದೆ ರಾಜಕೀಯ ಲೆಕ್ಕಾಚಾರ ?
ಸಾಕಷ್ಟು ಹಿಂದಿನಿಂದಲೂ ರಾಜಕೀಯ ಎಂಟ್ರಿಯಾಗಬೇಕು ಎಂದ ಆಸೆ ಇಟ್ಟುಕೊಂಡಿದ್ದ ಭವಾನಿ ರೇವಣ್ಣ ಈ ಬಾರೀ ನಾನೇ ಹಾಸನ ಜೆಡಿಎಸ್ ಅಭ್ಯರ್ಥಿ ಎಂದು ಹೇಳಿಕೆ ನೀಡಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದ್ದು, 2023 ಚುನಾವಣೆಗೆ ಭವಾನಿಗೆ ಟಿಕೆಟ್ ನೀಡಬೇಕು ಎಂದು ಮಾಜಿ ಸಚಿವ ಹೆಚ್.ಡಿ ರೇವಣ್ಣ ಫ್ಯಾಮಿಲಿ ಪಟ್ಟು ಹಿಡಿದಿದೆ. ಈ ವಿಚಾರವಾಗಿ ದೇವೇಗೌಡ್ರು ಹಾಗೂ ಕುಮಾರಸ್ವಾಮಿ ಜೊತೆಗೆ ಸಾಕಷ್ಟು ಚರ್ಚೆಗಳು ನಡೆದಿದ್ದು, ಕುಟುಂಬಸ್ಥರಿಗೆ ಟಿಕೆಟ್ ನೀಡಲು ಸಾಧ್ಯವಿಲ್ಲ, ಕ್ಷೇತ್ರದಲ್ಲಿ ಸಮಾನ್ಯ ಕಾರ್ಯಕರ್ತನಿಗೆ ಟಿಕೆಟ್ ಎಂದು ಕುಮಾರಸ್ವಾಮಿ ಹೇಳಿದ್ದು, ಇತ್ತ ರೇವಣ್ಣ ಪಟ್ಟು ಹಿಡಿದಿದ್ದಾರೆ.

ಮೊದಲನಿಂದಲೂ ಜೆಡಿಎಸ್ ಅಂದ್ರೆ ಫ್ಯಾಮಿಲಿ ಪಾರ್ಟಿ ಎಂಬ ಟೀಕೆಗೆ ಗುರಿಯಾಗಿರುವ ಜೆಡಿಎಸ್ ನಾಯಕರು ಇದೀಗ ಮತ್ತೆ ಭವಾನಿ ರೇವಣ್ಣ ಅವರಿಗೆ ಟಿಕೆಟ್ ನೀಡಿದರೇ ಮತ್ತೊಮ್ಮೆ ಹಣೆ ಪಟ್ಟಿಗೆ ನಾವು ಎಡೆಮಾಡಿಕೊಟ್ಟಂತಾಗುತ್ತದೆ. ಅಲ್ಲದೇ ಹಾಸನದಲ್ಲಿ ಭವಾನಿ ರೇವಣ್ಣನಿಗಿಂತ ಸ್ವರೂಪ್ ಪರವಾಗಿ ಚುನಾವಣಾ ಟ್ರೆಂಡ್ ಸೃಷ್ಠಿಯಾಗಿದ್ದು, ಭವಾನಿಗೆ ಟಿಕೆಟ್ ನೀಡಿದರೇ ಒಕ್ಕಲಿಗ ಒಳಪಂಗಡದ ಮತಗಳ ಧೃವೀಕರಣದಿಂದ ಹಿನ್ನೆಡೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಕುಟುಂಬಸ್ಥರಿಗೆ ಟಿಕೆಟ್ ನೀಡಿದರೇ ಚುನಾವಣೆ ಹೊತ್ತಲಿ ಎರಡು ರಾಷ್ಟ್ರೀಯ ಪಕ್ಷಗಳಿಗೆ ನಾವೇ ಅಸ್ತ್ರವನ್ನ ಕೊಟ್ಟಂತಾಗುತ್ತದೆ. ಹೀಗಾಗಿ ಕಾರ್ಯಕರ್ತನಿಗೆ ಟಿಕೆಟ್ ನೀಡಿದರೆ ಪಕ್ಷದ ಆಂತರಿಕ ವಲಯದಲ್ಲಿ ಉತ್ತಮ ಸಂದೇಶ ರವಾನೆಯಾಗಲಿದ್ದು, ಕಾರ್ಯಕರ್ತರ ಪರ ಪಕ್ಷವಿದೆ ಎಂಬ ಸಂದೇಶದಿಂದ ಪಕ್ಷಕ್ಕೆ ಲಾಭವಾಗಲಿದೆ. ಇನ್ನೂ ಭವಾನಿ ರೇವಣ್ಣ ಸ್ಪರ್ಧೆಯಿಂದ ಉಳಿದ ಜೆಡಿಎಸ್ ಕ್ಷೇತ್ರಗಳ ಮೇಲೆ ಮುಂದಿನ ದಿನಗಳಲ್ಲಿ ಸಾಕಷ್ಟು ಪರಿಣಾಮ ಬೀರಲಿದೆ ಎಂಬುದು ಕುಮಾರಸ್ವಾಮಿ ಅವರ ರಾಜಕೀಯ ಲೆಕ್ಕಾಚಾರವಾಗಿದೆ.
ಟಿಕೆಟ್ ಗಾಗಿ ಪಟ್ಟು ಹಿಡಿದ ರೇವಣ್ಣ; ದೇವೇಗೌಡ ಮುಂದಿಟ್ಟ ವಿಷಯಗಳೇನು?
ಹಾಸನ ಜಿಲ್ಲೆಯಲ್ಲಿ ತನ್ನದೇ ಆದ ವರ್ಚಸ್ಸನ್ನ ಹೊಂದಿರುವ ರೇವಣ್ಣಗೆ ಹಾಸನ ಟಿಕೆಟ್ ವಿಚಾರ ಪ್ರತಿಷ್ಠೆಯ ಕಣವಾಗಿದ್ದು, ಈ ಬಾರಿ ಪತ್ನಿ ಭವಾನಿಗೆ ನೀಡುವಂತೆ ಪಟ್ಟು ಹಿಡಿದಿದ್ದು, ಈ ವಿಚಾರವಾಗಿ ಸಹೋದರರ ನಡುವೆ ಮನಸ್ತಾಪಗಳಾಗಿವೆ ಎಂದು ಹೇಳಲಾಗಿದೆ.

ಇನ್ನೂ ಹಾಸನದಲ್ಲಿ ಶಾಸಕ ಪ್ರೀತಂಗೌಡ ಮಣಿಸಲು ಭವಾನಿ ರೇವಣ್ಣ ಪ್ರಬಲ ಅಭ್ಯರ್ಥಿ. ಪ್ರತಿ ಬಾರೀಯೂ ನಮ್ಮ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡಿರುವ ಪ್ರೀತಂಗೌಡ ಅವರನ್ನ ಈ ಚುನಾವಣೆಯಲ್ಲಿ ಸೋಲಿಸಲು ಪಣತೊಟ್ಟಿರುವ ರೇವಣ್ಣ ಟಿಕೆಟ್ ಗಾಗಿ ಸಾಕಷ್ಟು ಒತ್ತಡವನ್ನ ಹಾಕಿದ್ದಾರೆ. ಸ್ವಾಭಿಮಾನದ ಅಡಿಯಲ್ಲಿ ಚುನಾವಣೆ ಮಾಡುವುದಾಗಿ ರೇವಣ್ಣ ಕುಟುಂಬ ಪಟ್ಟು ಹಿಡಿದಿದ್ದು, ಒಂದು ವೇಳೆ ಭವಾನಿ ಸ್ಪರ್ಧೆ ಮಾಡದಿದ್ದರೆ ಫಲಾಯನವಾದ ಎಂಬ ಸಂದೇಶ ರವಾನೆಯಾಗುತ್ತದೆ ಎಂಬುದು ರೇವಣ್ಣ ಅವರ ವಾದವಾಗಿದೆ.
ಎರಡನೇ ಪಟ್ಟಿಯಲ್ಲಿರುವ ಪ್ರಮುಖ ಕ್ಷೇತ್ರಗಳ ಸಂಭಾವ್ಯ ಅಭ್ಯರ್ಥಿಗಳು
| ಕ್ಷೇತ್ರ | ಅಭ್ಯರ್ಥಿ |
| ಶಿರಾ | ಸಿ.ಆರ್.ಉಗ್ರೇಶ್ |
| ಹೆಚ್.ಡಿ.ಕೋಟೆ | ಚಿಕ್ಕಣ್ಣ/ ಕೃಷ್ಣನಾಯಕ್ |
| ನರಸಿಂಹರಾಜ | ಸಿ.ಎಂ.ಇಬ್ರಾಹಿಂ / ಅಬ್ದುಲ್ಲಾ |
| ಚಾಮರಾಜ | ಕೆ.ವಿ.ಶ್ರೀಧರ್ / ಪೆಟ್ರೋಲ್ ಬಂಕ್ ರವಿ |
| ಬಸವಕಲ್ಯಾಣ | ಮಲ್ಲಿಕಾರ್ಜುನ ಖೂಬ |
| ಕಂಪ್ಲಿ | ರಾಜು ನಾಯ್ಕ |
| ಹಳಿಯಾಳ | ಗೋಟ್ನೇಕರ್ |
| ರಾಜರಾಜೇಶ್ವರಿ | ಎಂ.ಕೃಷ್ಣಮೂರ್ತಿ |
| ತಿಪಟೂರು | ಶಾಂತಕುಮಾರ್ |
| ಹಾಸನ | ಸ್ವರೂಪ್ ಪ್ರಕಾಶ್ |
| ಅರಕಲಗೂಡು | ಎ.ಮಂಜು |
| ಅರಸೀಕೆರೆ | ಬಾಣಾವರ ಅಶೋಕ್ |
| ಕಡೂರು | ಧನಂಜಯ |












Click it and Unblock the Notifications