ಉಡುಪಿ : ಬೈಂದೂರು ಬಳಿ ಶಾಲಾ ಬಸ್ ಪಲ್ಟಿ
ಉಡುಪಿ, ಡಿ.18 : ಚಾಲಕನ ನಿಯಂತ್ರಣ ತಪ್ಪಿ ಶಾಲಾ ಬಸ್ ಪಲ್ಟಿ ಹೊಡೆದ ಪರಿಣಾಮ 25 ಮಕ್ಕಳು ಗಾಯಗೊಂಡ ಘಟನೆ ಬೈಂದೂರಿನ ಶಿರೂರು ಬಳಿ ನಡೆದಿದೆ. ಗಾಯಗೊಂಡ ಮಕ್ಕಳಲ್ಲಿ ಮೂವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಗುರುವಾರ ಬೆಳಗ್ಗೆ 9.30ರ ಸುಮಾರಿಗೆ ಈ ಘಟನೆ ನಡೆದಿದ್ದು, ಶಾಲಾ ಬಸ್ ಬೈಂದೂರಿನ ಹೆಚ್‍ಎಂಎಂಎಂಎಸ್ ಆಂಗ್ಲ ಮಾಧ್ಯಮ ಶಾಲೆಗೆ ಸೇರಿದ್ದಾಗಿದೆ. ಚಾಲಕನ ಅತೀ ವೇಗವೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ಹೇಳಿದ್ದು, ಆತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಶಿರೂರು ಸಮೀಪದ ತಿರುವಿನಲ್ಲಿ ಬಸ್ ಪಲ್ಟಿ ಹೊಡೆಯುತ್ತಿದ್ದಂತೆಯೇ ಸ್ಥಳೀಯರು ಮಕ್ಕಳನ್ನು ರಕ್ಷಿಸುವ ಕಾರ್ಯಾಚರಣೆ ಆರಂಭಿಸಿದರು. ಬಸ್ಸಿನ ಒಂದು ಬದಿಯಲ್ಲಿದ್ದ ಮೂವರು ವಿದ್ಯಾರ್ಥಿಗಳಿಗೆ ಗಂಭೀರಗಾಯಗಳಾಗಿದ್ದು, ಅವರನ್ನು ಕಲಿಕಾ ಇದಾತ್, ಶಾರೂಖ್, ಅಫಾನ್ ಎಂದು ಗುರುತಿಸಲಾಗಿದೆ.
ಆಂಬ್ಯುಲೆನ್ಸ್ ಬರುವ ತನಕ ಕಾಯದೇ ಸ್ಥಳೀಯರು ತಮ್ಮ ಕಾರಿನಲ್ಲಿ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡವರನ್ನು ಮಣಿಪಾಲ್ ಆಸ್ಪತ್ರಗೆ ದಾಖಲು ಮಾಡಿದ್ದರೆ, ಉಳಿದವರನ್ನು ಕುಂದಾಪುರ ಆಸ್ಪತ್ರೆಗೆ ದಾಖಲಿಸಲಾಗಿದೆ. [ಚಿತ್ರ : ಐಸಾಕ್ ರಿಚರ್ಡ್, ಮಂಗಳೂರು]

ಬೈಂದೂರು ಠಾಣಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಬಸ್ಸನ್ನು ತೆರವುಗೊಳಿಸಿದರು. ಬೈಂದೂರು ಠಾಣೆಯಲ್ಲಿ ಬಸ್ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.












Click it and Unblock the Notifications